ಮೊರಸುನಾಡಿನ ನವಿಲು

ಸ ರಘುನಾಥ 

ಜೋಳದೊಟ್ಟಿಲಲಿ ಒಂಟಿ,

ಹುಲಿರಂಗು ಸೀರೆ ರವಿಕೆ, ಕೈ ತುಂಬ ಕೆಂಪು ಬಳೆ
ಕಾಸಗಲ ಕುಂಕುಮ, ದವನ ಮಲ್ಲಿಗೆ ದಂಡೆ
ಕೈಯಲ್ಲಿ ಕುಡುಗೋಲು.

ಸಾಹಸವೆ ಮುಟ್ಟಲು?

ವರುಷಗಳಿಂದ ಮಂಚ ಹಿಡಿದವನು ಗಂಡ,
ಮಕ್ಕಳ ತಾಯಿ,

ಏತ ತುಳಿಯುವಳು, ಏರು ಹಿಡಿಯುವಳು
ಆರಂಬ ಕೆಡದಂತೆ.

ಮೊರಸುನಾಡಿನ ಒಕ್ಕಲತಿ

ಕೊರಳಾಣೆ, ಕಣ್ಣಾಣೆ
ಕೈ ಬಳೆಯಾಣೆ

ಗೆಳತಿ,

ಪ್ರೀತಿಗಿಷ್ಟೊಂದು ಬಣ್ಣಗಳು
ಎಲ್ಲಿಯವೆ,

ಸೌಂದರ್ಯವಿಲ್ಲದಿರೆ ಎದೆಯೊಳಗೆ.


ಅವನದೇ ಅವನ ಚಿತ್ತ,
ಹೋದರೂ ಹೋದ:

ಬೇಟೆಗೆ;
ಹೆಂಡದಂಗಡಿಗೆ;

ಸಾಧುಗಳ ಜೊತೆಗೂಡಿ
ಭಜನೆಗೆ.

ಅವನು
ಮೊರಸುನಾಡಿನ ‘ಗುರಿಕಾಳ್ಲ’ ಹುಡುಗ.

ಕತ್ತಿ ಗುರಾಣಿ ಬಿಲ್ಲು ಬತ್ತಳಿಕೆ.

ತಮಟೆ ಗತ್ತಿಗೆ ಹೆಜ್ಜೆ,
ಕೇಕೆ.

ಮೊರಸುನಾಡಿನ ಪಾಳೆಗಾರನ ವೇಷ.

ಇರಬಹುದೇನೆ ಗೆಣೆಕಾರ್ತಿ, ನನ್ನ
ಮೆಚ್ಚುಗೆಗೆ?


ಮೊರಸುನಾಡಿಗೆ ಬಂದ ಹೊಸಹೆಣ್ಣೆ,

ಸುಯ್‌ಸಯ್ ಶಬ್ದ ಅವನ ಕರೆ
ಸಂಕೇತ
ಅಲ್ಲವೆ.

ಅದು.
ಸರ್ವೆತೋಪಿನ ಗಾಳಿಯಾಟ.

ನನ್ನ ಅಂಗಳದಲ್ಲಿ ಮಲ್ಲಿಗೆ,
ಅವನ ಅಂಗಳದಲ್ಲಿ ದವನ

ಮಂಗಳದ ಮಾಲೆ
ಆಗುವುದೆನುವೆಯ ಗೆಳತಿ?

ನನ್ನ ಮನೆಯಲಿ ಮೊನಚು ಹತ್ತಿದ ಮಚ್ಚು
ಅವನ ಮನೆಯಲಿ ಗಟ್ಟಿ ಕಾವಿನ ಕೊಡಲಿ.

ನೇಗಿಲ ಕಾರು
ಆಗುವುದೆನುವೆಯ ಕುಲುಮೆಗೆ ಹೋಗಿ?

೧೦

ಕಾವಲವನು ಜೋಳದ ಹೊಲಕ್ಕೆ
ಕಾವಲು ನಾನು ಸೀಬೆತೋಟಕ್ಕೆ

ಅತ್ತಿಂದ ಬಂದ ಗಿಳಿಯ ನಾನು
ಅಟ್ಟಿದ್ದಿಲ್ಲ;

ಇತ್ತಿಂದ ಹೋದ ಗಿಳಿಯ ಅವನು
ಅಟ್ಟುವುದಿಲ್ಲ.

೧೧

ಮೊರಸುನಾಡಿಗೆ ಬಂದ
ಕಣಿವೆ ಕೆಳಗಿನ ಹುಡುಗ,

ಕಣ್ಸನ್ನೆ
ಕೈಸನ್ನೆ ಮರೆಯಲ್ಲಿ.

ಗೆಳತಿಯ ಗಂಡ ಬರುವ
ಹೊತ್ತು
ಇಡುವ ನಿನ್ನ ಹಂದಿಗೂಡಿಗೆ ಕಾವಲು.

೧೨

ಹೇಗೆ ಹೇಳಿದ ನೋಡೆ,
ಹೊತ್ತು ಹೋಗುವನಂತೆ!

ಪಾಳೆಗಾರ
ವಂಶವಂತೆ.

ತಿಳಿಯನೆ?

ಮೊರಸುನಾಡು ಕಟ್ಟಿದ
ಗೌಡ ಒಕ್ಕಲ ಮನೆ ಹೆಣ್ಣು
ಭಾರದವಳೆಂದು.

೧೩

ಮೊರಸುನಾಡಿನ ಕವಿ ತೊರ್ಲ ಭೈಯ್ಯಾರೆಡ್ಡಿಯ
‘ಪದ್ಮಾವತಿ ಕಲ್ಯಾಣಂ’ನ ಪದ್ಮಾವತಿಯಂತೆ ನಾನಂತೆ.

ಚಲುವನೇ ಅವನು,
ನಂಬುವುದೇನೆ?

ಇದ್ದಳಲ್ಲವೆ ಸವತಿ
ಅವಳಿಗೆ.

೧೪

ಬೆಂಗಳೂರಿನ ಗಂಡೇ,
ಬಯಸಿ ಬಂದೆ.

ಮೇಕೆ ಹಾಲು ಕುಡಿದು ಕಸರತ್ತು ಮಾಡಿ
ಸೇರು ಕುರಿಹಾಲು ಮೊಸರಿನಲಿ ಸಾಮೆ ಅನ್ನವನುಂಡ
ಮೊರಸುನಾಡಿನ ಗಂಡಿನ ಮನೆ ಮುಂದೆ

ತೆಂಗು ಹೊಂಗೆ ಚಪ್ಪರದ ಕೆಳಗೆ
ತಂಜಾವೂರು ಓಲಗದೊಂದಿಗೆ
ಮದುಯಾಯಿತು ಗೆಳತಿಗೆ
ವಾರದ ಹಿಂದೆ.

೧೫

ಟೇಕಲ್ಲು ಬೆಟ್ಟದಲಿ ಮುಂಜಾವು ಮಂಜಿನಲಿ
ಕೇಕೆಯಿಕ್ಕಿ ನರ್ತಿಸುವ
ನವಿಲಂತೆ

ರಾಗಿ ಹೊಲದಲಿ ಕುಣಿವ ಅವನ ಕಂಡು
ಕಚ್ಚಿದಳು ಗೆಳತಿ
ಜೋಳದ ದಂಟು ಮುರಿದು.

೧೬

ಸುಣ್ಣ ಕೇಳಿ ಬಂದವನು,
ಆ ಕೈಲೆ ಕೊಡುಯೆಂದ
ಒಂದೆಲೆ ಚೂರಡಿಕೆ.

ಜಗಿದು ನಾಲಗೆ ಚಾಚಿದ

‘ಕಡುಕೆಂಪಾಗಿದೆ;
ಕೊಟ್ಟವಳಿಗೆ ಬಲುಪ್ರೀತಿಯಂತೆ.’

೧೭

ಸವುತೆ ತೋಟಕ್ಕೆ ಕೋತಿಗಳು ಬಿದ್ದವೆಂದು
ಅತ್ತ ಹೋಗುತಲೆ ನೀನು

ಬಂದು ತಿತ್ತಿ ಕದ್ದು
ಕೊಟ್ಟನಲ್ಲೆ
ಕೋತಿ ಕೈಯಿಂದ ಕಿತ್ತು ತಂದೆನೆಂದು.

ಅರಿಯದಾದೆಯಲ್ಲೆ ಗೆಳತಿ
ಅವನ ಹುನ್ನಾರು.

೧೮

ನನ್ನ ಕೂಡಿ, ಮಾತು ಮುರಿದ.

‘ರಕ್ತ ಕಾರಿ ಸತ್ತ ಸುದ್ದಿ
ಕೇಳುವಂತೆ ಮಾಡೆ.

ರಾಗಿಮುದ್ದೆ ಹಾಕಿ
ಸಾಕಿದ ಹುಂಜ ಕೊಡುವೆ.’

ಸುನ್ನಕಲ್ಲು ಕಾಡಿನ ಸತ್ಯವಂತ ಅಡವಿ ಗಂಗಮ್ಮ

೧೯

ಆಲಂಬಗಿರಿ ಪರಿಷೆಯಲ್ಲಿ
ತೇರಿಗೆಸೆದ ಬಾಳೆ ದವನ

ಗುರಿ ತಪ್ಪಿ
ನಿನ್ನೆದೆಗೆ ಬಿದ್ದಿತೆಂದೆಯ?

ಮರುಳೆ ನೋಡೆ
ಅವನ ದಿಟ್ಟ ನೆಟ್ಟ ಕಣ್ಣು
ನಿನ್ನ ಬಿಟ್ಟು ಚಲಿಸದೆತ್ತ.

೨೦

ಬೆಳ್ಳಿ ಬಟ್ಟಲ ಗಿಣ್ಣೆ,
ಕಂಚುತಟ್ಟೆಯ ತಿಳಿನೀರೆ,

ತಾಮ್ರ ಬಿಂದಿಗೆ ಎರಡು
ಹೊತ್ತ ಗಗನ ಜಘನೆ,

ಮುಂಭಾರಕೆ ಮುಗ್ಗರಿಸೀಯೆ,
ಜೋಕೆ
ನನ್ನ ಮೈಗಂಬ ಹಿಡಿಯೆ.

೨೧

ಹುಟ್ಟಿದಾಗ ನೀನು
ಹುಣಿಸೆ ಇಟ್ಟಿತಂತೆ ಮೊಳಕೆ.

ಹೂ ಬಿಟ್ಟಿದೆ ಮೈ ತುಂಬಕೆ.

ಕೇಳುತಿದೆ ಜನ್ನಘಟ್ಟದ ಗಿಳಿ
‘ನೀನಿನ್ನು ದಾವಣಿ ಉಡಲಿಲ್ಲವೇಕೆ?’

೨೨

ಹುಲಿ ಬೇಟೆ ಆಡಿದವರು,
ಸಿರಿಗಂಧ ಕದ್ದು
ಫರಂಗಿ ಪೋಲಿಸರಿಗೆ ಚಳ್ಳೆಹಣ್ಣು ಮುಕ್ಕಿಸಿದವರು,

ಊರು ಕೆರೆ ಕಟ್ಟಿದವರು,
ಗಿಡ ನೆಟ್ಟವರು
ಕಾವ್ಯಗಳ ಬರೆದವರು, ದರಬಾರು ಮಾಡಿದವರು,

ಮೊರಸುನಾಡಿನ ಮನೆ ಮನೆಯಲಿ
ಕಥೆಯಾಗಿರುವರು.

೨೩

ನೆರಿಗೆ ಸೊಂಟಕೆ ಸಿಗಿಸಿ ನಿಂತಳೋ
ಬೀದಿಯಲಿ

ನಿಂಬೆ ನಿಲ್ಲಿಸುವ ಮೀಸೆಯ ಗಂಡು
ಹಿಡಿಯುವುದೇ ಸಂದುಗೊಂದು.

ಊರಿಗೇ ಗಯ್ಯಾಳಿ,
ನೀರಬಾವಿಯ ಬಳಿ ಗಟವಾಣಿ

ಹೆತ್ತ ಆರರ ಜೊತೆಗೆ
ಅನಾಥವೆರಡು ಸೆರಗಿಗೆ.

೨೪

ಸಂಕ್ರಾಂತಿಯಂದು ಊರಬಾಗಿಲಿನಲ್ಲಿ
ಸರ‍್ರೆಂದು ನುಗ್ಗುವ ಆಂಜನಪ್ಪನ ಗೂಳಿ.
ನೆಲಕೆ ಮಲಗಿಸುವ ಕೊಂಬು ಹಿಡಿದು.

ಹುಣಿಸೆ ತೋಪಲಿ ಹುಂಜ ಪಂದ್ಯಕ್ಕೆ ಇಳಿಸಿ
ಪೈಪೋಟಿ ಹುಂಜದ ಸೊಕ್ಕು ಮುರಿದ ಖಷಿಯಲ್ಲಿ
‘ಕಾಯಿ ಸಾರಾಯಿ’ ಏರಿಸಿ,

ತೊದಲದೆ ಹಾಡುವ
‘ಯಾಲಪದ’ ಕಟ್ಟಿ.

೨೫

ನಿನ್ನ ಬೆಟ್ಟಕೆ ಬಂದು ವಾರವಾಗಿದೆ ಅವಳ ಗಂಡ
ದರುಶನವ ಕೊಟ್ಟು
ಕಳುಹಿಸೊ ಬೇಗ.

ಅಲಮೇಲುಮಂಗಳೊಡನೆ ಸರಸ
ನಿನಗಿಲ್ಲ ವಿರಹ.

ಗೆಳತಿ ಅನುಭವಿಯಲ್ಲ
ಸಹಿಸಿ ವಿರಹದ ನೋವ.

೨೬

ಮಾಲೂರು ಕರಗದಲಿ ಮಾರೆಮ್ಮನ ಗುಡಿ ಮುಂದೆ
ನಿಂತಿದ್ದ ಹೆಣ್ಣೆ,
ಗಜಾಗುಂಡ್ಲದ ತಿಳಿನೀರಿನಲೆಯಂತೆ ನಗುತಿದ್ದೆ.

ನಿನ್ನ ಪ್ರೀತಿಗಾಗಿ ಕೈ ಮುಗಿದೆ ಅವಳಿಗೆ.
ಹೂವಾಯ್ತು ಬಲಗಡೆ,

ನಿನ್ನ ನೋಟ ಕರಗ ಹೊತ್ತವನ ಹಿಂದಿದ್ದ
ವೀರಕುಮಾರನ ಕಡೆಗೆ.

ನಿಮ್ಮಿಬ್ಬರಿಗಾಗಿ ಬೇಡುವವನಂತೆ ನಿಂತೆ
ಕರಗದಮ್ಮನ ಮುಂದೆ.

೨೭

ಕಟ್ಟೆ ಕೆಳಗಿನ ಗದ್ದೆ ಅವರದು
ಅದರಡಿಯ ಗದ್ದೆ ನಮ್ಮದು.

ಎರಡು ಮನೆಗಳ ನಡುವೆ
ಹಸಿಹುಲ್ಲು ಬಗ್ಗೆನ್ನುವ ಹಗೆ.

ನಮ್ಮ ಗದ್ದೆಯಲಿ ನೀರು ಕಂಡು
ಅವನ ಅಪ್ಪ ಗದರಿದ: ಬಿಟ್ಟದ್ದು ಏಕೆಂದು?

ತುಂಬಿದ ನೀರು ಹರಿಯದೆ?

೨೮

ಹತ್ತಲಾಗದೆ ಹತ್ತಿ, ಇಳಿಯಲಾಗದೆ
ಅಲ್ಲೆ ಇರುವ ಬೆಟ್ಟವೆ
ಮೊರಸುನಾಡಿನಲ್ಲಿ?

ಮೇಕೆ ಮೇಯಿಸಲು
ದೋಟಿ ಹೆಗಲಿಗೆ ಇಟ್ಟು
ಹತ್ತಿದ ಬೆಟ್ಟ.

ಮಲಗಿದನೆ ಗುಡಿಯಲ್ಲೆ ಭಂಗಿ ಸೇದಿ?

೨೯

ಸೂಳೆ ತೋಡಿಸಿದ ಊರು ಕುಂಟೆಯಲಿ
ಗರತಿ ಹಾರಿ ಹೆಣವಾದಳಂತೆ.

ಮೀನು ಹಿಡಿಯುತ
ಹೇಳಿಕೊಂಬರು ಮಂದಿ
ನಿನ್ನೆ ನಡೆದಂತೆ,

ನೂರು ವರಷದ ಕಥೆ.

೩೦

ಬೇರರೆದು, ಕುಟ್ಟಿ
ಸೊಪ್ಪಿನ ರಸ ತೆಗೆದು,

ಮಂತ್ರ ಹಾಕಿ ತಾಯತ್ತು ಕಟ್ಟಿ
ರೋಗ ಗುಣ ಮಾಡಿ,

ಗಟ್ಟಿ ಮನದಲಿ ಬೆಟ್ಟದೇವರ ನೆನದು
ದೊಡ್ಡಜೀವವ ಉಳಿಸಿ, ಸಣ್ಣಜೀವವ ನೆಲ ಮುಟ್ಟಿಸಿ,

ಹೆಸರಾದ ಅಜ್ಜಿಯರ ಕಥೆಗಳು
ಮೊರಸುನಾಡಿನಲಿ ಬೀದಿಗೊಂಬತ್ತು.

೩೧

ಭರಣಿ ಬೆಟ್ಟವ ತೊಳೆದು ಇಳಿದು
ಕೆರೆ ತುಂಲೆಂದು,

ವರುಷಕೊಂದಾರ್ತಿ
ಮನೆಗೊಂದು ಆಳಂತೆ ಬಂದು
ಎತ್ತುತಿದ್ದರು ಹೂಳು
ಕೆರೆಯೆ ಬಾಳೆಂದು.

ಮನವೊಡೆದು ಮನೆಯೊಡೆದು
ಒಗ್ಗಟ್ಟು ಹೂಳಿನಡಿ ಕೊಳೆತು
ಒತ್ತುವರಿ ಕಟುಕ ಹಿಂಸಕರ ಕೈಯಲ್ಲಿ
ಬಿಕ್ಕುತಿವೆ ಮೊರಸುನಾಡಿನ ಕೆರೆಗಳು.

೩೨

ಕೈವಾರ ತಾತಯ್ಯನೆಂಬ ಹುಂಜ
ಮೊಗಿಲಿ ಕಣಿವೆಯಾಳದಿಂದ
ಕೂಗುತಿದೆಯೆರಡು ಶತಮಾನದಿಂದ
ಮೊರಸುನಾಡಿಗೇ ಕೇಳುವಂತೆ :

ಕೆಡುಕು ಕಲಿತಿರಿ, ಕೆಡುವಿರಿ.
ಕೇಳಿಸದು ಕಿವುಡು ತುಂಬಿದ ಕಿವುಡಿಗೆ.

ಬೆಟ್ಟವೇರಿದ ಹುಂಜ ಕೂಗುತಲೆ ಇದೆ,
‘ಕಿವುಡು ಕಳೆಯೊ ಇವರ
ನಾದಬ್ರಹ್ಮಾನಂದ ನಾರೇಯಣ.’

೩೩

ಕಾಯುತಿದೆ ಕೋಲಾರ

ಉಡ ಹಿಡಿದು ಬಾನಿಗೆಸೆದು
ಅದು ಮೋಡ ತಬ್ಬಿದಾಗ
ಹಿಡಿದೆಳೆದು ಮಳೆ ಸುರಿಸುವ ಸಾಹಸಿಗಾಗಿ.

ಕೆಲಸ ಮುಗಿದೊಡನೆ
ಕಾಡಿನೊಳಗೆ ಬಿಡುವ ನಂಬಿಕೆಯಿಲ್ಲ
ಅರೆಯದೆ ಮಸಾಲೆ.

ಅದಕೆಂದೆ ಉಡ
ಕೈಗೆ ಸಿಗದೆ ಅಲೆಮಾರಿಯಾಗಿದೆ
ಕುರುಚಲು ಕಾಡಿನೊಳಗೆ.

ಸಂಸ್ಕೃತದ ‘ಗಾಥಾ ತ್ರಿಶತಿ’ಯಲ್ಲಿ ಈ ರೀತಿಯ ಪದ್ಯಗಳನ್ನು ಕಾಣಬಹುದು

ಮೊರಸುನಾಡು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದ ಹಲವು ಪ್ರದೇಶ, ತಮಿಳುನಾಡಿನ ಕೃಷ್ಣಗಿರಿ, ಆಂಧ್ರದ ಚಿತ್ತೂರು ಜಿಲ್ಲೆಗಳು ಒಂದಾಗಿದ್ದ ಪ್ರದೇಶ, ಮೊರಸು ಒಕ್ಕಲಿಗರು ಆಳಿದ್ದು

ಗುರಿಕಾಳ್ಲ = ಬೇಟೆಗಾರರ

ಗೆಣೆಕಾರ್ತಿ = ಗೆಳತಿ

ಕಾಯಿ = ಬಾಟಲಿ;
ಯಾಲಪದ = ಮರದಿಂದ ಹುಣಿಸೆಕಾಯಿ ಉದುರಿಸುವಾಗ ಕಟ್ಟಿ ಹಾಡುವ ಶೃಂಗಾರಪದ.

ಗಜಾಗುಂಡ್ಲ = ಕೊಳ, ಕಲ್ಯಾಣಿ

ದೊಡ್ಡಜೀವ = ತಾಯಿ; ಸಣ್ಣಜೀವ = ಮಗು

3 comments

  1. ಬಹಳ ಸೊಗಸಾದ ಕವನಗಳು ಸರ್,, ನನಗೆ ನಾವೆಲ್ಲ ಸೇರಿ ಅನುವಾದಿಸಿದ ಸಂಗಂ ಕವನಗಳು ನೆನಪಾದವು. ಮೊದಲು ನಾನಿವನ್ನು ಅನುವಾದ ಕವಿತೆಗಳೆಂದೇ ಓದಿದೆ. ಸಶಕ್ತ ಚಿತ್ರ ಕೆತ್ತಿ ನಿಲ್ಲಿಸುವ ಕವಿತೆಗಳಿವು.
    ಮರಸೊಕ್ಕಲಿಗ ಎಂದು ನಮ್ಮ ‌ಕಡೆ ಕರೆಯುವ ಸಮುದಾಯಕ್ಕೆ ಸೇರಿದ ಕೆಲವು ಕುಟುಂಬಗಳನ್ನು ನಾನು ಬಾಲ್ಯದಲ್ಲಿ ಕಂಡಿದ್ದೆ. ನೀವಿಲ್ಲಿ ಬಳಸಿರುವ ಆರಂಬ, ಗಜಾಗೊಂಡ್ಲ, ಯಾಲಪದ, ಗೆಣೆಕಾತಿ ಈ ಪದಗಳು ನಮ್ಮ ಮನೆಯ ಆಡುಮಾತಿನ ನಡುವೆ ವಿಪುಲವಾಗಿ ಬಳಕೆಯಾಗುತ್ತಿದ್ದವು.
    ಗಜಾಗೊಂಡ್ಲವಾಗೋಯ್ತು ಎಂದರೆ ಗಲಾಟೆಯೆದ್ದು ಎಲ್ಲವೂ ಗೊಂದಲಮಯವಾಗಿ ಹೋಯಿತು ಎಂಬರ್ಥದಲ್ಲಿ ಬಳಸುತ್ತಿದ್ದೆವು. ಆನೆಯ ಹಿಂಡು ಏಕಾಏಕಿ ಗದ್ದೆಗೆ ನುಗ್ಗಿ‌ ತುಳಿದು ಹಾಳುಗೆಡಹುವ ಅವಾಂತರಕ್ಕೂ ಗಜಾಗೊಂಡ್ಲ ಪದಕ್ಕೂ ಸಂಬಂಧವಿರಬಹುದೇ ಎಂದು ನಾನು‌ ಪದದ ವ್ಯುತ್ಪತ್ತಿಯ ಲೆಕ್ಕ ಹಾಕಿದ್ದುಂಟು.

Leave a Reply