‘ಆಪರೇಶನ್ ಅಜ್ಜೀಮನೆ’

ಅರವತ್ತು ವರ್ಷಗಳ ತರುವಾಯ ಆಕೆಯ ತವರು ಮನೇನ ಹುಡುಕಿ, ಅವರನ್ನು ಸೇರಿಸಿದ ಧನ್ಯತೆಯ ಭಾವ ನನಗೆ.

ಅಜ್ಜೀ ಮನೆ ಹುಡುಕಿದ ಕಥೆ

ಕಣ್ಣೂರಿಗೆ ಬಂದು ಸ್ವಲ್ಪ ಸಮಯವಾಗಿತ್ತು ಅಷ್ಟೆ.
ಊರಿಗೆ ಬಂದವ ನನ್ನ ಅಮ್ಮನ ತವರು ಮನೆ ಕೆಕ್ಕಾರಿಗೆ ಹೋಗಿದ್ದೆ. ಅಲ್ಲಿ ನಾವೆಲ್ಲ ಚಿಕ್ಕವರಾಗಿದ್ದಾಗ ಆಟ ಆಡ್ತಿದ್ದ ತೂಗು ಮಂಚವೊಂದಿದೆ. ಅದರ ಮೇಲೆ ಕೂತು ಜೀಕು ಹಾಕ್ತಾ ನಾವೆಲ್ಲ ಓರಗೆಯವ್ರು ಸೇರಿ ಪಟ್ಟಾಂಗ ಹೊಡೀತಿದ್ವು.

ಸುರೇಶ ನನ್ನ ಬಾಲ್ಯದ ಗೆಳೆಯ, ಸೋದರ ಮಾವನ ಮಗ. ‘ಕಿರಣ, ಕೇರಳದಲ್ಲಿ ನೀನು ಎಲ್ಲಿ ಇಪ್ದೋ? ‘ ಎಂದ. ನಾನು ಕಣ್ಣೂರಲ್ಲಿ ಅಂತಿದ್ದ ಹಾಗೇನೇ ನಿಂಗೆ ಪಯ್ಯನೂರು ಹತ್ರ ಆಗ್ತಾ? ಎಂತ ಕೇಳಿದ. ‘ಹೌದೋ ಮಾರಾಯಾ, ರಾಶಿ ಹತ್ರ ಅಂತ ಹೇಳೋದನ್ನೇ ಕಾಯ್ತಿದ್ದವನ ಹಾಗೆ ಬಗೇಲ್ ತಡೆ ಅಂತ ನಳಿನೀ ಅಂತ ಹೆಂಡ್ತೀನ ಕರೀತಾ ಅಡುಗೆ ಮನೇಗೆ ಓಡಿದ. ತಿರುಗಿ ಬರೋವಾಗ ಅವನ ಹೆಂಡ್ತಿ ನಳಿನಿ ಜೊತೆಗಿದ್ಲು.

ಬರೋವಾಗ ಕೈಲಿ ಮೊಬೈಲ್ ಹಿಡ್ಕೊಂಡೇ ಬಂದವಳು ಅವರ ತವರು ಮನೆಗೆ ಫೋನ್ ಹಚ್ಚಿದ್ಲು. ಅಣ್ಣಾ, ಕಿರಣ ಇಲ್ಲಿಗೆ ಬಂದಿದ್ದ, ಅವಂಗೆ ಪಯ್ಯನೂರು ಗೊತ್ತಿದ್ದಡಾ. ಅವಂಗೆ ಎಡ್ರೆಸ್ ಹೇಳ್ದ್ರೆ ಅಮ್ಮನ ಮನೆ ಹುಡುಕೂಲಾಗ್ತಿತ್ತೋ ಏನೋ..ತೆಕೋ ಅವಂಗೇ ಮಾತಾಡು ಅಂತ ಫೋನ್ ನನ್ನ ಕೈಗೆ ಹಿಡಿಸಿದ್ಲು. ಆಕೆಯ ಅಣ್ಣ ಹೇಳ್ತಾ ಹೋದ….

ನಳಿನಿಯ ಅಮ್ಮ ಕೇರಳದವಳು. ಈಗ ಆಕೆಗೆ ಎಂಭತ್ತು ವರ್ಷ. ಸುಮಾರು ಅರವತ್ತೈದು ವರ್ಷಗಳ ಹಿಂದೆ ಕುಮಟಾದ ಮೂರೂರಿನ ಮನೆಯೊಂದಕ್ಕೆ ಮದುವೆಯಾಗಿ ಬಂದ ‘ಪಾರ್ವತಿ’ ಮತ್ತೆ ತವರು ಮನೆಗೆ ಹೋಗೇ ಇಲ್ಲ. ಆಗ ಪಯ್ಯನೂರಿಂದ ಕುಮಟೆಗೆ ಬರೋದು ಸುಲಭದ ಮಾತೇ ಆಗಿರಲಿಲ್ಲ. ಹತ್ತಾರು ನದಿಗಳನ್ನು ದಾಟಿ ಬರ್ಬೇಕು. ದೂರದ ಹಾದಿ. ಒಬ್ಬಳೇ ಹೋಗೋದಂತೂ ಸಾಧ್ಯವೇ ಇಲ್ಲ. ಗಂಡ, ಮಕ್ಕಳನ್ನ ಕರ್ಕೊಂಡು ಹೋಗೋವಷ್ಟು ಹಣವೂ ಇಲ್ಲ. ಮಕ್ಳನ್ನ ಹೆತ್ತಿದ್ದು, ಬೆಳೆಸಿದ್ದು.. ಬದುಕೆಲ್ಲ ಇದೇ ಆಗಿ ಹೋಗಿ ತವರು ಮನೆ ಇದೆ ಎನ್ನೋದೇ ಆಕೆಗೆ ಮರೆತು ಹೋಗಿತ್ತು.

ಮಕ್ಕಳು ದೊಡ್ಡವರಾಗಿ ಒಳ್ಳೊಳ್ಳೆ ಕೆಲಸ ಹಿಡಿದ ಮೇಲೆ ಅಜ್ಜನ ಮನೆ ಹುಡುಕೋ ಪ್ರಯತ್ನ ಮಾಡಿದ್ರೂ ಸರಿಯಾದ ವಿಳಾಸ, ಸಂಪರ್ಕ ಇಲ್ಲದೇ ಅದು ಸಾಧ್ಯವಾಗಿರಲೇ ಇಲ್ಲ. ನಾನು ‘ಪಯ್ಯನೂರು’ ಗೊತ್ತು ಎಂದ್ಮೇಲೆ ನಳಿನಿಯಲ್ಲಿ ಮತ್ತೆ ಅಜ್ಜೀ ಮನೆ ಆಸೆ ಚಿಗುರೊಡೆದಿತ್ತು.

ಎಂಭತ್ತು ವರ್ಷದ ಪಾರ್ವತಿ ಹತ್ತಿರ ಮಾತಾಡಿದೆ. ಆಕೆಗೆ ಎಲ್ಲ ಮರೆತೇ ಹೋಗಿತ್ತು. ‘ಉಳ್ಳಾಲತಿಟ್ಟ, ಪಯ್ಯನೂರು, ದಾಮೋದರ.. ಶಿವ ದೇವಸ್ಥಾನ’ ಇಷ್ಟು ವಿವರ ನನಗೆ ಸಿಕ್ತು. ದಾಮೋದರ ಆಕೆಯ ತಮ್ಮ. ಈಕೆ ಮದುವೆಯಾಗಿ ಬರೋವಾಗ ಚಿಕ್ಕವ. ಆಕೆಯ ಅಪ್ಪ ಶಿವ ದೇವಸ್ಥಾನದ ಭಟ್ರು.

ಇಷ್ಟು ವಿವರ ಬರ್ಕೊಂಡು ಹೊರಟೆ. ಕಣ್ಣೂರಿಗೆ ಬಂದವನೇ ನಮ್ಮ ಇಲಾಖೆಯ ಪಯ್ಯನೂರಿನ ಅಧಿಕಾರಿ ಸುಜಿತ್ ಗೆ ಮಾತಾಡಿದೆ. ಮರುದಿನವೇ ನಮ್ಮ ‘ಆಪರೇಶನ್ ಅಜ್ಜೀಮನೆ’ ಶುರುವಾಯ್ತು. ಪಯ್ಯನೂರಿಗೆ ಹೋಗಿ ಹಲವಾರು ಹಳ್ಳಿಗಳ ಲೈನ್ಮೆನ್ ಗಳನ್ನ ಕಂಡು ವಿಚಾರಿಸಿದೆವು. ಎಲ್ಲೆಲ್ಲೂ ಈ ‘ಉಳ್ಳಾಲತಿಟ್ಟ’ ಎನ್ನೋ ಊರೇ ಇಲ್ಲ! ಮತ್ತೆ ವಿಚಾರಣೆ ಮುಂದುವರೀತು. ಹೀಗೇ ಹುಡುಕ್ತಾ ಇರೋವಾಗ, ‘ಫಿಲಾಂತ್ರಾ’ ದ ಲೈನ್ಮನ್ ಒಬ್ಬ,
ಅದು ಉಲ್ಲಾಲತಿಟ್ಟ ಇರಲಿಕ್ಕಿಲ್ಲ ಸಾರ್ ‘ವಿಲಯಂಕೋಡ್’ ಇರ್ಬೇಕು ಅಲ್ಲಿ ಒಂದು ಶಿವ ದೇವಸ್ಥಾನ ಇದೆ. ದಾಮೋದರ ಅನ್ನೋ ಭಟ್ರು ಇದ್ದಾರೆ. ನನಗೆ ಅವ್ರು ಗೊತ್ತು ಅಂದ್ಬಿಟ್ಟ.

ಎಲ್ಲೋ ಚಕ್ಕನೆ ಬೆಳಕು ಹೊಳೆದಂತಾಯ್ತು. ಆದ್ರೆ ನನಗೆ ಸಿಕ್ಕಿದ ಊರಿನ ಹೆಸರಿಗೂ ಈ ಹೆಸರಿಗೂ ಅಜಗಜಾಂತರ ಫರಕ್. ಆದ್ರೂ ನೋಡೇಬಿಡೋಣ ಅಂತ ಹೊರಟೇ ಬಿಟ್ಟೆವು ‘ವಿಲಯಂಕೋಡ್’ ಗೆ. ಕಿರಿದಾದ ರಸ್ತೆಗಳನ್ನ ಬಳಸ್ತಾ, ಬಳಸ್ತಾ ಹೋದ್ರೆ ಅಂತೂ ‘ ವಿಲಯಂಕೋಡ್’ ಶಿವ ದೇವಸ್ಥಾನ ಸಿಕ್ತು. ಅದೃಷ್ಟಕ್ಕೆ ‘ದಾಮೋದರ ಭಟ್ರು’ ಅಲ್ಲೇ ಇದ್ರು. ಅವರೂ ಸುಮಾರು ಮುದುಕರೇ. ಉಭಯ ಕುಶಲೋಪರಿ ಯ ನಂತ್ರ ನಾನು ಬಂದ ಕಾರಣ ಹೇಳಿದೆ.’ ಪಾರ್ವತಿ’ ಹೆಸರು ಹೇಳ್ತಿದ್ದ ಹಾಗೇ ಆ ಮುದುಕರ ಮುಖದಲ್ಲಿ ಹೊಳಪು. ‘ಚೇಚೀ’ ಅಂತ ಅಳೊದಕ್ಕೇ ಶುರುಮಾಡಿದ್ರು. ನನಗೋ ಸಿಕ್ಕಾಪಟ್ಟೆ ಖುಶಿ. ದಾಮೋದರ ಭಟ್ರು ಸಿಕ್ಕಿಬಿಟ್ಟಿದ್ರು! ಎಪ್ಪತ್ತು ವರ್ಷದ ಹಿರಿಯರು,ಪಾರ್ವತಿಯ ಅಣ್ಣ ನನ್ನೆದುರು ಅಳುತ್ತ ಕೂತಿದ್ರು.

ಅವರ ಮನೆಗೆ ಹೋದೆ. ಒಂದು ಕೊಳಗ ‘ಚಾಯ’ ಬಂತು. ಅವರ ಮಗನಿಗೋ ಸಂಭ್ರಮವೇ ಸಂಭ್ರಮ. ಆತನೇ ನೋಡದಿದ್ದ ‘ಅತ್ತೆ’ ಸಿಕ್ಕಿಬಿಟ್ಟಿದ್ಲು. ಇನ್ನೇನು, ಕೂಡಲೇ ಫೋನ್ ಮಾಡಿದೆ ಊರಿಗೆ. ‘ಪಾರ್ವತಿ’ ಸಣ್ಣ ಸ್ವರದಲ್ಲಿ ಮಾತಾಡ್ತಿದ್ಲು. ಆಕ್ಕ ತಮ್ಮ ಅದೇನು ಮಾತಾಡೆದ್ರೋ ತಿಳಿಯೆ. ಆದರೆ ಆ ವೃದ್ಧರ ಕಣ್ಣಿಂದ ನೀರು ನಿರಂತರವಾಗಿ ಹರೀತಿತ್ತು. ಕಳೆದೇ ಹೋಗಿದ್ದ ಅಕ್ಕ ಅವರಿಗೆ ಮತ್ತೆ ಸಿಕ್ಕಿಬಿಟ್ಟಿದ್ಲು.

ಅರವತ್ತು ವರ್ಷಗಳ ತರುವಾಯ ಆಕೆಯ ತವರು ನಮನೇನ ಹುಡುಕಿ, ಅವರನ್ನು ಸೇರಿಸಿದ ಧನ್ಯತೆಯ ಭಾವ ನನಗೆ.

ನಂತರ ಶುರುವಾಯ್ತು ನೋಡಿ, ಕುಮಟಾದಿಂದ, ಬೆಂಗ್ಳೂರಿಂದ, ಬೊಂಬಾಯಿಯಿಂದ ‘ ವಿಲಯಂಕೋಡ್’ ಗೆ ಕಾರುಗಳ ನಿರಂತರ ಓಡಾಟ. ಎಲ್ಲ ಪಾರ್ವತಿಯವರ ಮಕ್ಕಳು. ಮಕ್ಕಳು ಮೊಮ್ಮಕ್ಕಳು ಎಲ್ಲ ಅಜ್ಜೀಮನೆಗೆ ಬಂದಿದ್ದೇ ಬಂದಿದ್ದು. ದಾಮೋದರ ಭಟ್ಟರ ಮಗ ‘ವಾಸು’ ಕೆಕ್ಕಾರಿಗೆ ಬಂದ. ಪಾರ್ವತಿಯವರನ್ನ ಕಂಡು ಹೋದ. ಪಾರ್ವತಿಯವರ ತಂಗಿಯೂ ಬಂದು ಹೋದ್ಲು….. ಈಗ ನಿರಂತರ ಓಡಾಟ. ಇಬ್ಬರದ್ದೂ ಬೇರೆ ಬೇರೆ ಭಾಷೆ. ಅವ್ರದ್ದು ಮಲಯಾಳಮ್ ಇವ್ರದ್ದು ಹವ್ಯಕ ಭಾಷೆ. ಎಲ್ಲರೂ ಮಾತಾಡ್ಕೋತಾರೆ. ಎಷ್ಟು ಅರ್ಥವಾಗ್ತದೋ ಬಿಡ್ತದೋ ಗೊತ್ತಿಲ್ಲ. ಏನೀವಾಗ? ಪ್ರೀತಿಗೆ ಭಾಷೆಯ ಹಂಗಿದೆಯೇ?

ಅಂತೂ ಎರಡೂ ಮನೆಗಳನ್ನ ಮತ್ತೆ ಸೇರಿಸಿದ್ದೆ. ನಾನು ಕಣ್ಣೂರಿಗೆ ಹೋಗಿದ್ದು ಸಾರ್ಥಕ ಎನಿಸತೊಡಗಿತ್ತು.
ದಾಮೋದರರ ಮಗ ವಾಸು ತುಂಬ ಚಟುವಟಿಕೆಯ ಮನುಷ್ಯ. ಸಹಕಾರೀ ಸಂಘದಲ್ಲಿ ಪುಢಾರಿ. ಹತ್ತಾರು ಜನತರ ಜೊತೆ ಓಡಾಟ. ಒಂದು ದಿನ ಹೀಗೇ ನನ್ನ ಆಫೀಸಿಗೆ ಬಂದವ.. ನಮ್ಮೂರಿನ ಹಬ್ಬ. ಒಳ್ಳೇ ನಾಟ್ಕ ಇದೆ. ಬಂದ್ಬಿಡಿ ಅಂತ ಇನ್ವಿಟೇಶನ್ ಕೊಟ್ಟ. ನಾಟ್ಕ ತಪ್ಪಿಸ್ಕೊಳ್ಳೋದುಂಟೇ? ಹಬ್ಬದ ದಿನ ಹೊರಟೇಬಿಟ್ಟೆ, ವಾಸುವಿನ ಊರಿಗೆ.

ಹಬ್ಬದ ದಿನ ನೋಡಿದ ನಾಟ್ಕ ‘ ನೀಲಕ್ಕುಯಿಲ್’ (ನೀಲಿ ಕೋಗಿಲೆ). ಇದು ಪ್ರತಿಷ್ಠಿತ ನಾಟಕ ಕಂಪನಿ KPAC (Kerala People’s Arts Club ) ಯ ಪ್ರೊಡಕ್ಷನ್. ಕೇರಳ ರಂಗಭೂಮಿಯ ಕುರಿತು ಹೇಳುವಾಗ KPAC ಯನ್ನು ಬಿಟ್ಟು ಹೇಳಲಾಗೋದೇ ಇಲ್ಲ. ಕೇರಳದ ರಂಗಭೂಮಿಗೊಂದು ಹೊಸ ದಿಕ್ಕು ತೋರಿದ KPAC ಹುಟ್ಟಿದ್ದು ‘ಕಾಯಂಕುಳಂ’ ನಲ್ಲಿ 1950 ರಲ್ಲಿ. ಕೇರಳದ ಕಮ್ಯೂನಿಸ್ಟ್ ರಾಜಕೀಯದೊಂದಿಗೆ ನೇರ ಸಂಪರ್ಕ ಹೊಂದಿದ KPAC ಕೇರಳಾದ್ಯಂತ ಕಮ್ಯೂನಿಸ್ಟ್ ಸಿದ್ಧಾಂತಗಳನ್ನ ಪ್ರಚುರಪಡಿಸುವಲ್ಲಿ ವಹಿಸಿದ ಪಾತ್ರ ತುಂಬ ಹಿರಿದು.

1951 ರಲ್ಲಿ KPAC ತನ್ನ ಮೊದಲ ನಾಟ್ಕ ಆಡಿತು. ‘ಎಂಟೆ ಮಗನಾಣ್ ಶೆರಿ’ ಎನ್ನೋದು ನಾಟ್ಕದ ಹೆಸರು. ಆದ್ರೆ 1951 ರಲ್ಲಿ KPAC ಎತ್ತಿಕೊಂಡ ನಾಟ್ಕ ‘ನಿಂಗಳೆನ್ನೆ ಕಮ್ಯೂನಿಸ್ಟ್ ಆಕಿ’, ಕೇರಳಾದ್ಯಂತ ಸಂಚಯನ ಹುಟ್ಟಿಸಿತು. ಕೇರಳ ರಂಗಭೂಮಿಂಗೆ ಹೊಸ ತಿರುವು ಕೊಟ್ಟ ನಾಟ್ಕ ಇದು. ಕ್ರಾಂತಿಕಾರಿ ಸಾಹಿತಿ  ‘ತೊಪ್ಪಿಲ್ ಭಾಸಿ’, ‘ ಸೋಮನ್’ ಎನ್ನೋ ಹೆಸರಿನಲ್ಲಿ ಈ ನಾಟ್ಕ ಬರೆದ್ರು. ಭೂಗತರಾಗಿದ್ದುಕೊಂಡೇ ಅವ್ರು ಬರೆದ ನಾಟ್ಕ ಇದು. ಈ ನಾಟ್ಕದ ಯಶಸ್ಸು ಈ ತಂಡವನ್ನ ಸಮುದಾಯ ರಂಗಭೂಮಿಯ ಮುನ್ನೆಲೆಗೆ ತಂದು ನಿಲ್ಲಿಸ್ತು. ಅಂದಿನಿಂದ್ಲೂ ತಂಡ ನಿರಂತರವಾಗಿ ಸದಭಿರುಚಿಯ ನಾಟ್ಕಗಳನ್ನ ಆಡ್ತಾ ಬಂದಿದೆ.

‘ನೀಲಕ್ಕುಯಿಲ್’ ನಾಟ್ಕವೂ ಇಂಥ ಪ್ರಗತಿಪರ ವಸ್ತುವನ್ನೇ ಹೊಂದಿದೆ. ‘ಉರೂಬ್’ ರ ಕಥೆಯೊಂದನ್ನಾಧರಿಸಿದ ನಾಟ್ಕ ಇದು. 1954 ರಲ್ಲಿ ಸಿನಿಮಾ ಆಗಿ ಕೂಡ ಹೊರಬಂದಿತ್ತು. ಭಾಸ್ಕರನ್ ಮತ್ತು ರಾಮು ಕರಿಯಟ್ ನಿರ್ದೇಶಿಸಿದ ಈ ಚಿತ್ರ ಮಲಯಾಳಮ್ ಸಿನಿಮಾಕ್ಕೆ ಹೊಸ ಹೊರಳು ಕೊಟ್ಟ ಚಿತ್ರ ಅಂತ ಹೇಳ್ತಾರೆ.

‘ನೀಲಿ’ ದಲಿತ ಹೆಣ್ಣುಮಗಳು. ಆಕೆಗೂ ಶ್ರೀಧರನ್ ನಾಯರ್ ಎನ್ನೋ ಮಾಸ್ತರನಿಗೂ ಪ್ರೇಮ. ಈ ಪ್ರೇಮದಲ್ಲಿ ‘ನೀಲಿ’ ಗರ್ಭವತಿಯಾಗ್ತಾಳೆ. ಆದ್ರೆ ಸಮಾಜಕ್ಕೆ ಹೆದರಿದ ಶ್ರೀಧರನ್ ನಾಯರ್ ಆಕೇನ ಮದುವೆಯಾಗೋದಕ್ಕೆ ನಿರಾಕರಿಸ್ತಾನೆ. ಒಂಥರಾ ಬಹಿಷ್ಕಾರಕ್ಕೊಳಗಾದ ನೀಲಿ, ಮಗುವನ್ನ ಹೆರುತ್ತಲೇ ಸಾಯ್ತಾಳೆ. ಸಮಾಜದ ಬೆದರಿಕೆಗೆ ಆಂಜದ ಹಳ್ಳಿಯ ಪೋಸ್ಟ್ ಮ್ಯಾನ್ ಮಗುವನ್ನ ಸಾಕ್ತಾನೆ. ಮಗುವಿಗೆ ‘ಮೋಹನ’ ಅಂತ ಹೆಸರಿಡ್ತಾನೆ. ಈ ನಡುವೆ ಮಾಸ್ತರ ‘ನಳಿನಿ’ ಎನ್ನೋ ಹುಡ್ಗೀನ ಮದುವೆಯಾಗ್ತಾನೆ. ಮುಂದೊಂದು ದಿನ ಮಗುವಿನ ಮೂಲ ನಳಿನಿಗೆ ಗೊತ್ತಾಗ್ತದೆ. ಗುಟ್ಟು ರಟ್ಟಾಗ್ತದೆ. ವಿಶಾಲ ಹೃದಯದ ಹೆಣ್ಣು ನಳಿನಿ ಆ ಮಗುವನ್ನ ತನ್ನದೇ ಅನ್ನೋ ಹಾಗೆ ಅಪ್ಪಿಕೊಳ್ತಾಳೆ, ಒಪ್ಪಿಕೊಳ್ತಾಳೆ.

ಹೆಸರಿನಲ್ಲೇ ಕ್ವಾಲಿಟಿಯನ್ನುಳಿಸಿಕೊಂಡಿರೋ ಏಕಂಅಯ ಈ ನಾಟ್ಕದ ಪ್ರದರ್ಶನವೂ ಹಾಗೇ ಇತ್ತು. ಕೇರಳದ ಕಂಪಿನ ಸಂಗೀತ. ಪ್ರೊಫೆಷನಲ್ ಆದ್ರೂ ಎಲ್ಲೂ ಅತಿ ಅಭಿನಯ ಮಾಡ್ದೇ ಇರೋ ನಟ ನಟಿಯರು. ಒಂಥರಾ ಮೆಲೋಡ್ರಾಮಾ ಆದ್ರೂ ಸಂಯಮದಿಂದ ಕಥೆ ಹೇಳೋ ರೀತಿ ತುಂಬಾ ಇಷ್ಟವಾದ್ವು.

ಎಲ್ಲಕ್ಕಿಂತಲೂ ಮಿಗಿಲಾದ್ದು ಪಾರ್ವತಿ ಅಜ್ಜಿಯ ತವರು ಮನೆಯ ಅಂಗಳದಲ್ಲಿ ನಾಟ್ಕ ನೋಡಿದ ಭಾವಪೂರ್ಣ ಕ್ಷಣಗಳು.

5 comments

  1. Antu nimma Kerala service chirastayiyagiruvalli yava sandehavu illa.Natakada kathe mattu Ajiya kathe eradu heart touching.Thank u .

  2. ಕತೆ ನೈಜವಾಗಿ ಮೂಡಿ ಬಂದಿದೆ .ಆ ಊರಿಗೆ ನಿಮ್ಮ ಸಂಗಡ ನಾನು ಒಮ್ಮೆ ಬಂದಿದ್ದು ನೆನಪಿಗೆ ಬರುತ್ತದೆ. ಶುಭವಾಗಲಿ.

Leave a Reply