ಸುಮನಾ ‘ಹನಿ’

 

 

 

 

 

 

 

 

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ ಹೊಸಬರ ಬರಹ. ಹೊಸ ಲೇಖಕರನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದ್ದು ಹೊಸಬರಿಗೆ ಅವಕಾಶ ನೀಡುತ್ತಿದೆ.

ಇಂಜಿನಿಯರ್ ಸುಮನ ಅವರು ಕೆಲವು ಹನಿಗಳನ್ನು ಕಳುಹಿಸಿದ್ದಾರೆ

 

                                                                                    ಸುಮನ

ಖಾಲಿಯಾದ ಹನಿಗಳು!

ಖಾಲಿತನ ತುಂಬೋಕೆ ಪದಗಳಿಲ್ಲದೇ ತಡಕಾಡುವಾಗ ಕೈಗೆಟುಕಿದ್ದು ಕೇವಲ ನಿಟ್ಟುಸಿರು!

ನಾವಾಗಿ ಖಾಲಿ ಆಗೋದು ಬೇರೆ; ಖಾಲಿತನವೇ ಬಂದು ಕವುಚಿ ಬೀಳೋದೇ ಬೇರೆ!

ಎಷ್ಟೋ ವೇಳೆ ಕಣ್ಣುಗಳು ಹುಡುಕೋದು ಕೇವಲ ನೇವರಿಸುವ ಕೈ ಅಥವಾ ಒರಗಲೊಂದು ಭುಜ!
ಇಲ್ಲವೇ ಬಾಚಿ ತಬ್ಬುವ ತೋಳು ಅಥವಾ ಪುಟ್ಟದೊಂದು ಮಡಿಲನ್ನು!

ಬದುಕಿನ ಖಾಲಿತನವನ್ನು ಖಾಲಿ ಮಾಡುವವರು ಸಿಕ್ಕಾಗ,
ಅವರನ್ನು ತುಂಬಿಕೊಳ್ಳುತ್ತಲೇ ಖಾಲಿಯಾಗತೊಡಗುತ್ತೇವೆ,
ಮತ್ತಷ್ಟು ತುಂಬಿಕೊಳ್ಳುವ ಸಲುವಾಗಿ!

ಕೆಲವೊಂದು ಸಲ ಸುಮ್ಮನೆ ಹಗುರಾಗೋಕೆ ಬೇಕಿರೋದು ಕಿವಿಯಾಗೋ ಒಂದು ಹೃದಯ, ಮತ್ತೂ ಕೆಲವೊಮ್ಮೆ ಮೌನದಲ್ಲೇ ಸಾಂತ್ವನ ಹೇಳುವೊಂದು ಬೆಚ್ಚ ಬೆಚ್ಚಗಿನ ಮಡಿಲು!


ನನ್ನ ಖಾಲಿತನವನ್ನು ಖಾಲಿ ಮಾಡುವ ಶಕ್ತಿ ಕೇವಲ ನಿನ್ನ ಬರುವಿಕೆಗಷ್ಟೇ ಅಲ್ಲ, ನೆನಪಿಗೂ ಇರುವುದು ಸೋಜಿಗ ಈಗೀಗ!

ನನ್ನ ಖಾಲಿತನವ ಖಾಲಿ ಮಾಡಲು ಬಂದು, ಅವನೇ ಖಾಲಿಯಾಗಿ ಹೋದ! ಹೋಗುವಾಗ ನನ್ನನ್ನೇ ತುಂಬಿಕೊಂಡು ಹೋದ!

ಖಾಲಿಯಾಗುತ್ತಾ ತುಂಬಿಕೊಳ್ಳುವವ ಜ್ಞಾನಿ, ತುಂಬಿಕೊಳ್ಳುತ್ತಲೇ ಖಾಲಿಯಾಗುವವ ಮಹಾಜ್ಞಾನಿ!

ಅವಳ ತುಂಬಿಕೊಳ್ಳುತ್ತಾ ತಾನು ಖಾಲಿಯಾದವನು, ಅವಳಲ್ಲಿ ತುಂಬಿದ್ದು ತುಂಬು ಕಾಮನಬಿಲ್ಲು!

 

2 comments

  1. ಹೊಸಬರ ಬರಹ ಅನಿಸ್ತಿಲ್ಲ.ಪ್ರಬುದ್ಧವಾಗಿದೆ.ಇಷ್ಟ ಆಯ್ತು

Leave a Reply