ಥ್ಯಾಂಕ್ಸ್ ಕಿರಣ್ ಭಟ್.. ನಿಮ್ಮ ಪ್ರೀತಿಗೆ, ಅದರ ರೀತಿಗೆ

ಶಿರಸಿ, ಕಾರವಾರದಲ್ಲಿ ಬೇಕಾದಷ್ಟು ನಗು ಚೆಲ್ಲಿರುತ್ತದೆ ಎಂದರೆ ಅಲ್ಲೆಲ್ಲೋ ಕಿರಣ್ ಭಟ್ ಇದ್ದಾರೆ ಎಂದೇ ಅರ್ಥ. ಸದಾ ಹುರುಪಿನಿಂದ, ಮುಖ ಅರಳಿಸಿಕೊಂಡೇ ಇರುವ ಕಿರಣ್ ಭಟ್, ನೋಡಿದವರಿಗೆ ಒಂದೇ ಸಲಕ್ಕೆ ತೀರಾ ತೀರಾ ಆತ್ಮೀಯರಾಗಿಬಿಡುವ ವ್ಯಕ್ತಿ.

ಅವರು ನನಗೆ ಆತ್ಮೀಯರಾದದ್ದೂ ಹಾಗೆಯೇ. ನಾನು ಕ್ಯೂಬಾಗೆ ಭೇಟಿ ಕೊಟ್ಟು ಬಂದ ನಂತರ ‘ಚಿಂತನ’ದ ಗೆಳೆಯರು ಸೇರಿ ಶಿರಸಿಯಲ್ಲಿ ನನ್ನ ಅನುಭವಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದರು. ಅಲ್ಲಿ ಸಿಕ್ಕ ಈ  ಮುಗುಳ್ನಗುವನ್ನು ನಾನು ಅತಿ ಜೋಪಾನದಿಂದ ನನ್ನೊಡನೆ ಕಾಪಾಡಿಕೊಂಡು ಬಂದಿದ್ದೇನೆ.

ಜಾಗತೀಕರಣ ಎನ್ನುವುದು ಕಲ್ಪನೆಯನ್ನು ನುಂಗಿ ಹಾಕುತ್ತಾ, ಮಕ್ಕಳನ್ನು ವ್ಯಾಪಾರದ ಬಂಡವಾಳ ಮಾತ್ರ ಎನ್ನುವಂತೆ ನೋಡುತ್ತಾ, ಅವರನ್ನು ಮುಂದಿನ ಗ್ರಾಹಕರನ್ನಾಗಿ ತಯಾರು ಮಾಡುತ್ತಿರುವಾಗ ಆ ಅಲೆಯ ವಿರುದ್ಧ ಈಜುತ್ತಿರುವವರು ಕಿರಣ್ ಭಟ್.

ಸಾಂಸ್ಕೃತಿಕ ಲೋಕ ಮಕ್ಕಳ ವ್ಯಕ್ತಿತ್ವವನ್ನು ಕಟ್ಟಿಕೊಡುವ ಬಗೆ ಹೇಗೆ ಎನ್ನುವುದು ಅವರಿಗೆ ಗೊತ್ತು. ಹಾಗಾಗಿಯೇ ಮಕ್ಕಳೊಡನೆ ಆಟವಾಡುತ್ತಾ, ಅವರಿಗೆ ಒಂದು ಕಣ್ಣೋಟ ಬೆಸುಗೆ ಹಾಕುತ್ತಾ ಕಿರಣ್ ಭಟ್ ದಶಕಗಳನ್ನು ಕಳೆದಿದ್ದಾರೆ.

ಇವರು ಟೆಲಿಕಾಂ ಇಲಾಖೆಯ ಅಧಿಕಾರಿ ಎಂದರೆ ಹೌದೇ ಎಂದು ಹುಬ್ಬೇರಿಸುವವರೇ ಹೆಚ್ಚು. ಆದರೆ ತಮ್ಮ ವೃತ್ತಿ ಹಾಗೂ ಹವ್ಯಾಸವನ್ನು ಅತ್ಯಂತ ಜವಾಬ್ದಾರಿಯಿಂದ ಸಂಭಾಳಿಸುತ್ತಾ ನಡೆದಿರುವ ಕಿರಣ್ ಕನ್ನಡ ರಂಗಭೂಮಿಯ ಮಹತ್ವದ ವ್ಯಕ್ತಿ.

ಕಿರಣ್ ಆವರು ಎಲ್ಲಿ ಕಾಲಿಟ್ಟರೂ ತಕ್ಷಣ ಅವರಿಗೆ ಟೆಲಿಫೋನ್ ತಂತಿಗಳೂ ಅಂತೆಯೇ ರಂಗದ ಆಲಾಪಗಳೂ ಕೇಳಿಬಿಡುತ್ತವೆ. ಹಾಗಾಗಿಯೇ ಅವರು ಕೇರಳಕ್ಕೆ ಹೋದಾಗಲೂ ಈ ಎರಡರ ಜೊತೆಗೆ ಬದುಕು ನಡೆಸಿದರು. ಅವರು ಫೇಸ್ ಬುಕ್ ನಲ್ಲಿ ಬರೆದ ನಾಟಕಗಳನ್ನು ನೋಡಿ ಅವರ ಬಗ್ಗೆ ಹೊಟ್ಟೆಕಿಚ್ಚಾಗಿದ್ದು ಸುಳ್ಳಲ್ಲ. ಹಾಗಾಗಿ ನಾನು ಅವರ ಬೆನ್ನು ಬಿದ್ದೆ. ನೀವು ನೋಡಿದ ನಾಟಕಗಳನ್ನು ಪ್ರವಾಸ ಕಥನದ ಮಾದರಿಯಲ್ಲಿ ಬರೆದುಕೊಡಿ ಎಂದು.

ಕೇರಳದ ಬಗ್ಗೆ ಸಾಕಷ್ಟು ಪ್ರವಾಸ ಕಥನಗಳು ಬಂದಿವೆ. ಆ ಸಾಲಿಗೆ ನಾವು ಕಾಣದಿರುವ ಕೇರಳದ ರಂಗ ಕಥನವೂ ಸರಿರಲಿ ಎನ್ನುವ ಹಂಬಲ ನನ್ನದಾಗಿತ್ತು. ಅವರು ಒಪ್ಪಿ ಬರೆಯಲು ಶುರು ಮಾಡಿದಾಗ ಅವರ ಅಚ್ಚುಕಟ್ಟುತನ ಕಂಡು ನಾನು ಬೆರಗಾದೆ. ಅವರ ಅಚ್ಚುಕಟ್ಟುತನವು ನಮ್ಮ ರೀತಿಯನ್ನು ಅಣಕಿಸುತ್ತಲೇ ಇತ್ತು. ಆದರೂ ಅವರು ಒಂದು ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಮೆಲು ದನಿಯಲ್ಲಿ ತಿದ್ದುತ್ತಾ ನಮ್ಮನ್ನು ತಡೆದುಕೊಂಡಿದ್ದಾರೆ.

ಸದ್ಯದಲ್ಲೇ ಈ ಕೃತಿ ‘ಬಹುರೂಪಿ’ಯ ಮೂಲಕ ನಿಮ್ಮ ಕೈಗೆ

ಥ್ಯಾಂಕ್ಸ್ ಕಿರಣ್ ಭಟ್..

 

ನನ್ನಿ..

ಈ ರೀತಿ ನಿರಂತರವಾಗಿ ಅಂಕಣ ಬರೆಯದೇ ವರ್ಷಗಳೇ ಆಗಿಹೋಗಿದ್ವು.

ತುಂಬ ವರ್ಷಗಳ ಹಿಂದೆ ಶಿರಸೀಲಿದ್ದಾಗ, ಅಲ್ಲಿಯ ‘ ಪತ್ರಕರ್ತ’ ಪತ್ರಿಕೆಗೆ ವಾರಕ್ಕೊಮ್ಮೆ ‘ ಚಿತ್ತಾರ’ ಅನ್ನೋ ಹೆಸರಲ್ಲಿ ಅಂಕಣ ಬರೀತಿದ್ದೆ. ನಂತರ ನನ್ನೂರಿನ ‘ನಾಗರಿಕ’ ಪ್ರತಿಕೆಗೆ ಕೆಲವು ವಾರ ಅಂಕಣ ಬರಹಗಳನ್ನ ಬರ್ದಿದ್ದಿದೆ. ಆದರೆ ಹೆಚ್ಚು ಬರೆದದ್ದು ಬೇರೆ ಬೇರೆ ಪತ್ರಿಕೆಗಳಿಗಾಗಿ ಬಿಡಿ ಬಿಡಿ ಲೇಖನಗಳೇ. ರಂಗಚಿಂತನೆಗಳು, ರಂಗ ಬರಹಗಳು. ಒಂದೆರಡು ರಂಗಭೂಮಿ ಕುರಿತ ಪುಸ್ತಕಗಳು….ಹೀಗೆ.

ಕೇರಳಕ್ಕೆ ಹೋದ ಮೇಲೆ, ಅಲ್ಲಿ ನಾಟ್ಕಗಳನ್ನ ನೋಡ್ತಾ, ಫೋಟೋಗಳನ್ನ ತಗೊಳ್ತಾ, ಅವುಗಳನ್ನ ಫೇಸ್ ಬುಕ್ ನಲ್ಲಿ ಹಾಕಿ ನಾಟ್ಕದ ಕುರಿತ ಚಿಕ್ಕ ನೋಟ್ ಬರೀತಿದ್ದೆ. ನಾಟ್ಕದ ಪ್ರತಿ ಚಿತ್ರವೂ ರಂಗಭೂಮಿಯ ವಿದ್ಯಾರ್ಥಿಗೆ ಕಲಿಕೆಯ ಟೂಲ್ ಅನ್ನೋದು ನನ್ನ ಅನಿಸಿಕೆ. ಅದು ಎಷ್ಟು ಜನರಿಗೆ ಉಪಯುಕ್ತವಾಯ್ತೋ ಗೊತ್ತಿಲ್ಲ. ಆದ್ರೆ ನಾನಂತೂ ಎರಡು ವರ್ಷಗಳ ಕಾಲ ನಿರಂತರವಾಗಿ ಆ ಕೆಲ್ಸ ಮಾಡ್ತಾ ಬಂದೆ.

ಅದನ್ನ ಗಮನಿಸಿದ ಜಿ.ಎನ್. ಮೋಹನ್ ಆ ಕುರಿತು ಒಂದು ಪುಸ್ತಕ ಬರೆಯೋದಕ್ಕೆ ಆಗಾಗ ಹೇಳ್ತಿದ್ರು. ಆಲಸ್ಯದಿಂದ್ಲೂ, ಹಿಂಜರಿಕೆಯಿಂದ್ಲೂ ನಾನು ಕಳ್ಳ ಬೀಳ್ತಾನೇ ಬಂದೆ.

ಆದ್ರೆ ಗೆಳೆಯ ಮೋಹನ್ ಬಿಡಲಿಲ್ಲ. ಬರೀಲೇ ಬೇಕು ಅಂತ ತಾಕೀತು ಮಾಡಿ ಬರೆಸಿಯೇ ಬಿಟ್ರು. ‘ ಅದೊಂಥರಾ ರಂಗ ಪ್ರವಾಸ ಕಥನ ಇದ್ದ ಹಾಗೆ ಇರ್ಲಿ ಅಂತ ಸಲಹೆ ಕೊಟ್ರು. ತುಂಬ ಹಿಂಜರಿಕೆಯಿಂದ್ಲೇ ಶುರು ಮಾಡ್ದೆ. ನೀವುಗಳೆಲ್ಲ ತುಂಬ ಪ್ರೀತಿಯಿಂದ ಬರಹಗಳನ್ನ ಒಪ್ಕೊಂಡ್ರಿ. ತುಂಬ ಜನ ಪ್ರತಿಕ್ರಿಯೇನೂ ಕೊಟ್ರಿ. ಬರೆಯೋದಕ್ಕೆ ಹುರಿದುಂಬಿಸಿದ್ರಿ. ನಿಮ್ಮ ಪ್ರೀತಿ, ಜಿ.ಎನ್ ಮೋಹನ್ ತುಂಬಿದ ವಿಶ್ವಾಸ ನನ್ನಿಂದ ಬರಹಗಳನ್ನ ಬರೆಸಿದೆ.

ನಿಮಗೆಲ್ಲ ನನ್ನಿ, ನಮಸ್ಕಾರ

-ಕಿರಣ್ ಭಟ್ 

ಮಲಯಾಳಿ ಮಕ್ಕಳೊಂದಿಗೆ….

ನಿಜಕ್ಕೂ ನಾನು ಇದನ್ನ ಎಣಿಸಿರಲಿಲ್ಲ.

ಸುಮಾರು ಮೂರು ದಶಕಗಳಿಂದಲೂ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡ್ತಿರೋ ನಾನು ಕೇರಳಕ್ಕೆ ಹೋದಾಗಿನಿಂದ್ಲೂ ಅಲ್ಲಿಯ ಮಕ್ಕಳ ನಾಟ್ಕಗಳ ಬಗ್ಗೆ ವಿಚಾರಿಸ್ತಾನೇ ಇದ್ದೆ. ಎರಡು ಬಾರಿ ದೆಹಲಿಯ ‘ ಜಶ್ನೆ ಬಚಪನ್’ ನ ಮಕ್ಕಳ ನಾಟಕೋತ್ಸವಕ್ಕೆ ಹೋದಾಗ್ಲೂ ಮಲಯಾಳಮ್ ಮಕ್ಕಳ ನಾಟ್ಕ ನೋಡಿದ್ದೆ. ತುಂಬಾ ಚೆನ್ನಾಗಿದ್ವು. ಆದ್ರೆ ಅದೇಕೋ ನನಗೆ ಆಲುವಾನಲ್ಲೂ, ಕಣ್ಣೂರಿನಲ್ಲೂ ಅಂಥ ನಾಟ್ಕಗಳು ಸಿಕ್ಕೇ ಇರಲಿಲ್ಲ. ವರ್ಷಕ್ಕೊಮ್ಮೆ ತಿರುವನಂತಪುರಮ್ ನಲ್ಲಿ ಮಕ್ಕಳ ನಾಟ್ಕಗಳ ಹಬ್ಬ ನಡೆಯುತ್ತದಾದ್ರೂ ನನಗೇಕೋ ಹೋಗಲಾಗಲಿಲ್ಲ.

ಇಟ್ಫಾಕ್ ನಲ್ಲಿ ಕೇರಳದ ರಂಗ ಗೆಳೆಯರು ‘ಕಲೋತ್ಸವಮ್’ ಕುರಿತು ಹೇಳಿ ಅಲ್ಲಿ ಸ್ಪರ್ಧೆಗಳಲ್ಲಿ ಬರೋ ನಾಟ್ಕಗಳನ್ನ ಹೊಗಳಿ ಆಸೆ ಹುಟ್ಟಿಸಿದ್ರು. ನನೂ ಕಾಯ್ತಾ ಇದ್ದೆ. ನನ್ನ ಲಕ್ ನೋಡಿ ನಾನು ಬರೋ ಒಂದು ತಿಂಗಳ ಮೊದ್ಲು ‘ಕಲೋತ್ಸವಮ್’ ಬಂತು. ಅದೂ ನನಗೆ ತುಂಬ ಹತ್ರದ ‘ಕ್ಯಾಲಿಕಟ್’ ನಲ್ಲಿ. ಇದಕ್ಕಿಂತ ಸೌಭಾಗ್ಯ ಇನ್ನೇನು ಬೇಕು?

‘ಕಲೋತ್ಸವಮ್’ ಬರೇ ಕೇರಳದಷ್ಟೇ ಅಲ್ಲ ಏಷ್ಯಾದ ಬಹುದೊಡ್ಡ ಮಕ್ಕಳ ಹಬ್ಬ ಇದು. ಐವತ್ತು ವರ್ಷಗಳಿಗಿಂತಲೂ ಹಳೆಯದಾದ ಹಬ್ಬ. ಒಂದೆರಡಲ್ಲ ಏಳು ದಿನಗಳ ಹಬ್ಬ. ಬೇರೆ ಬೇರೆ ವೆನ್ಯೂ ಗಳಲ್ಲಿ ಇಡೀ ದಿನ ಸ್ಪರ್ಧೆಗಳು. ಎಂಟರಿಂದ ಪ್ಲಸ್ ಟು ತನಕದ ಮಕ್ಕಳು ಭಾಗವಹಿಸೋ ಹಬ್ಬ.

ಸುಮಾರು ಹನ್ನೆರಡು ಸಾವಿರ ಮಕ್ಳು ಭಾಗವಹಿಸ್ತಾರೆ ಈ ಹಬ್ದಲ್ಲಿ. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು. ಮಾಪ್ಳೆ ಪಾಟ್ಟುಗಳಿಂದ ಹಿಡಿದು ಕಥಕ್ಕಳಿಯ ತನಕ. ಯಕ್ಷಗಾನ ಕೂಡ . ಮಲಯಾಳಿ ಮಕ್ಳಿಗೆ ಕಲೋತ್ಸವಮ್ ನಲ್ಲಿ ಭಾಗವಹಿಸೋದು ಅಂದ್ರೆ ಹೆಮ್ಮೆಯ ವಿಷ್ಯ. ಸ್ಪರ್ಧೆಯ ಬಹುಮಾನಗಳೂ ಹಾಗೇನೇ ದೊಡ್ಡ ನಟರಾಜ ವಿಗ್ರಹ ರೋಲಿಂಗ್ ಶೀಲ್ಡ್. ಸಾವಿರಾರು ರೂಪಾಯಿಗಳ ನೂರಾರು ಬಹುಮಾನಗಳು.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ‘ ಗ್ರೇಸ್ ಮಾರ್ಕ್’ ಗಳು. ಎಲ್ಲಕ್ಕಿಂತ ಮಿಗಿಲಾಗಿ ಕಲೋತ್ಸವಮ್ ನಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ‘ ಕಲಾಪ್ರತಿಭಾ’ ಮತ್ತು ‘ಕಲಾತಿಲಕಮ್’ ಸಮ್ಮಾನಗಳು. ಸಹಜವಾಗಿಯೇ ಹಣಾಹಣಿ ಸ್ಪರ್ಧೆ. ಅದಕ್ಕೇ ಅದು ಶ್ರೇಷ್ಠ ಪ್ರದರ್ಶನಗಳ ಹಬ್ಬ.

ನಾನು ಸರಿಯಾಗಿ ನಾಟ್ಕಗಳ ದಿನ ಗುರ್ತು ಹಾಕ್ಕೊಂಡೆ. ಸಂಸ್ಕೃತ ನಾಟ್ಕ, ಮಲಯಾಳಮ್ ನಾಟ್ಕ ಸರಿಯಾಗಿ ಎರಡನೇ ಶನಿವಾರ, ರವಿವಾರ ಬಂದಿದ್ವು. ಚಲೋನೇ ಆಯ್ತು. ಶುಕ್ರವಾರ ಸಂಜೆ ಆಫೀಸು ಮುಗಿಯುತ್ಲೇ ಟ್ರೇನ್ ಹತ್ತಿ ಹೊರಟೇಬಿಟ್ಟೆ.

ಕ್ಯಾಲಿಕಟ್ ಸ್ಟೇಷನ್ ನಲ್ಲಿ ಇಳೀತೀನಿ..ಅದೊಂದು ಹೊಸ ಲೋಕವೇ. ಎಲ್ಲೆಲ್ಲೂ ಮಕ್ಳು. ಗಡಿಬಿಡಿ. ಮಕ್ಕಳ ಕಲರವ. ಹೋಗೋರು, ಬರೋರು,  ಬಣ್ಣ ಬಣ್ಣದ ಮುಖವಾಡಗಳನ್ನ ಕೈಲಿ ಹಿಡಿದೋರು, ಬಣ್ಣದ ಬಟ್ಟೆಗಳ ಚೀಲ ಹೊತ್ತೋರು, ಚಂಡೆ, ಢೋಲು ಹೊತ್ತೋರು..ಹೀಗೆ.

ರೇಲ್ವೇ ನಿಲ್ದಾಣದಿಂದ್ಲೇ ಉತ್ಸವದ ಸಡಗರ. ಮುಂದೆ ಊರ ತುಂಬೆಲ್ಲ ಬರೇ ಮಕ್ಳು. ಬೇರೆ ಬೇರೆ ವೆನ್ಯೂ ದಾಟ್ತಿದ್ದಂಗೆ ಗುಂಪೇ ಗುಂಪು. ಊರೆಲ್ಲ ಸಿಂಗಾರ. ಸುಮ್ನೇ ಕುತೂಹಲಕ್ಕೆ ಅಂತ ಮೇಯ್ನ್ ವೆನ್ಯೂ ಹೊಕ್ಕೆ. ಅಬ್ಬಾ! ಅದೊಂದು ಬೇರೆಯೇ ಜಗತ್ತು. ನೂರಾರು ಸ್ಟಾಲ್ ಗಳು.ಕಾಂಪಿಟೇಶನ್ ಮೇಲೆ ಟೀವಿ ಚಾನಲ್ ಗಳ ಶೂಟಿಂಗ್. ಬೇರೆ ಬೇರೆ ಕಡೆ ನಡೀತಿರೋ ಮಕ್ಕಳ ಟೀವಿ ಇಂಟರ್ವ್ಯೂ. ಪ್ರೆಸ್ ಮೀಟ್ ಗಳು. ಅಲ್ಲಲ್ಲಿ ಸಂಗೀತ ಗೋಷ್ಠಿಗಳು. ನಿಜಕ್ಕೂ ಈ ಮಕ್ಕಳು ಅದೃಷ್ಟವಂತರು.

ನಾಟ್ಕ ನೋಡೋಕೆ ಅಂತ್ಲೇ ಹೋದೋನು ನಾನು. ಬೇಗನೇ ಹೋಗಿ ಮುಂದಿನ ಸಾಲು ಹಿಡಿದು ಕೂತೆ. ಅಲ್ಲಿ ವಿ.ಐ.ಪಿ ಸೀಟುಗಳ ವ್ಯವಹಾರ ಇಲ್ಲ. ಪ್ರತಿ ಜನಸಾಮಾನ್ಯನೂ ವಿ.ಐ.ಪಿ ನೇ. ಮಾಧ್ಯಮದವ್ರು ಸ್ಟೇಜ್ ಮತ್ತು ಪ್ರೇಕ್ಷಕರ ಮಧ್ಯೆ ಕ್ಯಾಮರಾ ಹಿಡಕೋಂಡು ಬರೋ ಹಾಗೇ ಇಲ್ಲ. ಬದೀಲಿ ನಿಂತೋ, ಸ್ಟ್ಯಾಂಡ್ ಹಾಕ್ಕೊಂಡೋ ಶೂಟ್ ಮಾಡ್ಕೋಬೇಕು. ನನಗಂತೂ ಈ ವ್ಯವಸ್ಥೆ ತುಂಬ ಇಷ್ಟವಾಯ್ತು.

ಕರೆಕ್ಟ್ ಆದ ಸಮಯಕ್ಕೆ ನಾಟ್ಕಗಳು ಶುರುವಾದ್ವು. ಸುಮಾರು ಹದಿನೈದು ನಾಟ್ಕಗಳಿದ್ವು.ಇವೆಲ್ಲ ಅರ್ಧ ಘಂಟೆ ನಾಟ್ಕಗಳು. ಇದ್ದ ಚಿಕ್ಕ ಅವಧೀಲೇ ಏನೇ ಕಲೆ ತೋರ್ಸೋದಿದ್ರೂ ತೋರಿಸ್ಬೇಕು. ನಿಜಕ್ಕೂ ಛಾಲೇಂಜೇ. ಆದ್ರೆ ಈ ನಾಟ್ಕಗಳನ್ನ ನೋಡಿದ್ರೆ ಇಂಥ ಛಾಲೇಂಜನ್ನ ಮಕ್ಳು ಆರಾಮಾಗಿಯೇ ಸ್ವೀಕರಿಸಿ ಗೆದ್ದ ಹಾಗೆ ಕಾಣ್ತಿತ್ತು.

ನನಗೆ ತುಂಬ ಈಷ್ಟವಾದ್ದು ವಸ್ತುವಿನ ಆಯ್ಕೆಯೇ. ಬಹುಪಾಲು ಯುವ ಮನಸ್ಸುಗಳನ್ನ ಕಾಡುವ ಕಥೆಗಳು. ಮಕ್ಕಳ ತಲ್ಲಣಗಳು. ಇನ್ನು ಕೆಲವು ಕೇರಳದ ಜಾನಪದ, ಯುವಜನರ ಹೋರಾಟಗಳು, ಸಾಮಾಜಿಕ ಅನಿಷ್ಟಗಳನ್ನ ವಿಮರ್ಶಿಸುವ ಕಥೆಗಳು. ಜೊತೆಗೆ ಕೆಲವು ಕ್ಲಾಸಿಕ್ ಗಳು ಕೂಡ. ನಾಟ್ಕಗಳ ವಸ್ತು ವಿಶಿಷ್ಟವಾದ್ರೆ ಸಾಕಾಗೋದಿಲ್ಲ. ಇದೊಂದು ಹಣಾಹಣಿ ಕಾಂಪಿಟೇಶನ್. ಆರಿಸ್ಕೊಂಡ ವಿಷಯವನ್ನ ಅರ್ಧ ಘಂಟೇಲಿ ಕಲಾತ್ಮಕವಾಗಿ ಪ್ರೇಕ್ಷಕರಿಗೂ, ಎದುರು ಕೂತ, ಶ್ರೇಷ್ಠ ಜಡ್ಜ್ ಗಳಿಗೂ ಮುಟ್ಟಿಸಬೇಕಲ್ಲ.

ಅದಕ್ಕಾಗಿಯೇ ಈ ನಾಟ್ಕಗಳ ಹಿಂದೆ ಅನೇಕ ಪ್ರತಿಭಾವಂತ ಮನಸ್ಸುಗಳು ಕೆಲಸ ಮಾಡ್ತವೆ. ಪ್ರತಿಭಾವಂತ ನಿರ್ದೇಶಕರಿರ್ತಾರೆ. ಶಾಲೆ ಈ ನಾಟ್ಕಗಳಿಗಾಗೇ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತದೆ. ಈ ನಾಟ್ಕ ಸ್ಪರ್ಧೆ ಎಂದ್ರೇನೇ ತುಂಬ ಪ್ರೆಸ್ಟೀಜಿಯಸ್. ಅದನ್ನ ಗೆದ್ದೇ ಗೆಲ್ಬೇಕನ್ನೋದು ಪ್ರತಿ ಶಾಲೆಯ ಕನಸು. ಜೊತೆಗೇನೇ ಈ ಸ್ಪರ್ಧೆಯ ಪ್ರೇಕ್ಷಕರು ಬರೇ ಪ್ರೇಕ್ಷಕರಲ್ಲ. ಮಲಯಾಳಮ್ ಸಿನಿಮಾದ ಶ್ರೇಷ್ಠ ನಿರ್ದೇಶಕರೂ ಬಂದು ಕೂತಿರ್ತಾರೆ. ಅವರ ಮುಂದಿನ ಸಿನಿಮಾಗಳಿಗೆ ನಟರನ್ನ ಹುಡುಕೋದಕ್ಕೆ. ಅದ್ಕೇನೇ ‘ ಕಲೋತ್ಸವಮ್’ ನ ನಾಟ್ಕಗಳು ತುಂಬಾ ಫೇಮಸ್ಸು. ಮಲಯಾಳಮ್ ನ ಈಗಿನ ಅನೇಕ ಶ್ರೇಷ್ಠ ನಟ ನಟಿಯರು ಇಲ್ಲಿ ಸ್ಪರ್ಧಿಸಿ ‘ಕಲಾಪ್ರತಿಭಾ’ ಮತ್ತು ‘ಕಲಾತಿಲಕಮ್’ ಪ್ರಶಸ್ತಿ ಪಡೆದೋರೇ.

ಹೌದಪ್ಪ. ಈ ನಾಟ್ಕಗಳು ಶ್ರೇಷ್ಠತೆಯಲ್ಲಿ ಯಾವ ಸುಪರ್ ಡ್ರಾಮಾ ಗಳಿಗೂ ಕಡಿಮೆಯಿರಲಿಲ್ಲ. ಅರಳು ಹುರಿದಂತೆ ಮಾತಾಡೋ ಪಾತ್ರಗಳು, ಒಂದನ್ನೊಂದು ಮೀರಿಸೋ ಹಾಡುಗಳು, ಶ್ರೇಷ್ಠ ಅಭಿನಯ. ಅಭಿನಯದ ವಿವಿಧ ಶೈಲಿಗಳು, ಬೆರಗು ಹುಟ್ಟಿಸೋ ಸೆಟ್ಟುಗಳು, ಅವುಗಳ ನಿರ್ವಹಣೆ…..ಅಬ್ಬ! ರಂಗಭೂಮಿಯ ವಿದ್ಯಾರ್ಥಿಗಳುನಿಜಕ್ಕೂ ಒಮ್ಮೆ ಈ ಸ್ಪರ್ಧೆ ನೋಡ್ಬೇಕು. ಇಲ್ಲಿರೋ ಕೆಲವು ಫೋಟೋಗಳೇ ನಾಟ್ಗಳನ್ನ ಬಣ್ಣಿಸ್ತಾವೆ.

ಇದಾದ ಕೆಲವೇ ದಿನಗಳಲ್ಲಿ ಇನ್ನೊಂದು ಪ್ಲೆಸೆಂಟ್ ಸರಪ್ರೈಸ್ ನನಗಾಗಿ ಕಾದಿತ್ತು. ಮಕ್ಕಳ ಶಿಬಿರವೊಂದಕ್ಕಾಗಿ ನನಗೆ ಕರೆ ಬಂದಿತ್ತು!…..ಫುಲ್ ಖುಶ್. ಕೇರಳದ ಮಕ್ಕಳ ಶಿಬಿರವೊಂದರಲ್ಲಿ ಭಾಗವಹಿಸೋದು ನಿಜಕ್ಕೂ ನನ್ನ ಊಹೆಗೂ ನಿಲುಕದ್ದಾಗಿತ್ತು. ‘ಇಟ್ಫಾಕ್’ ನ ಗೆಳೆಯರು ಅಲ್ಲಲ್ಲಿ ಮಾತಾಡ್ಕೋತಾ, ಪೂಕ್ಕಾಡ್ ಅನ್ನೋ ಊರಿನ ‘ಕಳಿ ಆಟ್ಟಂ’ (ಆಟೋತ್ಸವ= ಆಟ, ಕುಣಿತದ ಉತ್ಸವ) ಶಿಬಿರಕ್ಕೆ ನನ್ನನ್ನು ಕರೆದಿದ್ರು.

ಪೂಕ್ಕಾಡ್ ನ ‘ಕಲಾಲಯಂ’ ಎನ್ನೋ ಸಂಸ್ಥೆ ಐವತ್ತು ವರ್ಷಕ್ಕೂ ಹಳೆಯದು. ಪೂಕ್ಕಾಡ್ ನ ಸುತ್ತಲಿನ ಮಕ್ಕಳನ್ನ ಸಾಸ್ಕೃತಿಕವಾಗಿ ಬೆಳೆಸ್ತಿರೋ ಸಂಸ್ಥೆ. ಪ್ರತಿ ವರ್ಷ ಬೇಸಿಗೇಲಿ ನಡೆಸೋ ಶಿಬಿರ ಇದು. ‘ಮಣ್ಣಿನಲ್ಲಿ ಶುರುವಾದ್ರೇ ಆಕಾಶಕ್ಕೇರಬಹುದು’ ಎನ್ನೋ ಮನೋಭಾವ ಇಟ್ಕೊಂಡು ನಡೆಸೋ ‘ ‘ಮಾವುಕಾಲ ಉತ್ಸವ’ ಇದು.

ಒಂಥರಾ ಹರಕು ಮುರುಕು ಮಲಯಾಳಮ್ ಮಾತನಾಡೋ ನಾನು ಆಳುಕಿನಿಂದ್ಲೇ ಅಲ್ಲಿಗೆ ಹೋದೆ. ಹೋದ ಮೇಲೆ ಮಾತ್ರ ಅಳುಕು ಎಲ್ಲೋ ದೂರ ಹಾರ ಹೋಯ್ತು. ಆಹಾ,ಎಂಥ ಮಕ್ಕಳು ಅವು! ಎಷ್ಟು ಚುರುಕು, ಲವಲವಿಕೆಯವು.

ಉಳಿದ ಹದಿನೈದು ದಿನಗಳ ಕಾಲವೂ ನನ್ನ ಮಲಯಾಳಮ್ ನ್ನ ತಿದ್ತಾ, ಜೊತೆಗೇ ಅಂಟ್ಕೊಂಡು, ಹಾಡು ಹಾಡ್ತಾ, ಕುಣೀತಾ ನನ್ನನ್ನೇ ತಮ್ಮೊಳಗೆ ಸೇರಿಸ್ಕೊಂಡು ಅದ್ಭುತ ಅನುಭವ ಕೊಟ್ಬಿಟ್ವು. ಸುಮಾರು ಇನ್ನೂರು ಪುಟ್ಟ ಮನಸುಗಳೊಂದಿಗೆ ಕಳೆದ ಆ ದಿನಗಳು ಅನುಭವಿಸಿದ ಪ್ರೀತಿ ಮರೆಯಲಾರದ್ದು.

ಶಿಬಿರದ ಮುಖ್ಯ ನಿರ್ದೇಶಕ ಮೋಹನ್ ಶಿಬಿರಕ್ಕಾಗಿ ಆಯ್ದುಕೊಂಡ ನಾಟ್ಕ, ‘ಮೌನ ವಸಂತಮ್’. Rachel Carson ರ ವೈಜ್ಣಾನಿಕ ಕಥೆ ‘‘Silent Spring’ನ್ನ ಆದರಿಸಿದ ನಾಟ್ಕ ಇದು. ರಾಸಾಯನಿಕ ಗೊಬ್ಬರ, ರಾಸಾಯನಿಕ ಔಷಧಿಗಳ ವಿರುದ್ಧ ಸಮರ ಸಾರಿದ್ದ Rachel Carson 1962 ರಲ್ಲಿ ಬರೆದ ಈ ಕಥೆ ದೊಡ್ಡ ಚಳುವಳಿಯೊಂದರ ಹುಟ್ಟಿಗೆ ಕಾರಣವಾಯ್ತು. ಅಮೆರಿಕದಲ್ಲಿ ಡಿ.ಡಿ.ಟಿ ಯ ನಿಷೇಧವಾಯ್ತು.

ಇದೇ ಕಥೆಯನ್ನ, ಸದ್ಯದ ‘ಎಂಡೋಸಲ್ಫಾನ್’ ನ ಅನಿಷ್ಟಗಳ ಹಿನ್ನೆಲೆಯಲ್ಲಿ ಅಡಾಪ್ಟ್ ಮಾಡ್ಕೊಂಡಿದ್ರು. ಇಂಥ ಗಂಭೀರ ವಸ್ತುವೊಂದು ‘ಮಕ್ಕಳ ಶಿಬಿರದ ನಾಟ್ಕ’ದ ವಸ್ತುವಾಗೋದೇ ತುಂಬ ಹೆಮ್ಮೆಯ ವಿಷ್ಯ. ಆದ್ರೆ ನಾಟ್ಕವನ್ನ ಲೀಲಾಜಾಲವಾಗಿ ಅಭಿನಯಿಸಿದ ಮಕ್ಳು ಹೊಸ ಜಗತ್ತೊಂದನ್ನ ಸೃಷ್ಟಿಸೋ ಆಸೆ ಹುಟ್ಟಿಸಿದ್ರು. ಭವಿಷ್ಯದ ಸುಂದರ ಬದುಕಿಗೊಂದು ಮುನ್ನುಡಿ ಬರೆದರು.

ಕೇರಳಕ್ಕೆ ನನ್ನ ಪ್ರಮೋಷನ್ ಒಂಥರಾ Blessing in disguise ಆಗಿ ಬಂತು. ನಾನು ಹೋಗಿದ್ದೇ ಒಳ್ಳೇ ಸಾಂಸ್ಕೃತಿಕ ಅನುಭವ ಗಳಿಸ್ಖೋಬಹುದು ಎನ್ನೋ ಆಸೆಯಿಂದ. ನನಗೆ ನನ್ನ ನಿರೀಕ್ಷೆಗಿಂತ್ಲೂ ಜಾಸ್ತೀನೇ ಸಿಕ್ತು. ವಿಶಿಷ್ಟವಾದ ಅನುಭವಗಳಾದ್ವು. ಅನೇಕ ರಂಗ ಗೆಳೆಯರು ಸಿಕ್ಕಿದ್ರು. ಈ ಎರಡು ವರ್ಷಗಳಲ್ಲಿ ನಾನು ಗಳಿಸಿದ ಪ್ರೀತಿ ಅಪಾರ.

ಕೇರಳವೇ, ನಿನಗೆ ವಂದನೆ.

7 comments

  1. ಕಿರಣಣ್ಣಾ ರಂಗ ಕೈರಳಿ ಚೆನ್ನಾಗಿ ಮೂಡಿಬಂದಿದೆ…..

    • ಅಂತೂ ಒಂದು ಸುಂದರ ಪಯಣ ಮುಗಿಸಿದೆ. ಊರಿನ ರಂಗ ಪಯಣದ ಕುರಿತು ಬರೆ. ಪುಸ್ತಕವಾಗಿ ಬರುವ ಬಗ್ಗೆ ಮೋಹನ್ ಅವರು ಬರೆದದ್ದು ನೋಡಿ ಇನ್ನಷ್ಟು ಖುಷಿ.

  2. ಕಿರಣ್, ಒಂದು ಉತ್ತಮ ಪ್ರಯಾಣ.. . ಚೆನ್ನಾಗಿ ಮೂಡಿ ಬಂದಿದೆ.. ನೋಡುವ ನೋಟದ ಗ್ರಹಿಕೆ ಮತ್ತು ಪ್ರಾಮಾಣಿಕತೆಯಿಂದ ಅದನ್ನು ಗುರುತಿಸಿ ಶಬ್ದಗಳಲ್ಲಿ ರೀತಿ ಅಸಾಧಾರಣವಾದುದು.. ಇದು ಮುಂದುವರಿಯಲಿ..
    ~~ವಸಂತ

  3. It was really a nice experience to read your articles. thanks for taking us through theater journey.

Leave a Reply