ಯುದ್ಧಗಳು ಬೇಕಾಗಿವೆ..

ಎನ್ ರವಿಕುಮಾರ್ ಟೆಲೆಕ್ಸ್

| ‘ನಂಜಿಲ್ಲದ ಪದಗಳು’ ಸಂಕಲನದಿಂದ |

ಯುದ್ಧಗಳು ಬೇಕಾಗಿದೆ!
ಹೆಣದ ವ್ಯಾಪಾರಿಗೆ
ಗಂಗಾನದಿಯ ವಿಧವೆಯರ ವಾಡಿಗಳು ಸ್ವಚ್ಛ ಗೊಳ್ಳುತ್ತಿವೆ
ಹಿಮದ ತೊರೆಯೀಗ
ಕೆಂಪು…… ಕೆಂಪು

ಅಸಾದಿಯೊಬ್ಬ ಹಲ್ಲಲ್ಲು ಕಡಿದು
ಕೊರಳ ಸಿಗಿದು ನೆತ್ತರ ರುಚಿ ಚಪ್ಪರಿಸಲು ಗಡಿ ಸುತ್ತ ಕುಣಿಯತೊಡಗಿದ್ದಾನೆ

ಮನೆಯಲ್ಲೀಗ ತುಪ್ಪದ ದೀಪ ಹಚ್ಚಲಾಗಿದೆ
ಗಡಿಯಲ್ಲಿ ಬಿಳಿ ಹೂ ಗಳೆ ಬೆಟ್ಟವಾಗಿ ಬೆಳೆದು
ಯುದ್ಧ ಸಾಯಲೆಂದು.

ಈ ರಜೆಗೆ ಬಂದೇ ಬರುತ್ತಾನೆ
ಚೆಂದದೊಂದು ಚೆಲುವೆ ನೋಡಿಟ್ಟಿದ್ದೇನೆ.
ಪಿಳಿ ಪಿಳಿಯ ಕಣ್ಣ ಕೂಸಿಗೆ ವೀರಾಗ್ರಣಿ ಅಪ್ಪನನ್ನು ತೋರಿಸಬೇಕು
ಹಾಸಿಗೆ ಹಿಡಿದ ಆ ಜೀವ ಕೊನೆ ಗುಟುಕು ನೀರಿಗೆ ಕಾದಿರುವುದು
ಅವನಿಗಾಗಿಯೇ
ತಂಗಿಯೊಬ್ಬಳು ಅವನಿಗಾಗಿ ಮೆದು ನೂಲಿನ ಕೌದಿ ನೇಯ್ದು ಕಾದಿದ್ದಾಳೆ
ಛೇ,ಇದೆಲ್ಲಾ ಈ ಹೆಣದ ವ್ಯಾಪಾರಿಗೆ ಗೊತ್ತೆ ಇಲ್ಲವಾ?
ಅವನು ಕಣದಲ್ಲಿ ನಿಂತು ಹೆಣದ ಲೆಕ್ಕ ಪಡೆಯಲು ಸಿದ್ದನಾಗಿದ್ದಾನೆ.
ರಕ್ತ ನುಗ್ಗಿ ಸರಾಗವಾಗಿ ಹರಿಯಲು ಕಾಲವೆಗಳ ಕೆತ್ತುತ್ತಿದ್ದಾನೆ.

ಅವನು ಸುಮ್ಮನಿಲ್ಲ .
ಥೈಲಿ ತುಂಬಬೇಕು.
ಮದ್ದು-ಗುಂಡುಗಳು ತುಕ್ಕು ಹಿಡಿಯುವ ಮುಂಚೆ ಮಾರಿಕೊಂಡು
ಮಾಯವಾಗಲು ಕಾದು ಕುಂತಿದ್ದಾನೆ ಮಹಾ ಸಂಚುಕೋರ

ರಣಯುದ್ಧದ ಕಥೆ ಹೇಳಲಾಗುತ್ತಿದೆ
ಎಳೆ ನರದಲ್ಲಿ ರಕ್ತ ರಭಸಗೊಂಡು ವೃಣವಾಗುವಂತೆ
ಕೋಣೆಯಲ್ಲಿ ಗವ್ವನೆ ಕತ್ತಲು
ಅಳುವ ಸದ್ದೆಲ್ಲಾ ಈಗ ಸಮರ ಗೀತೆಗಳಂತೆ ಕೇಳಿಸಲಾಗುತ್ತದೆ.

ಗಂಗೆ ಇನ್ನೂ….. ಕೆಂಪು ಹಿಮಾಲಯ ರಕ್ತ ಮುಕ್ಕಿ ಹರಿಯಲಿದೆ
ಪಿಂಡ ಪೂಜಾರಿಗಳಿಗೆ ಹಬ್ಬ
ಗಂಗೆಯ ಘಟ್ಟದ ವಾಡಿಗಳಲ್ಲಷ್ಟೇ ಅಲ್ಲ ಊರೂ, ಕೇರಿ, ಹಜಾರ ಗಳೆಲ್ಲೆಲ್ಲಾ ಕಣ್ಣೀರ ಮೆರವಣಿಗೆ

ಇನ್ನೋ…
ಕಾರ್ಖಾನೆಗಳು ಅಹೋರಾತ್ರಿ ಸದ್ದು ಮಾಡುತ್ತವೆ
ಬಾಂಬು , ಕ್ಷಿಪಣಿ ತೋಪುಗಳ ದಲ್ಲಾಳಿಗಳಿಗೆ ಸುಗ್ಗಿ
ದೇಶಾವರಿ ದೊರೆಯೀಗ ದೇಶಾಂತರ ಸುತ್ತುತ್ತಿದ್ದಾನೆ
ಯುದ್ಧ ಭೂಮಿಯ ಗುತ್ತಿಗೆ ಕೊಡಲು
ಎಲುಬು, ತಲೆ ಬುರುಡೆ, ತೊಡೆ ಮೂಳೆಗೂ ಖರೀದಿದಾರರಿದ್ದಾರೆ.
ವೀರಗಲ್ಲುಗಳಿಗೆ, ಚಕ್ರಮೆಡಲ್ ,ಸಮ್ಮಾನ ಪತ್ರಗಳಿಗೂ ಆರ್ಡರ್ ಕೊಡಲಾಗಿದೆ.
ಮೊಹರು ಒತ್ತಿದ ಶವ ಪೆಟ್ಟಿಗಗೆಳು ಗಡಿಗೆಹೊರಟಿವೆ

ದೇಶ ಉದ್ದೇಶಿಸಿ ಮಾತನಾಡುತ್ತಾರೆ..
ನಿಮಗೂ ಕೇಳೆ ಕೇಳುತ್ತದೆ…
ನೀವೂ ಘೋಷಣೆ
ಹಾಕಬೇಕು ಚಪ್ಪಾಳೆ ತಟ್ಟಬೇಕು
ಡಬ್ಬ ಹಿಡಿದುಕೊಂಡು ಬೀದಿ ಬೀದಿಯಲ್ಲಿ ಚಂದಾ ಎತ್ತಲು ರೆಡಿಯಾಗಿ ಬಿಡಿ
ಈಗ ಯುದ್ಧ ಕಾಲ

4 comments

  1. ರವಿಕುಮಾರ್ ಕವಿತೆ ವಾಸ್ತವ ಚಿತ್ರಗನ್ನಡಿಯಂತೆ ತಣ್ಣನೆ ಕ್ರಾಂತಿಯು ಉಸಿರಾಡುತ್ತಿದೆ

  2. ಕವನದ ಆಶಯ ತುಂಬಾ ಚೆನ್ನಾಗಿದೆ. ಯುದ್ದ ದಾಹಿಗಳು ಹಾಗೂ ರಕ್ತಪಿಪಾಸುಗಳು ಶಾಂತಿ ಸಹಬಾಳ್ವೆಯ ಜೀವನದತ್ತ ತಮ್ಮ ಗಮನ ಕೇಂದ್ರೀಕರಿಸಲಿ.

Leave a Reply