ಕನ್ನಡಕ್ಕೆ ಬಂದ ‘ಜಮೀಲಾ’

ಕಥೆಗಾರ ಎಸ್ ಗಂಗಾಧರಯ್ಯ ಅವರ ಹೊಸ ಅನುವಾದಿತ ಕೃತಿ ಜಮೀಲಾ. ಐತ್ಮತೋವ್ ಅವರ ಕಾದಂಬರಿ ಸಾಕಷ್ಟು ಹೆಸರು ಗಳಿಸಿದೆ. ಇದನ್ನು ಗಂಗಾಧರಯ್ಯ ತಮ್ಮದೇ ಶೈಲಿಯಲ್ಲಿ ಕನ್ನಡಕ್ಕೆ ಕರೆತಂದಿದ್ದಾರೆ.

ಅಪ್ಪಟ ಹಳ್ಳಿಯೊಂದರ ಮೇಲೆ, ಅಲ್ಲಿನ ಮನಸುಗಳ ಮೇಲೆ, ಕೌಟುಂಬಿಕ ವ್ಯವಸ್ಥೆಯ ಮೇಲೆ, ಅದರಲ್ಲೂ ಹೆಣ್ಣು ಕುಲದ ಮೇಲೆ, ಸಾಮಾಜಿಕ ಸಂಬಂಧಗಳ ಮೇಲೆ, ಆರ್ಥಿಕ ವ್ಯವಸ್ಥೆಯ ಮೇಲೆ, ಅಂತೆಯೇ ಆ ಇಡೀ ಪರಿಸರದ ಮೇಲೆ, ಪ್ರಭುತ್ವದ ಜೊತೆಗೆ ಯುದ್ಧವೆಂಬ ಮಹಾ ಮಾರಿ ಮಾಡಿದ ಪ್ರತ್ಯಕ್ಷ ಹಾಗೂ ಪರೋಕ್ಷ ಘಾಸಿ ಈ ಪುಟ್ಟ ಕಾದಂಬರಿಯ ಮಡಿಲಲ್ಲಿ ಅನಾವರಣಗೊಳ್ಳುತ್ತದೆ.

ಇಂಥ ಘಾಸಿಯ ನಡುವೆ ಚಿಗುರೊಡೆವ ದನಿಯಾರ್ ಮತ್ತು ಜಮೀಲಾಳ ನಡುವಿನ ಪ್ರೀತಿ ಓದುಗರ ಎದೆಯನ್ನು ಬೆಚ್ಚಗಾಗಿಸುತ್ತದೆ.

ಕವಿಗಣ್ಣಿನ ಯುವ ಕಲಾವಿದನೊಬ್ಬನ ಸ್ಮೃತಿಯಲ್ಲಿ ಪುನರ್ ಸೃಷ್ಟಿಗೊಳ್ಳುವ ಇಲ್ಲಿನ ಈ ಲೋಕದಲ್ಲಿ ಅಪಾರ ಲವಲವಿಕೆಯ, ನೇರ ನಡೆ ನುಡಿಯ ಹೆಣ್ಣೊಬ್ಬಳು ತನ್ನನ್ನು ಉಸಿರು ಕಟ್ಟಿಸುತ್ತಿರುವ ಸಂಪ್ರದಾಯ, ಕಟ್ಟುಕಟ್ಟಲೆಗಳನ್ನು ತನ್ನ ಸಹಜ ತುಡಿತದೊಂದಿಗೆ ಧಿಕ್ಕರಿಸಿ ಆ ಮೂಲಕ ಬಿಡುಗಡೆಯನ್ನು ಕಂಡುಕೊಂಡಾಗ ಆ ಬಿಡುಗಡೆ ಅವಳೊಬ್ಬಳದೇ ಅನಿಸದೆ, ಇಡೀ ಹೆಣ್ಣು ಕುಲದ ಆಶಯವಾಗಿ ಧ್ವನಿಸುತ್ತದೆ.

ಇವಳು ಪ್ರಜ್ಞಾಪೂರ್ವಕವಾಗಿ ಮೀರುವ ಕ್ರಿಯೆಯಲ್ಲಿ ತೋರುವ ಧೈರ್ಯ ಮತ್ತು ಗಟ್ಟಿತನಗಳು ಇಡೀ ಗಂಡು ಕುಲಕ್ಕೆ ಮತ್ತು ಅವನು ಹುಟ್ಟಾಕಿಕೊಂಡಿರುವ ಸ್ಥಾಪಿತ ಮೌಲ್ಯಗಳಿಗೆ ಸವಾಲೆಸೆಯುವಂತಿವೆ. ತನ್ನನ್ನು ಒಂದು ವಸ್ತುವಿನಂತೆ ಕಾಣುವ, ಗಂಡಿನ ಅಹಂನಿಂದ ಹೊರಬರಲಾಗದ ಸಾಧಾರಣ ವ್ಯಕ್ತಿತ್ವದ ಗಂಡನ, ಹೆಣ್ಣಿನ ಇತಿಮಿತಿಗಳನ್ನು ಸದಾ ಎಚ್ಚರಿಸುವ ಕಣ್ಗಾವಲಿನಾಚೆಯ ಇವಳ ನಿಜ ಪ್ರೀತಿ ಟಾಲ್‍ಸ್ಟಾಯ್‍ನ ಅನ್ನಕರೆನಿನಾಳನ್ನೂ, ಲೋರ್ಕಾನಾ ಎರ್ಮಾಳನ್ನೂ ನೆನಪಿಸುತ್ತದೆ.

-ಎಸ್.ಗಂಗಾಧರಯ್ಯ

 

Leave a Reply