ಪತ್ರಿಕಾ ಸ್ವಾತಂತ್ರಕ್ಕೆ ಹನಿ ಕಣ್ಣೀರು..

ಹಿರಿಯ ಪತ್ರಕರ್ತರಾದ ಕಂ ಕ ಮೂರ್ತಿಅವರು ತಮ್ಮ ಪತ್ರಿಕೋದ್ಯಮದ ನೆನಪುಗಳನ್ನು ಬರಹಕ್ಕಿಳಿಸುತ್ತಿದ್ದಾರೆ.

ಹಲವು ದಶಕಗಳಿಂದ ಸಮಾಜಮುಖಿ ಪತ್ರಿಕೋದ್ಯಮದ ದಾರಿಯಲ್ಲಿ ಸಾಗುತ್ತಿರುವ ಕಂ ಕ ಮೂರ್ತಿ ಅವರ ನೆನಪುಗಳು ಇಂದಿನ ಮಾಧ್ಯಮ ಪೀಳಿಗೆಗೆ ಪಾಠ ಹಾಗೂ ದಾರಿದೀಪ.

ಸಧ್ಯದಲ್ಲೇ ಪ್ರಕಟವಾಗುತ್ತಿರುವ ಅವರ ಕೃತಿಯ ಆಯ್ದ ಭಾಗ ಇಲ್ಲಿದೆ-

ಕಂ ಕ ಮೂರ್ತಿ 

‘ಗಿರಿವಾರ್ತಾ’ ಪತ್ತಿಕೆಯಲ್ಲಿ ವರದಿಗಾರನಾಗಿ ಕೆಲಸಕ್ಕೆ ಸೇರಿದ್ದ ನನಗೆ ರಾಮಯ್ಯ ಒಂದು ದಿನ ಆಚಾನಕ್ ಆಗಿ ಸಿಕ್ಕರು. ಅವರು ಆಗ ಚಿಕ್ಕಮಗಳೂರಿನ ಕ್ರಿಶ್ಚಿಯನ್ ಕಾಲೋನಿಯಲ್ಲಿ ರೇಡಿಯೋ ರಿಪೇರಿ ಅಂಗಡಿ ಇಟ್ಟುಕೊಂಡಿದ್ದರು. ಕಪ್ಪಗೆ ಎತ್ತರಕ್ಕೆ ಇದ್ದ ರಾಮಯ್ಯ  ತಮ್ಮನ್ನು ಲೋಹಿಯಾವಾದಿ ಎಂದು ಹೇಳಿಕೊಳ್ಳುತ್ತಿದ್ದರು. ಒಂದು ಲಡಕಾಸಿ ಲೂನಾದಲ್ಲಿ ಓಡಾಡುತ್ತಿದ್ದ ಈ ಆಸಾಮಿ ಆ ಹೊತ್ತಿಗೆ ಚಿಕ್ಕಮಗಳೂರಿನಲ್ಲಿ ವಿಚಾರವಾದಿ ಎಂದೇ ಪರಿಚಿತ. ಪೆರಿಯಾರ್, ಲೋಹಿಯಾರ ಬಗ್ಗೆ ಉದ್ದುದ್ದ ಭಾಷಣ ಬಿಗಿಉಯುತ್ತಿದ್ದ ಈ ವ್ಯಕ್ತಿ ಒಂದು ರೀತಿಯಲ್ಲಿ ವಿಲಕ್ಷಣ. ರೇಡಿಯೋ ರಿಪೇರಿಯಲ್ಲಿ ನಿಷ್ಣಾತರಾಗಿದ್ದ ಈ ವ್ಯಕ್ತಿ ಯಾವ ಕೆಲಸವನ್ನೂ ಸರಿಯಾಗಿ ಮಾಡುತ್ತಿರಲಿಲ್ಲ ಎಂಬ ಪ್ರತೀತಿಯೂ ಇತ್ತು.

ಚಿಕ್ಕಮಗಳೂರು ಮತು ಸುತ್ತಮುತ್ತಲಿನ ಕಾಫಿತೋಟಗಳಿಗೆ ದೂರದ ತಮಿಳುನಾಡಿನಿಂದ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರು ತಮ್ಮ ಹಾಳಾದ ರೇಡಿಯೋವನ್ನು ರಾಮಯ್ಯ ಅವರ ಶಾಪ್‌ಗೆ ಹೊತ್ತು ತಂದು ರಿಪೇರಿಗೆ ಕೊಡುತ್ತಿದ್ದರು. ಆದರೆ ಅವು ರಿಪೇರಿಯಾಗಿ ವಾಪಸ್ ಹೋಗಿದ್ದು ಕಡಿಮೆ. ಅವರು ಕೊಟ್ಟ ದಿನದಂದು ರೇಡಿಯೋ ತೆಗೆದುಕೊಂದು ಹೋಗಲು ಬಂದರೆ ಅಗಾಧವಾದ ರೇಡಿಯೋಗಳ ರಾಶಿಯನ್ನು ತೋರಿಸುತ್ತಿದ್ದ ರಾಮಯ್ಯ ಇದರಲ್ಲಿ ನಿಮ್ಮ ರೇಡಿಯೋ ಇದ್ದರೆ ತೆಗೆದುಕೊಂಡು ಹೋಗಿ ಎಂದು ಸವಾಲು ಹಾಕುವ ರೀತಿಯಲ್ಲಿ ಹೇಳುತ್ತಿದ್ದರು. ಆ ದೊಡ್ಡ ರಾಶಿಯಲ್ಲಿ ತಮ್ಮ ರೇಡಿಯೋಗಾಗಿ ಶೋಧಿಸಿ ಸುಸ್ತಾದ ಕಾರ್ಮಿಕರು ಮತ್ತೊಮ್ಮೆ ಬರುವುದಾಗಿ, ಅಷ್ಟರೊಳಗಾಗಿ ತಮ್ಮ ರೇಡಿಯೋ ಹುಡುಕಿ  ಇಟ್ಟಿರಬೇಕು ಎಂದು ಹೇಳಿ ಶಪಿಸುತ್ತ ಹೋಗುವುದು ಸಾಮಾನ್ಯವಾಗಿತ್ತು.

ಇಂತಹ ರಾಮಯ್ಯ ಒಂದು ದಿನ ತಮ್ಮ ಕೈಚಳಕ ತೋರಿಸಿ ರೇಡಿಯೋದಲ್ಲಿ ದೇವರು ಸತ್ತ ಎಂದು ಪ್ರಚಾರ ಮಾಡಿದ್ದರು. ಗುಪ್ತಚಾರ ಇಲಾಖೆಯವರು ಈ ಕೃತ್ಯ ನಡೆಸಿ ಅವರಿಗಾಗಿ ಹುಡುಕಿ ಸುಮ್ಮನಾಗಿದ್ದರು ಎಂಬ ಪ್ರತೀತಿಯೂ ಇತ್ತು. ನನಗೆ ಎದುರಾದಾಗಲೆಲ್ಲಾ ಲೋಹಿಯಾ, ನಂಜುಂಡಸ್ವಾಮಿ, ತೇಜಸ್ವಿ, ಪೆರಿಯಾರ್ ಬಗ್ಗೆ ಗಂಟೆಗಟ್ಟಲೆ ಭಾಷಣ ಹೊಡೆಯುತ್ತಿದ್ದ ರಾಮಯ್ಯ ನನ್ನ ಪಾಲಿಗೆ ಬೇಧಿಸಲಾಗದ ನಿಗೂಢವಾಗಿದ್ದರು. ಸದಾ ಕುತೂಹಲದ ಖಜಾನೆ ಆಗಿದ್ದರು.

ರಾಮಯ್ಯ ಆಗ ಕಲ್ಲಚ್ಚಿನಲ್ಲಿ ಹೊರತರುತ್ತಿದ್ದ ವಾರ ಪತ್ರಿಕೆ ತನ್ನ ವೈಚಾರಿಕ ನಿಲುವಿನಿಂದ ಕೆಲವರಿಗೆ ಆಕರ್ಷಕವಾಗಿತ್ತು. ಕೋಟೆ ಬಡಾವಣೆಯ ಬಿಳಿ ಸುಣ್ಣ ಬಳಿದ ತಮ್ಮ ಸಣ್ಣ ಮನೆಯನ್ನು ಕಚೇರಿಯನ್ನಾಗಿಸಿಕೊಂಡು ಪತ್ರಿಕೆ ತರುತ್ತಿದ್ದ ಅವರು ತಮ್ಮ ಕಚೇರಿಯನ್ನು ವೈಟ್ ಹೌಸ್ ಎಂದು ಕರೆಯುತ್ತಿದ್ದರು.

ನೀವು ‘ಗಿರಿವಾರ್ತಾ’ ಬಿಟ್ಟು ಬಿಡಿ ನಮ್ಮ ಪತ್ರಿಕೆ ವರದಿಗಾರರಾಗಿ ಬನ್ನಿ ನಿಮ್ಮಂತ ಕ್ರ್ರಾಂತಿಕಾರಿಗಳು ನಮಗೆ ಬೇಕು ಎಂದು ರಾಮಯ್ಯ  ಅಂದು ನೀಡಿದ ಆಹ್ವಾನವನ್ನು ನಿರಾಕರಿಸಲು ನನಗೆ ಆಗಲಿಲ್ಲ. ಇನ್ನೂ ಒಂದು ಮಾತನ್ನು ಸೇರಿಸಿದ ರಾಮಯ್ಯ ಈ ಊರಿನ ಕಾಫಿ ಪ್ಲಾಂಟರ್‌ಗಳ ವಿರುದ್ಧ ಜೋರಾಗಿ ಬರೆಯಿರಿ.. ಭಯಬೇಡ ನಿಮಗೆ ಆತ್ಮರಕ್ಷಣೆಗೆ ಪಿಸ್ತೂಲ್ ಕೊಡಿಸುತ್ತೇನೆ ಎಂದು ಹೇಳಿ ಹುರಿದುಂಬಿಸಿದರು. ಬರವಣಿಗೆಯಲ್ಲಿ ಕ್ರಾಂತಿಯ ಅಸಾಧ್ಯ ಕನಸು ಕಾಣುತ್ತಿದ್ದ ನನಗೆ ಆಗ ರಾಮಯ್ಯ ನನ್ನ ಹೋರಾಟದ ಹಾದಿ ಹೊಸ ಹೀರೋನಂತೆ ಕಂಡರು.

ನಾನು ಆ ದಿನಗಳಲ್ಲಿ ಬಹುತೇಕವಾಗಿ ಶಂಕರಪುರದ ‘ಗಿರಿವಾರ್ತಾ’ ಕಚೇರಿಯಲ್ಲಿಯೇ ಮಲಗುತಿದ್ದೆ. ಅಂಬೇಡ್ಕರ್ ಶಾಲೆಯಿಂದ ನನ್ನ ರಾತ್ರಿ ವಾಸ್ತವ್ಯ ಅಲ್ಲಿಗೆ ಬದಲಾಗಿತ್ತು. ಕೆಲವು ದಿನ ಅಗ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾಗಿದ್ದ ಯಲಗುಡಿಗೆ ಮಂಜಯ್ಯ ಅವರ ಹಾಸ್ಟೆಲ್‌ನಲ್ಲಿ ತಂಗುತಿದ್ದೆ. ಮಂಜಯ್ಯ ಒಂದು ದೊಡ್ಡ ತಟ್ಟೆಯಲ್ಲಿ ತಮ್ಮ ಪಾಲಿನ ಅನ್ನ ಸಂಬಾರ್ ಹಾಸಿಕೊಂಡು ಬಂದು ಹಾಸ್ಟೆಲ್‌ನ ಊಟದ ಟೇಬಲ್‌ನಲ್ಲಿ ನನ್ನ ಕೂರಿಸಿಕೊಳ್ಳುತ್ತಿದ್ದರು.

ಸಾಂಬಾರ್ ಮಿಶ್ರಿತ ಅನ್ನದ ರಾಶಿಯನ್ನು ಕೈನಿಂದ ಸಮಾ ಅರ್ಧಪಾಲು ಮಾಡುತ್ತಿದ್ದರು. ಆ ಮೇಲೆ ನಮ್ಮಿಬ್ಬರ ಊಟ ಶುರು ಆಗುತಿತ್ತು. ಒಂದೇ ತಟ್ಟೆಯಲ್ಲಿ ಹಲವಾರು ದಿನ ನಮ್ಮಿಬ್ಬರ ಸಹಭೋಜನ ಮುಂದುವರೆದಿತ್ತು. ಡಿಗ್ರಿ ಮುಗಿದ ನಂತರ ಪತ್ರಿಕೋದ್ಯಮ ಪ್ರವೇಶಿಸಿದ ಮಂಜಯ್ಯ ನಂತರ ‘ಮುಂಗಾರು’ ವರದಿಗಾರಿಗಾರಿ ಸೇರಿ ಪ್ರ್ರಾಮಾಣಿಕವಾಗಿ ಕೆಲಸ ಮಾಡಿದರು. ಕೆಲವು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಕಷ್ಟಕಾಲದಲ್ಲಿ ಆಸರೆ ನೀಡಿದ್ದ ನನಗೆ ಅವರು ಒಂದು ರೀತಿಯಲ್ಲಿ ಅಣ್ಣನಂತೆ ಇದ್ದರು.

ರಾಮಯ್ಯ ಅವರ ಆಹ್ವಾನ ಒಪ್ಪಿಕೊಂಡ ನಾನು ‘ಗಿರಿವಾರ್ತಾ’ ಹಾಗೂ ಮಂಜಯ್ಯನ ಹಾಸ್ಟೆಲ್‌ಗೆ ಗುಡ್‌ಬೈ ಹೇಳಿ ರಾಮಯ್ಯ  ಅವರ ವೈಟ್ ಹೌಸ್ ಸೇರಿಕೊಂಡೆ. ಅಲ್ಲ ನನಗೆ ಚಾಪೆ ಹಾಗೂ ಒಂದು ಬೆಡ್‌ಶೀಟ್ ಒದಗಿಸಲಾಯಿತು.

ಪತ್ರಿಕೆಯ ಏಕೈಕ ಸಂಪಾದಕ ರಾಮಯ್ಯ ಏಕೈಕ ವರದಿಗಾರ ನಾನು. ಪತ್ರಿಕೆ ಹಂಚಲು ಒಬ್ಬ ಹುಡಗ ನೇಮಕವಾಗಿದ್ದ. ಆಗ ೧೯೮೬. ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತ ಚಳುವಳಿ ಜೋರಾಗಿ ನಡೆದಿತ್ತು. ಜಿಲ್ಲಾಧಿಕಾರಿಯಾಗಿದ್ದ ಪಾರ್ಥಸಾರಥಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಅಂದಿನ ಸರ್ಕಾರದ ಹುಕುಂನಂತೆ ರೈತ ಚಳುವಳಿ ಹತ್ತಿಕ್ಕಲು ಕಾರ್ಯಕ್ರಮ ರೂಪಿಸಿದ್ದರು. ಎಸ್. ಎಸ್.ಪಾವಟೆ ಎಂಬ ಖಡಕ್ ವ್ಯಕ್ತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಸರ್ಕಲ್ ಇನ್ಸೆಪೆಕ್ಟರ್ ಆಗಿದ್ದ ಚಂದ್ರೇಗೌಡ ಎಸ್ಪಿ  ಹಾಗೂ ಡಿಸಿಗಳ ಸೂಚನೆಯಂತೆ ರೈತ ಚಳವಳಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದರು.

ಚಳುವಳಿಗಾರರ ಬಂಧನ. ಲಾಠಿಚಾರ್ಜ್ ನಿತ್ಯದ ಸಂಗತಿಯಾಗಿತ್ತು. ಚಿಕ್ಕಮಗಳೂರಿಗೆ ಬಂದಿದ್ದ ನಂಜುಂಡಸ್ವಾಮಿ ಅವರನ್ನು ನಡುರಾತ್ರಿ ಬಂಧಿಸಿ ಲಾಕಪ್‌ಗೆ ತಳ್ಳಲಾಗಿತ್ತು. ದರ್ಪಕ್ಕೆ ಹೆಸರಾಗಿದ್ದ ಚಂದ್ರೇಗೌಡ ಗಾಂಧಿ ಫೋಟೋ ಇಟ್ಟುಕೊಂಡು ಚಳವಳಿ ಮಾಡುತ್ತಿದ್ದ ರೈತರ ಮೇಲೆ ದಬ್ಬಾಳಿಕೆ ನಡೆಸಿದ್ದರು. ಆ ಸಂದರ್ಭದಲ್ಲಿ ಆವರು ಗಾಂಧಿ ಫೋಟೊಗೆ ಉಗಿದರು ಎನ್ನುವುದು ದೊಡ್ಡ ಸುದ್ದಿ.

ಪೊಲೀಸರ ಈ ದೌರ್ಜನ್ಯದ ವಿರುದ್ದ ಸಮಗ್ರ ವರದಿ ಬರೆಯಬೇಕು ಎಂದ ರಾಮಯ್ಯ ನನಗೆ ಸೂಚಿಸಿದರು. ನನಗೆ ಕೊಟ್ಟ ಮೊದಲ ಅಸೈನ್‌ಮೆಂಟ್ ಅದು. ನಾನು ಎರಡು ದಿನಗಳ ಕಾಲ ಓಡಾಡಿ ರೈತ ಮುಖಂಡರನ್ನು ಮಾತನಾಡಿಸಿ ದೌರ್ಜನ್ಯದ ವಿವರ ಸಂಗ್ರಹಿಸಿದೆ. ಆಗ ದೇವರಾಜ್, ಸಕಲೇಶಪುರ ವಿಶ್ವನಾಥ್ ಮುಂತಾದ ನಾಯಕರು ಚಳುವಳಿ ನೇತೃತ್ವದ ವಹಿಸಿದ್ದರು. ನನ್ನ ವರದಿ ಸಿದ್ದವಾಯಿತು. ‘ಗಾಂಧಿಯ ನಾಡಿನಲ್ಲಿ ಹಿಂಸೆಯ ದರ‍್ಬಾರು’ ಎಂಬ ಶಿರೋನಾಮೆಯಲ್ಲಿ ನನ್ನ ಲೇಖನ ಪತ್ರಿಕೆಯ ಮುಖಪುಟದಲ್ಲಿ ಅರ್ಧ ಪೇಜು ಪ್ರಿಂಟಾಯಿತು. ಸ್ವತ: ವ್ಯಂಗ್ಯ ಚಿತ್ರಕಾರರಾಗಿದ್ದ ಸಂಪಾದಕರು ಇದಕ್ಕೊಂದು ಲಗತ್ತಾದ ಚಿತ್ರ ಬರೆದರು. ನನ್ನ ಹರಿತವಾದ ಲೇಖನಕ್ಕೆ ಮೆಚ್ಚಿ ಶಹಬಾಸ್‌ಗಿರಿ ಕೊಟ್ಟರು.

ಪತ್ರಿಕೆ ವಿತರಣೆಗೆ ಹೋಗುವ ಮುನ್ನ ರಾಮಯ್ಯ ‘ಬಾ ಮೂರ್ತಿ ಡಿಸಿ ಭೇಟಿ ಮಾಡಿ ಬರೋಣ. ಮೊದಲ ಪ್ರತಿಯನ್ನು ಅವರಿಗೆ ತೋರಿಸೋಣ. ಸರ್ಕಾರ ಪಾಠ ಕಲೀಲಿ’ ಎಂದು ನನ್ನನ್ನು ಹುರಿದುಂಬಿಸಿದರು. ನಾನು ಅವರ ಲೂನಾ ಏರು ಉತ್ಸಾಹದಿಂದಲೇ ಡಿಸಿ ಆಫೀಸ್ ತಲುಪಿದೆ, ಎಂದಿನಂತೆ ದೇಶಾವರಿ ನಗೆ ನಕ್ಕ ಡಿಸಿ ಪಾರ್ಥಸಾರಥಿ ನಮಗೆ ಕೂರುವಂತೆ ಆಸನ ತೋರಿಸಿದರು. ರಾಮಯ್ಯ  ತಮ್ಮ ಚೀಲದಿಂದ ಆ ವಾರದ ಇನ್ನು ಹಸಿಯಾಗಿಯೇ ಇದ್ದ ಆ ವಾರದ ಪತ್ರಿಕೆ ತೆಗೆದು ಡಿಸಿ ಮುಂದೆ ಹರಡಿದರು. ನನ್ನ ಲೇಖನ ನೋಡುತ್ತಲೆ ಪಾರ್ಥಸಾರಥಿ ಮುಖಚರ‍್ಯೆ ಬದಲಾಯಿತು. ಕಣ್ಣು ಕೆಂಪಗಾಯಿತು. ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಈ ರೈತ ವಿರೋಧಿ ಯಜ್ಞದ ಸಾರಥ್ಯವನ್ನು ಡಿಸಿ ಹಾಗೂ ಎಸ್ಪಿ ವಹಿಸಿಕೊಂಡಿದ್ದಾರೆ ಎಂಬ ಅಂಶ ಅವರನ್ನು ಕೆರಳಿಸಿತು. ಅವರು ಪೇಪರ್ ಅನ್ನು ರಾಮಯ್ಯ ಅವರತ್ತ ಎಸೆದು ‘ನೀವು ಸರ್ಕಾರದ ವಿರುದ್ಧ ಬರೆದಿದ್ದೀರಿ, ರೈತರು ಕಾನೂನು ಉಲ್ಲಂಘಿಸಿ ದಂಗೆ ಎದ್ದಿದ್ದಾರೆ. ಅದರ ಬಗ್ಗೆ ಚಕಾರ ಇಲ್ಲ, ನೀವು ಹೊರಡಬಹುದು’ ಎಂದು ಗುಡುಗಿದರು.

ಡಿಸಿ ಕಚೇರಿಯಿಂದ ವೈಟ್‌ಹೌಸ್‌ಗೆ ಬರುವವರೆಗೂ ಸಂಪಾದಕರು ನನ್ನ ಜತೆ ಒಂದೂ ಮಾತೂ ಆಡಲಿಲ್ಲ. ದಿವ್ಯ ಮೌನಕ್ಕೆ ಶರಣಾಗಿದ್ದರು. ಸ್ವಲ್ಪ ಹೊತ್ತಿಗೆ ಒಂದು ನಿರ್ಧಾರಕ್ಕೆ ಬಂದರು. ಮೂರ್ತಿ ಎಂದು ನನ್ನ ಕರೆದರು.  ಕಲ್ಲಿಚ್ಚಲ್ಲಿ ಮುದ್ರಿತವಾಗಿದ್ದ ಸುಮಾರು ೧ ಸಾವಿರ ಪ್ರತಿಗಳನ್ನು ನನ್ನ ಮುಂದೆ ಇಟ್ಟು ಇಂಕ್‌ರೊಲ್‌ನಲ್ಲಿ ನನ್ನ ಲೇಖನ ಪ್ರಿಂಟ್ ಅಗಿದ್ದ ಪತ್ರಿಕೆಯ ಇಡೀ ಅರ್ಧಭಾಗಕ್ಕೆ ಮಸಿ ಬಳಿದು ಅದು ಕಾಣಿಸದಂತೆ ಮಾಡಲು ಆದೇಶಿಸಿದರು. ಆವರು ಇನ್ನೊಂದು ಇಂಕ್ ರೋಲ್ ತೆಗೆದುಕೊಂಡು ಅದೇ ಕೆಲಸಕ್ಕೆ ಕುಳಿತರು. ಮರು ಮಾತನಾಡುವ ಸ್ವಾತಂತ್ರ  ನನಗೆ ಇರಲಿಲ್ಲ. ಕಣ್ಣಾಲಿಗಳಿಂದ ಹನಿಗಳು ತಟಪಟನೆ ಉದುರಿದವು. ಅಳು ಬಂದರೂ ತೋರಿಸಿಕೊಳ್ಳಲಿಲ್ಲ. ನಾನೇ ಬರೆದ ಲೇಖನವನ್ನು ಕೈಯಾರೆ ಅಳಿಸಿ ಹಾಕಿದೆ.

ಅರ್ಧ ಕಪ್ಪಾದ ಪತ್ರಿಕೆ ನಂತರ ವಿತರಣೆಗೆ ಹೋಯಿತು. ಪತ್ರಿಕಾ ಸ್ವಾತಂತ್ರ್ಯದ ಅರ್ಥ ಅಂದು ನನಗೆ ಹೊಳೆದಿದ್ದು ಹೀಗೆ. ಇದು ಇವತ್ತಿಗೂ ಅರ್ಥಪೂರ್ಣವಾಗಿದೆ. ನಿಜವಾದ ಪತ್ರಿಕಾ ಸ್ವಾತಂತ್ರ ಎನ್ನುವುದು ಎಲ್ಲಿದೆ?.

Leave a Reply