ಅಕ್ಕರೆಯ ವಿವೇಕ ರೈ ಅವರ ‘ಅಕ್ಕರ ಮನೆ’

ಖ್ಯಾತ ವಿಮರ್ಶಕರಾದ ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ‘ಬಹುರೂಪಿ’ ಪ್ರಕಟಣೆ ‘ಅಕ್ಕರಮನೆ’ಯ ಬಗ್ಗೆ ‘ವಿಜಯವಾಣಿ’ಯ ತಮ್ಮ ಅಂಕಣದಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ನಿಮ್ಮ ಓದಿಗಾಗಿ ನೀಡುತ್ತಿದ್ದೇವೆ.

ಖ್ಯಾತ ವಿದ್ವಾಂಸರಾದ ಪ್ರೊ ಬಿ ಎ ವಿವೇಕ ರೈಅವರಿಗೆ ೭೨ ವರ್ಷ ತುಂಬಿದ ಸಂದರ್ಭದಲ್ಲಿ ಅವರ ಎಲ್ಲಾ ಕೃತಿಗಳಿಂದ ಹೆಕ್ಕಿದ ಬರಹಗಳ ಸಂಕಲನ ಇದು.

ಈ ಕೃತಿಯನ್ನು ಕೊಳ್ಳಲು

Bahuroopi

‘ಗಿಳಿಸೂವೆ’ ದಕ್ಷಿಣ ಕನ್ನಡದಲ್ಲಿ ಒಂದು ಕಾಲಕ್ಕೆ ಬಳಕೆಯಲ್ಲಿದ್ದ ಪದ. ಗಿಳಿಸೂವೆಯೆಂದರೆ ಮನೆಯೊಳಗಿನಿಂದಲೇ ಹೊರಜಗತ್ತನ್ನು ಗಮನಿಸಬಹುದಾದ ಒಂದು ಪುಟ್ಟ ಕಿಟಕಿ. ನಿಂತ ನೆಲದ ಸತ್ವವನ್ನು ಮರೆಯದೆ ಜಗತ್ತಿನ ವಿದ್ಯಮಾನಗಳಿಗೆ ಸ್ಪಂದಿಸುವ, ಹಾಗೆಯೇ ಜಾಗತಿಕ ಆಗುಹೋಗುಗಳ ಹಿನ್ನೆಲೆಯಲ್ಲಿ ಸ್ಥಳೀಯ ಸಂಗತಿಗಳನ್ನು ವಿಶ್ಲೇಷಿಸುವ ವಿವೇಕ ರೈ ಅವರ ಚಿಂತನೆಗೆ ‘ಗಿಳಿಸೂವೆ’ ಅತ್ಯುತ್ತಮ ರೂಪಕವೆಂದು ಸಿ.ಎನ್. ರಾಮಚಂದ್ರನ್ ಹೇಳುತ್ತಾರೆ. ಇತ್ತೀಚೆಗೆ ಪ್ರಕಟವಾಗಿರುವ ಅವರ ‘ಅಕ್ಕರ ಮನೆ’ ಓದುವಾಗ ಸಹಜವಾಗಿಯೇ ಗಿಳಿಸೂವೆ ನೆನಪಾಯಿತು. ಅದಕ್ಕೆ ಕಾರಣವೂ ಇದೆ. ವಿವೇಕ ರೈ ಅವರ ಚಿಂತನೆಯ ಕ್ರಮವನ್ನು ಗಮನಿಸಿ-

ಪಣಂಬೂರು ಸುರತ್ಕಲ್ ಪರಿಸರದಲ್ಲಿ ಈಗಾಗಲೇ ತಲೆ ಎತ್ತಿರುವ, ತಲೆ ಎತ್ತುತ್ತಿರುವ, ತಲೆ ಎತ್ತಲು ಸಿದ್ಧವಾಗುತ್ತಿರುವ ಬೃಹತ್ ಕೈಗಾರಿಕೆಗಳ ಪರಿಣಾಮವನ್ನು ಕುರಿತ ಲೇಖನವನ್ನು ಓದುವಾಗ ಅವರಿಗೆ ಫ್ರಾನ್ಜ್ ಕಾಫ್ಕಾನ ‘ಮೆಟಮಾರ್ಫಸಿಸ್’ ಕಣ್ಮುಂದೆ ಬರುತ್ತದೆ. ಒಂದು ನಿರ್ದಿಷ್ಟ ಜೈವಿಕ ಪರಿಸರದಲ್ಲಿ ಹುಟ್ಟಿ ಬೆಳೆದು ಬಹಳ ದೀರ್ಘಕಾಲ ಆ ಪರಿಸರದ ಅವಿಭಾಜ್ಯ ಅಂಗವಾಗಿ ಕ್ರಿಯಾಶೀಲರಾಗಿದ್ದ ಜನರನ್ನು ಸ್ಥಳಾಂತರಗೊಳಿಸಿದಾಗ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಅವರು ಕಳೆದುಕೊಂಡು ಹೊಸ ಸ್ಥಳದಲ್ಲಿ ಬೇರೆಯೇ ಜೀವಿಗಳ ಹಾಗೆ ಪರಕೀಯ ಬದುಕನ್ನು ಯಾತನೆಯಿಂದ ನಡೆಸಬೇಕಾಗುತ್ತದೆ.

ಕಳೆದುಹೋದ ಭೂಮಿಗೆ ಬದಲಿ ಭೂಮಿ ಎನ್ನುವುದು ವ್ಯಾವಹಾರಿಕವಾಗಿ ಸರಿಯಾದರೂ ಮನುಷ್ಯಸಂಬಂಧ ಹಾಗೂ ಸಾಂಸ್ಕೃತಿಕ ನೆಲೆಯಿಂದ ಅದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಯನ್ನು ವಿವೇಕ ರೈ ಎತ್ತುತ್ತಾರೆ. ಕಾಫ್ಕಾನ ಕಾದಂಬರಿಯ ಸಂಸ ದೈತ್ಯಾಕಾರದ ಹುಳುವಾಗಿ ರೂಪಾಂತರಗೊಂಡ ಬಳಿಕ ತನ್ನ ಸಮಸ್ತ ಚಟುವಟಿಕೆಗಳನ್ನು ತನ್ನ ಒಂದು ಕೋಣೆಗೇ ಸೀಮಿತಗೊಳಿಸಬೇಕಾಯಿತು. ಹೊರಗೆ ಆರಾಮವಾಗಿ ಅಡ್ಡಾಡುತ್ತಿದ್ದ ಆತ ಈಗ ಚಿಕ್ಕ ಕೋಣೆಯೊಳಗೆ ಹುಳುವಾಗಿ ಹರಿದಾಡಬೇಕಾಯಿತು. ಮನುಷ್ಯರೂಪದಲ್ಲಿದ್ದಾಗ ತಿನ್ನಲಾಗದೇ ಹೊರಚೆಲ್ಲುತ್ತಿದ್ದ ಪದಾರ್ಥಗಳು ಹುಳುವಿನ ರೂಪದ ಆತನಿಗೆ ಈಗ ಆಹಾರವಾಗುತ್ತದೆ. ನಿರಾಳವಾಗಿ ನಡೆದಾಡುವ, ಮುಕ್ತ ವಾತಾವರಣದಲ್ಲಿ ತಮ್ಮಿಷ್ಟದಂತೆ ಜೀವಿಸುತ್ತಿದ್ದ ಜನರಿಗೆ ತಮಗೆ ಅಪರಿಚಿತವಾದ ಹೊಸ ಪರಿಸರದಲ್ಲಾಗುವ ಅನುಭವ ಕಾಫ್ಕಾನ ಕಾದಂಬರಿಯ ರೂಪಾಂತರಗೊಂಡ ಸಂಸನ ಅನುಭವವೇ ಆಗಿರುತ್ತದೆ. ನಾವು ಬದುಕುವ ಪರಿಸರಗಳೇ ನಮ್ಮ ಜೀವನ ಕ್ರಮವನ್ನೂ ರೂಪಿಸಿರುತ್ತವೆ.

ಅಭಿವೃದ್ಧಿಯ ಹೆಸರಿನಲ್ಲಿ ನಾವು ಸಾಗುತ್ತಿರುವ ಹಾದಿ ನಮಗೆ ಅನೇಕ ಸವಲತ್ತುಗಳನ್ನು ಒದಗಿಸಿದರೂ ಸಾಂಸ್ಕೃತಿಕವಾಗಿ ಹಾಗೂ ಮನುಷ್ಯ ಸಂಬಂಧದ ಭಾವಜಗತ್ತಿನ ನೆಲೆಯಲ್ಲಿ ಎದುರಿಸಬೇಕಾದ ಸಂಕಟಗಳನ್ನು ಇದಕ್ಕಿಂತ ಸಮರ್ಥವಾಗಿ ವಿವರಿಸುವುದು ಕಷ್ಟ. ಇದು ವಿವೇಕ ರೈ ಅವರ ಬರವಣಿಗೆಯ ವಿನ್ಯಾಸ. ರೂಪಕಗಳ ಮೂಲಕ ಮಾತನಾಡುವುದು ಅವರು ರೂಢಿಸಿಕೊಂಡಿರುವ ಕ್ರಮ.

ದಕ್ಷಿಣ ಕನ್ನಡ ಜಿಲ್ಲೆಯ ಆಗಿನ ಪುತ್ತೂರು ತಾಲೂಕಿನ ಪುಣಚಾ ಗ್ರಾಮದ ಅಗ್ರಾಳ ಎಂಬ ತಮ್ಮ ಹಿರಿಯರ ಮನೆಯಲ್ಲಿದ್ದ ಪುರಂದರ ರೈ ಸ್ವಾತಂತ್ರ್ಯ ಹೋರಾಟಗಾರರಾಗಿ ಅಪ್ಪಟ ಗಾಂಧಿವಾದಿಯಾಗಿ ಬದುಕಿದವರು. ಸಣ್ಣ ಕೃಷಿಕರಾಗಿ, ಸಾಹಿತ್ಯದ ಗೀಳು ಹಚ್ಚಿಕೊಂಡು, ಬರಹ, ಪತ್ರಿಕಾವರದಿ, ಸಮಾಜಸೇವೆ ಮಾಡುತ್ತ ಜೀವನ ಸಾಗಿಸಿದವರು. ಅವರ ಪತ್ನಿ ಯಮುನಾ ಚೆನ್ನಾಗಿ ಹಾಡುತ್ತಿದ್ದರು. ತಮ್ಮ ಮನೆ ‘ಜೀವನಕುಟಿ’ಯಲ್ಲಿ ಗಂಡ ಹೆಂಡತಿಯರಿಬ್ಬರೂ ಊರ ಮಕ್ಕಳನ್ನೆಲ್ಲ ಕೂಡಿಹಾಕಿ ನಾಟಕ, ಹಾಡು, ನೃತ್ಯ ಮೊದಲಾದ ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಶಿವರಾಮ ಕಾರಂತರ ಕುಟುಂಬಕ್ಕೆ ಇವರು ಆಪ್ತರಾಗಿದ್ದರು. ಇವರ ಮನೆಗೆ ಲೀಲಾ ಕಾರಂತರು ಆಗಾಗ ಬಂದು ಇವರ ಚಟುವಟಿಕೆಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಮಗ ಹುಟ್ಟಿದಾಗ ಪುರಂದರ ರೈ ಬಾಲವನಕ್ಕೆ ಹೋಗಿ ಮಗನಿಗೆ ಹೆಸರೇನಿಡುವುದೆಂದು ಕಾರಂತರನ್ನು ಕೇಳುತ್ತಾರೆ. ಆಗ ಕಾರಂತರು ‘ವಿವೇಕ’ ಎಂದು ಸೂಚಿಸುತ್ತಾರೆ. ಸರಿಯಾಗಿ ಕೇಳಿಸಿಕೊಳ್ಳದ ರೈ ‘ವಿವೇಕಾನಂದ ಎಂದೇ’ ಎಂದು ಮರುಪ್ರಶ್ನೆ ಕೇಳುತ್ತಾರೆ. ಆಗ ಕಾರಂತರು ‘ಆನಂದ ಗೀನಂದ ಏನೂ ಬೇಡ, ವಿವೇಕ ಇದ್ದರೆ ಆನಂದ ತಾನಾಗಿಯೇ ಬರುತ್ತದೆ. ಬರೇ ‘ವಿವೇಕ’ ಸಾಕು’ ಎನ್ನುತ್ತಾರೆ. ಅದೇ ಮಗು ಈಗ ವಿವೇಕ ಕಳೆದುಕೊಳ್ಳದೆ ಆನಂದದಿಂದ ಸಂತೃಪ್ತ ಜೀವನ ನಡೆಸುತ್ತಿರುವ ನಾಡಿನ ಪ್ರಸಿದ್ಧ ವಿದ್ವಾಂಸ ವಿವೇಕ ರೈ.

ವಿವೇಕ ರೈ ವ್ಯಕ್ತಿತ್ವವನ್ನು ಅವರ ಕೌಟುಂಬಿಕ ಪರಿಸರದ ಜತೆಗೆ ಬಾಲ್ಯದಲ್ಲಿ ಶಿವರಾಮ ಕಾರಂತರು ಹಾಗೂ ಯೌವನದಲ್ಲಿ ಪರಮೇಶ್ವರ ಭಟ್ಟರೂ ರೂಪಿಸಿದಂತೆ ತೋರುತ್ತದೆ. ಎಳೆತನದ ಜಾನಪದ ಜಗತ್ತು, ಕಾರಂತರ ವಿಚಾರಜಗತ್ತು, ಎಸ್.ವಿ.ಪಿ. ಅವರ ಕ್ಲಾಸಿಕಲ್ ಜಗತ್ತು ರೈ ಅವರನ್ನು ಗಾಢವಾಗಿ ಪ್ರಭಾವಿಸಿದೆ.

‘ಅಕ್ಕರಮನೆ’ಯಲ್ಲಿ ಎಪ್ಪತ್ತೆರಡು ಕೋಣೆಗಳಿವೆ. ಈಗ ಅವರಿಗೆ ಎಪ್ಪತ್ತೆರಡು ವಸಂತಗಳು. ಈ ಪುಸ್ತಕದ ಹಿಂದಿನ ‘ಬಹುರೂಪಿ’ ರೂವಾರಿ ಜಿ.ಎನ್. ಮೋಹನ್ ಹೇಳುತ್ತಾರೆ- ‘ಎಪ್ಪತ್ತೆರಡು ತುಂಬಿದ ವಿವೇಕ ರೈ ಅವರನ್ನು ಮತ್ತಷ್ಟು ಆಪ್ತವಾಗಿಸಿಕೊಳ್ಳಲು ಈ ‘ಅಕ್ಕರಮನೆ’ ಒಂದು ಪುಟ್ಟ ಪ್ರಯತ್ನ. ಅವರ ಕಾರ್ಯಕ್ಷೇತ್ರ ಎಷ್ಟು ವಿಸ್ತಾರವಾಗಿದೆ, ವೈವಿಧ್ಯಮಯವಾಗಿದೆ ಎನ್ನುವುದಕ್ಕೆ ಇದು ಕೈಗನ್ನಡಿ. ಬದುಕಿನ ಪ್ರತಿಯೊಂದರ ಬಗ್ಗೆಯೂ ಅವರಿಗಿರುವ ಆಸಕ್ತಿ, ಪ್ರತಿಯೊಂದಕ್ಕೂ ಅಪ್​ಡೇಟ್ ಆಗುವ ಅವರ ಸ್ವಭಾವವನ್ನು ಈ ಕೃತಿ ಸದ್ದಿಲ್ಲದಂತೆ ನಮಗೆ ವಿವರಿಸುತ್ತದೆ.

ರೈ ಹೆಜ್ಜೆ ಗುರುತುಗಳನ್ನು ಹಿಡಿದಿಡುವ ಪ್ರಯತ್ನ ಇಲ್ಲಿದೆ. ಇಲ್ಲಿ ಅವರು ಬರೆದ ಮೊದಲ ಕತೆ, ಮೊದಲ ಪ್ರಬಂಧ, ಮೊದಲ ಹಾಡಿನಿಂದ ಹಿಡಿದು ಅವರ ಅಂಕಣದವರೆಗಿನ ಬರಹಗಳಿವೆ. ತುಳು ಗಾದೆ, ಒಗಟು, ಫೇಸ್​ಬುಕ್ ಬರಹ, ಮುನ್ನುಡಿ, ಅನುವಾದ, ಚಿತ್ರಗೀತೆ, ವ್ಯಕ್ತಿಚಿತ್ರ, ವಿಶ್ಲೇಷಣೆ, ಚುಟುಕ- ಹೀಗೆ ಅವರ ಬರಹಲೋಕದ ಎಲ್ಲವೂ ಇಲ್ಲಿವೆ’. ಮೋಹನ್ ಸಂಪಾದಕರೆಂದು ತಮ್ಮನ್ನು ಕರೆದುಕೊಂಡಿಲ್ಲ. ಆದರೆ ರೈ ಅವರೇ ಹೇಳುವ ಹಾಗೆ ‘ಅಪಾರ ಅಕ್ಕರೆಯಿಂದ ಈ ಅಕ್ಕರಮನೆಯನ್ನು ಕಟ್ಟಿದವರು ಮೋಹನ್. ಅಕ್ಕರಮನೆ ಎಂಬ ಹೆಸರಿನಿಂದ ತೊಡಗಿ, ಇಲ್ಲಿನ ಬರಹಗಳ ಆಯ್ಕೆಯೂ ಅವರದೇ’. ಸೃಜನಶೀಲ ಚಿಂತಕರಾದ ಮೋಹನ್ ಈ ‘ಅಕ್ಕರಮನೆ’ಯನ್ನು ಚಂದ ಕಟ್ಟಿದ್ದಾರೆ.

ಇದೊಂದು ರೀತಿಯಲ್ಲಿ ರೈ ವ್ಯಕ್ತಿತ್ವವನ್ನು ಅವರದೇ ಬರಹಗಳ ಮೂಲಕ ಕಟ್ಟಿಕೊಡುವ ವಿಶಿಷ್ಟ ಪ್ರಯತ್ನ. ‘ಇಲ್ಲಿ ಯಾವುದೂ ಅಮುಖ್ಯವಲ್ಲ’ ಎಂಬ ತಾತ್ವಿಕ ಹಿನ್ನೆಲೆಯಲ್ಲಿ ರೈ ಅವರ ಸಮಗ್ರ ಬರಹದ ಒಟ್ಟಂದವನ್ನು ಹತ್ತು ವಿಭಾಗಗಳಲ್ಲಿ ಕಟ್ಟಿಕೊಡಲು ಪ್ರಯತ್ನಿಸಿರುವುದು ಶ್ಲಾಘನೀಯ.

ನಮ್ಮ ಒಳ್ಳೆಯ ಕವಿಗಳಲ್ಲೊಬ್ಬರಾದ ಜಿ.ಎನ್. ಮೋಹನ್ ಹಿರಿಯರ ಬಗ್ಗೆ ಗೌರವ, ಕಿರಿಯರ ಬಗ್ಗೆ ಪ್ರೀತಿಯಿಟ್ಟುಕೊಂಡು ಕನ್ನಡ ಸಂಸ್ಕೃತಿಯನ್ನು ಕಟ್ಟುತ್ತಿರುವುದನ್ನೂ ನಾವಿಲ್ಲಿ ಗಮನಿಸಲೇಬೇಕು. ಅವರು ಸಂಪಾದಿಸಿದ ‘ಎಕ್ಕುಂಡಿ ನಮನ’ ನನಗಿಲ್ಲಿ ನೆನಪಾಗುತ್ತಿದೆ. ಇದೊಂದು ಉಪಯುಕ್ತ ಆಕರಕೃತಿ. ತಮ್ಮ ಅನುವಾದಗಳ ಮೂಲಕ ಪ್ರಗತಿಪರ ವಿಚಾರಗಳನ್ನು ಕನ್ನಡ ಮನಸ್ಸುಗಳಿಗೆ ತಲುಪಿಸುವುದರ ಮೂಲಕ ವೈಚಾರಿಕ ಜಾಗೃತಿಯನ್ನು ಎಚ್ಚರವಾಗಿಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ‘ಬಹುರೂಪಿ’ಯ ಮೂಲಕ ಅನೇಕ ಯುವ ಪ್ರತಿಭೆಗಳನ್ನು ಪೋ›ತ್ಸಾಹಿಸುತ್ತಿದ್ದಾರೆ.

‘ಅವಧಿ’ ಸಾಮಾಜಿಕ ಜಾಲತಾಣದ ಮೂಲಕ ನನ್ನಂಥ ಅನೇಕರಿಗೆ ಸಮಕಾಲೀನ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಅತ್ಯಂತ ಜವಾಬ್ದಾರಿಯಿಂದ ಪರಿಚಯ ಮಾಡಿಕೊಡುತ್ತಿದ್ದಾರೆ. ಯಾವುದೇ ಸಾಂಸ್ಕೃತಿಕ ಸಂಗತಿಯೂ ನನಗೆ ಮೊದಲು ತಿಳಿಯುವುದು ‘ಅವಧಿ’ಯ ಮೂಲಕ. ತಂತ್ರಜ್ಞಾನವನ್ನು ಸಂಸ್ಕೃತಿ ವಲಯದಲ್ಲಿ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದೆಂಬುದಕ್ಕೆ ಮೋಹನ್ ಇಲ್ಲಿ ನಿದರ್ಶನವೊದಗಿಸಿದ್ದಾರೆ. ಈ ಎಲ್ಲವನ್ನೂ ಅವರು ತಮ್ಮ ಪಾಡಿಗೆ ತಾವು ಸದ್ದಿಲ್ಲದಂತೆ ಮಾಡುತ್ತಿದ್ದಾರೆ. ಈಗ ‘ಅಕ್ಕರಮನೆ’ಯೂ ಇದರ ವಿಸ್ತರಣೆ.

ತಮ್ಮ ಗುರುಗಳಾದ ಪರಮೇಶ್ವರ ಭಟ್ಟರು ಹಾಕಿಕೊಟ್ಟ ಹಾದಿಯಲ್ಲಿ ವಿವೇಕ ರೈಯವರು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಮೂರು ದಶಕಗಳ ಕಾಲ ಕಟ್ಟಿ ಬೆಳೆಸಿದ ಕ್ರಮ ಕನ್ನಡ ಸಂಸ್ಕೃತಿ ಚರಿತ್ರೆಯ ಒಂದು ಪ್ರಮುಖ ಅಧ್ಯಾಯ. ಇತ್ತೀಚೆಗೆ ಅವರು ತಮ್ಮ ಅಂಕಣಬರಹಗಳಲ್ಲಿ ಆ ಇತಿಹಾಸವನ್ನು ವಿವರಿಸಿದ್ದಾರೆ. ಆ ವಿಭಾಗದ ಜತೆ ಅವರೂ ಬೆಳೆದಿದ್ದಾರೆ, ವಿಭಾಗವನ್ನೂ ನಿಸ್ಪಹತೆಯಿಂದ ಎಲ್ಲರ ಸಹಕಾರದೊಂದಿಗೆ ಕಟ್ಟಿ ಬೆಳೆಸಿದ್ದಾರೆ. ನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ ಮೈಸೂರು ಮುಕ್ತ ವಿಶ್ವವಿದ್ಯಾಲಯಗಳ ಉಪಕುಲಪತಿಗಳಾಗಿ ಯಾವುದೇ ವಿವಾದಗಳಿಗೆ ಎಡೆಮಾಡಿಕೊಡದೆ ಆಡಳಿತ ನಡೆಸಿದ ರೀತಿ ಅವರ ದಕ್ಷತೆ ಹಾಗೂ ಪ್ರಾಮಾಣಿಕತೆಗೆ ನಿದರ್ಶನ.

ಆಡಳಿತಗಾರರಾಗಿ ಮಾತ್ರವಲ್ಲ, ಅವರೊಬ್ಬ ಯಶಸ್ವಿ ವಿದ್ಯಾರ್ಥಿಪ್ರಿಯ ಅಧ್ಯಾಪಕರೂ ಹೌದು. ಪರಂಪರೆ ಹಾಗೂ ಆಧುನಿಕ ಸಾಹಿತ್ಯವೆರಡನ್ನೂ ಆಳವಾಗಿ ಅಧ್ಯಯನ ಮಾಡಿರುವ ವಿರಳ ವಿದ್ವಾಂಸರಲ್ಲಿ ಅವರೂ ಒಬ್ಬರು. ಶಾಸ್ತ್ರಸಾಹಿತ್ಯದಲ್ಲಿಯೂ ಅವರಿಗೆ ಪರಿಣತಿಯಿದೆ. ಜರ್ಮನಿಯ ವ್ಯೂತ್ಸ್​ಬರ್ಗ್ ವಿಶ್ವವಿದ್ಯಾಲಯದಲ್ಲಿಯೂ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನನ್ನ ವಿದ್ಯಾಗುರು ಜಿ.ಎಸ್. ಶಿವರುದ್ರಪ್ಪನವರಂತೆಯೇ ವಿವೇಕ ರೈ ಅವರೂ ಕನ್ನಡ ಸಂಸ್ಕೃತಿಯನ್ನು ಅನೇಕ ನೆಲೆಗಳಲ್ಲಿ ಜೀವಂತವಾಗಿಡಲು ಪ್ರಯತ್ನಿಸಿದಂಥವರು.

ಅವರಿಗೆ ಕನ್ನಡ, ತುಳು ಹಾಗೂ ಇಂಗ್ಲಿಷ್ ಈ ಮೂರೂ ಭಾಷೆಗಳಲ್ಲಿ ಪ್ರಭುತ್ವವಿದೆ. ಈ ಮೂರೂ ಭಾಷೆಗಳಲ್ಲಿ ಅವರು ರಚಿಸಿರುವ ಕೃತಿಗಳ ಸಂಖ್ಯೆ ಐವತ್ತರ ಆಸುಪಾಸು. ಅವರ ಮೊದಲ ಕೃತಿ ‘ತುಳು ಗಾದೆಗಳು’ 1971ರಲ್ಲಿ ಪ್ರಕಟವಾಯಿತು. ಸುಮಾರು ನಾಲ್ಕು ದಶಕಗಳಿಂದಲೂ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿ ಸಾಹಿತ್ಯಕೃಷಿ ಮಾಡುತ್ತ ಬಂದಿದ್ದಾರೆ.

ತುಳು ಸಾಹಿತ್ಯಕ್ಕೆ ರೈ ಅವರ ಕೊಡುಗೆ ಅತ್ಯಂತ ಮಹತ್ವದ್ದು. ಅವರು ಪಿಎಚ್​ಡಿ ಪದವಿಯ ಅಧ್ಯಯನಕ್ಕಾಗಿ ಆರಿಸಿಕೊಂಡದ್ದು ‘ತುಳು ಜನಪದ ಸಾಹಿತ್ಯ’. ಹಾ.ಮಾ. ನಾಯಕರ ಮಾರ್ಗದರ್ಶನದಲ್ಲಿ ನಡೆಸಿದ ಈ ಅಧ್ಯಯನದ ನಂತರ ವಿವೇಕ ರೈ ತುಳು ಜಗತ್ತನ್ನು ಹೊರಜಗತ್ತಿಗೆ ಅನಾವರಣ ಮಾಡುವ ಕೆಲಸವನ್ನು ಸಮರ್ಥವಾಗಿ ಮಾಡಿದರು. ವಿಶ್ವವಿದ್ಯಾಲಯದಲ್ಲಿ ತುಳು ಅಧ್ಯಯನಕ್ಕೆ ತುಳುನಾಡಿನ ಇತಿಹಾಸ, ತುಳು ಭಾಷೆ, ಸಾಹಿತ್ಯ-ಜಾನಪದ-ಯಕ್ಷಗಾನ ಎಂಬ ಮೂರು ಪತ್ರಿಕೆಗಳ ಪಠ್ಯವನ್ನು ಎಲ್ಲರ ಸಹಕಾರದೊಂದಿಗೆ ಸಿದ್ಧಪಡಿಸಿ, ತುಳು ಸಾಹಿತ್ಯಕ್ಕೆ ಅಧ್ಯಯನದ ಚೌಕಟ್ಟನ್ನು ಒದಗಿಸಿದರು.

ತುಳು ಅಕಾಡೆಮಿಯ ಅಧ್ಯಕ್ಷರಾಗಿ ಅವರು ಮಾಡಿದ ಕೆಲಸವನ್ನೂ ನಾವಿಲ್ಲಿ ನೆನಪಿಸಿಕೊಳ್ಳಬಹುದು. ಪೊ›. ಲಾರಿ ಹಾಂಕೊ ಮತ್ತು ಪೊ.› ಚಿನ್ನಪ್ಪಗೌಡರೊಡನೆ ಕೂಡಿ ಇವರು ಮಾಡಿರುವ ತುಳು ಮೌಖಿಕ ಮಹಾಕಾವ್ಯ ‘ಸಿರಿ’ಯ ಇಂಗ್ಲಿಷ್ ಅನುವಾದ ಮಹತ್ವದ್ದು. ಇತ್ತೀಚೆಗೆ ಅವರು ಸಿ.ಎನ್. ರಾಮಚಂದ್ರನ್ ಜತೆಗೂಡಿ ಪ್ರಕಟಿಸಿದ ‘ಇಚಠಠಜ್ಚಿಚ್ಝ ಓಚ್ಞ್ಞಛಚ ಕಟಛಿಠ್ಟಿಢ ಚ್ಞಛ ಕ್ಟಟಠಛಿ: ಅ ್ಕಚಛಛ್ಟಿ’ ಸಹ ಗಮನಿಸಬೇಕಾದಂಥದು. ಲೋರ್ಕಾನ ನಾಟಕದ ಅನುವಾದ, ಕೆಲವು ಕತೆ, ಕವಿತೆಗಳ ಅನುವಾದವನ್ನೂ ರೈ ಮಾಡಿದ್ದಾರೆ. ಅವರ ವೈಚಾರಿಕ ಪ್ರಬಂಧಗಳು ವಿಚಾರಸಾಹಿತ್ಯಕ್ಕೆ ಉತ್ತಮ ಕೊಡುಗೆ. ವಿಮರ್ಶೆ, ಸಂಶೋಧನೆಯಲ್ಲಿಯೂ ಅವರ ಕೆಲಸ ಗಮನಾರ್ಹ.

ಪಾಶ್ಚಾತ್ಯ ಮಿಷನರಿಗಳು ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಮಾಡಿರುವ ಕೆಲಸ ಅತ್ಯಂತ ಮಹತ್ವದ್ದು. ಧಾರ್ವಿುಕ ಉದ್ದೇಶದಿಂದಲೇ ಬಂದರೂ ಅವರ ಸಾಂಸ್ಕೃತಿಕ ಸಾಧನೆ ಗಣನೀಯವಾದುದು. ಕಿಟೆಲ್, ಮೋಗ್ಲಿಂಗ್, ವೈಗ್ಲೆ, ಮ್ಯಾನರ್, ಬ್ರಿಗೆಲ್, ಗುಂಡರ್ಟ್, ಮ್ಯಾಕ್ಸ್ ಮುಲರ್, ರೈಸ್ ಡೇವಿಡ್ಸ್, ಬ್ಯೂಹ್ಲರ್, ಇತ್ತೀಚಿನ ಹೈಡ್ರುನ್ ಬ್ರೂಖ್ನರ್ ಮೊದಲಾದವರ ಕೊಡುಗೆಯನ್ನು ವಿವೇಕ ರೈ ಅವರು ವಿಶ್ಲೇಷಣೆಯೊಂದಿಗೆ ದಾಖಲಿಸುತ್ತಾರೆ. ಸಾಂಸ್ಕೃತಿಕ ಕೊಡುಕೊಳೆಯ ಬಗ್ಗೆ ಅನೇಕ ಒಳನೋಟಗಳನ್ನು ನೀಡುವ ಮಾಹಿತಿಗಳು ಅವರ ಬರಹಗಳಲ್ಲಿವೆ. ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಇವರೂ ಅಂಥದೇ ಕೆಲಸ ಮಾಡುತ್ತಿದ್ದಾರೆ.

ಸುಮಾರು ನಾಲ್ಕು ದಶಕಗಳಿಂದ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಅವರದು ಗಂಭೀರ ವ್ಯಕ್ತಿತ್ವ. ಅವರೆಂದೂ ಉದ್ವೇಗಕ್ಕೊಳಗಾಗಿ ಮಾತನಾಡಿದ್ದನ್ನು ನಾನು ಕಂಡಿಲ್ಲ. ಲಘುವಾದ ಮಾತುಗಳಿಂದಲೂ ಅವರು ದೂರ. ಅವರ ಮಾತು-ಬರಹದ ಹಿಂದೆ ಆಳವಾದ ಅಧ್ಯಯನವಿರುತ್ತದೆ. ಆಪ್ತ ಮಾತುಕತೆಯಲ್ಲಿನ ಅವರ ತೆಳುಹಾಸ್ಯ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ನಿಷ್ಕಲ್ಮಷ ಪ್ರೀತಿಯ ವಿವೇಕ ರೈ ಸುಸಂಸ್ಕೃತ ಕನ್ನಡ ಮನಸ್ಸಿನ ಪ್ರತೀಕ.

ಈ ಕೃತಿಯನ್ನು ಕೊಳ್ಳಲು- 

Bahuroopi

Leave a Reply