ಮತಗಟ್ಟೆಗೆ ಹೋಗುವಾಗ ಸುಳ್ಳುಗಳ ಕಳಚಿಟ್ಟು ಹೋಗಿ..

ಶಾನುಭೋಗನ ಸುಳ್ಳು ಮತ್ತು ಮನುಷ್ಯ ನಾಯಿಗೆ ಹುಟ್ಟಿದ ಕಥೆ..!

ಒಂದು ಹಳ್ಳಿಯಲ್ಲಿ ಓರ್ವ ಶಾನುಭೋಗನಿದ್ದ. ಅವನ ಬಗ್ಗೆ ಊರಿಗೆ ಊರೇ ತುಂಬಾ ಗೌರವ ಇಟ್ಟುಕೊಂಡಿತ್ತು. ಆತನೊಬ್ಬ ಮಹಾನ್ ಬುದ್ದಿವಂತ ಎಂಬ ಕಾರಣಕ್ಕೊ ಏನೋ ಹಳ್ಳಿಯ ಮುಗ್ದ ಜನ ಆತನ ಮಾತಿನ ಮೇಲೆ ತುಂಬಾ ಭರವಸೆ ಇಟ್ಟುಕೊಂಡಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡಿದ್ದ ಶಾನುಭೋಗ ಆ ಹಳ್ಳಿಯಲ್ಲಿ ಅವೆನೆದುರಿಗೆ ಯಾರಿಬ್ಬರೂ ಪರಸ್ಪರ ಸ್ನೇಹ, ಸಮರಸದಿಂದ ಇರುವಂತಿರಲಿಲ್ಲ. ಸುಳ್ಳುಗಳನ್ನು ಬಿತ್ತುತ್ತಾ ಒಬ್ಬರಿಗೊಬ್ಬರಿಗೆ ಇಲ್ಲಸಲ್ಲದ ಚಾಡಿ ಹೇಳಿ, ಅವರ ನಡುವಿನ ಸ್ನೇಹ-ಸಂಬಂಧವನ್ನು ಮುರಿದು ಹಾಕಿ, ಅವರು ಬಡಿದಾಡುವುದನ್ನು ನೋಡಿ ಖುಷಿ ಪಡುತ್ತಿದ್ದ.

ಆ ಹಳ್ಳಿಯಲ್ಲಿ ಯಾರಾದರೂ ಪರಸ್ಪರ ಅನ್ಯೋನ್ಯವಾಗಿರುವುದು ಕಂಡರೆ ಅವರಿಬ್ಬರ ನಡುವೆ ಬೆಂಕಿ ಹಚ್ಚಿಬಿಡದೆ ಇರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಈ ಶಾನುಭೋಗ ಕುಶಲಮತಿ. ಜನರು ಪ್ರಶ್ನಿಸಲಾಗದಷ್ಟರ ಮಟ್ಟಿಗೆ ಸುಳ್ಳುಗಳನ್ನು ಸೃಷ್ಟಿಸಿ ಗಂಡ -ಹೆಂಡತಿಯಿಂದ ಹಿಡಿದು ಅಣ್ಣ-ತಮ್ಮಂದಿರ ನಡುವೆ, ಜಾತಿ-ಜಾತಿಗಳ ನಡುವೆ , ಧರ್ಮ-ಧರ್ಮಗಳ ವರೆಗೂ ಆ ವ್ಯಕ್ತಿ ಸುಳ್ಳುಗಳನ್ನು, ಅಪನಂಬಿಕೆಗಳನ್ನು ಬಿತ್ತಿ ತನ್ನ ಕಾರ್ಯ ಸಾಧಿಸಿಕೊಳ್ಳುತ್ತಾ ಬರುತ್ತಿದ್ದ. ಇದೊಂದು ನಿತ್ಯದ ಕೆಲಸ ಅವನಿಗೆ. ಆದರೆ ಆತ ಮಾತ್ರ ತುಂಬಾ ಜಾಣ್ಮೆಯಿಂದ ಅವನು ಮಾತ್ರ ಹಳ್ಳಿಯಲ್ಲಿ ಎಲ್ಲರಿಂದಲೂ ಗೌರವ ಪಡೆಯುತ್ತಾ ಊರಿಗೆ ಯಜಮಾನನಂತೆ ಓಡಾಡಿಕೊಂಡಿರುತ್ತಿದ್ದ. ಮತ್ತು ತನಗೆ ತಾನು ಎಷ್ಟು ಬುದ್ದಿವಂತ ಎಂದು ಬೀಗುತ್ತಿದ್ದ.

ಹೀಗೆ ನಡೆದಿರುವಾಗ..
ಆ ಹಳ್ಳಿಯ ಹುಡುಗನೊಬ್ಬನಿಗೆ ಅವನ ಕುಟುಂಬಸ್ಥರು ಪಕ್ಕದ ಹಳ್ಳಿಯಿಂದ ಹುಡುಗಿಯೊಂದ ತಂದು ಅದ್ದೂರಿಯಾಗಿ ಮದುವೆ ಮಾಡಿದರು. ಇಡೀ ಹಳ್ಳಿಗೆ ಹೋಳಿಗೆ -ಹುಗ್ಗಿ ಊಟ ಹಾಕಿಸಿದರು. ಒಳ್ಳೆಯ ಜೋಡಿ ಎಂದು ಊರಿಗೆ ಊರೇ ಮಾತನಾಡಿಕೊಂಡಿತು. ಈಡು-ಜೋಡು ಚನ್ನಾಗಿದೆ. ‘ಸಾಕ್ಷಾತ್ ಶಿವ-ಪಾರ್ವತಿ ನೋಡ್ದಾಂಗಾತು..’ ಎಂದು ಕೊಂಡಾಡಿದ ಬಂಧು-ಬಳಗ, ನೆಂಟ್ರಿಷ್ಟು, ಊರು ಜನ ಎಲ್ಲಾ ಕಣ್ತುಂಬಿ ಹರಸಿ ಹೋದರು. ಮದುವೆಯ ನಂತರದ ಕೆಲವೇ ದಿನಗಳು ಹೊಸ ಹೆಣ್ಣು-ಗಂಡು ಪರಸ್ಪರ ರತ್ನಪಕ್ಷಿಗಳಂತೆ ಸರಸ-ಸಲ್ಲಾಪಗಳಿಂದಿರಲು ಶಾನುಭೋಗನ ಕಣ್ಣು ಬಿದ್ದಿತು.

ಮಧುಮಗ ಗದ್ದೆಯಲ್ಲಿ ಬದಕಟ್ಟುವಾಗ ಹಾದು ಬರುತ್ತಿದ್ದ ಶಾನುಭೋಗನ ಕಣ್ಣಿಗೆ ಬಿದ್ದ.

“ಏನಪ್ಪಾ. ಮಧುಮಗ ಚನ್ನಾಗಿದೆಯಾ?”

ಹುಡುಗ: “ಹ್ಞುಂ.. ಶಾನುಭೋಗ್ರೆ.. ಚನ್ನಾಗಿದಿನಿ, ನನಗೇನು ಕಮ್ಮಿ. ರತ್ನದಂತ ಹುಡುಗಿ, ಕಣ್ಣ ರೆಪ್ಪೆಗಿಂತಲೂ ಚನ್ನಾಗಿ ನೋಡ್ಕೊಳೋ ಬೀಗರು ಸಿಕ್ಕವ್ರೆ. ನನಗೇನು, ಚನ್ನಾಗಿದಿನಿ.”

ಶಾನುಭೋಗ: “ಚನ್ನಾಗಿರಪ್ಪ ನೀನು , ನಾನಂತೂ ನಿಮ್ಮ ಜೋಡಿ ನೋಡಿ ಕಣ್ತುಂಬಿಕೊಂಡೆ. ಭಗವಂತ ಹೇಳಿ ಮಾಡ್ಸಿದ್ದು ಜೋಡಿ ನಿಮ್ದು, ಹಾಲು-ಜೇನು ಸರ‍್ಸಿದ್ಹಾಂಗೈತೆ…
ಆದ್ರೆ…., ನಿಂಗೆ ಇಂತಹ ಅನ್ಯಾಯ ಆಗಬರ‍್ದಿತ್ತು ಕಣಪ್ಪ!. ಚಿನ್ನದಂತ ಹುಡುಗ ನೀನು , ನಿಮ್ಮಪ್ಪ ನಿನಗೆ ಅನ್ಯಾಯ ಮಾಡಿಬಿಟ್ಟ. ಅದರ‍್ಲಿ ಬಿಡು,
ಏನೋ ನೀವು ಗಂಡ-ಹೆಂಡ್ತಿ ಚಂದಾಗಿರಿ. ಅಷ್ಟೆ ಸಾಕು”

ಗಾಬರಿಗೊಂಡ ಹುಡುಗ “ಏನ್ ಶಾನುಭೋಗ್ರೆ ಹೀಂಗೇ ಹೇಳ್ತಿರಾ? , ಅಂತದ್ದೇನು ಅನ್ಯಾಯ ಆಗಿದ್ದು ಈಗ,? ನಮ್ಮಪ್ಪ ಏನ್ ಮಾಡುದ ?”

ಹುಡುಗ ಶಾನುಭೋಗನಿಗೆ ಗಂಟು ಬಿದ್ದ.

ಶಾನುಭೋಗ: “ ಅಂತಹ ದೊಡ್ಡ ವಿಚಾರ ಏನಿಲ್ಲ, ನಿಮ್ಮಪ್ಪ ನಿನಗೆ ಕುಲಸ್ಥರಲ್ಲೆ ಒಂದು ಹುಡುಗಿ ಮದುವೆ ಮಾಡ್ಕಬೇಕಿತ್ತು. ಹೋಗಿ ಹೋಗಿ ಉಪ್ಪಾರು ಜಾತಿಗೆ ಸೇರಿದ ಹುಡುಗಿ ತಂದು ಮದುವೆ ಮಾಡಿದಾನೆ. ಎಂತಹ ಅನ್ಯಾಯ ಆಗಿಬಿಡ್ತು. ಇರ‍್ಲಿ ಬಿಡು ಹುಡುಗಿ ತುಂಬಾ ಒಳ್ಳೆಳು, ಸುಂದರವಾಗವ್ಳೆ.. ಹೆಂಗೋ ಸಂಸಾರ ಮಾಡ್ಕೊಂಡ್ ಹೋಗು..”

ಹುಡುಗ: “ಶಾನುಭೋಗ್ರೆ ನಾನು ಮದುವೆಯಾಗಿರೋದು ನಮ್ ಜಾತಿ ಹುಡುಗಿನೇ..”

ಶಾನುಭೋಗ: “ಆಯ್ಯೊ ನಿಂಗ್ ಅರ್ಥಾಗೋಲ್ಲ ಕಣಪ್ಪ. ಹುಡುಗಿ ಅವ್ವ ನಿಮ್ಮ ಜಾತಿಯೋಳೆ. ಆದರೆ ಆ ಹುಡುಗಿ ಉಪ್ಪಾರ್ ಜಾತಿಯವನಿಗೆ ಹುಟ್ಟಿದವಳು ಅಂದ್ ಮ್ಯಾಕೆ ಹುಡುಗಿ ನಿಮ್ ಜಾತಿ ಹೇಂಗಾದಾಳು??

(ಶಾನುಭೋಗನ ಮಾತು ಹುಡುಗನ್ನು ಗೊಂದಲ್ಲಕ್ಕೆ ಸಿಲುಕಿಸಿತು. ಏನೊಂದು ಅರ್ಥವಾಗದಂತೆ ಕಂಗಾಲಾದ)
‘ ಅವಳು ಉಪ್ಪಾರ ಜಾತಿಯವನಿಗೆ ಹುಟ್ಟಿದವಳು ಎಂದು ಗೊತ್ತಾಬೇಕಾದ್ರೆ ಇವತ್ತು ರಾತ್ರಿ ನೀನು ಅವಳ ಕೆನ್ನೆ ನೆಕ್ಕಿ ನೋಡು . ಅವಳ ಕೆನ್ನೆ ಉಪ್ಪುಪ್ಪು ಇರುತ್ತೆ. ಆಗ ನನ್ನ ಮಾತು ಸತ್ಯ ಅಂತ ಗೊತ್ತಾಗುತ್ತೆ., ಆದ್ರೂ ಹುಡುಗಿ ಬೆಳಂದಿಂಗಳಿನಂತವಳು. ಅಂತಹ ರೂಪವತಿ ಇನ್ನೆಲ್ಲೂ ಇಲ್ಲ. ಬಹಳ ಒಳ್ಳೆಯ ಹುಡುಗಿ ಕಣಪ್ಪ….. , ನಿನಗೆ ಇಂತಹ ಅನ್ಯಾಯ ಆಗಬಾರದಿತ್ತು .ಅಷ್ಟೆಯಾ” ಎಂದು ಹುಡುಗನ ತಲೆಗೆ ಹುಳ ಬಿಟ್ಟು ಶಾನುಭೋಗ ಜಾಗ ಖಾಲಿ ಮಾಡಿದ.

ಅದೇ ಹೊತ್ತಿಗೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಗಂಡನಿಗೆ ಬುತ್ತಿ ಹೊತ್ತಿಕೊಂಡು ಗದ್ದೆಸಾಲಿನಲ್ಲಿ ಬರುತ್ತಿದ್ದ ಮಧುಮಗಳು ಶಾನುಭೋಗನಿಗ ಎದುರಾದಳು.
ಶಾನುಭೋಗ: ‘ಏನವ್ವ ಚನ್ನಾಗಿದಿಯಾ? ,ಇಂತಹ ಖುಷಿಯಿಂದ ಗಂಡುಗೆ ಬುತ್ತಿ ತಗೊಂಡು ಹೊರಟಿದಿಯಾ.. ನೋಡಾಕೆ ಎರಡು ಕಣ್ಣು ಸಾಲ್ದು “

ಹುಡುಗಿ: “ಹ್ಞೂಂ, ಶಾನುಭೋಗ್ರೆ, ನನಗೇನು ಕಮ್ಮಿ, ಕಣ್ಣರೆಪ್ಪೆಗಿಟ್ಟುಕೊಂಡು ಕಾಯೋ ಗಂಡ, ಬಂಗಾರದಂತ ಅತ್ತೆ ಮಾವ ಇರುವಾಗ .”

ಶಾನುಭೋಗ: “ಹೀಂಗೆ ನೀವು ಚನ್ನಾಗಿರಿ , ಒಳ್ಳೆ ಗಂಡ ಸಿಕ್ಕವನೆ ಕಣವ್ವ . ಚಿನ್ನದಂತ ಹುಡುಗ ಒಂದು ಕೆಟ್ಟ ಚಟ ಇಲ್ಲ. ಅದೆಲ್ಲಾ ಸರಿ, ಆದ್ರೆ ನಿನಗೆ ಹೀಂಗ್ ಅನ್ಯಾಯ ಆಗಬಾರದಿತ್ತು.! ನಿಮ್ಮಪ್ಪ ನಿನಿಗೆ ಇಂತಹ ಅನ್ಯಾಯ ಮಾಡಬಾರದಿತ್ತು”

ಶಾನುಭೋಗನ ಮಾತು ಕೇಳಿ ಕಳವಳಗೊಂಡ ಹುಡುಗಿ ಒಂದೇಟಿಗೆ ಕುಸಿದು ಹೋದಳು.

ಹುಡುಗಿ: “ಏನ್ ಶಾನುಭೋಗ್ರೆ ಹೀಂಗೇಳ್ತಿರಾ? ಏನಾಯ್ತು ಈಗ ಅಂತದ್ದು ಅಂತ” ಹೇಳಿ ಎಂದು ಶಾನುಭೋಗನ ಬೆನ್ನತ್ತಿದಳು.

ಶಾನುಭೋಗ: “ಅಂತದ್ದೇನಿಲ್ಲ ಕಣವ್ವ. ನೀ ಮದುವೆಯಾಗಿರೋ ಹುಡುಗ ನಾಯಿ ಜಾತಿಗೆ ಹುಟ್ಟಿದವನು. ಹೋಗಿ ಹೋಗಿ ಅಂತೋನಿಗೆ ನಿಮ್ಮಪ್ಪ ನಿನ್ನ ಕೊಟ್ಟು ಮದುವೆ ಮಾಡಿಬಿಟ್ಟಿದಾನೆ. ಇದು ಅನ್ಯಾಯ ಅಲ್ವೆ.’
(ಹುಡುಗಿ ಅವಕ್ಕಾಗಿ ಬಿಟ್ಟಳು. ಶಾನುಭೋಗನ ಮಾತು ನಿರಾಕರಿಸುತ್ತಲೆ ಗೊಂದಲಕ್ಕೀಡಾದಳು)

‘ನಿನಗೆ ಸತ್ಯ ಗೊತ್ತಾಗಬೇಕಾದ್ರೆ ಇವತ್ತು ರಾತ್ರಿ ಮಲಗಿದಂತೆ ಎಚ್ಚರವಾಗಿರು ಅವನು ನಾಯಿ ತರ ನಿನ್ನ ಕೆನ್ನೆ ನೆಕ್ಕಕ್ಕೆ ಬರ‍್ತಾನೆ. ಆಗ ಗೊತ್ತಾಗುತ್ತೆ .”
ಅಂದುಕೊಂಡ ಕೆಲಸ ಮುಗಿಸಿದ ಶಾನುಭೋಗ ಅಲ್ಲಿಂದ ಕಾಲ್ಕಿತ್ತ.

ಶಾನುಭೋಗ ಹಿಂಡಿದ ಹುಳಿಗೆ ಹಾಲು ಒಡೆದು ರಾಡಿಯಾಗಿತ್ತು. ಗಂಡ-ಹೆಂಡತಿ ಇಬ್ಬರೂ ರಾತ್ರಿ ನಿದ್ದೆಗೆ ಜಾರುವ ನಾಟಕ ಮಾಡಿದರು. ಒಂದೊತ್ತಿನಲ್ಲಿ ಎದ್ದ ಗಂಡ ಶಾನುಭೋಗ ಹೇಳಿದ ಮಾತಿನಂತೆ ಹೆಂಡತಿಯ ಜಾತಿ ಪರೀಕ್ಷೆಗೆ ಇಳಿದ. ಮಲಗಿದಂತಿದ್ದ ಹೆಂಡತಿಯ ಕೆನ್ನೆ ನೆಕ್ಕಿ ಆಕೆಯ ಜಾತಿ ಕಂಡು ಹಿಡಿಯಲು ಇನ್ನೇನು ತನ್ನ ನಾಲಿಗೆಯನ್ನು ಆಕೆಯ ಕೆನ್ನೆಗೆ ಸೋಕಿಸಬೇಕು, ಅಷ್ಟರಲ್ಲಿ ಗಂಡ ನಾಯಿಯಂತೆ ನಾಲಿಗೆ ಚಾಚಿ ನೆಕ್ಕಲು ಬರುತ್ತಾನೆ ಎಂದು ಪರೀಕ್ಷಿಸುವ ತಯಾರಿಯಲ್ಲೆ ಇದ್ದ ಹೆಂಡತಿಯೂ ತಟ್ಟನೆ ಕಣ್ ಬಿಟ್ಟಳು.

ಇಬ್ಬರಿಗೂ ಶಾನುಭೋಗ ಹೇಳಿದ ಜಾತಿಗಳು ಗುಣಗಳು ನಿಜವೆಂದು ಖಾತರಿಯಾಗಿ ಪರಸ್ಪರ ಬಡಿದಾಡಿಕೊಂಡರು. ‘ನೀನು ಉಪ್ಪಾರ ಜಾತಿಗೆ ಹುಟ್ಟಿದ್ದು, ನೀನು ನಾಯಿ ಜಾತಿಗೆ ಹುಟ್ಟಿದ್ದು ‘ ಎಂದು ರಹಸ್ಯ ಬಯಲಾದಂತೆ ಗಂಡ-ಹೆಂಡತಿ ಪರಸ್ಪರ ಮಾರಾಮಾರಿಗಿಳಿದರು. ಜಗಳ ಬೀಗರಿಗೂ ವಿಸ್ತರಿಸಿತು. ನೆಂಟರಿಗಷ್ಟೆ ಅಲ್ಲ ಅದೂ ಹಳ್ಳಿ-ಹಳ್ಳಿಗೂ ಹಬ್ಬಿ ಜಾತಿ ಜಗಳವಾಗಿ ಇಡೀ ಹಳ್ಳಿಯೇ ರಣರಂಗವಾಗಿ ಹೋಯಿತು. ಪರಿಸ್ಥಿತಿ ಕೈ ಮೀರಿ ಹೋಯಿತು.

ಹೀಗೆ ರಣರಂಗವಾದ, ಪರಸ್ಪರ ಅಪನಂಬಿಕೆಗಳಿಂದ ಅರಾಜಕಗೊಂಡ ಹಳ್ಳಿಯನ್ನು ಶಾನುಭೋಗ ಮಾತ್ರ ನಿರಾಂತಕವಾಗಿ ಆಳುತ್ತಿದ್ದ. (ಕೊನೆಗೊಮ್ಮೆ ಬುದ್ದಿವಂತನೊಬ್ಬ ಪಂಚಾಯ್ತಿ ಸೇರಿಸಿ ವಿಷಯ ಏನೆಂದು ಕೇಳಲು ಗೊತ್ತಾಗಿ ಉಪ್ಪಾರ್ ಜಾತಿಗೆ ಹುಟ್ಟಿದರೆ ದೇಹ ಉಪ್ಪಾಗಿರಲು ಸಾಧ್ಯವೆ?, ಮನುಷ್ಯ ನಾಯಿಗೆ ಹುಟ್ಟಲು ಸಾಧ್ಯವೇ? ಎಲ್ಲಾದ್ರೂ ಇದು ಉಂಟೇ ಎಂದು ವಿಷಯವನ್ನು ವೈಜ್ಞಾನಿಕವಾಗಿ ವಿವರಿಸಿ ,ಸುಳ್ಳಿಗೆ ಬಲಿಯಾದ ಹಳ್ಳಿಯ ಮುಗ್ದ ಜನರಿಗೆ ಸತ್ಯ ತಿಳಿಸಿದಾಗ ಇಂತಹ ಸುಳ್ಳು ಬಿತ್ತಿದ ಶಾನುಭೋಗನಿಗೆ ತಕ್ಕ ಶಾಸ್ತಿ ಮಾಡುತ್ತಾರೆ.ಅಲ್ಲಿಗೆ ಸುಖಾಂತ್ಯವಾಗುತ್ತದೆ. )

ಇದೊಂದು ಜನಪದ ಕತೆ. ಈ ಕತೆ ನಾನು ಚಿಕ್ಕವನಿದ್ದಾಗಲಿಂದಲೂ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದು ಹೋಗಿದೆ. ಸಮಾಜವು ಹೇಗೆ ಸುಳ್ಳುಗಳಿಗೆ ಬಲಿಯಾಗುತ್ತಾ ಹೋಗುತ್ತದೆ ಎಂಬ ದಟ್ಟ ಸಾಮಾಜಿಕ, ರಾಜಕೀಯ ದೃಷ್ಟಾಂತವನ್ನು ಕಟ್ಟಿಕೊಡುವ ಈ ಕತೆ ನನ್ನ ಮೆದುಳಿನ ನೆನಪಿನ ನರಬಳ್ಳಿಯಿಂದ ಜೀವ ಬಂದು ಸಂಚಾರಕ್ಕೆ ಹೊರಟಿದೆ. ವರ್ತಮಾನದಲ್ಲಿ ಈ ದೇಶವನ್ನು ಸುಳ್ಳುಗಳು ಆಳುತ್ತಿವೆ. ಮುಂದೆಯೂ ಆಳಲು ಮತ್ತೊಂದು ಮಹಾನ್ ಸುಳ್ಳುಗಳ ಸಂತತಿ ಹೊರಟಿದೆ.

ಕತೆಯಲ್ಲಿ ಬರುವ ಶಾನುಭೋಗರುಗಳು ಈಗ ದೇಶದ ತುಂಬಾ ಇದ್ದಾರೆ. (ಶಾನುಭೋಗರು ಎಂಬುದನ್ನು ಜಾತಿಗೆ ಸೀಮಿತಗೊಳಿಸಿಕೊಂಡರೆ ಅದಕ್ಕೆ ನಾನು ಹೊಣೆಯಲ್ಲ). ವ್ಯಕಿರೂಪವಾಗಿಯೂ ,ಸಂಸ್ಥೆ ರೂಪವಾಗಿಯೂ ನಮ್ಮಲ್ಲಿ ಒಡಕು ಬಿತ್ತುವ ಕೆಲಸವನ್ನು ಮಾಡುತ್ತಿದೆ. ಧರ್ಮ, ದೇವರು, ದೇಶಪ್ರೇಮ, ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ , ಭಗತ್ ಸಿಂಗ್ ಅವರುಗಳನ್ನೂ ಸುಳ್ಳಿನ ನೂಲ ನೇಯ್ಗೆಯಲ್ಲಿ ಚಿತ್ರವಾಗಿ ಮೆರೆಸಲಾಗುತ್ತಿದೆ. ಅಸಲಿಗೆ ನಮ್ಮ ದೇಶದ ಸೈನ್ಯ, ಸೈನಿಕರ ಶ್ರಮ, ಶೌರ‍್ಯಗಳನ್ನು ಸುಳ್ಳುಗಳ ಸಂತೆಯಲ್ಲಿ ಶಾನುಭೋಗ(ರು) ಮಾರ ಹೊರಟಿದ್ದಾನೆ. ಮತಗಟ್ಟೆಗೆ ಹೋಗುವಾಗ ಸುಳ್ಳುಗಳ ಕಳಚಿಟ್ಟು ಹೋಗಿ..

1 comment

  1. ಹ್ಹ ಹ್ಹ ಒಳ್ಳೇ ಕಥೆ.. ಇಂದಿನ ನೈಜ ಪರಿಸ್ಥಿತಿಗೆ ಕನ್ನಡಿ..

Leave a Reply