ಆಗ ಮೋದಿ ಎಲ್ಲಿದ್ದರು?

ರಾಜ್ಯ ಬಿಜೆಪಿಯಲ್ಲಿ ಇದೀಗ ಬದಲಾವಣೆಯ ” ಉದ್ಘೋಷ”

ಲೋಕಸಭಾ ಚುನಾವಣೆಯ ಹಣಾಹಣಿ ಒಂದೆಡೆ ಆದರೆ ಅದರ ಫಲಿತಾಂಶದ ನಂತರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಅಲಂಕರಿಸಲು ನಾಯಕರಿಂದ ಕಸರತ್ತು.

ಅದಕ್ಕಾಗಿಯೇ ಬಗೆ ಬಗೆಯ ಕವಾಯತ್ಠು.

ಫೈರ್ ಬ್ರಾಂಡ್ ಶಾಸಕ ಸಿ. ಟಿ. ರವಿ ಇದಕ್ಕಾಗಿಯೇ ವಿವಿಧ ರೀತಿಯ ಕತ್ತಿ ವರಸೆ ಮಾಡುತ್ತ, ನಾಲಿಗೆ ಹರಿಬಿಡುತ್ಠ ನಾಯಕತ್ವದ ಶಕ್ತಿ ತೋರುತ್ತಿದ್ದರೆ, ಸಿದ್ದರಾಮಯ್ಯ ಅವರಿಗೇ ಭಯ ಹುಟ್ಟಿಸುವಂತೆ ತಿಲಕ ಇಟ್ಟಿರುವ ಸುನೀಲ್ ಕುಮಾರ್ ರಂಥವರು ತೊಡೆತಟ್ಟಿ ಬದಲಾವಣೆಗೆ ತಾವೇ “ದಿಕ್ಸೂಚಿ ” ಎನ್ನುತ್ತಿದ್ದಾರೆ.

ಮತ್ತೊಂದೆಡೆ ಗರಿ ಗರಿ ಧಿರಿಸು ಸಿದ್ಪಪಡಿಸಿಕೊಳ್ಳುತ್ಠಿರುವ ಪರಿಶಿಷ್ಟ ಸಮುದಾಯದ ನಾಯಕ ಅರವಿಂದ ಲಿಂಬಾವಳಿ ಅವರಂತೂ ತಾವು ಯಡಿಯೂರಪ್ಪ ಮತ್ತು ಸಂಘ ಪರಿವಾರಕ್ಕೆ ಪ್ರಿಯರಾದ ರಾಜೀ ಸೂತ್ರದ ನಾಯಕ ಎನ್ನುತ್ತಾ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಕಡೆ ಓರೆಗಣ್ಣಿನಿಂದ ನೋಡುತ್ತಿದ್ದಾರೆ.

ಏತನ್ಮಧ್ಯೆ ಇದು ಕಡೇ ಚಾನ್ಸ್ ಎನ್ನುವಂತೆ ಹಿರಿಯ ನಾಯಕ ಈಶ್ವರಪ್ಪ ಯಥಾಪ್ರಕಾರ ಆಸೆಯ ಕುಡಿನೋಟದೊಂದಿಗೆ ವರಿಷ್ಠರತ್ಠ ದಿಟ್ಟಿಸುತ್ಠಿದ್ದಾರೆ. ಇದ್ದದ್ದರಲ್ಲಿ ಓ ಕೆ ಎನ್ನಿಸಿಕೊಂಡ ಅರಗ ಜ್ಞಾನೇಂದ್ರ, ಜೀವರಾಜ್, ಮೊದಲಾದವರು ಕಂಗಾಲಾಗಿ ಚೆಲ್ಲಾಪಿಲ್ಲಿಯಾಗಿದ್ದಾರೆ.

ಇನ್ನು ರಾಜ್ಯ ಬಿಜೆಪಿಯ “ಏಕೈಕ” ಸಜ್ಜನ ನಾಯಕ ಸುರೇಶ್ ಕುಮಾರ್ “ಹಾವು ಸಾಯದಂತೆ, ಕೋಲೂ ಮುರಿಯದಂತೆ” ಲಾಠಿ ಝಳಪಿಸುತ್ತಾ ಹೇಗಿದೆ ನನ್ನ ಕಲಾತ್ಮಕತೆ ಎನ್ನುತ್ತಿದ್ದಂತೆ… ಇದೆಲ್ಲ ಕಂಡು ಮತ್ತೊಬ್ಬ ಹಿರಿಯ ನಾಯಕ ಅರ್. ಅಶೋಕ್ ಗೆ ತಲೆಯೇ ಕೆಟ್ಟು ಹೋಗಿದೆ.

ಕೊಂಚ ದಿಗಿಲುಗೊಂಡಂತೆ ಕಾಣುತ್ತಿರುವ ಅಶೋಕ್, ಯಡಿಯೂರಪ್ಪ ಜೊತೆಗಿನ ತನ್ನ ಹುಸಿ ಮುನಿಸು ಬಿಟ್ಟು ಚುನಾವಣಾ ಅಖಾಡಕ್ಕೆ ಧುಮುಕಿ ನಾಯಕತ್ವ ತೋರಲು ಸಜ್ಜಾಗುತ್ತಿದ್ದಂತೆ ಅವರದ್ದೇ ಪಕ್ಷದ ನಾಯಕರೊಬ್ಬರು ರಹಸ್ಯವಾಗಿ ಸೋಶಿಯಲ್ ಮೀಡಿಯಾ ವಾರ್ ಶುರುಮಾಡಿದ್ದಾರೆ.

ತನ್ನ ಬುಡಕ್ಕೆ ತನ್ನವರೆ ಬತ್ಠಿ ಇಡುತ್ತಿರುವುದು ಕಂಡು ಕಂಗಾಲಾದ ಅಶೋಕ್ ಏನು ಮಾಡಬೇಕೆಂದು ಯೋಚಿಸುವಾಗಲೇ, ಅಲ್ಲೀವರೆಗೆ ತಣ್ಣಗೆ ಕೂತಿದ್ದ ಸೌಮ್ಯಗುಣದ ನಾಯಕ ಶೆಟ್ಟರ್ ಸಾಧ್ಯವಾದರೆ ತಮಗೂ ಇನ್ನೊಂದು ಅವಕಾಶ ಎನ್ನುತ್ತಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಮೇಲ್ನೋಟಕ್ಕೆ ಲೋಕಸಭಾ ಚುನಾವಣೆಯ ತಯಾರಿ ಇದ್ದರೂ ತೆರೆ ಮರೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆನಡೆದಿರುವ ತಾಲೀಮಿನ ದೃಶ್ಯಗಳಿವು.

ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಇನ್ನೇನು ಯಡ್ಯೂರಪ್ಪ ಕಥೆ ಮುಗೀತು. ಅವರನ್ನು ಬಲಿಪೀಠಕ್ಕೆ ಹಾಕಲಾಗುವುದು ಎಂದು ತಮ್ಮ ಪಾಡಿಗೆ ತಾವೇ ತೀರ್ಮಾನಿಸಿರುವ ಗುಂಪೊಂದು ಥರ ಥರ ತಂತ್ರದೊಂದಿಗೆ, ಮೋದಿ ಮಂತ್ರದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಏರಲು ನಡೆಸಿರುವ ಯತ್ನವಿದು.

ಹಾಗೆ ನೋಡಿದರೆ ಬಿಜೆಪಿ ಪಾಲಿಗೆ ಇದು ಸಂಕ್ರಮಣ ಘಟ್ಟವೇ .

ರಾಷ್ಟ್ರೀಯ ಮಟ್ಟದ ಹಿರಿಯ ನಾಯಕರನ್ನು ಮಟ್ಟ ಹಾಕಲು ಮೋದಿ ಮತ್ತು ಅಮಿತ್ ಶಾ ಇಬ್ಬರೂ ಸೇರಿಕೊಂಡು ರೂಪಿಸಿದ ನಿಯಮದ ಪ್ರಕಾರ ಯಡಿಯೂರಪ್ಪ ಮಾರ್ಗದರ್ಶಕ ಮಂಡಳಿಗೆ ಸೇರಬೇಕಾಗಿ ಬಂದಿದೆ ಎಂದು ಬಿಜೆಪಿ ನಾಯಕರು ಭಾವಿಸಿರುವುದು ಇಷ್ಟಲ್ಲದೆ ಕಾರಣ.

ಆದರೆ ನಿಯಮದ ಅನುಸಾರ ವರ್ಷ ಮೊದಲೇ ನೇಪಥ್ಯಕ್ಕೆ ಸರಿಯಬೇಕಾದ ಬಿಎಸ್ವೈ ಅವರನ್ನು, ಈಗಲೂ ಮುಂದೆ ಇಟ್ಟುಕೊಂಡು ರಾಜ್ಯದಲ್ಲಿ ಹೆಚ್ಚಿನ ಸ್ಥಾನದ ನಿರೀಕ್ಷೆಯಲ್ಲಿರುವ ಕೇಂದ್ರ ನಾಯಕರ ಈ ನಡವಳಿಕೆಯೆ ಯಡಿಯೂರಪ್ಪ ಸಾಮರ್ಥ್ಯದ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ.

ಯಡ್ಯೂರಪ್ಪನವರಿಗೆ ಪರ್ಯಾಯ ನಾಯಕ ಕಷ್ಟ ಎನ್ನುವ ಅಸಹಾಯಕತೆಯೂ ಎದ್ದು ಕಾಣುತ್ತಿದೆ.
ವಯಸ್ಸಿನ ಆಧಾರ ಒಂದೇ ಇಟ್ಟುಕೊಂಡು ಯಡಿಯೂರಪ್ಪ ಅವರನ್ನು ನೇಪಥ್ಯಕ್ಕೆ ತಳ್ಳಲು ಸಾಧ್ಯವೇ?
ಎನ್ನುವುದೆ ಚುನಾವಣೆ ಸಂದರ್ಭದ ಮಹತ್ವದ ಪ್ರಶ್ನೆ.

ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರದ ಮಾಜಿ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಇವರೆಲ್ಲರನ್ನೂ ದೃಷ್ಟಿಯಲ್ಲಿಟ್ಟು ಹೇಳಿದರೆ.. ಬಿಎಸ್ವೈ ರಾಜಕೀಯ ಭವಿಷ್ಯ ಇಷ್ಟಕ್ಕೇ ಮುಗಿಯಿತೇ? ಎಂಬ ಪ್ರಶ್ನೆ ಎದುರಾಗುತ್ತದೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಹೊಸ ತಲೆಮಾರಿಗೆ ಅಧಿಕಾರದ ಹಸ್ತಾಂತರದ ಭರಾಟೆಯಲ್ಲಿ.. ಬಿಎಸ್ವೈ ಇಲ್ಲದ ಬಿಜೆಪಿ ದೊಣ್ಣೆ, ತ್ರಿಶೂಲ, ಖಡ್ಗ ಝಳಪಿಸುತ್ತಾ ಹೋದರೆ ಕರ್ನಾಟದಲ್ಲಿ ಇಂಥ ಕೋಮು ದಳ್ಳುರಿಯ ಆಟ ನಡೆದೀತೆ ಎನ್ನುವುದೇ ಇಲ್ಲಿಯ ಮತ್ತೊಂದು ಮಹತ್ವದ ಪ್ರಶ್ನೆ. ನಾನು ಯಡಿಯೂರಪ್ಪ ಸಮರ್ಥನೆಗಾಗಿ ಇದನ್ನು ಬರೆಯುತ್ತಿಲ್ಲ.

ಕ್ಷಣ ಕ್ಷಣಕ್ಕೂ ಮೋದಿ ಮಂತ್ರ ಜಪಿಸುತ್ತಾ ವ್ಯಕ್ತಿ ವೈಭವವೇ ವಿಜೃಂಭಿಸುತ್ಠಿರುವ ಬಿಜೆಪಿಗೆ.. ಮೋದಿ ಆರ್ಭಟಕ್ಕೆ ಮುನ್ನವೇ ಪಕ್ಷಕ್ಕೆ ತನ್ನದೇ ತಂತ್ರದಿಂದ ಶಕ್ತಿ ತುಂಬಿ ರಾಷ್ಟ್ರೀಯ ನಾಯಕರನ್ನೆ ಬೆಚ್ಚಿಬೀಳಿಸಿದ ಖ್ಯಾತಿ ಯಡಿಯೂರಪ್ಪ ಅವರದ್ದು.

ಹಾಗೆ ನೋಡಿದರೆ ಯಡಿಯೂರಪ್ಪ ಒಂದು ರೀತಿಯಲ್ಲಿ ಜಗಮೊಂಡ. ಆರೋಪ, ವಿವಾದ, ದ್ವಂದ್ವಗಳಿಗೆ ಸಿಕ್ಕರೂ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ ಸೆಟೆದುಕೊಂದು ಹೆಜ್ಜೆ ಹಾಕುವ ನಾಯಕ ಅವರು. ಭ್ರಷ್ಟಾಚಾರದ ಆರೋಪಕ್ಕೆ ಸಿಕ್ಕಿ ಜೈಲಿಗೆ ಹೋಗುವಾಗ, ಜೈಲಿಂದ ಬರುವಾಗಲೂ ಸ್ವಲ್ಪವೂ ನಾಚಿಕೆ ಇಲ್ಲದೆ ಗೆಲುವಿನ ಸನ್ನೆ ಮಾಡುತ್ತಾ, ಮರುದಿನವೇ ಏನೂ ಆಗಿಲ್ಲವೆಂಬಂತೆ ಸಭೆ ಸಮಾರಂಭದಲ್ಲಿ ಹಾಜರಾಗಲು ಸಿದ್ಧವಾಗುವ ನಾಯಕ.

ಅಷ್ಟೇ ಯಾಕೆ ಹಳೆ ಕಥೆ ಹಾಗಿರಲಿ. ತೀರಾ ಈಚೆಗೆ ಸಮ್ಮಿಶ್ರ ಸರಕಾರ ಕೆಡವಲು ಹೋಗಿ, ಶಾಸಕರನ್ನು ಮುಂಬೈಗೆ ಕರೆದೊಯ್ದು ಸಾಕಷ್ಟು ಸಂಖ್ಯೆಯ ಶಾಸಕರು ಸಿಗದೆ ಆಪರೇಶನ್ ಕಮಲ ಟುಸ್ಸ್ ಆದರೂ ತನಗೇನು ಗೊತ್ತೇ ಇಲ್ಲ ಎಂದು ಸದನದಲ್ಲಿ ತುಟಿಕ್ ಪಿಟಿಕ್ ಎನ್ನದೆ ಗಪಚುಪ್ ಕೂರಲು ಯಡಿಯೂರಪ್ಪ ಅಂಥವರಿಂದ ಮಾತ್ರ ಸಾಧ್ಯ.

ಅಷ್ಟೇ ಯಾಕೆ ಆಪರೇಶನ್ ಕಮಲದ ಆಡಿಯೋ ಸಿಡಿ ತನಿಖೆಗೆ ವಿಶೇಷ ತಂಡದ ತನಿಖೆ ಬೇಡ ಎಂದು ಪಟ್ಟು ಹಿಡಿದು ಅಧಿವೇಶನಕ್ಕೆ ಸಂಚಕಾರ ತಂದ ಹಠಮಾರಿ. ಇದನ್ನು ಭಂಡತನ ಅನ್ನಿ, ಅಧಿಕಾರದ ಆಸೆ ಅನ್ನಿ.. ಅಥವಾ.. ಸ್ಥಿತಪ್ರಜ್ಞ ಎಂದಾದರೂ ಅನ್ನಿ. ಇಂಥ ವ್ಯಕ್ತಿತ್ವ ಸಾಧ್ಯವಾಗುವುದು ಯಡಿಯೂರಪ್ಪ ಅವರಲ್ಲಿ ಮಾತ್ರ.

ಇಂಥ “ವಿಶಿಷ್ಟ” ವ್ಯಕ್ತಿತ್ವದ ಯಡಿಯೂರಪ್ಪ ಅವರನ್ನು ಕೇವಲ ಹಿಂದೂತ್ವದ ಅಜೆಂಡಾ ಹೊಂದಿರುವ ಯುವ ನಾಯಕರಿಂದ ಬದಲಾಯಿಸಲು, ಕೊರತೆ ತುಂಬಲು ಸಾಧ್ಯವೇ ಎನ್ನುವುದೇ ಇಲ್ಲಿಯ ಮುಖ್ಯವಾದ ಸಂಗತಿ.
ಇಲ್ಲಿ ಕೆಲವು ಅಂಕಿ ಅಂಶಗಳನ್ನು ದಾಖಲಿಸಬೇಕು. ಪಾರ್ಶ್ವವಾಯು ಪೀಡಿತರಾಗಿದ್ದ ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಪಕ್ಷ ಅಪಮಾನ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಿದ ನಂತರ, ದೂರವಾದ ಲಿಂಗಾಯಿತ ಸಮುದಾಯಕ್ಕೆ ನಾಯಕತ್ವ ನೀಡಿ ಅವರನ್ನು ಬಿಜೆಪಿಯ ಸಾರಾಸಗಟು ವೋಟುಬ್ಯಾಂಕ್ ಆಗಿ ಪರಿವರ್ತಿಸಿದ ಚಾಣಾಕ್ಷತೆ ಯಡಿಯೂರಪ್ಪ ಅವರದ್ದು.

1998 ರಿಂದ ಹಿಡಿದು.. 2009ರವರೆಗೂ ರಾಜ್ಯದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಸ್ಥಾನ ನೋಡಿದ್ರೆ ಎಂಥವರಿಗೂ ಅಚ್ಚರಿ ಮೂಡುತ್ತದೆ.

2004 ರಲ್ಲಿ..ರಾಜ್ಯದಲ್ಲಿ ಬಿಜೆಪಿ 18 ಸ್ಥಾನ ಗೆದ್ದಿತ್ತು. 2009 ರಲ್ಲಿ 19 ಸ್ಥಾನಕ್ಕೆ ಹೆಚ್ಚಾಯಿತು. ಈ ಅವಧಿಯಲ್ಲಿ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಅಲೆಯೆ ಎದ್ದಿತ್ತು. ಆಗ ಮೋದಿ ಇರಲಿಲ್ಲ.
ಇದೀಗ ಮೋದಿ ಮಂತ್ರ ಜಪಿಸಿ, ಸಮುಹ ಸನ್ನಿಗೆ ಒಳಗಾಗಿರುವ ನಾಯಕರು ಅಂದು ಯಡಿಯೂರಪ್ಪ ತೋರಿಸಿದ ರಾಜಕೀಯ ಶಕ್ತಿ ಪ್ರದರ್ಶನವನ್ನು ಏಕೆ ಒಪ್ಪುವುದಿಲ್ಲ? ರಾಜಕೀಯ ಇತಿಹಾಸದಲ್ಲಿ ಇದನ್ನೇಕೆ ಸ್ಮರಿಸುವುದಿಲ್ಲ? ಹಾಗೆ ನೋಡಿದರೆ 2014 ರಲ್ಲಿ ಮೋದಿ “ಪ್ರಚಂಡ ಅಲೆ ” ಎಂದು ವಿಶ್ಲೇಷಿಸಲಾದ ಸಂದರ್ಭದಲ್ಲಿ ಗೆದ್ದದ್ದು ಒಂದೆರಡು ಸ್ಥಾನ ಕಡಿಮೆಯೇ. ಅಂದರೆ17 ಸ್ಥಾನ.

ಮೋದಿ ಇಲ್ಲದ ಸಂದರ್ಭದಲ್ಲೇ, ಕೇಂದ್ರದಲ್ಲಿ ಯುಪಿಎ ಇರುವಾಗಲೇ ತನ್ನ ರಾಜಕೀಯ ಸಂಘರ್ಷದ ಸಾಮರ್ಥ್ಯದ ಮೂಲಕ ಹೆಚ್ಚು ಸಂಖ್ಯೆಯಲ್ಲಿ ಸಂಸದರನ್ನು ಗೆಲ್ಲಿಸಿದ ನಾಯಕ ಯಡಿಯೂರಪ್ಪ.

ಹೀಗೆ ಈ ಯಡಿಯೂರಪ್ಪ ಎಂಥ ಮನುಷ್ಯ ಅಂದರೆ ಈ ಚುನಾವಣೆಯ ಫಲಿತಾಂಶ ನಂತರ ಮತ್ತೊಮ್ಮೆ ಸರ್ಕಾರ ಕೆಡವಲು ಮತ್ತೊಂದು ತಂತ್ರ ರೂಪಿಸಲು ಪ್ರಯತ್ನಪಡಲು ಹಿಂದೆ ಮುಂದೆ ನೋಡದೆ ಮನುಷ್ಯ. ಅಂಥ ಹಠಮಾರಿ ನಾಯಕ.

ಕರ್ನಾಟಕ ಬಿಜೆಪಿ ವಿಚಾರಕ್ಕೆ ಬಂದಾಗ ಈಗ ಭಾರತೀಯ ಜನತಾ ಪಕ್ಷ ರಾಷ್ಟ್ರ ಮಟ್ಟದಲ್ಲಿ ಪ್ರತಿಪಾದಿಸುತ್ತಿರುವ ಗೋ ಹತ್ಯೆ, ಅಯೋಧ್ಯಾ ಶ್ರೀರಾಮ ದೇಗುಲ ನಿರ್ಮಾಣ, ಮುಸ್ಲಿಂ ವಿರೋಧಿ ನೀತಿ ಇವೆಲ್ಲವನ್ನೂ ಮೀರಿ ಅಪ್ಪಟ ಸ್ಥಳೀಯ ಮಟ್ಟದ ರಾಜಕೀಯ ಮಾಡಿ ಬಿಜೆಪಿಗೆ ಮೆರಗು ತಂದವರು ಯಡಿಯೂರಪ್ಪ.

ಬಿಜೆಪಿಯನ್ನು ಯಡಿಯೂರಪ್ಪ ಕಟ್ಟಿದ್ದೆ ರೈತ ಪರ ಹೋರಾಟದ ಮೂಲಕ. ಪಾದಯಾತ್ರೆಯ ಮೂಲಕ. ಬಗರ್ ಹುಕುಂ, ಅಕ್ರಮ ಸಕ್ರಮ, ಸಾಲಮನ್ನಾ, ನೀರಾವರಿ ಇಂಥ ವಿಚಾರ ಇಟ್ಟುಕೊಂಡು ಸರ್ಕಾರಗಳ ವಿರುದ್ದ ಸಮರ ಸಾರಿ, ದೊಡ್ಡ ಸಮಾವೇಶಗಳನ್ನು ಸಂಘಟಿಸಿ ಪಕ್ಷ ಕಟ್ಟಿದರು. ಅಧಿವೇಶನಗಳಲ್ಲಿ ಹಗಲು ರಾತ್ರಿ ಧರಣಿ ನಡೆಸಿದರು. ಲಿಂಗಾಯಿತ ಸಮುದಾಯದ ಬಲಿಷ್ಟ ನಾಯಕನಾಗಿದ್ದರೂ ಪರಿಶಿಷ್ಟ ಜಾತಿ, ವರ್ಗಗಳನ್ನು ಬಿಜೆಪಿ ತೆಕ್ಕೆಗೆ ತಂದು ಗೆಲುವಿನ ಸೂತ್ರ ರೂಪಿಸಿದರು. ಜೆಡಿಎಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿ ಬಿಜೆಪಿಗೆ ಇದ್ದ ಮಡಿವಂತಿಕೆ ಕಳಂಕ ನಿವಾರಿಸಿದರು. ಇವೆಲ್ಲವನ್ನೂ ಮಾಡುತ್ತಿದ್ದಾಗ ಮೋದಿ ಎಲ್ಲಿದ್ದರು?

ಯಾರೊಪ್ಪಲಿ. ಬಿಡಲಿ. ಅಪ್ಪಟ ಲೆಕ್ಕಾಚಾರದ ನಾಯಕ ಯಡಿಯೂರಪ್ಪ. ತನ್ನ ಸಫಾರಿಯ ಮುಂದಿನ ಜೇಬಿನಲ್ಲಿ ಕಾಗದ, ಪೆನ್ನು ಇಟ್ಕೊಂಡು ತಲೆಗೆ ಏನಾದರು ಹೊಳೆದರೆ ತಕ್ಷಣ ಅದನ್ನು ಬರೆದುಕೊಂಡು, ಅದರ ಬಗ್ಗೆ ಚಿಂತಿಸಿ ಸರಿ ಎನಿಸಿದರೆ ಕಾರ್ಯರೂಪಕ್ಕೆ ತರುವುದು ಅವರ ವಾಡಿಕೆ.

ಸೀರೆಭಾಗ್ಯ, ಇಲ್ಲವೇ ಮಹಿಳೆಯರ ಪರ ಯೋಜನೆ ರೂಪಿಸಿದರೂ ಅಷ್ಟೆ, ಯುವಕರಿಗೆ ನೆರವು ಪ್ರಕಟಿಸಿದರೂ ಅಷ್ಟೆ. ಹೈನುಗಾರಿಕೆ ರೈತರಿಗೆ ಉತ್ತೇಜಕ ಹಣ ಘೋಷಿಸಿದರೂ ಅಷ್ಟೆ. ಇಂಥ ಯೋಜನೆಗಳು ಎಷ್ಟು ಮತಗಳಾಗಿ ಪರಿವರ್ತನೆ ಆಗಬಲ್ಲವು ಎಂಬುದನ್ನು ಫಲಾನುಭವಿಗಳ ಸಂಖ್ಯೆಯ ಮೇಲೆ ಲೆಕ್ಕ ಹಾಕುವುದು ಅವರ ಶೈಲಿ.

ಇಂಥ ಯಡಿಯೂರಪ್ಪ ಗೋಹತ್ಯೆ ನಿಷೇಧದಿಂದ ಎಷ್ಟು ಮತ ಬರುತ್ತೆ ಅಂತ ಯಾವತ್ತೂ ಯೋಚಿಸಲಿಲ್ಲ. ದಲಿತರ ಚರ್ಮ ಸುಲಿಯುವ ರಾಜಕೀಯ ಮಾಡಲಿಲ್ಲ. ಕೋಮಗಲಭೆಗೆ ಪ್ರಚೋದನೆ ನೀಡುವ ಭಾಷಣ ಮಾಡಿ ಮತ ಗಳಿಕೆಯ ಲೆಕ್ಕಾಚಾರ ಹಾಕಲಿಲ್ಲ. ಇದ್ಯಾವುದೂ ಹಾಕದೆಯೇ ಬಿಜೆಪಿ ಲೋಕಸಭೆ ಸ್ಥಾನಗಳನ್ನು ಮೋದಿ ಅಲೆಗೆ ಮುನ್ನವೇ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದರು. ಲಿಂಗಾಯಿತರು, ದಲಿತರು, ಇನ್ನಿತರೆ ಸಮುದಾಯಗಳ ಬಿಜೆಪಿಗೆ ಒಲಿಯುವಂತೆ ಮಾಡಿದರು. ಕಾಂಗ್ರೆಸ್ ನ ಸಾಂಪ್ರದಾಯಿಕ ವೋಟ್ ಬ್ಯಾಂಕನ್ನು ಛಿದ್ರಗೊಳಿಸಿದರು.
.
ಚುನಾವಣೆಯ ಈ ಹೊತ್ತಲ್ಲಿ ಇಷ್ಟೆಲ್ಲಾ ವಿಶ್ಲೇಷಣೆ ಮಾಡಲು ಕಾರಣವಿದೆ. ಸುಖಾಸುಮ್ಮನೆ ಯಡಿಯೂರಪ್ಪ ಅವರನ್ನು ಹೊಗಳುವುದು ನನ್ನ ಉದ್ದೇಶವಲ್ಲ. ಹಾಗೆ ಮೋದಿ ಟೀಕಿಸುವುದು ಅಲ್ಲ. ಯಡಿಯೂರಪ್ಪ ಬದಲಾವಣೆ ಕಾದು ಕುಳಿತ ನಾಯಕರಿಗೆ ಲಿಂಗಾಯತರ ಭಯವಿದೆ. ಈ ಮತಗಳು ಕೈ ತಪ್ಪಿದರೆ ಬಿಜೆಪಿ ಗತಿ ಏನು ಎನ್ನುವ ಆತಂಕವಿದೆ.

ಮೋದಿ ಮತ್ತು ಅವರ ಭಕ್ತವೃಂದ ಹಲವು ವರ್ಷಗಳ ಕಾಲ ಕೋಮು ರಾಜಕಾರಣ ಮಾಡಿದರೂ ಅಂತಿಮವಾಗಿ ಚುನಾವಣೆ ಹತ್ತಿರ ಬಂದಾಗ ರೈತರ ಅಕೌಂಟ್ ಗೆ ಹಣ ಹಾಕಿ ಯಡಿಯೂರಪ್ಪ ಶೈಲಿಯ ರಾಜಕಾರಣಕ್ಕೆ ವಾಪಸ್ ಬರಬೇಕಾಗಿ ಬಂತಲ್ಲ ಎನ್ನುವುದು ಇಲ್ಲಿ ಮುಖ್ಯ ಸಂಗತಿ.

ಈ ಹೊತ್ತಿಗೂ ಮೋದಿ ಹವಾ ಏನೇ ಇದ್ದರೂ ಕರ್ನಾಟಕದ ಮಟ್ಟಿಗೆ ಸ್ಥಳೀಯ ಅಂಶಗಳು, ಜಾತಿವಾರು ಲೆಕ್ಕಾಚಾರಗಳೇ ಬಿಜೆಪಿಗೆ ಜೀವಾಳ. ಹೀಗಾಗಿಯೆ ಈ ಹಂತಕ್ಕೆ ನಿಂತು ಅಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಅಂದ ಕ್ಷಣ ಅದರ ಪರಿಣಾಮ ಮೆಟ್ಟಿ ನಿಂತು ಬಿಜೆಪಿಯನ್ನು ಗೆಲ್ಲಿಸುವ ಶಕ್ತಿ, ತಂತ್ರಗಾರಿಕೆ ಅಮಿತ್ ಷಾ ಅವರಿಗೆ ಇದೆಯಾ? ಎನ್ನುವ ಪ್ರಶ್ನೆಗೆ ಉತ್ತರ ಬೇಕಿದೆ.

ಅಧಿಕಾರದ ಅವಕಾಶ ಸಿಕ್ಕಾಕ್ಷಣ ತನ್ನ ಹೋರಾಟದ ಹಿನ್ನಲೆ ಮರೆತು, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ವಿವಾದಕ್ಕೆ ಸಿಲುಕಿದ ಯಡಿಯೂರಪ್ಪ ಅವರನ್ನು ಟೀಕಿಸಲು ಒಂದಲ್ಲ ನೂರು ಕಾರಣಗಳಿವೆ.

ಆದರೆ..ಎಲ್ಲೆಲ್ಲೂ ಮೋದಿ ಹುಯ್ಲು ಎದ್ದಿರುವ ಈ ದಿನಗಳಲ್ಲಿ.. ರಾಷ್ಟ್ರಮಟ್ಟದಲ್ಲಿ ಇರುವ ಬಿಜೆಪಿ ನಾಯಕರು ಕರ್ನಾಟಕ ಬಿಜೆಪಿ ರಾಜಕಾರಣದಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಅದನ್ನು ರೂಪಿಸಿದವರು ಯಡಿಯೂರಪ್ಪ.. ಎನ್ನುವುದಕ್ಕೆ ಇಷ್ಟೆಲ್ಲಾ ವಿವರಿಸಿದ್ದೇನೆ..

1 comment

Leave a Reply