ಎದೆಯಲೊಂದು ತಂತಿ ಮೀಟಿ..

ಪ್ರೇಮ ರಾಗ

ಸರೋಜಿನಿ ಪಡಸಲಗಿ

ಎದೆಯಲೊಂದು ತಂತಿ ಮೀಟಿ
ಮಧುರ ರಾಗ ಹೃದಯ ತುಂಬಿ
ಕಣ್ಣ ತುಂಬ  ಆಸೆ ಹೊಳೆದು
ಮನದಲೇನೋ ಬಯಕೆ ಇಣುಕಿ
ಅಣು ಅಣುವೂ ಮಿಡಿಯುತಿದೆ
ಅಲೌಕಿಕ  ಗಂಧರ್ವ ಗಾನ
ಇಳೆಯ ತುಂಬ ಗುಂಜಿಸಿದೆ
ಜೀವ ತಣಿಸೋ ಮಧುರ ಗಾನ
ಹರುಷದಲೆಯಲಿ ತೇಲಿ ತೇಲಿ
ಜೀವ ಜೀವ ನುಡಿಯುತಿತ್ತ  ಅಮರ
ಪ್ರೇಮ ರಾಗ

ತುಂಬಿ  ಹರಿವ  ಹೊಳೆಯ ಒಡಲಲಿ
ಆಳ  ಸುಳಿ ಮೂಡಿದಂತೆ
ಕಡಲಿನಲೆಯ ಅಬ್ಬರದ ಗರ್ಜನೆ
ಎದೆ ತುಂಬ ಮಾರ್ಮೊಳಗಿದಂತೆ
ಮಾಗಿಯ ನೀಲ್ ಮುಗಿಲು ತೇಲಿ
ಅದರೊಡಲಲಿ ಒರಗಿದಂತೆ
ತಾರೆಗಳ ತೋಟದರಳು ಬೊಗಸೆ
ತುಂಬಾ ತುಂಬಿದಂತೆ
ಹರುಷದಲೆಯಲಿ ತೇಲಿ ತೇಲಿ
ಜೀವ ಜೀವ ನುಡಿಯುತಿತ್ತ ಅಮರ
ಪ್ರೇಮ ರಾಗ


ಚಿತ್ತಿ ಮಳೆಯ ಧಾರೆಯಲಿ ಮಿಂದು
ಮನದುಂಬಿ ನೆಂದು ನಿಂದಂತೆ
ಸ್ವಾತಿ ಮಳೆಯ ಮುತ್ತು ಚಿತ್ತ
ತುಂಬ ಚೆಲ್ಲಾಡಿ ದಂತೆ
ಬಾನಂಗಳದ ಚುಕ್ಕಿ ಸಾಲು
ಮನದಿ  ಬೀಡು ಬಿಟ್ಟಂತೆ
ಹುಣ್ಣಿಮೆಯ ಪೂರ್ಣ ಚಂದ್ರ
ಎದೆಯ ಗೂಡಲಿ ಮೂಡಿ ಬಂದಂತೆ
ಹರುಷದಲೆಯಲಿ ತೇಲಿ ತೇಲಿ
ಜೀವ ಜೀವ ನುಡಿಯುತಿತ್ತ ಅಮರ
ಪ್ರೇಮ ರಾಗ

ತಂಗಾಳಿಯ ಅಲೆಯೊಂದು ಸುಳಿದು
ಹಿತವಾಗಿ ತನುವ ಸವರಿತ್ತ
ಸಣ್ಣಗೆ ಸುರಿವ ಸೋನೆ ಧಾರೆ
ಸವಿಜೇನ  ಜೋಗುಳ  ಹಾಡಿತ್ತ
ಅಲ್ಲಲ್ಲಿ ಸುಳಿವ ಸುಳಿ ಮಿಂಚು
ಕತ್ತಲೊಡನೆ ಆಟ ಆಡುತಿತ್ತ
ಹೆಜ್ಜೆ ಮೇಲೆ ಹೆಜ್ಜೆ ಇಡುತ
ಕಂಗಳಲ್ಲಿ  ಮಿಂಚು ಇಣುಕುತಿತ್ತ
ಆ ಕಣ್ಣ ಸುತ್ತ ಮುತ್ತ ಹೊಸ
ಕನಸೊಂದು ಹಬ್ಬಿ ಹರಡುತಿತ್ತ
ಹರುಷದಲೆಯಲಿ ತೇಲಿ ತೇಲಿ
ಜೀವ ಜೀವ ನುಡಿಯುತಿತ್ತ ಅಮರ
ಪ್ರೇಮ ರಾಗ

Leave a Reply