ಒಡಲ ಸಂಕಟಕ್ಕೆ ಹೊರದಾರಿ: ರವಿಕುಮಾರ್ ಟೆಲೆಕ್ಸ್ ಕವಿತೆಗಳು

ಕಾಲಕಥನದ ಕವಿತೆಗಳು

ಸಬಿತಾ ಬನ್ನಾಡಿ

ಕವಿ ಮತ್ತು ಸಂಕಲನದ ಹೆಸರಿಲ್ಲದೆ ಕವಿತೆ ಓದುವುದು ಒಂದು ವಿಶಿಷ್ಠ ಅನುಭವ. ಕಾಲವೂ ತಿಳಿಯದೇ ಓದಿದರೆ ಅದು ಮತ್ತೂ ವಿಶೇಷ ಅನುಭವ ನೀಡುವ ಸಾಧ್ಯತೆ ಇದೆ.

ಉದಾ: ಇದೇ ಸಂಕಲನದಲ್ಲಿರುವ ನವಿಲಿನ ಕುರಿತ ಕವಿತೆಯ ಹಿನ್ನೆಲೆ ರಾಜಸ್ಥಾನದ ಹೈಕೋರ್ಟ್‍ನ ನ್ಯಾಯಾಧೀಶರ ಬಾಲಿಶ ಹೇಳಿಕೆಗೆ ಪ್ರತಿಕ್ರಿಯೆ ರೂಪದಲ್ಲಿರುವುದು ಥಟ್ಟನೆ ನಮ್ಮ ಅರಿವಿಗೆ ಬಂದು ಬಿಡುತ್ತದೆ. ಆದರೆ ಆ ಹಿನ್ನೆಲೆಯಿಲ್ಲದೆಯೂ ಅದನ್ನು ಓದಬಹುದು ಮತ್ತು ಹಾಗೆ ಓದಿದಾಗಲೂ ಅದು ತನ್ನದೇ ಕೆಲವು ಅರ್ಥಗಳನ್ನು ಬಿಟ್ಟುಕೊಡಬಲ್ಲದು. ಹಾಗೆ ಆದಾಗಲೇ ಅದು ಕವಿತೆ ಅನ್ನಿಸಿಕೊಳ್ಳುತ್ತದೆ.

ಇರಲಿ. ಈ ಬಾರಿಯ ವಿಭಾ ಕಾವ್ಯ ಪ್ರಶಸ್ತಿಯ ತೀರ್ಪುಗಾರಳಾಗಿ ಹೀಗೆ ಕವಿಯ ಹೆಸರಿಲ್ಲದೆ ಕವಿತೆ ಓದಿದಾಗ ಅಂತಿಮ ಸುತ್ತಿನ ಹತ್ತು ಹಸ್ತಪ್ರತಿ ಸಂಕಲನಗಳಲ್ಲಿ ವರ್ತಮಾನದ ಆಗುಹೋಗುಗಳಿಗೆ ಪ್ರತಿಸ್ಪಂದಿಸುವ ಒತ್ತಡವು ಮೇಲುಗೈ ಪಡೆದಿದ್ದು ಕಾಣಿಸುತ್ತದೆ. (ಅದರಲ್ಲೂ ಗೌರಿ ಮತ್ತು ಆಸೀಫಾ ಹಲವರ ಕವಿತೆಗಳಲ್ಲಿ ಮಾತನಾಡುವುದು ನಮ್ಮ ವರ್ತಮಾನದ ಕರಾಳತೆಯ ದಾಖಲೆಯಂತೆ ಇರಿಯುತ್ತದೆ.) ನಿಜ, ಪ್ರತಿ ಕವಿಯಲ್ಲೂ ಇದು ಘಟಿಸುತ್ತದೆ. ಆದರೆ ಇದು ಹೇಗೆ ಮತ್ತು ಯಾಕೆ ಘಟಿಸುತ್ತದೆ ಎಂಬುದರ ಮೇಲೆ ಅದರ ಕವಿತ್ವ ನಿರ್ಣಯವಾಗುತ್ತದೆ.

ಈ ದೃಷ್ಟಿಯಿಂದ, ಒಂದು ದಟ್ಟ ವಿಷಾಧದ ನಡುವೆಯೂ ಗಾಢವಾಗಿ ಹೇಳ ಹೊರಡುವ ರವಿಕುಮಾರ್ ಕವಿತೆಗಳು ಒಂದು ಹೆಜ್ಜೆ ಮುಂದೆ ನಿಂತಿದೆ. ಹಾಗೆ ನೋಡ ಹೋದರೆ ರವಿಕುಮಾರರ ಹೆಚ್ಚಿನ ಕವಿತೆಗಳು ಹೆಣ್ಣೊಡಲ ಆರ್ತನಾದವನ್ನು ದಾಟಿಸುತ್ತಿರುತ್ತವೆ. ಇದು ಹೆಣ್ಣುಮಗಳೇ ಬರೆದದ್ದಿರಬೇಕು ಎಂಬ ಭಾವ ಮೂಡಿಸುವಂತೆ ಈ ಕವಿತೆಗಳು ಇರುವುದು ಕವಿತೆಯ ಯಶಸ್ಸೂ ಕೂಡ ಹೌದು.

ಇಲ್ಲಿನ ಎಲ್ಲಾ ಕವಿತೆಗಳಲ್ಲೂ ಒಂದೆಡೆ ಸುತ್ತಲಿನ ಸಂಗತಿಗಳ ಕ್ರೌರ್ಯದೆಡೆಗೆ ಕಟುವಾದ ನುಡಿಗಳು ಒಡಮೂಡುತ್ತಲೇ ಜೊತೆಗೇ ಅವುಗಳಿಗೊಂದು ಹೊರಳುದಾರಿಯ ಹುಡುಕಾಟವೂ ಇದೆ. ಮೊದಲ ಕವಿತೆ ‘ಅಪ್ಪ’, ಅಪ್ಪನನ್ನು ಪರಿಚಯಿಸುತ್ತಲೇ ಅವನ ಬದುಕೇ ಒಂದು ಉತ್ತರವೂ ಆಗುವುದನ್ನು ಸೂಚಿಸುತ್ತದೆ. ಬಡತನವೆಂಬುದು ಹಾಸಿ ಹೊದ್ದುಕೊಂಡಿರುವಾಗಲೂ ಅದು ಇನ್ನೊಬ್ಬರನ್ನು ದ್ವೇಷಿಸಲಿಲ್ಲ, ಹರಿದು ಮುಕ್ಕಲಿಲ್ಲ ಎಂಬೆಡೆಗೆ ಓದುಗರ ಗಮನ ಸೆಳೆಯ ಹೊರಡುವುದು ಬಡತನದಲ್ಲೂ ಘನತೆ ಕಳೆಯಲಿಲ್ಲ ಎಂಬುದನ್ನು ಮಾತ್ರ ಹೇಳುತ್ತಿರುವುದಿಲ್ಲ. ಬದಲಿಗೆ, ಸಿರಿತನವು ಘನತೆಯನ್ನೂ ಮಾರಾಟಕ್ಕೆ ಇಟ್ಟಿರುವುದನ್ನು ವ್ಯಂಗ್ಯವಾಗಿಸುತ್ತದೆ. ಇಷ್ಟಾಗಿಯೂ ಈ ಕವಿತೆಯ ಕೊನೆಯ ಪ್ಯಾರಾದ ಕೆಲವು ಸಾಲುಗಳನ್ನು ಕತ್ತರಿಸಿದ್ದರೆ ಅದು ಇನ್ನಷ್ಟು ಧ್ವನಿ ಪೂರ್ಣವಾಗಿರುತ್ತಿತ್ತು ಎಂಬುದೂ ನಿಜವೇ.

ಪ್ರೀತಿಯ ಮುಲಾಮು ಈ ಭೂಮಿ ಮೇಲೆ ಏಕೆ ಕಳೆದಿದೆ ಎಂಬ ಅನ್ವೇಷಣೆಯೊಂದು ಇಲ್ಲಿದೆ. ಕೊಂದವನು ಎದುರು ಬಂದರೂ ಅವನನ್ನೇ ಸಂತೈಸಬಲ್ಲ ಗೌರಿ ಇಲ್ಲಿ ರೂಪಕವಾಗುತ್ತಾಳೆ. ಬುದ್ಧ ಮತ್ತೆ ಮತ್ತೆ ಮರುಕಳಿಸುತ್ತಾನೆ. ಕೊಲ್ಲ ಬಂದವರಿಗೆ ‘ಸ್ವಲ್ಪ ಇರಿ, ನಿಮ್ಮ ಕೈ ಕತ್ತಿಗಳನ್ನು ತೊಳೆದು ಮುತ್ತಿಡುತ್ತೇನೆ’ ಎನ್ನುತ್ತಲೇ ‘ಒಂದೇ ಏಟಿಗೆ ತುಂಡರಿಸಿಬಿಡಿ . . . ಇಲ್ಲವಾದರೆ . . .ನಿಮ್ಮತ್ತ ನನ್ನ ಕಣ್ಣುಗಳು/ ಮತ್ತದೇ ಕನಿಕರದಿಂದ ನೆಟ್ಟುಬಿಟ್ಟರೆ ನೀವು ‘ನೀವಾಗಿರಲಾರಿರಿ’ (ಬನ್ನಿ ನನ್ನ ಕೊಂದು ಬಿಡಿ) ಎನ್ನುವಲ್ಲಿ ಕೊಲ್ಲುವವರ ಬಗೆಗೆ ಸಿಟ್ಟಿಗಿಂತಲೂ ಅವರಿಗೆ ಸಿಕ್ಕಿರುವ ಬದುಕಿನ ತರಬೇತಿಯ ದೋಷದ ಕಡೆಗೇ ಕವಿಯ ಗಮನವಿದೆ. ಮತ್ತು ಅದನ್ನು ಬದಲಿಸಬೇಕು ಎಂಬ ಹಂಬಲವೂ ಇದೆ.

ಹೀಗಾಗಿ ಕವಿತೆ ಎಂಬುದು ಒಡಲ ಸಂಕಟಕ್ಕೆ ಹೊರದಾರಿ ಮಾತ್ರವಲ್ಲ, ಅದು ಪರ್ಯಾಯದ ತೋರು ಬೆರಳು ಕೂಡಾ ಹೌದು ಎಂಬ ನಂಬಿಕೆ ಕವಿಗೆ ಗಾಢವಾಗಿ ಇರುವಂತಿದೆ. ಆದರೆ ಇದೇ ನಂಬಿಕೆ ಕವಿಗೆ ಲೋಕ ಪೊರೆಯುವವನೆಂದು ಲೋಕ ನಂಬಿರುವ ದೇವರೆಡೆಗೆ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಮತ್ತೆ ಮತ್ತೆ – ಹೆಚ್ಚೂ ಕಡಿಮೆ ಎಲ್ಲ ಕವಿತೆಗಳಲ್ಲೂ ದೇವರ ಉಲ್ಲೇಖ ಬರುತ್ತದೆ. ದೇವರೆಂಬುದು ಸಾಕ್ಷಿಯೇ? ಮೂಕ ಸಾಕ್ಷಿಯೇ? ನಂಬಿಕೆಯೇ? ಕೈದುವೇ? ಎಂಬ ಅನುಮಾನಗಳು ಕವಿಯನ್ನು ಕಾಡುತ್ತದೆ. ಜನರ ಮುಗ್ಧ ನಂಬಿಕೆಯ ಮೇಲೆ ಆಗುತ್ತಿರುವ ದಾಳಿಯ ಬಗೆಗೆ ತಣ್ಣನೆಯ ಆಕ್ರೋಶದ ಜೊತೆ ಜೊತೆಗೇ ದೇವರು ಏನೂ ಮಾಡುತ್ತಿಲ್ಲವಲ್ಲ ಎಂಬ ಅಸಹಾಯಕತೆಯೂ ಇಲ್ಲಿ ಕೆಲಸ ಮಾಡಿದಂತಿದೆ.

ಒಂದು ರೀತಿಯಲ್ಲಿ ಇದು ಪ್ರಜೆಗಳನ್ನು ಪೊರೆಯ ಬೇಕಾಗಿದ್ದ ಸರ್ಕಾರಗಳ ನಿಷ್ಕ್ರಿಯತೆಯ ರೂಪಕದಂತೆ ಕಾಣಿಸುತ್ತದೆ. ಆಯ್ಕೆಯಿಲ್ಲದ ಸ್ಥಿತಿಯಲ್ಲಿ ಮರಳಿ ಮರಳಿ ಅವರಿಗೇ ಮೊರೆಯಿಡುವಂತಾಗಿರುವುದು ಭಕ್ತರ ಸ್ಥಿತಿಗಿಂತ ಭಿನ್ನವಲ್ಲ ಎಂಬಂತೆ ಇದು ಧ್ವನಿಸುತ್ತದೆ. ಒಮ್ಮೊಮ್ಮೆ ಕವಿಗೆ ದೇವರ ಮೇಲೇ ಮರುಕ ಬರುವುದೂ ಇದೆ. “ಹತ್ತಾರು ಜನರ ರಣಕೇಕೆ ಕತ್ತಿ – ಹತಾರಗಳು/ ರಣಘೋಷಗಳು/ ಆ ಹೂವು ಒಂದಿನಿತೂ ಎದುರಾಡದೆ/ ನಕ್ಕು ಒಡಲೊಡ್ಡಿತ್ತು./ ಚಿಲ್ಲೆಂದು ರಕ್ತ ಚೆಲ್ಲಾಡಿತು/ ನೆರೆಯ ದೇವರು ಕೌದಿ ಹೊದ್ದು ಮಲಗಿದ್ದ” ಎನ್ನುವ ಕವಿ ಮರುಕ್ಷಣದಲ್ಲಿ “ಇನ್ನೂ ಕಳೆಗುಂದಿಲ್ಲ/ ಅದೇ ದಿವ್ಯ ನಗೆಯಲ್ಲೇ ನರಳುತ್ತಿದೆ/ ಶಿಲುಬೆಯೊಂದು ಬಿಕ್ಕಳಿಸುತ್ತಿದೆ./ ಗೋಪುರದ ಗಂಟೆ ಸದ್ದಡಗಿದೆ/ ಬುರುಜಿನ ತುತ್ತ ತುದಿಯ ಚಂದ್ರ/ ಕಂಗಾಲಾಗಿದ್ದಾನೆ” (ಬನ್ನಿ ಮಣ್ಣಿಗೋಗೋಣ) ಎನ್ನುವಲ್ಲಿ ಇದನ್ನು ಗಮನಿಸಬಹುದು. “ದೇವರ ಕೋಣೆಯಲ್ಲಿ ನಾನು ಉಸಿರುಗಟ್ಟಿದ್ದೆ” ಎಂಬ ಆಸೀಫಾಳ ನುಡಿ ಇದರ ಆತ್ಯಂತಿಕ ರೂಪವಾಗಿ ಕಾಡುತ್ತದೆ.

ಕೊನೆಯಿಲ್ಲದ ಈ ಕ್ರೌರ್ಯಗಳ ನಡುವೆ ಪ್ರೀತಿಯ ಹುಡುಕಾಟದ ಹಾದಿಯಲ್ಲಿ ನೆತ್ತರು ಚೆಲ್ಲಿದೆ ಎಂಬ ವಿಷಾಧ ಕವಿಯನ್ನು ಆವರಿಸಿಕೊಂಡಿದೆ. ಹೀಗಾಗಿ ಇಂತಹ ಚಿತ್ರಣಗಳು ಸಂಕಲನದುದ್ದಕ್ಕೂ ಮರುಕಳಿಸುತ್ತದೆ. ತಾನು ತರುವ ಸೂಜಿಮಲ್ಲಿಗೆ ದಂಡೆಗಾಗಿ ಕಾಯುತ್ತಿರುವ ಸಖಿಯನ್ನು ಭೇಟಿಯಾಗುವುದಕ್ಕಿಂತಲೂ ನ್ಯಾಯ ಕೇಳಲು ಹೋಗುವುದೇ ತನ್ನ ಆಧ್ಯತೆಯಾಗಿದ್ದು ಅದಕ್ಕೆ ತನ್ನ ಸಖಿ ಸಾಥ್ ಕೊಡಬೇಕೆಂಬ ನಿರೀಕ್ಷೆಯೂ ಇಲ್ಲಿದೆ.

ಹೌದು, ಇದು ಕಾಲ ಕಥನ. ಇದೇ ಕಾಲದಲ್ಲಿ ಇನ್ನೊಂದೆಡೆ ಜನ ಎಲ್ಲ ‘ಸುಭಿಕ್ಷವಾಗಿದೆ’ ಎಂದು ನಂಬಿ ಮನರಂಜನೆಯಲ್ಲಿ ಮುಳುಗಿದ್ದಾರೆ. ಶೋಷಿತರೇ ಶೋಷಕರನ್ನು ಪೊರೆಯುವ ಕಾಲದಲ್ಲಿ ನಾವಿದ್ದೇವೆ. ಹೀಗಾಗಿ ಇಲ್ಲಿ ಕವಿತೆಯೂ ನೋವಿನಲ್ಲಿ ಅದ್ದಿ ಕುಳಿತಿದೆ. ಇದು ಶೋಷಿತರ ಕಿವಿಯನ್ನು ತಲುಪಬಲ್ಲುದೇ? ಹಾಗೆ ತಲುಪುವುದಕ್ಕೆ ಬಹುಲಯದ ಅನ್ವೇಷಣೆಯೂ ಬೇಕಾಗಬಹುದು. ಕವಿತೆಯ ಏಕತಾನದ ಲಯ ಕವಿತೆಯ ಉದ್ದೇಶವನ್ನು ಪೂರೈಸದೇ ಹೋಗಬಹುದು. ವೇದನೆಯು ಸಂವೇದನೆಯಾಗಿ ದಾಟಬೇಕೆಂದಾದರೆ ಅದರ ಮಿಡಿತವು ಕೂಡ ಬಹುಮುಖತೆ ಸಾಧಿಸಬೇಕು. ಇದು ನನ್ನನ್ನೂ ಸೇರಿಸಿಕೊಂಡು, ನಮ್ಮೆಲ್ಲರ ತುರ್ತು ಕೂಡ ಹೌದು.

ಇದು ರವಿಕುಮಾರ್ ಕವಿತೆಗಳ ಬಗೆಗಿನ ಮಾತಷ್ಟೇ ಅಲ್ಲ. ಸ್ಪರ್ಧೆಗೆ ಬಂದ ಎಲ್ಲ ಸಂಕಲನಗಳ ಹಿನ್ನೆಲೆಯಲ್ಲಿ ಹುಟ್ಟಿದ ಮಾತು. ನಮ್ಮ ಈ ಪ್ರಯತ್ನಕ್ಕೆ ಪ್ರಕೃತಿಯ ವೈವಿಧ್ಯದೆಡೆಗೆ ಮತ್ತು ನಮ್ಮ ಹಿರೀಕರೆಡೆಗೆ ಸಹಾಯ ಹಸ್ತ ಚಾಚುವುದೊಂದೇ ನಮಗುಳಿದಿರುವ ದಾರಿ ಅಂತಲೂ ಅನ್ನಿಸುತ್ತಿದೆ. ವಿಭಾ ಪ್ರಶಸ್ತಿಗಾಗಿ ರವಿಕುಮಾರ್ ರಿಗೆ ಅಭಿನಂದನೆಗಳು.

ಈ ಕೃತಿ ಬಿಡುಗಡೆ ಇದೆ ಶನಿವಾರ ಶಿವಮೊಗ್ಗದಲ್ಲಿ

ಈ ಕೃತಿ ಕೊಳ್ಳಲು

Leave a Reply