ಓ ಎಲ್ ಎನ್ ಕಂಡ ‘ಅರ್ಧ ಕಥಾನಕ’

‘ಅರ್ಧ ಕಥಾನಕ’ ಇದೇ ಈಗ ಓದಿದೆ. ತುಂಬ ಚೆನ್ನಾಗಿದೆ. ಇಷ್ಟು ಒಳ್ಳೆಯ ಜೀವನ ಚಿತ್ರ ಕನ್ನಡದಲ್ಲಿ ಓದಿ ಬಹಳ ಕಾಲವಾಗಿತ್ತು. ವ್ಯಾಸರ ವ್ಯಕ್ತಿತ್ವ ಹೀಗೆ ಗೊತ್ತಿರಲಿಲ್ಲ. ಓದುತ್ತ ನಾನೂ ವ್ಯಾಸರ ಮನೆಯೊಳಗೇ ಅವರು ಯಾರಿಗೂ ಕಾಣದ ಹಾಗೆ ಅದೃಶ್ಯವಾಗಿದ್ದುಕೊಂಡು ಎಲ್ಲ ನೋಡುತ್ತಿದ್ದೇನೆ, ಕೇಳುತ್ತಿದ್ದೇನೆ ಅನ್ನಿಸಿತು.

ಓ ಎಲ್ ನಾಗಭೂಷಣಸ್ವಾಮಿ 

ಪ್ರಿಯ ಅನುಪಮಾ ಪ್ರಸಾದ್ ಅವರಿಗೆ,

ನಮಸ್ಕಾರ. ‘ಅರ್ಧ ಕಥಾನಕ’ ಇದೇ ಈಗ ಓದಿದೆ. ತುಂಬ ಚೆನ್ನಾಗಿದೆ. ಇಷ್ಟು ಒಳ್ಳೆಯ ಜೀವನ ಚಿತ್ರ ಕನ್ನಡದಲ್ಲಿ ಓದಿ ಬಹಳ ಕಾಲವಾಗಿತ್ತು. ವ್ಯಾಸರ ವ್ಯಕ್ತಿತ್ವ ಹೀಗೆ ಗೊತ್ತಿರಲಿಲ್ಲ. ಓದುತ್ತ ನಾನೂ ವ್ಯಾಸರ ಮನೆಯೊಳಗೇ ಅವರು ಯಾರಿಗೂ ಕಾಣದ ಹಾಗೆ ಅದೃಶ್ಯವಾಗಿದ್ದುಕೊಂಡು ಎಲ್ಲ ನೋಡುತ್ತಿದ್ದೇನೆ, ಕೇಳುತ್ತಿದ್ದೇನೆ ಅನ್ನಿಸಿತು.

ನಿಮ್ಮ ನಿರೂಪಣೆ ಕಾದಂಬರಿಯನ್ನು ಓದಿದ ಅನುಭವ ನೀಡುತ್ತದೆ. ವ್ಯಾಸರು ಮಾತ್ರವಲ್ಲದೇ ಅಜ್ಜ, ಅಜ್ಜಿ ಇಂಥ ಪಾತ್ರಗಳೂ, ಕಾಸರಗೋಡಿನ ಪ್ರದೇಶದ ದಿನ ನಿತ್ಯದ ಬದುಕಿನ ಚಿತ್ರಣವೂ, ಅಲ್ಲಿನ ಬೇಸಾಯದ ಕ್ರಮದಂಥ ವಿವರಗಳೂ ಒಳ್ಳೆಯ ಕಾದಂಬರಿಯೊಂದರಲ್ಲಿ ಬರುವಷ್ಟೇ ಶಕ್ತವಾಗಿವೆ. ‘ಅರ್ಧ ಕಥಾನಕ’ ಓದುತ್ತ, ವಿಶೇಷವಾಗಿ ಅಲ್ಲಿ ಬರುವ ಪಾಶ್ಚಾತ್ಯ ಲೇಖಕರ, ಸಿನಿಮಾಗಳ, ರೇಡಿಯೋದ ಪ್ರಸ್ತಾಪ ಓದುತ್ತ, ನನ್ನ ಎಳೆ ಹರೆಯದ 1960ರ ದಶಕದಲ್ಲಿ ಹೈಸ್ಕೂಲು ಓದುತ್ತ ಬದುಕಿದ್ದ ಕಾಲ, ಊರು ಬೇರೆಯಾದರೂ ಕಾಲ ಅದೇ, ಮತ್ತೆ ಮನಸ್ಸಿನಲ್ಲೇ ರೂಪು ತಳೆಯಿತು.

ನಾವು ಏನನ್ನು ವ್ಯಕ್ತ ಮಾಡುತ್ತೇವೋ ಅಷ್ಟೇ ನಮ್ಮ ವ್ಯಕ್ತಿತ್ವ ಅಲ್ಲವೇ. ವ್ಯಾಸರು ಕೂಡ ಅವರ ಕಥೆಗಳಲ್ಲಿ ವ್ಯಕ್ತಪಡಿಸಿದ್ದಕ್ಕಿಂತ ಬೇರೆಯಾಗಿದ್ದರು ಅನ್ನುವುದು ಗೊತ್ತಾಗುತ್ತದೆ. ಹಾಗೆಯೇ ಅವರು ತಮ್ಮ ಪತ್ನಿ, ಮಕ್ಕಳು, ಬಂಧು, ನಂಟರ ಜೊತೆಯ ಒಡನಾಟದಲ್ಲಿ ‘ವ್ಯಕ್ತ’ಗೊಂಡದ್ದಕ್ಕಿಂತ ವ್ಯಕ್ತವಾಗದೇ ಉಳಿದದ್ದೇ ಹೆಚ್ಚು ಅಂತಲೇ ಅನ್ನಿಸುತ್ತದೆ.

ಇದು ವ್ಯಾಸರು ಮಾತ್ರವಲ್ಲ ಎಲ್ಲರ ಪಾಡೂ ಅಲ್ಲವೇ? ನಾವು ಬಾಯಿಬಿಟ್ಟು ಹೇಳದೆಯೂ, ಅಂದರೆ ‘ವ್ಯಕ್ತ’ಮಾಡದೆಯೂ ನಮ್ಮನ್ನು ಇತರರು ತಿಳಿಯಬೇಕು ಅನ್ನುವ ಆಸೆ, ಒಳಗಿರುವುದನ್ನು ಹೇಳಿಕೊಳ್ಳದಂತೆ ತಡೆಯುವ ಒಳಗಿನ ‘ನ್ಯಾಯಾಧೀಶ’ ಹೇಳಿಕೊಳ್ಳಲು ತಕ್ಕ ಸಂದರ್ಭ ಬರಲಿ ಎಂದು ಕಾದು ಅದು ಬರದೆಯೇ ಹೋಗುವುದು ಹೀಗೆಲ್ಲ ಆಗಿ ಎಲ್ಲರ ವ್ಯಕ್ತಿತ್ವದ ಒಳ ಒಳ ವಿವರಗಳು ಹಾಗೇ ನಮ್ಮ ನಮ್ಮ ಜೊತೆಗೇ ಇಲ್ಲವಾಗುತ್ತವೆ. ಹಾಗೆ ಎಲ್ಲರೂ ಪೂರಾ ವ್ಯಕ್ತವಾದರೆ ಬದುಕುವುದೇ ಅಸಾಧ್ಯವೂ ಆದೀತು.

ಸರಿಯೋ ತಪ್ಪೋ ಸಾಹಿತ್ಯ ಅನ್ನುವುದು ಶಿಕ್ಷಣದ ಭಾಗವಾಗಿ ನೋಡುವುದನ್ನು ಕಲಿತುಬಿಟ್ಟಿದ್ದೇವೆ. ಹಾಗಾಗಿ ಸಾಹಿತ್ಯ ಬೋಧಿಸುವ, ಸಾಹಿತ್ಯ ವಿದ್ಯಾರ್ಥಿಗಳಿಗಾಗಿ ಬರೆಯುವ ಇಂಥ ಜನ ಮಾತ್ರ ಮುಖ್ಯ ವಾಹಿನಿಯಾಗಿ ಉಳಿದ ಲೇಖಕರು ಅವಜ್ಞೆಗೆ ಗುರಿಯಾಗುತ್ತಾರೆ. ಇದು ಹೆಚ್ಚು ಪ್ರಖರವಾಗಿ ಕಾಣತೊಡಗಿದ್ದು ವ್ಯಾಸರು ಬರೆಯುತ್ತಿದ್ದ ದಶಕಗಳಲ್ಲೇ. ಇವತ್ತಿಗೂ ಇಂಥ ಸ್ಥಿತಿ ಬದಲಾಗಿಲ್ಲ.

ಅದು 2017ನೇ ಫೆಬ್ರವರಿ ತಿಂಗಳು. ಬೆಂಗಳೂರಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಮಾರಂಭ. ‘ಜೋಗತಿ ಜೋಳಿಗೆ’ ಕಥಾ ಸಂಕಲನ ಅಕಾಡೆಮಿ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಓಎಲ್ಎನ್ ಅವರಿಗೆ ಆ ಬಾರಿಯ ಗೌರವ ಪುರಸ್ಕಾರ. ಹಾಗಾಗಿ ಅವರನ್ನು ಮುಖತಃ ಭೇಟಿಯಾಗುವ ಸಂದರ್ಭ. ‘ಅರ್ಧ ಕಥಾನಕ’ದ ಕುರಿತು ಮಾತು. ಕೆಲವೇ ದಿನಗಳಲ್ಲಿ ಅವರ ಪತ್ರ. ಓದಿದಾಗ ಒಂದು ಸಾರ್ಥಕ ಭಾವ. ಇಷ್ಟು ಕಾಲ ನನ್ನೊಳಗಿತ್ತು. ಈಗ ಜಿ.ಎನ್. ಮೋಹನ್ ಹೊರತೆಗೆದರು. ಹೌದು. ಇದು ಒಂದು ವಯಕ್ತಿಕ ಪತ್ರವಲ್ಲ. ಮಂಥನ.

ಬೇಸಾಯದ ವಿವರ ನೀಡುತ್ತ ನೀವು ಬಳಸಿದ ‘ಮದಗ’ ಎಂಬ ಮಾತು ನನ್ನನ್ನು ಜಾನಪದ ಗೀತೆಗೆ ಅಲ್ಲಿಂದ ಕಿಟಲ್ ಕೋಶಕ್ಕೆ ಕರೆದೊಯ್ದು ಮದಗ ಅನ್ನುವುದು ಅಚ್ಚಕನ್ನಡದ ಮರೆತ ಪದ ಎಂದು ಏನೇನೋ ವಿವರ ಮನಸ್ಸಿಗೆ ತಂದುಕೊಳ್ಳುವಂತೆ ಮಾಡಿತು. ನಿಮ್ಮ ಕಥಾನಕದಲ್ಲಿ ಬರುವ ಅಸಂಖ್ಯ ವಿವರಗಳು ಆ ಕಾಲದ ಬದುಕಿನಲ್ಲಿ ತೊಡಗಿದ್ದವರಿಗೆ, ಸಮೀಪದಿಂದಲೋ ದೂರದಿಂದಲೋ ಕಂಡಿದ್ದವರಿಗೆ ಮೌಲಿಕ ಅನ್ನಿಸುತ್ತದೆ. ಆದರೆ ದಿನ ನಿತ್ಯದ ಬದುಕಿನಲ್ಲಿ ಆ ವಿವರಗಳೆಲ್ಲ ಅಪ್ರಸ್ತುತವಾಗುತ್ತ ನಡೆದಂತೆ ಇಡೀ ಬದುಕಿನ ಕ್ರಮವೇ ಮರವೆಗೆ ಸಂದು ಬಿಡುತ್ತದೆ.

ಈಗ ನಗರಗಳಲ್ಲಿ ಹೈಸ್ಕೂಲು ಓದುವ ವಿದ್ಯಾರ್ಥಿಗಳ ಮನಸ್ಸಿನ ಕೋಶದಲ್ಲಿ ‘ಅರ್ಧ ಕಥಾನಕ’ ಚಿತ್ರಿಸುವಂಥ ವಿವರಗಳಿಗೆ ಜಾಗವೇ ಇಲ್ಲವೇನೋ. ಒಬ್ಬ ವ್ಯಕ್ತಿಯ ಜೀವಿತ ಕಾಲದಲ್ಲೇ ದಿನ ನಿತ್ಯದ ಬದುಕಿನ ಸಣ್ಣ ಸಣ್ಣ ವಿವರಗಳು ಬದಲಾಗುತ್ತ, ಎಳವೆಯಲ್ಲಿ ಕಂಡದ್ದು ವಯಸ್ಸಾದಂತೆ ಅಪ್ರಸ್ತುತ ಅರ್ಥಹೀನವಾಗುತ್ತ ಹೋಗುವುದಿದೆಯಲ್ಲ ಅದು ತೀರ ನೋಯಿಸುತ್ತದೆ.

ವ್ಯಾಸರ ಮಗ ತೇಜಸ್ವಿಯವರು ಕಂಡದ್ದನ್ನು ಅವರ ಮಾತಿನಲ್ಲೆ ಅನ್ನುವ ಹಾಗೆ ನೀವು ನಿರೂಪಿಸಿರುವುದು ತುಂಬ ಕುತೂಹಲದ ಪ್ರಯೋಗವಾಗಿಯೂ ಕಾಣುತ್ತದೆ. ಇದು ವ್ಯಕ್ತಿತ್ವದ ನಿರೂಪಣೆಯ ನಿರೂಪಣೆ. ಮಗಳು ಕಂಡ ಕುವೆಂಪು ರಚನೆಯಷ್ಟೇ ಮುಖ್ಯವಾದ ರಚನೆ. ಇಲ್ಲವಾದ ವ್ಯಕ್ತಿಯ ನೆನಪಿನ ನಿರೂಪಣೆಯ ನಿರೂಪಣೆ. ಅಂದರೆ ತುಂಬ ಸೂಕ್ಷ್ಮವಾಗಿ ಮನುಷ್ಯ ಗ್ರಹಿಕೆಗೆ ಇರುವ ಫಿಲ್ಟರ್‍ಗಳನ್ನು ಈ ಕೃತಿ ಸೂಚಿಸುತ್ತಿದೆ.

ನಿಮ್ಮ ಕೃತಿಯ ಕೊನೆಯ ಎರಡು ಅಧ್ಯಾಯಗಳು ಅಷ್ಟು ಹಿಡಿಸಲಿಲ್ಲ. ಒಂದು ಬಗೆಯ ಆತುರವೋ, ಅಥವ ಸಾಮಾಜಿಕ ಸಜ್ಜನಿಕೆಯೋ ತೊಂದರೆ ಕೊಟ್ಟಿತು. ಇರಲಿ, ಅದು ಪಾಯಸಕ್ಕೆ ಬಿದ್ದ ಎರಡು ಹರಳು ಉಪ್ಪಿನ ಹಾಗೆ ರುಚಿಯನ್ನು ನೆನಪಿಟ್ಟುಕೊಳ್ಳುವ ಹಾಗೆ ಮಾಡುತ್ತದೆ.

ನೀವು ದಯವಿಟ್ಟು ಕಾದಂಬರಿ ಬರೆಯಿರಿ. ನಿಮ್ಮ ಪ್ರದೇಶದ ಬದುಕನ್ನು ಚಿತ್ರಿಸುವುದಕ್ಕೆ ಕಾದಂಬರಿಯೇ ಸೂಕ್ತ. ನಾಯಕರಿಲ್ಲದ ಕಾಸರಗೋಡು ಪ್ರದೇಶವೇ ಲೋಕವಾಗಿ ಮೈದುಂಬಿಕೊಂಡಂಥ ಕಾದಂಬರಿ ನೀವು ಬರೆದರೆ ಹೇಗಿರುತ್ತದೆ ಅನ್ನುವ ಸೂಚನೆ ಈ ಆರ್ಧ ಕಥಾನಕದಲ್ಲಿದೆ. ಅದು ಪೂರ್ಣಗೊಳ್ಳಲಿ ಎಂದು ಹಾರೈಸುತ್ತೇನೆ.

ದೊಡ್ಡದಾಯಿತು ಬರಹ. ಸಾಕು.

6 comments

 1. ಅದು 2017ನೇ ಫೆಬ್ರವರಿ ತಿಂಗಳು. ಬೆಂಗಳೂರಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಮಾರಂಭ. `ಜೋಗತಿ ಜೋಳಿಗೆ’ ಕಥಾ ಸಂಕಲನ ಅಕಾಡೆಮಿ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಓಎಲ್ಎನ್ ಅವರಿಗೆ ಆ ಬಾರಿಯ ಗೌರವ ಪುರಸ್ಕಾರ. ಹಾಗಾಗಿ ಅವರನ್ನು ಮುಖತಃ ಭೇಟಿಯಾಗುವ ಸಂದರ್ಭ. `ಅರ್ಧ ಕಥಾನಕ’ದ ಕುರಿತು ಮಾತು. ಕೆಲವೇ ದಿನಗಳಲ್ಲಿ ಅವರ ಪತ್ರ. ಓದಿದಾಗ ಒಂದು ಸಾರ್ಥಕ ಭಾವ. ಇಷ್ಟು ಕಾಲ ನನ್ನೊಳಗಿತ್ತು. ಈಗ ಜಿ.ಎನ್. ಮೋಹನ್. ಹೊರತೆಗೆದರು. ಹೌದು. ಇದು ಒಂದು ವಯಕ್ತಿಕ ಪತ್ರವಲ್ಲ. ಮಂಥನ.

 2. ಅನುಪಮಾ, ತುಂಬ ಖುಶಿಯಾಯ್ತು. ಇನ್ನೀಗ ಅರ್ಧ ಕಥಾನಕ ಓದಲೇ ಬೇಕಲ್ಲ?! ಜೊತೆಗೆ ಅನುಪಮಾ ಕಾದಂಬರಿಗಾಗಿ ಕಾಯುವಂತೆಯೂ ಮಾಡಿತಲ್ಲ?

  • ಕಾದಂಬರಿ ಪ್ರಕಟಣೆ ಹಂತದಲ್ಲಿದೆ. ಸದ್ಯದಲ್ಲೇ ನಿಮ್ಮ ಕೈಗಳಿಗೆ ಬರಲಿದೆ. ನಿಮ್ಮ ಪ್ರೀತಿಗೆ ಶರಣು.

 3. ಪ್ರಿಯ ಅನುಪಮಾ,
  ಅರ್ಧಕಥಾನಕದ ಕುರಿತು ಕೇಳಪಟ್ಟಿದ್ದೆ. ಇನ್ನೂ ಓದಿಲ್ಲ. ಓಎಲ್ ಎನ್ ಅವರ ಬರಹ ಓದಿ ಪುಸ್ತಕ ಓದುವ ಕಾತರ ಹೆಚ್ಚಿತು ನೋಡಿ.
  ನಮ್ಮ ನಡುವಿನಿಂದ ಇದ್ದಕ್ಕಿದ್ದಂತೆ ಎದ್ದುಹೋಗುವ ವ್ಯಾಸರಂತಾ ಹಿರಿಯರು ಮತ್ತೆ ನಮ್ಮ ಮನಸುಗಳಲ್ಲಿ, ಪ್ರಜ್ಞೆ ಗಳಲ್ಲಿ ಕಾಣಸಿಗುವುದು ಹೀಗೇ..
  ನೆನಪುಗಳ ಅಂಗಳದ ಕಣಗಿಲೆ, ದಾಸವಾಳಗಳ ಹಾಗೆ.. ಅಲ್ಲವೇ…?!
  ಸಮಂಜಸ ಕೆಲಸ ನಿಮ್ಮದು.
  ಓಎಲ್ ಎನ್ ಸಹಾ ಅಷ್ಟೇ ಸಹೃದಯತೆಯಿಂದ ಸ್ಪಂದಿಸಿದ್ದಾರೆ.
  ತುಂಬ ಖುಷಿಯಾಯಿತು
  ಅಭಿನಂದನೆ.

 4. ಥ್ಯಾಂಕ್ಯು ಸುಧಾ. ಅರ್ಧ ಕಥಾನಕ ಲೋಹಿಯಾದ ಪ್ರಕಟಣೆ. ಚನ್ನಬಸವಣ್ಣ ಬಹಳ ಅಕ್ಕರೆಯಿಂದ ಪುಸ್ತಕ ಮಾಡಿದ್ರು.

Leave a Reply