ಚನ್ನಂಗೋಡಿನಲ್ಲಿ ಸಿಕ್ಕದ್ದು ರಾಜೇಶ್ವರಿ ಮತ್ತು ಅವರ ಕಾವ್ಯ..

ಕವಿತೆ ಬಂಚ್

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ.

ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಈ ವಾರದ POET OF THE WEEK ನಲ್ಲಿ  ರಾಜೇಶ್ವರಿ ಚನ್ನಂಗೋಡು ಅವರ ಕವನಗಳ ಗುಚ್ಚ ನಿಮಗಾಗಿ.

ಚನ್ನಂಗೋಡು ಎಲ್ಲಿದೆ ಎಂದರೆ ಉತ್ತರ ಸಿಗುವುದಿಲ್ಲ. ಆದರೆ ಚನ್ನಂಗೋಡು ಎನ್ನುವ ಕವಿ ಮಾತ್ರ ಸುರಪರಿಚಿತ. ಕನ್ನಡ ಕಾವ್ಯ ಲೋಕದ ಭಿನ್ನ ದನಿ ಎಂದೇ ಹೆಸರಾದವರು ಶ್ರೀಕೃಷ್ಣ ಚನ್ನಂಗೋಡು. ಇವರ ಕಾವ್ಯ ಸುಳಿದ ಚನ್ನಂಗೋಡಿನಲ್ಲಿಯೇ ಬೆಳೆದ ಹುಡುಗಿ ರಾಜೇಶ್ವರಿ.

ದಕ್ಷಿಣ ಕನ್ನಡ, ಕಾಸರಗೋಡು ಎರಡನ್ನೂ ಬೆಸೆದಂತಿರುವ, ಆಳ ಪ್ರಪಾತ, ಬದಿಯ ಗುಡ್ಡ, ಜುಳು ಜುಳು ಹರಿಯುವ ತೊರೆಗಳ ಮಧ್ಯೆ ಬೆಳೆದ ಹುಡುಗಿಗೆ ಕವಿತೆ ಕೈಹಿಡಿಯಲು ತಡವಾಗುವುದು ಹೇಗೆ? ರಾಜೇಶ್ವರಿ ಕವಿತೆಯ ಜೊತೆ ನಡೆದು ಈಗ ಸಾಕಷ್ಟು ದೂರ ಬಂದಿದ್ದಾರೆ.

ಕನ್ನಡದ ಕಥೆ, ಕಾದಂಬರಿಗಳನ್ನು ಓದುತ್ತಲೇ ಇರುವ ಅಜ್ಜ ಅಜ್ಜಿ ಅಮ್ಮಂದಿರ ನಡುವೆ ಬೆಳೆದವರು.  ಬೇಸಗೆ ರಜೆ ಬಂತೆಂದರೆ ಸಾಕು  ಓದಿನಲ್ಲೇ ಮುಳುಗಿರುತ್ತಿದ್ದ ಸುಂದರ ಬಾಲ್ಯವನ್ನು ಕಳೆದು… ಈಗ ಪಿ ಎಚ್ ಡಿ ಯೆಂಬ ಇನ್ನೊಂದು ಓದಿನ ಲೋಕದಲ್ಲಿ ಮುಳುಗೇಳುತ್ತಿರುವರು. 

1

ಜಿರಳೆಗಳು, ಆಗಲ್ಲಿ ಹಾಗೊಮ್ಮೆ
ಈಗಿಲ್ಲಿ ಹೀಗೊಮ್ಮೆ, ಜಿರಳೆಗಳು
ಮೂಲವಿಲ್ಲದ, ಅಂತ್ಯವಿಲ್ಲದ
ಇಂಥಾದ್ದೇ ಬಣ್ಣವೋ ಗಾತ್ರವೋ ಇಲ್ಲದ
ನಿಶ್ಚಯವಾಗಿ ಹೇಳಬಹುದಾದ ಏನೂ ಇಲ್ಲದ
ಅದಕ್ಕೂ ಅಪವಾದವಾಗೊಂದು ಮೀಸೆಯುಳಿಸಿಕೊಂಡಿರುವ
ಹಾಗೆ ದೇವರಿಗೆಂದು ಅವರಿವರು ಆಗೀಗ
ಬಳಸಿದಷ್ಟೂ ಸಾವಿರ ನಾಮ, ವಿಶೇಷಣಗಳಿಗೂ
ಹೊಂದಿಕೊಳ್ಳುವ, ಸಿಟ್ಟು ಬರಿಸುವ, ಬೇರೆಲ್ಲ
ರಾಗದ್ವೇಷಾದಿ ವಿಕಾರ ವಿಚಾರಗಳನ್ನೂ ಮರೆಸಿ
ಏಕಾಗ್ರಧ್ಯಾನವನ್ನೊಲಿಸಿಕೊಂಡು
ಸಿಟ್ಟನ್ನೇ ತನ್ನ ಮೇಲಿನ ಭಕ್ತಿಯಾಗಿಸಿಕೊಂಡು
ಇಲ್ಲಿ ಸತ್ತಂತಾಡಿ ಅಲ್ಲಿ ಜರಾಮರಣಬಾಧೆಗಳಾಚೆ
ತಾನಿರುವುದೆಂದು ಸಾರಿ
ಪುರ್ರನೆ ಹಾರಿ
ಮೀಸೆಯಲುಗಿಸಿ
ಅಣುಬಂಬಿನಾಚೆಗೂ ನಿಯಾಂಡರ್ತಲ್ ಮಾನವನೀಚೆಗೂ
ಇಣುಕಿನೋಡು, ಚರಿತ್ರೆ ಹೇಳಲು
ಜಾತಿಮತಲಿಂಗಭೇದಗಳ, ದೊಡ್ಡ ಚಿಕ್ಕವರ
ಇಲ್ಲಿಯಲ್ಲಿವರೆಲ್ಲರ ಕಥೆ ತಿಳಿದುಳಿದ ತಾನಿದ್ದೇನೆ
ಸಾಕ್ಷಿಯೋ ಅದೇನೋ ಹೇಳು,
ಮೀಸೆಯಾಡಿಸಿ ನಿನ್ನ ಪೂರ್ವದ, ಅನಂತರದ
ಅದಷ್ಟೂ ಚಿಂತೆ, ನಿಶ್ಚಿಂತೆಯನ್ನು ಅರ್ಥಮಾಡಿಸಿಕೊಡಲೂ
ಮಾಡಿಕೊಳ್ಳಲೂ ತಾನಿದ್ದೇನೆಂದು
ಈಗಷ್ಟೇ ಸತ್ತ ನಾಟಕವಾಡಿ ಮತ್ತೆ ಮೀಸೆಯಾಡಿಸಿ ಆ
ಮೂಲೆಯಿಂದ ಬರಲಿರುವ ಜಿರಳೆ ಹೇಳಿತು.
ಪ್ರಾಣಿದಯಾಸಂಘದ ಮೇಡಂರೂ
ತಲೆಯಾಡಿಸಿ ಹೌದೌದೆಂದರು
ನಾನೂ ಶರಣಪ್ಪಾ ಅಂದೆ.
ರಕ್ತಸ್ರಾವದ ದಿನಗಳಲ್ಲೂ ಹರಸಲು ನಾನಿದ್ದೇನೆಂದು
ದೃಢೀಕರಿಸಿ
ಸದ್ಯಕ್ಕೆ ಸುಮ್ಮನಾಗಿರುವಂತಿದೆ.
ಇನ್ನು ನಾಳೆ ರಾತ್ರಿ.

2

ಭಯ? ಅಲ್ಲಲ್ಲ, ಕುತೂಹಲ?
ಕಣ್ಗತ್ತಲು? ಅಲ್ಲಲ್ಲ, ಹೊಸ ಬೆಳಕು?
ಭಕ್ತಿಯೆಂದರೆ? ಇರಬಹುದು.
ಅಂತರಾಳದಲ್ಲಿ ಪ್ರಶ್ನೆ ಹುಟ್ಟಿಸಿ
ಕಾಲಡಿಯಿಡಲು ಹೊರಟ ಜಗದಗಲ, ಆಳಗಳ
ಚಿಟಿಕೆ ರುಚಿದೋರಿಸಿ
ಮೃದುದನಿಯಲ್ಲೆಚ್ಚರಿಸಿ
ಕೈ ಹಿಡಿದು ಹೊಸ್ತಿಲವರೆಗೂ ನಡೆಸಿ
ತಳ್ಳಿ ಬಿಡುವ ಕೆಲವರಿರುತ್ತಾರೆ
ಬೆಟ್ಟಗಳಂತೆ, ಆಕಾಶದ ಸ್ವಾತಂತ್ರ್ಯದಂತೆ
ಈ ಕ್ಷಣದವರೆಗೂ ನಂಬಿದ ಸತ್ಯದ ಸತ್ವದಾಚೆಗೆ
ಅಗಾಧ, ಅನಘ ಲೋಕವಿದೆಯೆಂದುಸುರಿ
ಉಸಿರ ಹಿಡಿದಿಡುತ್ತಾರೆ
ಅಲ್ಲಿಂದಾಚೆ ಹೊಸಗಾಳಿ
ನಾವೇ ಹುಡುಕಬೇಕಾದ ಹೊಸದೀಪ್ತಿ
ಬೇರಿಳಿಸಿದರೆ ಹೊಸಮಣ್ಣು
ಕೂರಲಾಗದು, ನಡೆಯಲೇಬೇಕು.
ಮುಂದೆ ಮುಂದೆ
ಅಂಥವರೊಂದಿಗೆ ಕೂತು
ಅರೆ ಗ್ಲಾಸು ಕಾಪಿ ಹೀರಿದರೆ
ರೆಕ್ಕೆ ಬಿರಿದು, ಗಗನ ಸೆಳೆದು
ಹಾರಲೇಬೇಕಾಗುತ್ತದೆ.

ಅಲ್ಲಿ ಮೊದಲು ಅಯ್ಯೋ ಹೌದಲ್ಲವೆನುವ
ಭಾವ
ಮತ್ತೆ ನೂರು ಪ್ರಶ್ನೆಗಳು
ನಾನೊಪ್ಪಲಾರೆನೆನುವ ಹಠ
ಆಗ ಅವರೊಮ್ಮೆ, ನಾವೊಮ್ಮೆಯಿಡುವಡಿಗಳು
ಮತ್ತೆ ಮುಂದಿನ ನಡೆತ.
ಈ ಭಕ್ತಿಯಲ್ಲಿ ಅವರೇ ಸರಿಯೆಂದಿಲ್ಲ
ನಮ್ಮ ತಪ್ಪುಗಳೂ ಇಲ್ಲ
ಬರೀ ಹಾದಿ, ಹೆಜ್ಜೆಗಳು

ಗುರುಗಳೊಲಿಯುವ ಕ್ಷಣಗಳ
ಸವಿಯೇ ಬೇರೆ…

 

3

ಅದೇನೋ ಇದೆ
ಗುಡ್ಡದ ತುದಿ ತಲುಪಿದಾಗ
ಸುಸ್ತಲ್ಲಿ ಉಸಿರೇ ಮುಗಿದಂತೆ ಅನಿಸಿಯೂ
ಆ ತುದಿಯೊಂದನ್ನೇ ನೆನೆಸಿ ಹತ್ತಿ ಹತ್ತಿ ಮುಗಿಸಿದಾಗ
ಕಾಣುತ್ತದಲ್ಲ, ತುದಿಯಿಂದಾಚೆಗೊಂದು ದಾರಿ
ಅಲ್ಲಿ ತೆರೆದುಬಿಡುವ ಮೋಡದ ಹಾದಿ
ಮುಂದಿನ ಗುಡ್ಡೆ, ಹಸಿರು, ಕಣಿವೆ
ಹಾಗೇ
ಕುಸಿದು ಕೂರುವುದೋ, ಹೆಜ್ಜೆ ಹಾಕುವುದೋ ತಿಳಿಯದೇ
ಮೂಕವಾಗುವ, ಅರ್ಥವಾಗದ, ಕ್ಷಣವುರುಳುವುದಲ್ಲ
ಅಲ್ಲಿ, ಅಲ್ಲೇ
ಅದೇನೋ ಇರುವುದು
ಸಾಕೆನಿಸಿ ಕುಳಿತರೂ
ಮುಂದೆ ಸಾಗಿಸಲು, ಎದ್ದು ನಿಲ್ಲಿಸಲು ಚಾಚುವ ಕೈಯಾಗಿ
ದೇವರೇ ಎಂದು ಕೂಗಿದರೆ ಮಾರ್ದನಿ ಬಾರದೇ
ಆದರೆ
ಮುಂದೆ ಸಾಗಿ ನೋಡಿದರೆ ಸಾಗಿ ಬಂದ
ಹೆಜ್ಜೆ ಹೆಜ್ಜೆಗೂ ಒಲವಾದ, ಹತ್ತಿರವಾದ
ಇಳಿದರೂ ಮುಗಿಯದ
ಒಂದೊಮ್ಮೆ ಹತ್ತಿದರೆ ಮುಂದೆಂದೂ ಮುಗಿಯದ
ವಿಚಿತ್ರ ದೇವರು
ಪ್ರತಿ ಬೆಟ್ಟವೂ
ಚಾಮುಂಡಿಯೂ ತಡಿಯಾಂಡಮೂಳೂ
ಮೀಶಪ್ಪುಲಿಮಲೆಯೂ ಸ್ಕಂದಗಿರಿಯೂ

ಮತ್ತು
ಬದುಕಲ್ಲಿ ಹತ್ತಲೇ ಬೇಕಾಗಿ ಬಂದ,
ಉಸಿರು ಮುಗಿದರೂ, ಬೆವರಿಳಿದರೂ
ಕಾಲ್ಸೋತರೂ ಬಿಡಲಾಗದೇ ಹತ್ತಲೇ ಬೇಕಾಗಿಬಂದ
ಬೆಟ್ಟಗಳೂ,
ಬದುಕಲ್ಲಿ ಹತ್ತಲೇ ಬೇಕಾಗಿ ಬಂದ
ಕೆಲವು ಮನುಷ್ಯರೂ

ಬೆಟ್ಟಗಳೆಂದರೆ
ಹತ್ತುವ ಅನಂತ ಇಚ್ಛೆಗಳು
ಅವರುಗಳೂ ಅಷ್ಟೇ

 

4

ಸುಮ್ಮನೇ ಬಳಿಯಿಲ್ಲದಾದಾಗ
ಕಮಲಾದಾಸರ ಸಾಲುಗಳು ಕಾಡ ತೊಡಗುತ್ತವೆ
ಬಳಿಯಿಲ್ಲದಾದದ್ದು ಯಾರು?
ಮತ್ತಾರೋ ಬಂದು ಗಂಡನೆನ್ನುತ್ತಾರೆ
ಕಾಂತನೆನ್ನುತ್ತಾರೆ
ಕಮಲಾದಾಸರನ್ನು ಓದಿದ ಮೇಲೂ
ಅಂಥಾ ಹೆಸರಿಟ್ಟ,
ಆಕಾಶವನ್ನೇ ಕಾಣದ ಹಕ್ಕಿಯ ರೆಕ್ಕೆಗಳಂಥಾ
ಸಂಬಂಧಗಳಲ್ಲ ಕಾಡುವುದೆಂದನಿಸುತ್ತದೆ
ಹೆಸರಿಲ್ಲದ ಹೆಸರಿಡಬಾರದೆಂದನಿಸುವ
ಹೇಳಿದಷ್ಟೂ ಮುಗಿಯದ ಕಥೆಗಳಾಗಿ ಹೋಗುವ
ಆದರೂ ಹೇಳಲಾಗದ ಹಲವು ಕಥೆಗಳಿರುವ
ಎಂದೂ ಜತೆಗಿರುವ
ಆದರೂ ಜತೆಗಿರದ ಅರೆಕ್ಷಣವೇ
ಅಸಹ್ಯ ಕೋಪ ತರಿಸುವ
ಜತೆಗೇ ಬೆಳೆದು ಹಳೆಯದಾಗುವ
ಆದರೂ ಮತ್ತೆ ಮತ್ತೆ ಹೋಸದಾಗುತ್ತಲೇ ಇರುವ
ಕೆಲವು ಅತಿ ಹಗುರವೂ
ಅದಕ್ಕಿಂತಧಿಕ ಭಾರವೂ ಆದ
ಕೆಲವು ಸಂಬಂಧಗಳಿವೆ
ಅವು ಕವಿತೆಗಳಾಗಿ ಹೀಗೆ
ಕಾಗದಗಳ ನೆಲದ ಮೇಲೆ ಅಂಗಾತ ಮಲಗಿ
ನಮ್ಮ ಕಣ್ಣುಗಳೊಳಗಿನ ಅನಂತಾಕಾಶವನ್ನು
ದಿಟ್ಟಿಸುತ್ತವೆ
ಆ ಕೊನೆಯ ವ್ಯಕ್ತಿ ಕಾಣದಾದಾಗ
ಈ ಕೊನೆಯವರು ಕುಣಿವಂತಾಗುತ್ತದೆ
ಯಾರಿಗೂ ಹೇಳದೇ ಮಳೆಯನ್ನೋ
ಮತ್ತಿನ್ನಾರನ್ನೋ ಕಾಯುವ
ಕಾಡಿನ ಹೆಸರರಿಯದ ಹಕ್ಕಿಯ
ಮನಸ್ಸೆಲ್ಲ ತಿಳಿದವರಂತಾಗುತ್ತೇವಲ್ಲ
ಆಗ
ಆಗ ಕಮಲಾದಾಸರೇ ನೆನಪಾಗುತ್ತಾರೆ
ಅವರನ್ನು ಕವಿಯಾಗಿಸಿದ ಹಲವರಿರಬಹುದು
ಕಾಯಿಸಿದವರು, ಕಾದವರು ಮತ್ತು ಕಾಯುವಿಕೆಯಿಂದ
ಮುಕ್ತಿಕೊಟ್ಟವರು
ಅವರೆಲ್ಲರಿಗಿಂತ ಹೆಚ್ಚು ಹಕ್ಕಿಯಾಗಿ ಹಾಡಿ
ಹಾಡಿ ನೀರ್ಮಾದಳದ ಗೆಲ್ಲೊಂದರ ಮೇಲೆ
ಉಳಿದು ಹೋದ ನೀಲಾಂಬರಿಯಾಗಿ
ಅದೇ ಕಮಲಾದಾಸರು
ಕನವರಿಕೆಗಳೆಲ್ಲಕ್ಕೂ ಸ್ವರವಾದವರು..

ಯಾರೋ ಎಲ್ಲೋ ಹೊರಟು ನಿಂತಾಗ
ಹೆಜ್ಜೆಹಾಕಿದಾಗ ಹೀಗೆ
ನಾವೂ ಹಕ್ಕಿಗಳಾಗುವುದೇಕೆ?

 

5

 

ಕಾಟುಮಾವೆಂದರೆ ಗೊತ್ತೇನು?
ಪರಿಮಳದ ಕಡಲಲೆ ಸೆಳೆದು
ಮುಳುಗಿಸಿ, ಬಾಯಲ್ಲಿ ಜೊಲ್ಲಿನಲೆಯುಕ್ಕಿಸಿ!!
ಆಹಾ!!
ಅಷ್ಟು ದೂರದ ಅಜ್ಜನೊಬ್ಬರ ತೋಟದಿಂದ
ಅವರು ಹೆಕ್ಕಿಟ್ಟ ಹಣ್ಣುಂಡು
ಚಪ್ಪರಿಸುತ್ತಿದ್ದ ಬಾಲ್ಯ!!
ನಮಗೊಂದು ಮರ ಬೇಕು
ಕಾಟು ಮಾವಿನದು
ಘಾಟು ಮೂಗಿಗೆ ನಾಟಿ
ಚಪ್ಪರಿಕೆ ಹುಟ್ಟಿಸುವಂಥಾದ್ದು!!
ಅದೊಂದಾಸೆ, ನನ್ನೊಡನೇ ಬೆಳೆದಿದ್ದು.
ಯಾವತ್ತೋ ಚೀಪಿ ಎಸೆದ ಗೊರಟೊಂದು
ನನ್ನೊಡನೆ, ನನ್ನಾಸೆಯೊಡನೇ
ಬೆಳೆದಿದ್ದು.
ಬೇರೂರಿತ್ತು, ಆಸೆಯೂ, ಮನೆಯ ಹಿಂದಿನ
ಮಾವಿನ ಗಿಡವೂ
ಗೆಲ್ಲು ಬಿಟ್ಟು, ಹಣ್ಣು ಬಿಡಲು ಕಲಿತು..
ಮೊದಲ ವರ್ಷದ ಹಣ್ಣಾದಾಗ
ನಾನೂ ಅಜ್ಜನೂ ಹಿಂದಿನ ಜಗಲಿಯಲ್ಲಿ ಕುಳಿತು
ಹುಳಿ ಹುಳಿಯೆಂದೆವು.
ಅಜ್ಜಿ ಮಿಡಿ ಹೆಕ್ಕಿ
ಮೆಟ್ಟುಗತ್ತಿಯ ಬಾಯಿಗಿಕ್ಕಿ
ಉಪ್ಪಿನಕಾಯಿಯಾಗಿಸಿದಾಗಲೂ
ಇದಷ್ಟೇನೂ ರುಚಿಯ ಮಾವಲ್ಲವೆಂದೆವು.
ಅಜ್ಜಿ ಉತ್ತರಿಸಲಿಲ್ಲ, ಹಾ ಹೂಗಳಿಲ್ಲ.
ಮಿಡಿ ನನ್ನ, ಅಜ್ಜನ ನಾಲಿಗೆಯ ಪ್ರೀತಿಯನ್ನುಂಡಿತ್ತು.

ನಾನೆಲ್ಲೋ ಹೋದೆ.
ಅಭಿಯಂತರಳ ಸೋಗು ಹಾಕಿದೆ.
ಊರೂರಲೆದೆ.
ಅಜ್ಜ ಹೋದರೇ? ಅಲ್ಲ, ನನ್ನೊಡನೇ
ಕನಸುಗಳಾಗಿ ನಾ ಹೋದಲ್ಲೆಲ್ಲ ಬರುತ್ತಿರುವರೇ?
ಅಥವಾ ಅವರು ಹಿಂದೆಂದೋ ನಡೆದ ಹಾದಿ
ಈಗ ನನ್ನ ಕಾಲಡಿಗೆ ಜೀವಂತವಾಗುತ್ತ
ನಾನವರನ್ನೇ ಸೇರುತ್ತಿರುವೆನೇ?
ಮರ ಬೆಳೆದು, ಮನೆಯ ಮಾಡಿಗೆ ನೆರಳಾಗಿ
ಕಥೆಗಳಂತಾಗಿದೆ, ಮುಗಿಯದೇ, ಸೆಳೆದು ಕಾಡುತ್ತಲೇ
ಹಣ್ಣುದುರಿಸುತ್ತ
ಮರದಂತಾಗಿದೆ.
ಕೆಂಪಿರುವೆಗಳ ಗೂಡಡಿಗೆ
ವರ್ಷಕ್ಕೆ ನಾಕು ದಿನ ಹಣ್ಣು ಹೆಕ್ಕಲೂ
ಇರುವೆ ಕಚ್ಚಿದಾಗ ಕುಣಿದು, ಓಡಲೂ ಹೋಗುವ
ನನ್ನನ್ನು ಕಾದು ಆ ಮನೆಯೂ ಮರವೂ
ನಿಂತಿವೆ.

ನಾನಿಲ್ಲಿ ಚಡಪಡಿಸಿ
ಮಾವಿನ ಮರದಡಿಗೆ ನನ್ನಾಸೆಯಾಗೇ ಬೆಳೆದ
ಬಿಂಬುಳಿಯ ಗಿಡದ ಅಕಾಲ ಮರಣದ ನೆನಪಿಗೆ
ತತ್ತರಿಸುತ್ತೇನೆ
ಪುನಾರ್ಪುಳಿಯ ದಂಪತಿ ಮರಗಳೂ
ಮೊದಲನೇ ಬಾರಿ
ಕೆಂಪು ಪುನಾರ್ಪುಳಿಗಳ ಮಿಡಿ ಬಿಟ್ಟಾಗ
ನಾನೂ ನಿನ್ನವಳಾದದ್ದನ್ನು
ಊರೆಲ್ಲ ಅಕ್ಷತೆ ಕಾಳು ಸುರಿದು
ಅಂಗೀಕರಿಸಿದೆ
ಅಡಿಕೆ ಮರಗಳು ನಮ್ಮ ಮಕ್ಕಳಿಗಾಗಿ
ಹಾಳೆಗಳನ್ನು ಕೊಟ್ಟಾಗಿದೆ
ಇನ್ನೊಂದಿಷ್ಟು ಗೇರುಗಿಡಗಳನ್ನೂ
ಸೇರಿಸಿ, ಅಲ್ಲಿ, ಆ ಮಣ್ಣಲ್ಲಿ ಸಂಸಾರಿಯಾಗಬೇಕು
ಹಣ್ಣುಂಡು, ಗಿಡ ಬೆಳೆಸಿ
ನೆರಳಲ್ಲಿ ಕುಳಿತು ತೇಜಸ್ವಿಯವರನ್ನು
ಮತ್ತೆ ಆಮೂಲಾಗ್ರವಾಗಿ ಓದಿ
ಬಿಸಿ ವಸಂತದಲ್ಲಿ
ಬೆವರಾಗಿಳಿಯಬೇಕು
ಅಲ್ಲಿ ಹೋಗಲು ನೀನೂ ಬೇಕು.
ಅಮ್ಮನೂ ಅಜ್ಜಿಯೂ ಬೇಕು.
ಮತ್ತೆ ಹೊಸಬರೂ ಬೇಕು.
ಹೊಸ ಗಿಡಗಳೊಡನೆ ಗೆಳೆಯರಾಗಲು
ಗುಬ್ಬಚ್ಚಿಗಳ ಭಾಷೆ ಕಲಿಯಲೂ ಕಲಿಸಲೂ
ಮರೆತ ಬದುಕನ್ನು ಮತ್ತೆ ಬದುಕಲು

ಕಾಟುಮಾವಿನ ಸಾರೂ
ಗೊಜ್ಜೂ, ಹಣ್ಣಿನ ರಸವೂ
ಹಲ್ಲೆಡೆಗೆ ಸಿಕ್ಕಿ ಕಂಗಾಲಾಗಿಸುವ ನಾರುಗಳೂ
ಬಿಸಿಲಿನರ್ಥ ತಿಳಿದು, ತಪಸಾಗುವ
ಮಾಂಬಳದ ಸಿಹಿಯೂ
ಮತ್ತೊಮ್ಮೆ ವಸಂತ ಬರಬೇಕು
ನನ್ನೊಡನೇ ಬದುಕುವ ವಸಂತ

 

6

ಈ ಮಳೆಗಾಲ ಚೆನ್ನಾಗಿತ್ತು
ಮಳೆಯೇ ಆಗದೆಂದು ನಾನು ಹೆದರಿದ್ದ
ಈ ಊರನ್ನು ತನ್ನ ಕೈಗೊದಗುವಷ್ಟಾದರೂ
ಮುಳುಗಿಸಿತು
ಸಿಡಿಲು, ಗುಡುಗುಗಳ, ಮಳೆನಿಂತಾಗಿನ
ಮೈನಾ, ಬುಲ್ಬುಲ್‌, ಗಿಳಿ, ಬಜಕೆರೆ ಹಕ್ಕಿಗಳ
ಕಲರವ
ಮುಂದೆ ಹೋಗಲೇ ತಿಳಿಯದ ನನ್ನನ್ನು
ಹಿಂದೆ ಹಿಂದೆ
ಅವರಿನ್ನೂ ಜೀವಂತವಾಗಿ ನಮ್ಮೊಡನಿದ್ದಷ್ಟು
ಹಿಂದೆ
ಕರೆದೊಯ್ತು. ಅವರಿನ್ನೂ ನಮ್ಮೊಳಗದಷ್ಟು ಜೀವಂತ!!
ಮಳೆಯಂತೆ!!

ಈ ಮಳೆಗಾಲ ಚೆನ್ನಾಗಿತ್ತು
ಯಾರದ್ದೋ ಮನೆ ಮುರಿದು ಹೋಯ್ತಂತೆ
ಇನ್ನಾರದೋ ಕೂಡಿಟ್ಟದ್ದೆಲ್ಲ ಕರಗಿ ಹೋಗಿರಬಹುದು
ಮಕ್ಕಳೋ ಮರಿಯೋ
ದನಗಳೋ ನಾಯಿಯೋ
ಅದೇನೆಲ್ಲ ಮುಳುಗಿದವೋ!!
ಮಳೆಗೇನು ಗೊತ್ತು?
ನನಗೇನು ಗೊತ್ತು?

ಈ ಮಳೆಗಾಲ ಚೆನ್ನಾಗಿತ್ತು
ಮುಳುಗಿ ಎದ್ದ ರಸ್ತೆಗಳು
ಜಂಭಪಟ್ಟುಕೊಂಡ ಹಸನಾದ ಮೈ ಕರಗಿ ಹೋಗಿ
ಅಬ್ಬೇಪಾರಾಗಿ ಮಲಗಿವೆ
ಕೇಳುವವರಿಲ್ಲ, ಕೊಂಬು ತೀಡಿಕೊಳ್ಳುವವರೂ ಇಲ್ಲ.
ರಸ್ತೆಯೊಂದನ್ನೇ ಕೊಂಬಾಗಿಸಿಕೊಂಡ ನಗರ,
ದ್ವಿಚಕ್ರ ವಾಹನದ ಹಲ್ಲು ಮಾತ್ರವಲ್ಲ
ಕೈ ಕಾಲಿನೆಲ್ಲ ಎಲುಬುಗಳನ್ನೂ ಅಲಗಿಸುತ್ತ
ಮಲಗಿದೆ.

ಈ ಮಳೆಗಾಲ ಚೆನ್ನಾಗಿತ್ತು
ನೆಲಕ್ಕಿಳಿಯಲೂ ಉದಾಸೀನವಾಗಿ
ಚಂಡಿ ಬಟ್ಟೆಗಳನ್ನು ನೆನೆಯುವುದೇ ಅಸಹ್ಯವಾಗಿ
ಮಳೆಯನ್ನು ನೆಲದಿಂದ ಮೇಲಿನ
ಎರಡನೇ ಮಾಳಿಗೆಯ ಬಾಲ್ಕನಿಯಿಂದಲೂ
ಪುಸ್ತಕಗಳ ಮನೆಯ ಸುಭದ್ರ ಗೋಡೆಗೆ ಸೇರಿರುವ
ವಿಶಾಲ ಕನ್ನಡಿಯಿಂದಲೂ ನೋಡಿದ ನನಗೆ
ನನ್ನ ಭಯಗಳ ಹನಿಗಳು ಕಂಡಾಗ
ಗೋಡೆಕಟ್ಟಿಕೊಳ್ಳಲು ಕಾರಣ ಕೊಡುವ ಅಭದ್ರತೆಯ
ಕೆಂಪುಹೂಗಳರಳಿ, ಮಳೆಯಲ್ಲಿನ್ನೂ ಕೆಂಪಾಗಿ ನಿಲುವುದು
ಕಂಡಾಗ
ಮತ್ತೊಮ್ಮೆ, ನನ್ನನ್ನಿನ್ನೂ ಬೆದರಿಸುವ
ನಿನ್ನ ಮೌನವೂ, ಮತ್ತೆ ಕೆಲವು ಮಾತುಗಳೂ ಕಂಡಾಗ
ಅದರ ಹಿಂದಿನ ತರ್ಕ, ಅದಕ್ಕೂ ಹಿಂದಿನ
ತನ್ನಲ್ಲಿ ತಪ್ಪಿರಬಾರದೆಂದೂ, ತಾನು ಮುಳುಗಿ ಹೋಗಬಾರದೆಂದೂ
ಕಟ್ಟಿಕೊಳ್ಳುವ
ನೂರು ಮಾಳಿಗೆಗಳ ಸಾಧೂಕರಣದ
ಕಟ್ಟಡಗಳೊಳಗಿನ
ಧೂಳು ಕೂರದ ಗ್ರಂಥಮಾಲೆಗಳ ತುಂಬ
ವಾದಗಳೂ, ಸಮರ್ಥನೆಗಳೂ ಕಂಡಾಗ
ಮತ್ತೆ ಹೇಳಿಕೊಂಡೆ..
ಈ ಮಳೆಗಾಲ ಏನೋ ಒಂದಂತೂ ಆಗಿತ್ತು.
ನೀನೋ ನಾನೋ
ಅಂಥದ್ದೇ ಏನೋ ಒಂದು.

ಹಿಂಗಾರಿನಂತೆ ಮಳೆಗಾಲದ
ಮಂಗಳ ಚರಣದಂತೆ
ಮಳೆ ಬರುವಾಗ
ಮತ್ತೆ ಅದೆಲ್ಲೋ ನಗರದ ಎದೆ ನಡುಗಿಸಿ
ಸುರಿವಾಗ
ನನ್ನ ಸುಭದ್ರ ಬಾಲ್ಕನಿಯಲ್ಲಿ ನಿಂತ ನನಗನಿಸುತ್ತೆ
ಈ ಮಳೆಗಾಲ ಚೆನ್ನಾಗಿತ್ತು.

 

7

ನನಗೂ ನೂರು ಮುಖಗಳು
ನನ್ನಂತಿರುವೊಂದು ನಿನ್ನಂತಿರುವೊಂದು
ಅವನಂತಿರುವೊಂದು ಅವಳಂತಿರುವೊಂದು
ಯಾರಂತೆಯೂ ಇರದ ಇನ್ನೂ ಒಂದು
ಆಗ ಬಂದು ಈಗ ಹೋಗುವೊಂದು
ನೀನು ಬಂದಾಗೆಲ್ಲ ಅಡಗಿಕೂರುವುದೊಂದು
ಹೊರಬರುವ, ನಿನ್ನೊಡನಿರುವ ಮತ್ತೊಂದು
ಅದರಲ್ಲಿ ನೀನು ಕಾಣುವುದೊಂದು
ನಾನು ಕಾಣಿಸುವಿನ್ನೊಂದು
ನೀನೂ ನಾನೂ ಕಾಣಲು ಮರೆವ ಮಗದೊಂದು
ಅವೆಷ್ಟು ಮುಖಗಳು!!

ನಿನಗೂ ಇನ್ನೂರು ಮುಖಗಳು!!

ಹಾದಿ ತಪ್ಪಿ ಅಲೆವಾಗ
ಹೊರಬಂದು, ಕಾಣಿಸಿಕೊಂಡ
ನಿನ್ನ, ನನಗೆ ಹೊಸದಾದ ಆ ಮುಖ
ಅಲ್ಲಿ ನನಗೇ ತಿಳಿಯದೇ ಹೊರಬಂದ
ನೀನು ಕಾಣದ ನನ್ನ ಈ ಮುಖ
ಸಂಧಿಸಿ, ನಾವಿಬ್ಬರೂ ವಿಮುಖರಾಗಿ ಹೋದಾಗ
ಯಾಕೋ, ಯಾರದ್ದೋ ಹಳೆಯ ಮುಖಗಳೆಲ್ಲ
ನೆನಪಲ್ಲಿ ಸುಳಿಯುತ್ತಿವೆ
ಮೂಕವೇದನೆಯನ್ನು ಹಿಂಡಿ ತೆಗೆದು
ತೊಳೆದು, ಭಾವಮುಕ್ತಿಯೆಂಬ
ದೊಡ್ಡಹೆಸರಿನ ಕಪ್ಪು ಫರದಾದಡಿಯಲ್ಲಿ
ನನ್ನೆಲ್ಲ ಮುಖಗಳನ್ನೂ ಅಡಗಿಸಲು ಹವಣಿಸುತ್ತೇನೆ

ಭಯ ಮಾತ್ರ
ನನ್ನ ಮುಖಗಳ ಬಗೆಗೆ
ನೀನವುಗಳನ್ನು ಕಂಡು ವಿಮುಖನಾಗಿ ನಡೆದರೆ
ನಿನ್ನ ಬೆನ್ನ ಹಿಂದೆ ನಾನು
ನೀನು ಕಾಣದವಳಾದ ಮೇಲೆ,
ನಾನಿಲ್ಲವಾಗುವ, ಮುಖಗಳೆಲ್ಲ ಮಾಸಿ ಹೋಗುವ
ಭಯ

ಹಾಗೇ ಅಡಗಿಸುತ್ತೇನೆ
ನೀನು ಹೋಗಾದ ಸಭಾಂಗಣ
ಭಣಗುಟ್ಟುವ ನೂರು ನೂರು ಮುಖಗಳ ಮುಂದೆ
ರಂಗಸ್ಥಳದ ಮೇಲಿನ ನಾನು
ಯಾವುದೋ ಮುಖ ಹೊತ್ತ ನಾನು
ಅಡಗಿಸಿಡುತ್ತೇನೆ
ನಿನಗೆ ಬೇಡವಾದ ಮುಖಗಳನ್ನಷ್ಟೇ ಅಲ್ಲ
ನನಗೂ ಬೇಡವಾದ, ಭಾರವಾದ
ಮುಖಗಳನ್ನು
ಬಣ್ಣಗಳ ಹಿಂದೆ, ಮುಖವಾಡಗಳ ಹಿಂದೆ
ನನ್ನ ಮುಖವಿಲ್ಲ
ನಾನೂ ಇಲ್ಲ
ಅಡಗಿಸಿಡುತ್ತೇನೆ, ಮಣ್ಣಿನಡಿಗೆ
ಕರಗಿ ಮಣ್ಣಾಗಿ ಹೋಗುವ ಮುಖಗಳೊಡನೇ
ನಾನೂ ಕರಗಿ.

 

2 comments

  1. ಕೈ ಹಿಡಿದ ಕವಿತೆಯನ್ನು ರಾಜೇಶ್ವರಿ ಬಹಳ ಚನ್ನಾಗಿ ಪೊರೆಯುತ್ತಿದ್ದಾರೆ.. ಈ ಎಲ್ಲ ಕವಿತೆಗಳು ಅವರ ಸಶಕ್ತ ಓದು ಮತ್ತು ಸುತ್ತಾಟ,ಪ್ರಕೃತಿಯ ಸೂಕ್ಷ್ಮ ಗ್ರಹಿಕೆಯ ಒಳನೋಟವನ್ನು ನಮಗೆ ಕಾಣಿಸುತ್ತಿವೆ.. ಮೊದಲೆರಡು ಕವಿತೆಗಳು ಸರಸರನೆ ಓಡುತ್ತವೆ.. ಹೇಳಿದ ಎಲ್ಲ ಸಂಗತಿಗಳು ಕುತೂಹಲಕಾರಿ.ಆದರೆ ನಿರೂಪಣೆ ಇನ್ನೂ ಚೂರು ಮನಸ್ಸಿಗೆ ತಾಕಬೇಕು..ಕೊನೆಯ ಐದೂ ಕವಿತೆಗಳು ಇಷ್ಟವಾದವು.ರಾಜೇಶ್ವರಿಗೆ ಕವಿತೆಯಲ್ಲಿ ಬಹು ಒಳ್ಳೆಯ ಭವಿಷ್ಯವಿದೆ..ಈಗಿನ ಮಕ್ಕಳ ಕವಿತಾ ಶಕ್ತಿ ಕುರಿತು ಕುತೂಹಲ ಮತ್ತು ಹೆಮ್ಮೆ ನಮಗೆ.

  2. ಎಲ್ಲ ಕವನಗಳೂ ಅನುಭವದ ನವಿರನ್ನೊಳಗೊಂಡಿದೆ. ಅದರಲ್ಲೂ ಐದನೆಯ ಕವನ “ಕಾಟು ಮಾವೆಂದರೆ……..” ಬಲೂ ಇಷ್ಟವಾಯಿತು. ಹಳ್ಳಿಯ ತಪ್ಪಲಿನಲ್ಲಿ ಬೆಳೆದ ಹೆಣ್ಣು ಮಗಳೊಬ್ಬಳಲ್ಲಿ ಸ್ಪುರಿಸುವ ತದ್ರೂಪಿ ಭಾವಗಳು ಗಿಡ, ಮರ, ಪಕ್ಷಿ, ಪ್ರಾಣಿ,ತೋಟ,ಗದ್ದೆ ಇವುಗಳೇ ಗಿರಕಿ ಹೊಡೆಯುತ್ತಿರುತ್ತವೆ. ನಾನೂನೂ ಏನಾದರೂ ಮಾಡಬೇಕೆಂಬ ತುಮುಲ, ಲವಲವಿಕೆ. ಇಂತಹ ಸುಂದರ ಚಿತ್ರಣ ಕವಿ ಮನ ತಾಕಿದೆ. ಓದುಗರು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಸೂಪರ್.

    ನವ್ಯ ಕವಿಗಳಿಗೆ ಅವರ ಕವನ ಮುಂದಿಟ್ಟು ವಿಮರ್ಶೆ ಮಾಡಿಸಿ ಪ್ರೋತ್ಸಾಹ ನೀಡುತ್ತಿರುವ ಅವಧಿಗೆ ನನ್ನದೊಂದು ಸಲಾಂ.

Leave a Reply