ಓಡಿಹೋದ ಹುಡುಗಿಯ ಡೈರಿಯಿಂದ…


ಅಪ್ಪನಿಗೆ ಬೋನಸ್ ಬಂತು !

ತನ್ನ ಮೂವರು ಮಕ್ಕಳನ್ನು ಕರೆದು ‘ನನಗೆ ಬಂದ ಬೋನಸ್ಸನ್ನು ನಿಮಗೆ ಸಮನಾಗಿ ಹಂಚುತ್ತೇನೆ. ನಿಮ್ಮ ಇಷ್ಟಬಂದ ಹಾಗೆ ಅದನ್ನು ಬಳಸಿಕೊಳ್ಳಬಹುದು’ ಎಂದು ಹೇಳಿ ಒಬ್ಬೊಬ್ಬರಿಗೂ ಮೂರು ಸಾವಿರ ರೂಪಾಯಿ ಕೊಟ್ಟು ಉಳಿದ ಒಂದು ಸಾವಿರವನ್ನು ತನ್ನ ಹೆಂಡತಿಗೆ ನೀಡಿ, “ನೋಡು ಅವರು ಈ ಹಣವನ್ನು ಖರ್ಚು ಮಾಡುವುದರ ಬಗ್ಗೆ ನೀನು ವಿಚಾರಿಸಲು ಹೋಗಬೇಡ. ಅವರೇನು ಚಿಕ್ಕವರಲ್ಲ.‌ ಮೂವರೂ ಕಾಲೇಜು ಮೆಟ್ಟಿಲು‌ ಹತ್ತಿರುವವರು. ನೀನು ನಿನ್ನ ಪೊಲೀಸಿಂಗ್ ಕೆಲಸ ಶುರು ಮಾಡ್ಕೋಬೇಡ. ಅವರಿಗೆ ಅನ್ನಿಸಿದ್ದನ್ನ ಅವರು ಮಾಡಲಿ” ಎಂದು ಹೇಳಿ ಯಾವುದೋ ತೃಪ್ತ ಭಾವವೊಂದನ್ನು ಧರಿಸಿದವನಂತೆ ಎದ್ದು ಹೋದ. ಮೂರೂ ಜನ ಮಕ್ಕಳ ಕಣ್ಣಲ್ಲಿ ಏನೋ ಮಿಂಚು ಹೊಳೆದಂತಾಯಿತು. ಆ ಖುಷಿಯಲ್ಲಿ ಅಪ್ಪನಿಗೆ ಥ್ಯಾಂಕ್ಸ್ ಹೇಳಬೇಕೆಂಬುದೂ ಅವರಿಗೆ ನೆನಪಾಗಲಿಲ್ಲ.

*                *                   *                   *
ಮೊದಲನೆಯ ಮಗ ರೂಮಿಗೆ ಹೋದವನು ತನ್ನ ಗೆಳೆಯರ ಗುಂಪಿಗೆಲ್ಲ ಕಾಲ್ ಮಾಡಿ ನಾಳೆ‌ ಶಾಪಿಂಗ್  ಹೋಗೋಣವೆಂದು ಹೇಳಿದ. ಅಂತೆಯೇ ಮರುದಿನ ಗೆಳೆಯರೊಡಗೂಡಿ ಒಂದೆರೆಡು ಮಾಲ್ ಗಳಿಗೆ ಹೋಗಿ ಒಂದು ಬ್ರಾಂಡೆಡ್ ಶರ್ಟ್ ಖರೀದಿಸಿ , ಸ್ನೇಹಿತರ ಜೊತೆ ಊಟ ಮಾಡಿ, ತನ್ನ ಫೇವರಿಟ್ ಹೀರೋನ ಸಿನಿಮಾ ನೋಡಿ ಬೈಕಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು, ತಿಂಗಳ ಅನ್ ಲಿಮಿಟೆಡ್ ಇಂಟರ್ ನೆಟ್ ಪ್ಯಾಕ್ ಹಾಕಿಸಿಕೊಂಡು, ಅಪ್ಪನಿಗೊಂದು ಸ್ಪೆಷಲ್ ಮೈಸೂರ್ ಪಾಕಿನ ಸಣ್ಣ ಪೊಟ್ಟಣ ಕಟ್ಟಿಸಿಕೊಂಡು ಮನೆಗೆ ಬಂದನು…

*                  *                  *                   *
ಇನ್ನು ಅವನ ಅಕ್ಕ , ಹಿಂದಿನ ದಿನ ರಾತ್ರಿಯೇ ಬಹಳ ದಿ‌ನಗಳಿಂದ ಅಮೇಜಾನ್ ಆ್ಯಪ್ ನಲ್ಲಿ ಕಾರ್ಟ್ ಗೆ ಹಾಕಿಕೊಂಡಿರುತ್ತಿದ್ದ ಆದರೆ ಕೊಂಡಿರದ ಗಾಗ್ರ ಒಂದನ್ನು ಆರ್ಡರ್ ಮಾಡಿ ಮರುದಿನ ಕ್ಯಾಶ್ ಆನ್ ಡೆಲಿವರಿ ಪಡೆದು ಮೂರ್ನಾಲ್ಕು ಸಲ ಹಾಕಿ ಅಪ್ಪ‌ ಅಮ್ಮನಿಗೆ  ತೋರಿಸಿ ಅದಕ್ಕಾಗಿ ಅವರು ಕೊಟ್ಟ ಆಫರ್ ನಲ್ಲಿ ಯಾವುದೋ‌ ಫುಡ್ ಡೆಲಿವರಿ ಆ್ಯಪ್ ನಲ್ಲಿ ಅವರಪ್ಪನಿಗೆ ಇಷ್ಟವಾಗುವ KFC ಫುಡ್ ತರಿಸಿ ಕೊಟ್ಟಾಗಿತ್ತು.

*                   *                 *                   *
ಕಿರಿಯ ಮಗಳೂ ಇಂಥದ್ದೇ ಏನಾದರೂ ಒಂದು ಮಾಡಿದ್ದರೆ ಇದೊಂದು ವಿದ್ಯಮಾನವಾಗಿ ಚರ್ಚೆಯಾಗುತ್ತಿರಲಿಲ್ಲ.‌ ಆದರೆ ಪಿಯುಸಿ ಓದುತ್ತಿರುವ ಆಕೆ ಒಂದು ದಿನ ಬೆಳಿಗ್ಗೆ ಕಾಲೇಜಿಗೆಂದು ಹೊರಟವಳು ಕಾಲೇಜಿಗೆ ಬಂದಿಲ್ಲ‌ ಎಂದು ಅವರಪ್ಪನ ಮೊಬೈಲ್ ಗೆ  ಮೆಸೇಜು ಬಂತು. ಕಾಲೇಜಿಗೆ ಕಾಲ್ ಮಾಡಿ ವಿಚಾರಿಸಲಾಗಿ ಅವಳು ಆ ದಿನ ಕಾಲೇಜಿಗೆ‌ ಬಂದಿಲ್ಲದಿರುವುದು ಖಾತರಿಯಾಯಿತು.

ಅಪ್ಪ ಅಮ್ಮ ಕಾಲೇಜಿಗೆ ಓಡಿ ಬಂದರು.‌ ಕ್ಲಾಸ್ ಟೀಚರ್ ಮತ್ತು ಪ್ರಿನ್ಸಿಪಾಲರೊಂದಿಗೆ ಮಾತಾಡಿದರು. ‘ ಅಯ್ಯೋ ಅವಳು ಹೀಗೆಲ್ಲ ಮಾಡ್ತಾಳೆ ಅಂದರೆ ನಂಬೋಕೆ ಆಗ್ತಿಲ್ಲ. ಎಷ್ಟು‌ ಸೈಲೆಂಟ್ ಆಗಿರ್ತಿದ್ಲು.‌ ನೋಡಿ ಯಾರ್ಯಾರು ಹೇಗಿರ್ತಾರೆ  ಅಂತಾ ಗೊತ್ತಾಗೋಲ್ಲ’ ಎಂದು ಕ್ಲಾಸ್ ಟೀಚರ್ ಹೇಳಿದಾಗ ಅಪ್ಪ‌ ಅಮ್ಮ ಇಬ್ಬರಿಗೂ ಸ್ವಲ್ಪ ಆಶ್ಚರ್ಯವೇ ಆಯಿತು.‌ ಈ ಲೆಕ್ಚರರ್ ಯಾವ ತೀರ್ಮಾನಕ್ಕೆ ಬಂದಿದಾರೆ ಎಂಬುದರ ಬಗ್ಗೆ ಅವರಲ್ಲಿ ಆಕ್ಷೇಪ ಇತ್ತು. ಹೆಚ್ಚೇನು ಮಾತಾಡದೆ ಏನಾದರೂ ಮಾಹಿತಿ‌ ಸಿಕ್ಕರೆ ತಿಳಿಸಿ ಎಂದಷ್ಟೇ ಕಾಲೇಜಿನವರಿಗೆ ಹೇಳಿ ಮನೆಗೆ ವಾಪಾಸ್ಸಾದರು.

*                  *                    *                    *

ಆ ರಾತ್ರಿ  ಇಡೀ ಕಾದರೂ ಯಾವ ಮಾಹಿತಿಯೂ ಸಿಗಲಿಲ್ಲ ಮತ್ತು ಯಾವ ಫೋನ್ ಕಾಲ್ ಗಳೂ ಬರಲಿಲ್ಲ. ಕಂಪ್ಲೇಂಟ್ ಕೊಡಲೂ ಕೂಡ ಅವರ ಮನಸ್ಸು ಒಪ್ಪುತ್ತಿಲ್ಲ. ಸುಮ್ಮನೆ ವಿಷಯ ಹೊರಗೆ ಹೋದರೆ ರಂಪಾಟವಾದೀತೆಂಬ ಭಯ.

ಮರುದಿನ ಬೆಳಿಗ್ಗೆ  ಸುಮಾರು ೮  ಗಂಟೆಯ ಹೊತ್ತಿಗೆ ಅಪ್ಪನ ನಂಬರ್ ಗೆ ಕಾಲ್ ಬಂತು. ಯಾವಾಗ ಕಾಲ್ ಬರುತ್ತೋ ಅನ್ನೋದನ್ನೇ ಕಾದು ಕುಳಿತಿದ್ದವರಿಗೆ ಕೊಂಚ ನೆಮ್ಮದಿ ಸಿಕ್ಕಂತಾಯ್ತು.‌‌ ‘ನಾನು ಚಿಕ್ಕಮಗಳೂರಿಂದ ಎಸ್ ಐ ಮಾತಾಡ್ತಾ ಇರೋದು. ನಿಮ್ಮ ಮಗಳು ನಮ್ಮ ಸ್ಟೇಷನ್ ಲ್ಲಿ‌ ಇದಾಳೆ. ಬಂದು ಕರ್ಕೋಂಡ್ ಹೋಗಿ’ ಎನ್ನುತ್ತಿದ್ದಂತೆ ಮಧ್ಯೆ ಬಾಯಿ ಹಾಕಿದರು ಅಪ್ಪ, ‘ಅಲ್ಲ ಸರ್, ಅದ್ಹೇಗೆ ಅವಳು ಅಲ್ಲಿ ? ಏನೂ ಪ್ರಾಬ್ಲಂ ಇಲ್ಲ ಅಲ್ವಾ ಸರ್ ? ‘ ಎಂದರು. ‘ ನೋ…ಫೋನಲ್ಲೆ ಎಲ್ಲಾ ಹೇಳೋಕ್ ಆಗಲ್ಲರೀ. ನೀವು ಇಲ್ಲಿಗೆ ಬನ್ನಿ ಎಲ್ಲಾ ಗೊತ್ತಾಗುತ್ತೆ’ ಎಂದವರು ಮತ್ಯಾವ ಪ್ರತಿಕ್ರಿಯೆಗೂ ಕಾಯದೆ ಕಾಲ್ ಕಟ್ ಮಾಡಿದರು.

ತತ್ ಕ್ಷಣ ಅಲ್ಲಿಗೆ ಹೊರಟ ಪೋಷಕರು ಚಿಕ್ಕಮಗಳೂರಿಗೆ ಹೋಗಿ ಪೋಲಿಸ್ ಸ್ಟೇಷನ್ ತಲುಪಿದರು. ಅವರನ್ನು ನೋಡುತ್ತಿದ್ದಂತೆಯೇ ಯಾವುದೇ  ಉದ್ವೇಗ, ಆತಂಕಗಳಿಗೆ ಒಳಗಾಗದ ಆ ಹುಡುಗಿ, ಅಪ್ಪ -ಅಮ್ಮನನ್ನು ‘ನೀವ್ಯಾಕೆ ಬಂದ್ರಿ ? ನಾನೇ ನಾಳೆ  ಬರ್ತಿದ್ದೆ’ ಅಂದಳು. ಅವಳ ಆ ರೀತಿಯ ಸಮಚಿತ್ತದ ಮಾತುಗಳನ್ನು ಕೇಳಿ ಪೋಷಕರಿಗೆ ಸಿಟ್ಟಿನ ಜೊತೆ ಆಶ್ಚರ್ಯವೂ ಆಗಿರಬಹುದು.‌

‘ಸರ್. ಇವಳೇಕೆ ಇಲ್ಲಿ ಬಂದಳು ? ಏನಾದರೂ ತಪ್ಪು ಮಾಡಿದ್ದಾಳಾ? ಇವಳೊಬ್ಬಳನ್ನೇ ಏಕೆ ಅರೆಸ್ಟ್ ಮಾಡಿದಿರಿ ? ಮತ್ಯಾರಿದ್ರು ಇವಳ ಜೊತೆ ? ‘ ಎಂಬ ಅವರಮ್ಮನ ಸರಣಿ ಪ್ರಶ್ನೆಗಳಿಗೆ ಎಸ್ ಐ ಹೇಳಿದ್ದಿಷ್ಟು : ‘ ಪೋಲೀಸ್ ಸ್ಟೇಷನ್ ನಲ್ಲಿ ಇರೋರ್ನೆಲ್ಲ ಅರೆಸ್ಟ್ ಮಾಡಿರಬೇಕೆಂದೇನಿಲ್ಲ.‌ ನೀವು ಅವಳನ್ನು ಕರೆದುಕೊಂಡು ಹೋಗಿ . ನಾವು ಹೇಳೋದ್ಕಿಂತ ಈ ವಿಷ್ಯವನ್ನ ಅವಳೇ ಹೇಳಿದ್ರೆ ಸರಿಯಾಗಿರುತ್ತೆ. ಈಗ ಹೊರಡಿ‌ ಇಲ್ಲಿಂದ’ ಎಂದು ಹೇಳಿ ಎದ್ದು ಹೋದರು. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಸ್ ನಲ್ಲಿ ಬರುವಾಗ ಅಪ್ಪ ಅಮ್ಮರ ಮಧ್ಯೆ ಕೂತಿದ್ದ ಆಕೆಯ ಕೈಗಳನ್ನು ಆಪ್ಯಾಯಮಾನವಾಗಿ ಹಿಡಿದುಕೊಂಡ ಅವಳ ಅಪ್ಪ , ‘ಮಗಳೇ , ಆದದ್ದೇನು ಎಂದು  ನಿಜ ಹೇಳು. ನಾವು ನೀನು ಹೇಳುವುದನ್ನಷ್ಟೇ ನಂಬುತ್ತೇವೆ. ಮತ್ಯಾವುದಕ್ಕೂ ಕಿವಿಗೊಡುವುದಿಲ್ಲ’ ಎಂಬ ಭರವಸೆಯ ಮಾತುಗಳನ್ನು ಹೇಳಿದರು …

ಆಗ ನಿಧಾನಕ್ಕೆ ಅಪ್ಪನ ಭುಜಕ್ಕೆ ಒರಗಿದ ಆ ಹುಡುಗಿ ಆದದ್ದೇನೆಂದು ಹೀಗೆ ವಿವರಿಸಿದಳು :
“ಅಪ್ಪ, ನೀವು ಕೊಟ್ಟ ಬೋನಸ್ ಹಣ ನೋಡಿ ನನ್ನ ಬಹುದಿನಗಳ ಆಸೆಗೆ ಜೀವ ಬಂದಂತಾಯಿತು. ಯಾವುದಾದರೂ ಒಂದು ಪ್ರವಾಸಿ ತಾಣಕ್ಕೆ ಒಬ್ಬಳೇ ಹೊರಡಬೇಕು, ಯಾವ ತಯಾರಿಯೂ ಇಲ್ಲದೆ ಹೋಗಿಬಿಡಬೇಕು, ಅಲ್ಲಿರುವ ಜನರ ಜೊತೆ ಅಪರಿಚಿತಳಾಗಿ ಬೆರೆಯಬೇಕು, ಒಂದು ಸೂರ್ಯೋದಯವನ್ನೋ, ಸೂರ್ಯಾಸ್ತವನ್ನೋ ಒಬ್ಬಳೇ ಕೂತು ನೋಡಿ ಆನಂದಿಸಬೇಕು.

ಯಾರ ಸಂಪರ್ಕಕ್ಕೂ ಬರದೆ ಎರಡು ದಿನ ಅಪರಿಚಿತ ಸ್ಥಳದಲ್ಲಿದ್ದು ಮನೆಗೆ ಹಿಂತಿರುಗಬೇಕು ಎಂಬ ನನ್ನ ಸುಪ್ತ ಕನಸಿಗೆ ನಿಮ್ಮ ಬೋನಸ್ ಹಣ ನೋಡಿ ರಕ್ಕೆ ಪುಕ್ಕ ಬಂದಂತಾಯಿತು. ಇದರಿಂದ ನಿಮಗೆ ಎಷ್ಟು ಕಷ್ಟವಾಗಬಹುದು ಎಂಬ ನೆನಪಾಯ್ತಾದರೂ ನನ್ನ ರಮ್ಯವಾದ ಕನಸಿನ ಮುಂದೆ ಅದು ಅಡ್ಡಿಯಾಗಲಿಲ್ಲ. ಅದಕ್ಕೇ ನಾನು ಕಾಲೇಜ್ ಯೂನಿಫಾರಂನಲ್ಲೇ ಹೊರಟೆ. ಅಪ್ಪ, ನೀವೇ ಹೇಳಿದ್ದಿರಲ್ಲವೆ ಈ ಹಣವನ್ನು ನಾನು ನನಗೆ ಖುಷಿಕೊಡುವ ಕೆಲಸಕ್ಕೆ ಬಳಸಬಹುದು‌ ಎಂದು. ಈಗ ನೀವು‌ ನನ್ನನ್ನು ಬೈಯುವುದಿಲ್ಲ ತಾನೆ ? ಅಮ್ಮ, ನಿನಗೂ ಅಪ್ಪ ಅದನ್ನೇ ಹೇಳಿದ್ದರಲ್ಲವೆ ? ”

ಅವಳ ಮಾತುಗಳನ್ನು ಕೇಳಿದ ಅಪ್ಪ, ಹಾಗೆಯೇ ಮಗಳನ್ನು ತಬ್ಬಿ ,ತಲೆ ನೇವರಿಸಿ ಕಣ್ತುಂಬಿಕೊಂಡರು. ಅಮ್ಮ ಮಾತ್ರ ‘ ಏನ್ ಹುಚ್ಚೋ ನಿಮ್ದೆಲ್ಲ. ನಿಮ್ ಹುಚ್ಚಿಗೆ ನಮ್ ಜೀವ ತಗಿತೀರಾ ನೋಡ್ರಿ’ ಎಂದರಾದರೂ ಅಪ್ಪ – ಮಗಳ ನಗುವಿನಲ್ಲಿ ಅವರ ಕೋಪ ವ್ಯರ್ಥವಾಗಿಹೋಯಿತು. ಇನ್ನುಳಿದಂತೆ ಅವಳು ಒಬ್ಬಳೇ ಹೋಗಿದ್ಹೇಗೆ ? ಎಲ್ಲಿ ಇಳಿದಳು ? ಎಲ್ಲಿ ಉಳಿದಳು ಎಂಬ ಪ್ರಶ್ನೆಗಳೆಲ್ಲ ಅಲ್ಲಿ ಯಾರಿಗೂ ಅಗತ್ಯವಿರಲಿಲ್ಲ.

*                    *                       *                       *
ಆದರೆ ಕಾಲೇಜಿಗೆ ಆ ಪ್ರಶ್ನೆಗಳೇ ಬಹಳ ಮುಖ್ಯವಾಗಿತ್ತು. ಎರಡು‌ ದಿನಗಳ ಪೂರ್ವಭಾವಿ ಪರೀಕ್ಷೆಗೆ ಗೈರಾದ ಕಾರಣದಿಂದ ಪೋಷಕರು ಬಂದು ಪ್ರಾಂಶುಪಾಲರನ್ನು ಭೇಟಿಯಾಗಬೇಕು ಎಂದು ಕಾಲೇಜಿನಿಂದ ಆ ಹುಡುಗಿಯ ಕ್ಲಾಸ್ ಟೀಚರ್ ಕಾಲ್ ಮಾಡಿದ್ದರು. ಹಾಗಾಗಿ ಮರುದಿನ ಅವರಮ್ಮನೊಂದಿಗೆ ಕಾಲೇಜಿಗೆ ಬಂದವಳನ್ನು ಖೈದಿಯಂತೆ ಪ್ರಾಂಶುಪಾಲರ ಕ್ಯಾಬಿನ್ ಗೆ ಕರೆದೊಯ್ಯಲಾಯಿತು. ಇಬ್ಬರು ಕ್ಲಾಸ್ ಟೀಚರ್ ಗಳು, ಒಬ್ಬ ಪಿ ಟಿ ಟೀಚರ್, ಮತ್ತೊಬ್ಬ ಕೋರ್ಸ್ ಕೋ‌ಆರ್ಡಿನೇಟರ್- ಇವರುಗಳ ಎದರು ವಿಚಾರಣೆಯನ್ನು ಎದುರಿಸಬೇಕಾಯಿತು ಆ ಹುಡುಗಿ.

‘ಎಲ್ಲಿಗೆ ಹೋಗಿದ್ದೆ ? ಏನಾಯ್ತು ಹೇಳು.‌ ಸುಳ್ಳು ಹೇಳಬೇಡ’ ಎಂಬ ಕ್ಲಾಸ್ ಟೀಚರ್ ರ ಖಡಕ್ ಧ್ವನಿಗೆ ಆ ಹುಡುಗಿ ಹೆದರಿ ಹೋದಳು.‌ ಅವರಪ್ಪ ಅಮ್ಮನ ಮುಂದೆ ಸತ್ಯ ಹೇಳುವಾಗ ಇದ್ದ ಧೈರ್ಯ ಆಕೆಗೆ ಈಗ ಬರಲಿಲ್ಲ.‌ ಹಾಗಾಗಿ ಅವಳ ಅಮ್ಮನೇ ಪ್ರಾರಂಭಿಸಿದರು. ಈ ಬಗ್ಗೆ ರಾತ್ರಿ ಬಸ್ ನಲ್ಲಿ ಕೇಳಿರದ ಅಮ್ಮ ಬೆಳಿಗ್ಗೆ ಕಾಲೇಜ್ ಗೆ ಬರುವಾಗ ಎಲ್ಲಾ ಮಾಹಿತಿ‌ ಪಡೆದು ಮಗಳ ಸಾಹಸಮನೋಭಾವದ ಬಗ್ಗೆ ಸ್ವಲ್ಪ ಹೆಚ್ಚೇ ಜಂಭ ಪಡೆದುಕೊಂಡಿದ್ದರು.

‘ಮೇಡಂ, ನೋಡಿ ಆಗಿರೋದು ಇಷ್ಟು : ಅವಳಿಗೆ ಕಲ್ಲತ್ತಗಿರಿ ಫಾಲ್ಸ್ ನೋಡಿ,‌ ಕೆಮ್ಮಣ್ಣಗುಂಡಿಗೆ ಹೋಗಿ ಸನ್ ಸೆಟ್ ನೋಡ್ಬೇಕು ಅನ್ನಿಸ್ತಂತೆ ಅದಕ್ಕೆ ಕಾಲೇಜಿಗೆ ಬರದೆ ಶಿವಮೊಗ್ಗ ಟ್ರೈನ್ ಗೆ ತರೀಕೆರೆ ತನಕ ಹೋಗಿ ಅಲ್ಲಿಳಿದು ಯಾವುದೋ ಜೀಪ್ ಹತ್ಕೊಂಡು ಫಾಲ್ಸ್ ಲ್ಲಿ ಆಟ ಆಡಿದಾಳೆ. ಆಮೇಲೆ ಟೂರಿಸ್ಟ್ ಟೀಮ್ ಒಂದರ ಜೊತೆ ಅವರದ್ದೇ ಬಸ್ ನಲ್ಲಿ ಕೆಮ್ಮಣ್ಣು ಗುಂಡಿಗೆ ಹೋಗಿ‌ ಅಲ್ಲಿ ಸನ್ ಸೆಟ್ ನೋಡೋಕೆ ಅಂತ ಹೋಗ್ತಿದ್ದ ಕೆಲವರ ಜೊತೆ ಸೇರಿಕೊಂಡು ಟ್ರೆಕ್ಕಿಂಗ್ ಗೆ ಹೋಗಿದಾಳೆ. ಅಲ್ಲಿಂದ ಬರೋಷ್ಟರಲ್ಲಿ ಕತ್ತಲಾಗಿದ್ದರಿಂದ ಗುಂಪಿನಲ್ಲಿ ಬರಲಾಗದೆ ತಡವಾಗಿ ಬಂದಿದ್ದಾಳೆ.

ಅಷ್ಟೊತ್ತಿಗಾಗಲೇ ಅಲ್ಲಿರುವ ವಾಹನಗಳು ಹೋಗಿದ್ದರಿಂದ ಏನು ಮಾಡಬೇಕೆಂದು ತೋಚದೆ ಐಬಿಯ ಮುಂದಿದ್ದ ಬೆಂಚುಕಲ್ಲಿನ ಮೇಲೆ ಒಬ್ಬಳೇ ಕೂತಿದ್ದಾಳೆ. ಆಗ ಐಬಿಗೆ ಕಿರಾಣಿ ಕೊಡಲು ಬಂದ ವಾಹನ ಹೊರಟಿದೆ. ಅದರ ಡ್ರೈವರ್ ಬಳಿ ತನ್ನನ್ನು ತರೀಕೆರೆವರೆಗೂ ಬಿಡುವಂತೆ ಕೇಳಿಕೊಂಡಿದ್ದಾಳೆ. ಆತ ಒಪ್ಪಿ ಜೀಪಿನಲ್ಲಿ ಹತ್ತಿಸಿಕೊಂಡು ಬಂದಿದ್ದಾನೆ. ಮುಂದೆ ಚೆಕ್ ಪೋಸ್ಟ್ ನಲ್ಲಿ ಈ ಜೀಪ್ ತಡೆದ ಪೋಲೀಸರು ಹಾಗೆ ಡ್ರೈವರ್ ಜೊತೆ ಒಬ್ಬಳೇ ಮುಂದಿನ‌ ಸೀಟಿನಲ್ಲಿ ಕೂತ ಈ ಹುಡುಗಿಯ ಬಗ್ಗೆ ವಿಚಾರಿಸಿದ್ದಾರೆ. ಆಕೆ ನಡೆದದ್ದನ್ನು ಹೇಳಿದ ಮೇಲೆ ಅಲ್ಲಿಯೇ ಇದ್ದ ಎಸ್ ಐ ಅವಳನ್ನು ತಮ್ಮ ಜೀಪಿನಲ್ಲಿ ಚಿಕ್ಕಮಗಳೂರಿಗೆ ಕರೆದುಕೊಂಡು ಬಂದು ಸ್ಟೇಷನ್ ನಲ್ಲೇ ಉಳಿಯಲು ವ್ಯವಸ್ಥೆ ಮಾಡಿದ್ದಾರೆ .

ತಕ್ಷಣ ಮನೆಯವರಿಗೆ ಕಾಲ್ ಮಾಡಲು ಹೊರಟಾಗ ಇಷ್ಟು ರಾತ್ರಿಯಲ್ಲಿ ಕಾಲ್ ಮಾಡುವುದು ಬೇಡವೇ ಬೇಡ ಎಂದು ಅವಳು ಹಠ ಹಿಡಿದಿದ್ದರಿಂದ ನಮಗೆ ನಿನ್ನೆ ಬೆಳಗ್ಗೆ ಕಾಲ್ ಮಾಡಿದರು , ಹೋಗಿ ಕರ್ಕೊಂಡ್ ಬಂದ್ವಿ ಮೇಡಂ ‘ ಎಂದು ವಿನಯಪೂರ್ವಕವಾಗಿ ಅಮ್ಮ‌ ಮಾತಾಡಿದ ಮೇಲೆ ಇದನ್ನೆಲ್ಲ ಒಂದು ಕಟ್ಟುಕಥೆ ಎಂದು ತೀರ್ಮಾನಿಸಿದ ಪ್ರಾಂಶುಪಾಲರು ‘ನೀವೇ ಇವರಿಗೆಲ್ಲ ಸಪೋರ್ಟ್ ಮಾಡಿದ್ರೆ ನಾವೇನ್ ಹೇಳೋಕ್ ಆಗಲ್ಲ . ಏನಾದರೂ ಆಗಲಿ ಇಂತಹದ್ದು ರಿಪೀಟ್ ಆದರೆ ಟಿಸಿ ಕೊಡ್ತೀವಿ. ಈಗ ಅವಳು ಆ ಎರಡೂ ಪ್ರಶ್ನೆ ಪತ್ರಿಕೆಗಳನ್ನ ಅಸೈನ್ ಮೇಂಟ್ ಆಗಿ ಬರ್ಕೊಂಡ್ ಬರ್ಬೇಕು ‘ ಎಂದು ನಿರ್ದಯವಾಗಿ ಹೇಳಿ ನನಗೆ ಮೀಟಿಂಗ್ ಇದೆ ಎಂದು ಹೋರಟು ಹೋದರು.

ಅದಾದಮೇಲೆ ಆ ಕ್ಲಾಸ್ ಟೀಚರ್ ಅವಳನ್ನು ಏನೇನೋ ಕ್ರಾಸ್ ಕ್ವಷ್ಚೆನ್ ಮಾಡಿದರು‌. ಅವಕ್ಕೆಲ್ಲ ಆಕೆ‌ ಏನೇನೋ ಉತ್ತರ ಕೊಟ್ಟು ಕೊನೆಗೆ ಅವರ‌ ಮನೆಯವರಿಗೇ ಇಲ್ಲದ ಚಿಂತೆ ನಮಗ್ಯಾಕೆ‌‌ ಎಂದು ಗೊಣಗಿಕೊಂಡು ಸ್ಟಾಫ್ ರೂಂ ಗೆ ಬಂದು ಉಳಿದ ಸಹೋದ್ಯೋಗಿಗಳ ಕಿವಿಗೆ ಈ ಘಟನೆಯನ್ನು ರಸವತ್ತಾಗಿ ವಿವರಿಸಿದರು. ಮಧ್ಯೆ ಮಧ್ಯೆ ಅವಳು ಹೇಳಿದ ಕಥೆಯಲ್ಲಿ ಅನುಮಾನವಿರುವ ತಾಳೆಯಾಗದ ಅನೇಕ ಸಂಗತಿಗಳನ್ನೂ ಅವರವರೇ ಮಾತಾಡಿಕೊಂಡು ನಕ್ಕರು.

ಶಿವಮೊಗ್ಗ ಟ್ರೈನ್ ಇಷ್ಟೊತ್ತಿಗೆ ಇದೆ ಅಂತ ಇವ್ಳಿಗೆ ಹೇಗೆ ಗೊತ್ತು? ಆ ಎಸ್ ಐ ಯಾಕೆ ಅಲ್ಲಿ ಬಂದಿದ್ರು ? ಇವಳನ್ನ‌ ಯಾವುದೋ ಟೀಮ್ ನವರು ಯಾಕ್ ಬಸ್ ಹತ್ತಿಸಿಕೊಂಡ್ರು ? ಆ ಜೀಪ್ ಡ್ರೈವರ್ ಜೊತೆ ಕತ್ತಲಲ್ಲಿ ಒಬ್ಬಳೇ ಹೋಗೋಕ್ ಆಗುತ್ತಾ ? ಅದೂ ಅಲ್ಲದೆ ಇದಕ್ಕೆಲ್ಲ‌ ದುಡ್ಡು ಎಲ್ಲಿತ್ತು ಅವಳ ಹತ್ರ ?  ಪೋಲೀಸ್ ಸ್ಟೇಷನ್ ನಲ್ಲಿ ಒಂದು ರಾತ್ರಿ ಒಬ್ಬಳು ವಯಸ್ಸಿನ ಹುಡುಗಿ ಇದ್ದು ಬರೋದು ಅಂದ್ರೆ ಏನು ? ಎಂಬೆಲ್ಲಾ ಅನುಮಾನದ ಪ್ರಶ್ನೆಗಳನ್ನು ಒಬ್ಬೊಬ್ಬರೂ ಹರಿಯಬಿಟ್ಟು ತಮ್ಮ ಮನಸೋಯಿಚ್ಛೆ ಆಕೆಯನ್ನು ಹಳಿದುಕೊಂಡರು.

ಆ‌‌ ದಿನ‌ ಸಂಜೆ‌ ಮನೆಗೆ ಬಂದ ಅಪ್ಪ ‘ಕಾಲೇಜಲ್ಲಿ ಏನಂದರು ?’ ಎಂದು ಮಗಳನ್ನು ಕೇಳಿದಾಗ ಅಡುಗೆ ಮನೆಯಿಂದ ಅಮ್ಮನ ಧ್ವನಿ ಜೋರಾಗಿ‌ ಬಂತು “ಇನ್ನೊಂದ್  ಸಲ ಹೀಗಾದ್ರೆ ಟಿ.ಸಿ. ಕೊಡ್ತಾರಂತೆ” …

ಅಪ್ಪ ಮಗಳು ಪರಸ್ಪರರನ್ನು ನೋಡಿ ನಕ್ಕರು.

‘ಹಣದಲ್ಲಿ ಅನುಭೋಗಿ ಸರಕುಗಳನ್ನು ಕೊಂಡ ತನ್ನ ಇಬ್ಬರು ಮಕ್ಕಳಿಗೂ ಮತ್ತು ಅದೇ ಹಣದಲ್ಲಿ ಅನುಭವವೊಂದನ್ನು ಪಡೆಯಲು ಹಾತೊರೆದ ಈ ಕಿರಿಯ ಮಗಳಿಗೂ ಇರುವ ವಿಭಿನ್ನ ಅಭಿರುಚಿಯನ್ನು ನೆನೆದು ಒಳಗೊಳಗೆ ಗರ್ವ ಪಟ್ಟರು ಆ ಅಪ್ಪ…

ಮಗಳು ಅಸೈನ್ ಮೆಂಟ್ ಬರೆಯಲು ಶುರುವಿಟ್ಟುಕೊಂಡಳು…

ಅವಳ ಅಕ್ಕ ಕೊಂಡ ಗಾಗ್ರ ಮತ್ತು ತಮ್ಮನ ಬ್ರಾಂಡೆಡ್ ಶರ್ಟ್ ಗಳು ಬಣ್ಣಮಾಸಿ ಬಹಳ ದಿನಗಳೇ ಆಗಿವೆ… ಇವಳು ಏನನ್ನೂ ಕೊಳ್ಳದೇ ತನ್ನ ಪಾಲಿನ ಬೋನಸ್ ಹಣವನ್ನು ಇನ್ನೂ  ಜೋಪಾನ ಮಾಡಿಟ್ಟುಕೊಂಡಿದ್ದಾಳೆ…

*                   *                      *                     *

ಇತ್ತೀಚಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಪಕ್ಕದಲ್ಲಿ ಕೂತ ಹುಡುಗಿಯೊಬ್ಬಳು ನನ್ನನ್ನು ಪರಿಚಯ ಮಾಡಿಕೊಂಡಳು. ಉಭಯಕುಶಲೋಪರಿಯ ನಂತರ ಹವ್ಯಾಸಗಳ ಬಗ್ಗೆ ಮಾತು ಹೊರಳಿತು.‌ ನಾನು ಕಥೆ ಬರೆಯುತ್ತೇನೆ ಎಂದಿದ್ದಕ್ಕೋ ಏನೋ ಇಳಿದು ಹೋಗುವಾಗ ತನ್ನ ಡೈರಿಯನ್ನು ಜಾಣ್ಮೆಯಿಂದ ನನಗೆ ಸಿಗುವಂತೆ ಬಿಟ್ಟು ಹೋಗಿದ್ದಳು.

ಈ ಮೇಲಿನ ಕತೆ ಆ ಡೈರಿಯಲ್ಲಿ ಬರೆದಿತ್ತು… ಅದನ್ನೇ ನಿಮಗೆ ವಾಚಿಸಿದ್ದೇನೆ‌ . ಅಂದಹಾಗೆ ಆ ಡೈರಿಯಲ್ಲಿದ್ದ ಕತೆಯ ಕೊನೆಯ ಸಾಲುಗಳನ್ನು ನಾನಿನ್ನೂ ನಿಮಗೆ ಹೇಳಿಲ್ಲ . ಆ ಸಾಲು ಹೀಗಿತ್ತು :

“ಮರುದಿನ ಆ ಹುಡುಗಿ ಕ್ಲಾಸ್ ಟೀಚರ್ ಗೆ ಅಸೈನ್ ಮೆಂಟ್ ಕೊಟ್ಟು ಬರುವಾಗ ಅವಳ ಬಗ್ಗೆ ಯಾರೋ ಕೇಳಿದ್ದಕ್ಕೆ, ಅಯ್ಯೋ ಇವಳಾ ಅದೆ ಚಿಕ್ಕಮಗಳೂರಿಗೆ ಓಡಿ ಹೋಗಿದ್ಲಲ್ಲ ಅವಳೇ…ಎಂದು ಅವರು ಹೇಳಿಲ್ಲದಿದ್ದರೆ ನಾನು ಈ ಕತೆಯನ್ನು ಡೈರಿಯಲ್ಲಿ ಬರೆದಿಡುತ್ತಿರಲಿಲ್ಲ…”

ಈ ಸಾಲುಗಳನ್ನು ಓದಿ ನಾನು ಅತ್ತುಬಿಟ್ಟೆ ಹಾಗೂ ಆ ಡೈರಿಯನ್ನು ದಿಟ್ಟಿಸಿ ನೋಡಿ ‘ಮತ್ತೆ ಯಾವ ಅಪ್ಪನಿಗೆ ಈಗ ಬೋನಸ್ ಬಂದಿರಬಹುದು’ ಎಂದು ನೆನೆದು ಭಾವುಕನಾದೆ…

4 comments

  1. ಎಷ್ಟು ಸುಂದರ ಭಾವಗಳ ಪೂರ ಆಕೆಯ ಮನದಿ!! ಮೌನ ಮನದ ಕದ ತಟ್ಟಿ ಯಾವುದೋ ಅರಿಯದ ಭಾವ ಉಕ್ಕಿಸುವ ಬರಹ.ಅರಿಯದೇ ಕಣ್ಣು ಹಿಡಿಯಿತು.

Leave a Reply