ಶೂ ಲೇಸು ಕಟ್ಟುವ ನೆಪದಲ್ಲಿ. . . .

ಜಯಂತ ಕಾಯ್ಕಿಣಿಯವರ “ಇದ್ದಾಗ ಇದ್ಧಾಂಗ” ಕತೆಯ ಪಬ್ಬೂ ಬಹಳ ವಿಚಿತ್ರವಾದವನು. ಇಡೀ ಕತೆಯ ಉದ್ದಕ್ಕೂ ವಿಶೇಷ ಮನೋಧರ್ಮದಲ್ಲಿ ವರ್ತಿಸುವ ಅವನು, ಕತೆ ಮುಗಿದ ನಂತರವೂ ಓದುಗನೊಳಗೆ ಬೆಳೆಯುತ್ತಲೇ ಇರುತ್ತಾನೆ. ಅವನ ಪ್ರಶ್ನೆ, ಅನುಮಾನ, ಸಂಕಟ ಹಾಗೂ ದಿಗ್ಬ್ರಮೆಗಳನ್ನು ನಮ್ಮ ಎದುರಿಟ್ಟು ಅಲ್ಲೆಲ್ಲೋ ದೂರದಲ್ಲಿ ನಿಂತು ಕಣ್ಣನ್ನು ಪಿಳಿಪಿಳಿಯಾಗಿಸಿ ನೋಡುವ ಹಠಯೋಗದ ಹುಡುಗಾಟದವನು. ಉತ್ತರ ಕನ್ನಡ ಜಿಲ್ಲೆಯ ದೀವಗಿಯಲ್ಲಿ ಅಪೂರ್ಣವಾಗಿ ಉಳಿದುಹೋಗುವ ಸೇತುವೆಯ ದೆಸೆಯಿಂದಲೇ, ಬದುಕಿನ ಸೂತ್ರವನ್ನ ಕಳಚಿಕೊಳ್ಳುವ ಜಯಂತರ ಕತೆಯ ಎಳೆಯ ಹುಡುಗ ಪಬ್ಬೂ ಸಾಕಷ್ಟು ಸ್ತರದಲ್ಲಿ ಕಾಡುವ ವ್ಯಕ್ತಿತ್ವದವನು.

ಉತ್ತರ ಕನ್ನಡದ ಬನವಾಸಿಯಲ್ಲಿ ಒಬ್ಬನೇ ಅಲೆಯುತ್ತಿದ್ದ ಅದೊಂದು ಮಧ್ಯಾಹ್ನ ಧುತ್ತೆಂದು ಜಯಂತರ ಪಬ್ಬೂವಿನ ನೆನಪಾಯಿತು. ಅಡಿಕೆತೋಟಗಳ ನಡುವೆ ಬಳಸುಗಾಲುಗಳಿಂದ ನಡೆಯುತ್ತ ಯಾವುದೋ ಅನ್ಯ ಜಗತ್ತಿನ ಹುಡುಕಾಟದಲ್ಲಿದ್ದ ನನಗೆ, ದೀವಗಿಗೆ ಹೊರಟರೆ ಪಬ್ಬೂ ಎದುರಾಗಬಹುದು ಅನಿಸಿತು. ಹಾಗೊಂದು ವೇಳೆ ಪಬ್ಬೂ ಸಿಗುವುದು ಅನುಮಾನವಿರಬಹುದು ನಿಜ, ಆದರೆ ದೀವಗಿಯನ್ನು ತಲುಪಿದರೆ ಊರಿನ ಅಪೂರ್ಣ ಸೇತುವೆಯನ್ನು ಮಾತ್ರ ಖಂಡಿತವಾಗಿಯೂ ಕಾಣಬಹುದು ಎಂದು ಬಸ್ಸು ಹಿಡಿದು ಹೊರಟೆ.

ಕಿಟಕಿ ಸೀಟಿನಲ್ಲಿ ಕುಳಿತು ಹೊರಗೆ ದೃಷ್ಠಿ ಹಾಯಿಸುತ್ತಿರುವಾಗಲೇ, ದೀವಗಿಯ ಸೇತುವೆಯ ಕಲ್ಪನೆಗಳು ನಿಧಾನವಾಗಿ ಗರಿಗೆದರುತ್ತಿದ್ದವು. ಜಯಂತರು ಹುಡುಗನಾಗಿದ್ದಾಗ ಮುಂಬೈಗೆ ಓಡಿಹೋದ ಈ ಪಬ್ಬೂ ಈಗ ದೀವಗಿಗೆ ವಾಪಸ್ಸಾಗಿರಬಹುದು. ಶೇವ್ ಮಾಡಿಕೊಳ್ಳುವಷ್ಟು ದಾಡಿ, ಮೀಸೆಯನ್ನು ಬಿಟ್ಟಿರಬಹುದು ಎನಿಸಿ, ಅವನ ಮುಖ ಹೀಗೂ ಇರಬಹುದು ಎನ್ನುವಂತೆ ಒಳಗೇ ನೋಡಿಕೊಳ್ಳುತ್ತಿದ್ದೆ. ಪಬ್ಬೂ ಹಳೆಯ ಸಂಕಟಗಳನ್ನು ಮರೆತು, ಈಗ ದೀವಗಿಯಲ್ಲಿ ಅಡಿಕೆ, ತೆಂಗು ಅಥವಾ ಬಾಳೆತೋಟವನ್ನಾದರೂ ಮಾಡುತ್ತಿರಬಹುದು ಎನ್ನುವ ಕಲ್ಪನೆಗಳು ಮೂಡಿದ್ದವು.

ದೀವಗಿ ಎಂದರೆ ಮಳೆಯ ಮಾರನೇ ದಿನದಂತಹ ಊರು. ಮೈದುಂಬಿ ಸುರಿದ ಮಳೆಗೆ ಬಡಕಲು ಅಜ್ಜಿಯಂತಹ ದೀವಗಿಯ ನೆಲ ಕಮ್ಮನೆಯ ಮಣ್ಣಿನ ವಾಸನೆಯನ್ನು ಸೂಸುತ್ತಲೇ ಇರುತ್ತದೆ. ಜೋರು ಮಳೆಯಾಗಿದ್ದ ಕಾರಣ ಹೆಗಲ ಮೇಲಿದ್ದ ಹೆಣಬಾರದ ಬ್ಯಾಗ್‍ನ್ನು ಕೆಳಗಿಳಿಸಿ ಸಾವರಿಸಿಕೊಳ್ಳುವ ಅವಕಾಶವಿರಲಿಲ್ಲ.

ತಡ ಮಾಡಬಾರದು ಎನ್ನುವಂತೆ ಖಾಲಿ ರಸ್ತೆಯಲ್ಲಿ ನಡೆಯುತ್ತಿರುವಾಗ ಯಾರನ್ನಾದರೂ ನಿಲ್ಲಿಸಿ, “ಸಾರ್ ಇಲ್ಲಿ “ಪ್ರಭಾಕರ ದಂಡೂ ಹರಿಕಾಂತ” ಅಂತ ಇದ್ದರಂತಲ್ಲ, ಅವರ ಮನೆ ಏನಾದರೂ ಗೊತ್ತಿದೆಯಾ? ಎಂದು ಕೇಳುವ ಮನಸ್ಸಾಯಿತು. ಇದ್ದಕ್ಕಿದ್ದಂತೆ, ಯಾರೋ ಬರೆದ ಕತೆಯಲ್ಲಿ ಬರುವ ಹುಡುಗನನ್ನು ನಿಜವಾಗಿಯೂ ಹುಡುಕಿ ಬಂದಿದ್ದು ತಿಳಿದರೆ ನಗಬಹುದು ಎನ್ನುವ ಭಯ ಹಿಂದೆಯೇ ಬಂದು ನಿಂತಿತ್ತು.
ಪಬ್ಬೂವನ್ನು ಹುಡುಕುವ ಹರಸಾಹಸಕ್ಕೆ ಮುಂದಾಗದೆ, ಅದೊಂದು ಅಪೂರ್ಣ ಸೇತುವೆಯನ್ನು ಹುಡುಕಿದರೆ ಸಾಕು ಎನಿಸಿತು. ಆ ನಂತರ ಕೇವಲ ಸೇತುವೆಯನ್ನಷ್ಟೇ ಹುಡುಕಿದೆ.

ನಿರಾಸೆಯಂತೆ ಕತೆಯಲ್ಲಿದ್ದ ಅಪೂರ್ಣ ಸೇತುವೆ ದೀವಗಿಯಲ್ಲಿ ಸಿಗಲೇ ಇಲ್ಲ. ಅದೇ ಕಾರಣ ಸಾಕು ಎನ್ನುವಂತೆ ದೀವಗಿಯಲ್ಲಿ ಉಳಿಯಬೇಕು ಎನ್ನುವ ಈ ಮೊದಲ ನಿರ್ಧಾರ ಕ್ರಮೇಣ ಕರಗಿಹೋಗಿತ್ತು. ಅದೇ ರಾತ್ರಿ ಬೆಂಗಳೂರಿಗೆ ವಾಪಸ್ಸು ಹೊರಟುಬಂದೆ. ಆಫೀಸಿನಲ್ಲಿದ್ದಾಗಲೇ, ಅಪೂರ್ಣ ಸೇತುವೆ ಮತ್ತು ಪಬ್ಬೂನ ಬಗ್ಗೆ ಜಯಂತ ಕಾಯ್ಕಿಣಿಯವರನ್ನು ಕೇಳಬೇಕು ಎಂದು ತೀರ್ಮಾನಿಸಿದ್ದರಿಂದ ಜಯಂತರಿಗೆ ನೇರವಾಗಿ ಕೇಳಿದೆ.

“ಸಾರ್ ದೀವಗಿಯಲ್ಲಿ ಪಬ್ಬೂನೂ ಸಿಗಲಿಲ್ಲ, ಆ ಸೇತುವೆಯೂ ಸಿಗಲಿಲ್ಲ” ಎಂದೆ.

“ಅಲ್ಲಿಂದ ಕಾಣುವ ಬ್ರಿಡ್ಜ್ ನಿಂದಾಗಿ ಪಾಳುಬಿದ್ದ ದೀವಗಿಗೆ ನೀನು ಹೋಗಿದ್ದು. ನಾನು ಬರೆದ ಸೇತುವೆ ಊರಿನಿಂದ ಒಂದು ಕಿಲೋ ಮೀಟರ್ ದೂರಕ್ಕಿದ್ದೆ ಕಣೋ” ಎಂದು ಜಯಂತರು ಉತ್ತರಿಸಿದರು. ಜಯಂತರೇ ಉತ್ತರ ಹೇಳಿದ ಮೇಲೆ ಸಮಾಧಾನವಾಯಿತು. ಸೇತುವೆಯಂತೆ ಕಾಣದೆಹೋದ ಪಬ್ಬೂನ ಬಗ್ಗೆ ಕೇಳಬೇಕು ಎನ್ನುವ ತುಡಿತ ಯಾಕೋ ಉಳಿದಿರಲಿಲ್ಲ. ಜಯಂತರೂ ಅವನ ಹೇಳಲಿಲ್ಲ.

ಜಯಂತರ ಪಬ್ಬೂನಂತೆ ಅದೆಷ್ಟೋ ಜನರ ಕತೆಯಲ್ಲಿನ ಪಾತ್ರಗಳು ಕಾಡಿದ್ದಾರೆ. “ನಾವು ಇನ್ನೂ ಬದುಕಿದ್ದೇವೆ, ಬರೆದವರಷ್ಟೇ ನಮ್ಮೆಲ್ಲರನ್ನು ಅಕ್ಷರಕ್ಕಿಳಿಸಿ ಈ ಹಿಂದೆಯೇ ಕೊಂದುಹಾಕಿದ್ದಾರೆ” ಎಂದು ದೊಡ್ಡ ಗಂಟಲಿನಲ್ಲಿ ಕೂಗುತ್ತಿರುವಂತೆ ಗೋಚರಿಸುತ್ತದೆ. ಆದರೆ ಓರ್ವ ಲೇಖಕ ಬರೆದ ಪಾತ್ರಗಳೆಲ್ಲವೂ ಕೇವಲ ಸತ್ಯವೇ ಏಕೆ ಆಗಿರಬೇಕು ಎನ್ನುವ ಗೊಂದಲ ನನ್ನೊಳಗೆ ಉಳಿದೇ ಇದೆ. ಅದರಂತೆ ಓದಿದ ಎಷ್ಟೋ ವರ್ಷಗಳ ನಂತರವೂ ಬೆನ್ನಿನ ತುರಿಕೆಯಂತೆ ಕಾಡುವ ಕತೆಯ ಪಾತ್ರಗಳು ನಿಜಕ್ಕೂ ಹಾಗೊಮ್ಮೆ ಎದುರಾದರೆ ಅವರೊಂದಿಗೆ ನಾನು ಏನು ಮಾತನಾಡಬಹುದು? ಹಾಗೇ ಮಾತನಾಡಲೇಬೇಕಾದ ಯಾವ ಮಾತುಗಳು ನನ್ನೊಳಗೆ ಸುಪ್ತವಾಗಿವೆ ಎನ್ನುವ ಪ್ರಶ್ನೆಗಳು ನಿಚ್ಚಳವಾಗಿವೆ.

ಕಾಲೇಜಿನಲ್ಲಿ ಓದುತ್ತಿದ್ದಾಗ ಯು.ಆರ್ ಅನಂತಮೂರ್ತಿಯವರ ಕತೆ ಹಾಗೂ ಕಾದಂಬರಿಗಳಲ್ಲಿ ಬರುವ ಮಲೆನಾಡಿನ ಊರುಗಳನ್ನು ನೋಟ್ ಮಾಡಿಕೊಂಡು ಅಲೆಯುತ್ತಿದ್ದಾಗ ಕತೆಯಲ್ಲಿ ದೊರೆಯುವ ಒಂದಿಷ್ಟು ಕುರುಹುಗಳನ್ನು ಹುಡುಕಿ ದಾಖಲು ಮಾಡಿಕೊಂಡಿದ್ದೆ. “ಘಟಶ್ರಾದ್ಧ” ಕತೆಯ ಕುಡುಮಲ್ಲಿಗೆ, “ಸಂಸ್ಕಾರ”ದಲ್ಲಿನ ದೂರ್ವಾಸಪೂರ, ಗಣಪತಿಕೆರೆ, ಅಗ್ರಹಾರ ಸೇರಿದಂತೆ, “ಮೌನಿ” ಕತೆಯ ಭಾವಿಕೆರೆ – ಸೀಬಿನಕೆರೆ, ಅನಂತಮೂರ್ತಿಯವರು ಬಾಲ್ಯ ಕಳೆದ ತೀರ್ಥಹಳ್ಳಿಯ ಸಮೀಪದ ಕೆರೆಕೊಪ್ಪ ಹೀಗೆ ಸಾಕಷ್ಟು ಊರುಗಳನ್ನು ಅಲೆದು ಬಂದಿದ್ದೆ. ಈಗಲೂ ನನಗೆ ಅನಂತಮೂರ್ತಿಯವರ ಬದುಕು ಹಾಗೂ ಬರಹಗಳ ಸಾಮೀಪ್ಯವನ್ನು ಗ್ರಹಿಸಲು ಸಾಧ್ಯವಾಗುತ್ತವೆ. ಅವರ ಬದುಕು ಹಾಗೂ ಬರಹಗಳ ನಡುವಿನ ನಿಚ್ಚಳತೆಯನ್ನು ಗೂಗಲ್ ಮ್ಯಾಪ್‍ನಂತೆ ಗೆರೆಯೆಳೆದು ದಾಖಲಿಸಬೇಕು ಎನಿಸುತ್ತದೆ.

ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಓರ್ವ ಸೃಷ್ಠಿಶೀಲ ಬರಹಗಾರನಿಂದ ಕೃತಿಯೊಂದು ಸೃಜಿಸಿಕೊಳ್ಳುವಾಗ  ಅವನೇ ಹಾದುಹೋದ ಅಥವಾ ಅವನು ಕಾಣಲಷ್ಟೇ ಸಾಧ್ಯವಾದ ಯಾವುದೋ ಹೆಜ್ಜೆಯೊಂದರ ಪಡಿಯಚ್ಚು ಮತ್ತೊಂದು ಹಂತದಲ್ಲಿ ಮೂಡಿರುತ್ತದೆ. ನಂತರ ಅದೇ ಹೆಜ್ಜೆಗಳು ರೂಪಾಂತರದಲ್ಲಿ ಮತ್ತೊಂದು ಅವತಾರ ಎನ್ನುವಂತೆ ಸೃಜನಶೀಲ ಕೃತಿಯ ಮೂಲಕ ದಾಖಲಾಗುತ್ತದೆ. ಇಂತಹ ಒಂದೇ ನಂಬಿಕೆಯ ತೊಳಲಾಟದ ಉಡಿಯಲ್ಲಿ ಪವಡಿಸಿ ಇಂದಿಗೂ ಬರೆಯುತ್ತಿದ್ದೇನೆ.

ಬರವಣಿಗೆ ಎನ್ನುವುದು ಕೇವಲ ಫಿಕ್ಷನ್ ಎನ್ನುವುದಾದರೆ, ಅದು ಕಾರ್ಬನ್ ಕಾಗದದ ಮಸಿಯ ಸಹಾಯದಿಂದ ದಾಖಲಾದ ದ್ವಿತೀಯ ದರ್ಜೆಯ ಕಾಪಿಯಂತಾಗಿಬಿಡುತ್ತದೆ. ಹಾಗೆ ದಾಖಲಾಗಿದ್ದು, ಕೆಲವೇ ದಿನಗಳಲ್ಲಿ ಮಸಿಕಳೆದ ಹಾಳೆಯಂತೆ ಬರಿದಾಗಿಬಿಡುವ ಸಾಧ್ಯತೆಗಳೇ ಹೆಚ್ಚು. ಅಸಲಿತ್ತಿನ ಸ್ಪರ್ಶವೇ ಇರದೆ ಕೇವಲ ಬೌದ್ಧಿಕಸರಕಿನಂತಹ ಕಲ್ಪನೆಯಲ್ಲಿಯೇ ಬರವಣಿಗೆ ಸಾಧ್ಯವಾದರೆ ಅಂತಹ ಯಾವುದೇ ಸೃಜನಶೀಲ ಕೃತಿಯೂ ದೀರ್ಘಾಯುಸಿಯಾಗಿ ಬದುಕುವುದು ಅಸಾಧ್ಯ.

ಲಿಯೋ ಟಾಲ್‍ಸ್ಟಾಯ್‍ನ “ಫಾದರ್ ಸೆರ್ಗಿಯಸ್” ನೀಳ್ಗತೆ ರಷ್ಯಾ ಸಾಹಿತ್ಯದ ಬೇರು ಎನ್ನುವಂತೆ ನೆನೆದು ಮಾತನಾಡುವವರು ಇಂದಿಗೂ ಇದ್ದಾರೆ. ಟಾಲ್‍ಸ್ಟಾಯ್‍ನ ಕೃತಿಗಳು ರಷ್ಯಾದ ಸಾಹಿತ್ಯದ ಆರಂಭಿಕ ಭಿತ್ತನೆ ಎಂದವರಿದ್ದಾರೆ. ಆದರೆ ರಷ್ಯಾದ ಮತ್ತೋರ್ವ ಲೇಖಕ ಫೈದೂರ್ ದಾಸ್ತೋವಸ್ಕಿಯ ಮಾತುಗಳೇ ಬೇರೆ. “ಕ್ರೈಮ್ ಅಂಡ್ ಪನಿಶ್‍ಮೆಂಟ್”, “ಬ್ರದರ್ ಕಾರ್ಮಜೋವ್”ನಂತಹ ಶ್ರೇಷ್ಠ ಕೃತಿಗಳನ್ನು ರಚಿಸಿದ ದಾಸ್ತೋವಸ್ಕಿ ರಷ್ಯಾದ ಖ್ಯಾತ ಅಸಂಗತ ಕವಿ ಅಲೆಕ್ಸಾಂಡರ್ ಪುಷ್ಕಿನ್‍ನ ಹಾಗೂ “ಓವರ್ ಕೋಟ್” ನಂತಹ ಅಪೂರ್ವ ಕತೆಗಳನ್ನು ಬರೆದ ನಿಕೊಲಾಯ್ ಗೋಗೊಲ್‍ನ ನೆನೆಯುತ್ತಾನೆ.

ಪುಷ್ಕಿನ್‍ನ ಕಾವ್ಯಗಳಿಂದ ಪ್ರೇರಣೆ ಪಡೆದ ನಾವುಗಳು ಗೋಗೊಲ್‍ನ ಓವರ್‍ಕೋಟ್‍ನಿಂದ ಉದುರಿಬಿದ್ದ ಪಳೆಯುಳಿಕೆಗಳು ಎನ್ನುತ್ತಾನೆ ದಾಸ್ತೋವಸ್ಕಿ. ಈ ಇಬ್ಬರು ಲೇಖಕರು ಕೇವಲ ತಮ್ಮ ಒಣ ಕಲ್ಪನೆಗಳನ್ನು ಮುಂದಿಟ್ಟುಕೊಂಡು ಬರೆದವರಲ್ಲ. ಬದಲಿಗೆ ಬದುಕಿನಲ್ಲಿ ಎದುರಾದ ಎಲ್ಲವನ್ನೂ ತಮ್ಮದೇ ಆತ್ಮದೊಳಗೆ ಶೇಖರಿಸಿ, ಕ್ರಮೇಣ ಎಲ್ಲವನ್ನೂ ಪರಿಷ್ಕರಿಸಿ ನಂತರ ದೊರೆತದ್ದನ್ನು ಮಾತ್ರವೇ ತಮ್ಮ ಬರವಣಿಗೆಯಲ್ಲಿ ಬಳಸಿಕೊಂಡವರು ಎನ್ನುವುದು ದಾಸ್ತೋವಸ್ಕಿಯ ನಂಬಿಕೆಯಾಗಿತ್ತು.

ಅಸಂಖ್ಯಾತ ಚಟಗಳಿಂದ ತುಂಬಿಹೋಗಿದ್ದ ರಷ್ಯಾದ ಕವಿ ಅಲೆಕ್ಸಾಂಡರ್ ಪುಷ್ಕಿನ್ ಸತತ ಎರಡು ವರ್ಷಗಳ ಕಾಲ ಗೃಹಬಂಧನದಲ್ಲಿ ಬದುಕಬೇಕಾಗಿತ್ತು. ಆದರೆ ಗೃಹಬಂಧನದಿಂದ ಬಿಡುಗಡೆಗೊಂಡ ನಂತರವೂ ಪುಷ್ಕಿನ್ ಮಾತ್ರ ತಾನು ಯಾವುದೋ ಬಂಧನದಲ್ಲಿ ಇರುವಂತಹ ಭ್ರಮೆಯಲ್ಲೇ ಉಳಿದುಹೋಗಿದ್ದ. ಬಿಡುಗಡೆಯ ಸಲುವಾಗಿಯೇ ಏನನ್ನಾದರೂ ಬರೆಯಲು ಹೆಣಗಾಡಿ ಸೋತ. ಏನೆಲ್ಲವನ್ನು ಬರೆದ ಪುಷ್ಕಿನ್ ತಾನು ಬಯಸಿದ ಅಂತಹದೊಂದು ಬಿಡುಗಡೆಯನ್ನು ಕಾಣಬೇಕಾದರೆ ಕಡೆಗೆ “ದಿ ಪ್ರಿಜನರ್ ಆಫ್ ದಿ ಕಾಸಸ್” ಎನ್ನುವಂತಹ ಕಥನಕಾವ್ಯವನ್ನೇ ಬರೆಯಬೇಕಾಯ್ತು.

ಹಾಗೆ ಪುಷ್ಕಿನ್ ಬರೆದ ಕಥನಕಾವ್ಯ ಅವನಂತೆಯೇ ಬಂಧನದಲ್ಲಿ ಉಳಿದುಹೋದವನ ಕತೆಯಾಗಿತ್ತು. ಇದು ಪುಷ್ಕಿನ್ ತನ್ನ ಬದುಕು ಹಾಗೂ ಬರವಣಿಗೆಯ ನಡುವೆ ಉಳಿಸಿಕೊಂಡು ಬಂದಿದ್ದ ಮಾರ್ಗವಾಗಿದ್ದಿರಲೂಬಹದು. ಬಹುಶಃ ದಾಸ್ತೋವಸ್ಕಿ ಪುಷ್ಕಿನ್ ಸಾಹಿತ್ಯದಲ್ಲಿ ನೈಜತೆಯನ್ನು ಗುರುತಿಸಿದ ಮಾಪನವೂ ಇದಾಗಿರಬಹುದು.

ಈ ಎಲ್ಲವನ್ನೂ ಹೀಗೆ ಬರೆಯುತ್ತಿರಲು ಕಾರಣವಿಷ್ಟೇ. ಕೆಲವು ದಿನಗಳ ಹಿಂದಷ್ಟೇ ನನ್ನೊಂದಿಗೆ ಸ್ಕೂಲಿನಲ್ಲಿ ಓದಿದ ಗೆಳತಿಯೊಬ್ಬಳ ಮದುವೆಯ ನೆಪದಲ್ಲಿ ಹತ್ತು ವರ್ಷಗಳ ನಂತರ ಎಲ್ಲ ಸ್ಕೂಲಿನಲ್ಲಿ ಒಟ್ಟಿಗೇ ಓದಿದ ಗೆಳೆಯ ಗೆಳತಿಯರು ಮೈಸೂರಿನಲ್ಲಿ ಸೇರಿದ್ದೆವು. ಎಷ್ಟೋ ವರ್ಷಗಳ ಕಾಲ ಒಂದೇ ಕ್ಲಾಸ್‍ರೂಮಿನಲ್ಲಿ ನಿರರ್ಗಳವಾಗಿ ಹರಟುತ್ತಾ, ಯೂನಿಟ್ ಟೆಸ್ಟ್, ಆನ್ಯುಯಲ್ ಟೆಸ್ಟ್‍ಗಳ ಪೈಪೋಟಿಯಲ್ಲಿ ಕಳೆದುಹೋಗಿದ್ದ ನಾವುಗಳು ಹೀಗೆ ಹತ್ತು ವರ್ಷಗಳ ನಂತರ ಎದುರಾಗುತ್ತಿದ್ದಂತೆ ಮೌನವಾಗಿಹೋಗಿದ್ದೆವು. ಯಾವುದೋ ಭಾವಗಳು ಕೊರಳನ್ನು ಬಿಗಿಹಿಡಿದಿತ್ತು.

ಕೇವಲ ಒಂದು ಕಿರುನಗು, ಸಣ್ಣ ದನಿಯ ಹಾಯ್ ಹಾಗೂ ಸೋಕಿಸಿಕೊಳ್ಳದಂತಹ ಶೇಖ್ ಹ್ಯಾಂಡ್‍ಗೆ ಸಂಪೂರ್ಣವಾಗಿ ದಣಿದುಹೋಗಿದ್ದೆವು. ಮಗ್ಗಲು ಬೆಂಚ್‍ನಲ್ಲಿ ಕಣ್ಣು ಮಿಟುಕಿಸುತ್ತಾ, ಅನಗತ್ಯವಾಗಿ ಮುನಿಸಿಕೊಳ್ಳುತ್ತ ಮೋಟು, ಬದನೆಕಾಯಿ ಜಡೆಯಂತೆ, ಬಾಫ್‍ಕಟ್ ಹೇರ್‍ಸ್ಟೈಲ್‍ನಿಂದ ಕಂಗಾಲುಗೊಳಿಸುತ್ತಿದ್ದವರು ಈಗ ಹೈದರಾಬಾದಿನ ಸುರಭಿ ನಾಟಕ ಕಂಪನಿಯ ಬ್ಯಾಕ್‍ಸ್ಟೇಜ್ ಕಲಾವಿದರಂತೆ ತೋರುತ್ತಿದ್ದರು.

ಹತ್ತನೇ ಕ್ಲಾಸ್‍ನ ರಿಸಲ್ಟ್ ಬೋರ್ಡ್‍ನ ಎದುರು ಹುಡುಗಿಯಾಗಿ ನಿಂತು ವಿದಾಯದ ಕುರುಹುವಿನಂತೆ ಸ್ಕೂಲಿನ ದೊಡ್ಡ ಗೇಟನ್ನು ದಾಟಿ ಮರೆಯಾಗಿಹೋಗಿದ್ದ ಹುಡುಗಿಯರು ಈಗ ಹೆಂಗಸರ ರೂಪದಲ್ಲಿ ಪತ್ತೆಯಾಗಿದ್ದರು. ಅವರ ವಾಟ್ಸ್‍ಆಪ್ ಪ್ರೊಫೈಲ್ ಹಾಗೂ ಸ್ಕ್ರೀನ್ ಸರ್ವರ್‍ನ ಚಿತ್ರಗಳಲ್ಲಿ ದಿಂಡುಕಾಯದ ಅವರ ಗಂಡಂದಿರು ಬಿಗಿಯಾಗಿ ಹಿಡಿದು ನಿಂತಿದ್ದ ಚಿತ್ರಗಳು ಏನನ್ನೋ ಹೇಳಲು ಅವಣಿಸುತ್ತಿರುವಂತೆ ಕಾಣುತ್ತಿದ್ದವು.

ಜತೆ ಓದಿದ ಹುಡುಗರಲ್ಲಿ ಕೆಲವರು ತೋಟ ಮಾಡುತ್ತ, ಕೆಲವರು ಅಪ್ಪನದೇ ಕೆಲಸದಲ್ಲಿ ಮುಳುಗಿ ಉಳಿದವರು ಬದುಕು ಎಂದರೆ ಏನು ಎನ್ನುವ ಉತ್ತರ ದೊರೆಯದ ಪ್ರಶ್ನೆಗಳನ್ನು ಇಂದಿಗೂ ಕಂಕುಳಲ್ಲಿ ಹಿಡಿದು ಬಂದಿದ್ದರು. ಮದುವೆಯಾಗಿದ್ದ ಕೆಲವರು ಮದುವೆಯಾಗಿದ್ದಕ್ಕೆ ಸಾಮಾಜಿಕ ಒತ್ತಡವೇ ಕಾರಣ ಎನ್ನುವಂತೆ ಮುಖವನ್ನು ಒರತೆಯಾಗಿಸಿ ನಿಂತಿದ್ದರು. ಅದೇ ಬಗೆಯ ಮಾತುಗಳನ್ನು ಹೇಳುತ್ತಿದ್ದರು.

ಒಂದು ಕಾಲದ ಪ್ರೇಯಸಿಯರಾಗಿದ್ದ ನುಣುಪುಮೋರೆಯ ಹುಡುಗಿಯರ ಮಕ್ಕಳು ಹಸನುಪಾದಗಳಿಂದ ನಮ್ಮಗಳ ತೊಡೆಗಳನ್ನು ಏರಿ ತುಳಿದು ಹೊರಳುತ್ತಿರುವಾಗ ನಮ್ಮ ಸದ್ಯದ ವಯಸ್ಸೆಷ್ಟು ಎನ್ನುವುದೇ ಭಯವಾಗಿತ್ತು. ರಗಳೆಯೇ ಬೇಡ ಎನ್ನುವಂತೆ ಮದುವೆ ಆಗದೆ ಉಳಿದಿದ್ದ ಗೆಳತಿಯೊಂದಿಗೆ ಮಾತ್ರ ಮಾತು ಎನ್ನುವಂತೆ ನನ್ನೊಂದಿಗೆ ನಾಲ್ಕನೇ ಕ್ಲಾಸಿನಿಂದ ಓದಿದ ಗೆಳೆತಿಯೊಬ್ಬಳ ಜತೆ ಮಾತಿಗಿಳಿದಿದ್ದೆ. ಹಳೆಯ ದಿನಗಳನ್ನು ನೆನೆದು ಮೆಲಕು ಹಾಕುತ್ತಿರುವಾಗಲೇ ಅವಳು,

“ಲೋ ನಿನಗೆ ನೆನಪಿದೆಯಾ ನೀನು ಆಶ್ರಮ ರಸ್ತೆಯ ಮನೆಯಲ್ಲಿರುವಾಗ, ನನ್ನ ಜತೆ ಬರುವುದಕ್ಕೆ ಗೇಟಿನ ಮುಂದೆ ಶೂ ಲೇಸು ಕಟ್ಟುವವನಂತೆ ಕಾಯುತ್ತಿದ್ದೆ” ಅಲ್ಲವಾ ಎಂದು ಜೋರಾಗಿ ನಕ್ಕಳು.

ಅವಳ ಮಾತು ಕೇಳಿದ ತಕ್ಷಣ ಅದು ನನ್ನೊಳಗೆ ಯಾವ ಭಾವೋತ್ಪತಿಯನ್ನು ಮಾಡಲಿಲ್ಲ. ಅವಳ ಮಾತು ನಿಜವೂ ಆಗಿತ್ತು. ಸ್ಕೂಲಿನಲ್ಲಿದ್ದಾಗ ಅವಳ ಮನೆಗೆ ನಾನು ಹೋಗುವುದು ಸಾಮಾನ್ಯವಾಗಿತ್ತು. ಸ್ಕೂಲ್ ಮುಗಿಸಿ ಅವಳ ಅಮ್ಮನ ಟೈಲರ್ ಅಂಗಡಿಯಲ್ಲಿ ಮನೆಯೆ ಕೀ ತೆಗೆದುಕೊಂಡು ಒಟ್ಟಿಗೆ ಮನೆಗೆ ಹೊರಡುವುದು ಆವತ್ತಿಗೆ ದಿನಚರಿಯ ಭಾಗವೇ ಆಗಿತ್ತು.

ನಾನು ಹೌದು, ಎಂದಷ್ಟೇ ಹೇಳಿ ಉಳಿದಿದ್ದು ಎನ್ನುವುದನ್ನು ಮಾತನಾಡಿ ಮನೆಗೆ ಬಂದಿದ್ದೆ. ಮನೆಗೆ ಬಂದ ಎಷ್ಟೋ ಹೊತ್ತಿನ ನಂತರ ಅವಳ ಮಾತುಗಳು ನೆನಪಾದವು. ಹಿಂದೆಯೇ ಕೆಲವು ವರ್ಷಗಳ ಹಿಂದೆ ಬರೆದ “ನೆನಪಿದೆಯಾ ಅಂಜಲಿ” ಪದ್ಯದ ಕೆಲವು ಸಾಲುಗಳು ನೆನಪಾದವು.

“ಶಾಲೆಯ ಕೊನೆಯ ಗಂಟೆ ಬಾರಿಸಿದರು
ಶಾಲೆಯಲ್ಲೇ ಉಳಿಯುವುದು ಅವಮಾನವೆಂದು
ಗೇಟಿನ ಮುಂದೆ ಶೂ ಲೇಸು
ಕಟ್ಟುವ ನೆಪದಲ್ಲಿ ನಿನ್ನ ಹಿಂದೆ
ಬರಲು ಕಾದಿದ್ದು ಎಷ್ಟು ಸೋಜಿಗ”

ಎನ್ನುವ ಸಾಲುಗಳು ನೆನಪಾದವು. ತಕ್ಷಣವೇ ಇಡೀ ಪದ್ಯವನ್ನು ಮತ್ತೆ ಓದಿದೆ. ಅದೊಂದು ಭಾವ ಸಾಲುಗಳು ಮೂಲಕ ಅಪ್ರಜ್ಞಾಪೂರ್ವಕವಾಗಿ ನನ್ನ ಆ ಪದ್ಯದಲ್ಲಿ ನುಳುಳಿಬಂದಿತ್ತು. ನನ್ನ ಬಹುತೇಕ ಬರವಣಿಗೆಯಲ್ಲಿ ಅಂಜಲಿಯ ನೆರಳಿದೆ. ಆದರೆ ಅವಳು ಗುರುತಿಸಿದ ಭಾವದ ಹೊರತಾಗಿ ನನ್ನ ಉಳಿದ ಯಾವುದೇ ಅಂಜಲಿ ಪದ್ಯಗಳಲ್ಲೂ ಅಂತಹ ಸಾಲುಗಳ ಗುರತುಗಳು ಸಂವಾದಿಯಾಗಲಿಲ್ಲ. ಹಠಕ್ಕೆ ಬಿದ್ದವನಂತೆ ಸಾಲುಗಳನ್ನು ವಾಸ್ತವದೊಂದಿಗೆ ತಾಳೆಮಾಡುವ ಪ್ರಯತ್ನವನ್ನ ನಾನು ಇಂದಿಗೂ ನಡೆಸಿಲ್ಲ. ಅದರ ಪಾಡಿಗೆ ಅವುಗಳನ್ನು ಬಿಟ್ಟು ನನ್ನ ಪಾಡಿಗೆ ದೂರವೇ ಉಳಿದು ನೋಡುತ್ತಿದ್ದೇನೆ.

ಬದುಕೇ ನಮ್ಮ ಸಾಹಿತ್ಯದ ಮೂಲ ಪ್ರೇರಣೆಯಾಗುವುದು ಸಾಧ್ಯವಾದರೆ ನಾವೇ ಹಾದುಬಂದ ಅದಷ್ಟೋ ಹೆಜ್ಜೆ ಗುರುತುಗಳು ಎಂದಾದರೂ ಒಂದು ದಿನ ಧುತ್ತೆಂದು ಎದುರಾಗಬಹುದು ಎನ್ನುವುದಷ್ಟೇ ಈ ಕ್ಷಣದ ನಂಬಿಕೆ. ಅಲಕ್ಸಾಂಡರ್ ಪುಷ್ಕಿನ್ ಬಿಡುಗಡೆಗೆ ತನ್ನ ಬಂಧನದ ಕುರಿತೇ ಕಾವ್ಯವನ್ನ ಬರೆಯಬೇಕಾಗಿದ್ದು ಇದೇ ಕಾರಣಕ್ಕೆ ಇರಬಹುದು. ಇದೇ ನಂಬಿಕೆಯ ಕಿರುಬೆರಳನ್ನೇ ಹಿಡಿದು ಜಯಂತರ ಪಬ್ಬೂವನ್ನ ಹುಡುಕಿ ನಾನು ದೀವಗಿಗೆ ಹೊರಟಿದ್ದು.

1 comment

Leave a Reply