ಒಂಟಿ ಸೇತುವೆ ಊರಿನ ಸೆಬಾಸ್ಟಿನ್ ಮೇಷ್ಟ್ರು..

ಎರಡೇ ಕ್ಲಾಸ್‍ರೂಮಿನ ಸ್ಕೂಲಿನ ಗೋಡೆಗಳು ಪ್ರಜ್ಞಾಪೂರ್ವಕವಾಗಿ ತಿಳಿನೀಲಿ ಬಣ್ಣದ ಹೂಗಳನ್ನು ಮೈ ತುಂಬಾ ಅರಳಿಸಿಕೊಂಡು ನಗುತ್ತಿದ್ದವು. ಸವೆದ ಬ್ಲಾಕ್‍ಬೋರ್ಡುಗಳು ಶಿಲುಬೆಗೇರಿದ ಕ್ರಿಸ್ತನಂತೆ ಎರಡು ಕ್ಲಾಸ್‍ರೂಮ್‍ಗಳಲ್ಲೂ ಮೌನವಾಗಿ ನೇತುಬಿದ್ದಿರುವುದನ್ನು ನೋಡುವಾಗಲೇ ದೃಷ್ಠಿಯನ್ನು ಪ್ಲಾಸ್ಟಿಕ್ ಕುರ್ಚಿಯ ಕಡೆಗೆ ಹೊರಳಿಸಿದರೆ ಅದು ಒಂಟಿಯಾಗಿ ಪರಿತಪಿಸುತ್ತಿದ್ದೇನೆ ಎನ್ನುವ ಅನುಮಾನವನ್ನು ಹುಟ್ಟಿಸಿಬಿಡುತ್ತಿತ್ತು. ಒಂದಿಷ್ಟೇ ದೂರಕ್ಕೆ ಸರಿದು ನೋಡಿದರೆ, ಇದೇ ಮೊದಲ ಬಾರಿಗೆ ಮನೆಗೆ ಬಂದಿದ್ದ ನೆಂಟರನ್ನ ಮಿಕಿಮಿಕಿ ನೋಡುವ ಮನೆಯ ಹಠಯೋಗದ ಮಗುವಿನಂತೆಯೂ ಆ ಕುರ್ಚಿ ತೋರುತ್ತಿತ್ತು.

ಕ್ಲಾಸ್‍ರೂಮಿನ ಗೋಡೆಯ ಮೊಳೆಗೆ ಜೋತುಬಿದ್ದು ಹಾಗೊಮ್ಮೆ ಹೀಗೊಮ್ಮೆ ಬೀಸುವ ಗಾಳಿಗೆ ಉಯ್ಯಾಲೆಯಾಡುತ್ತಿದ್ದ ಕ್ಯಾಲೆಂಡರ್‍ಗೆ ಅಸ್ತಿತ್ವವಿರಲಿಲ್ಲ. ಅದಕ್ಕೊಂದು ಸ್ವಂತಿಕೆ ಎನ್ನುವುದರ ಪರಿಚಯವಿರಲಿಲ್ಲ. ಸ್ನಾನದ ನಂತರ ಬದಲಾಯಿಸುವ ಉಡುಗೆಯಂತೆ ತಿಂಗಳು ಕಳೆದು ಮಾರನೆ ದಿನವೇ ಅಪರಿಚಿತ ಕೈಯೊಂದು ಕ್ಯಾಲೆಂಡರ್‍ನ ಹಾಳೆಯೊಂದರ ಪಾರ್ಶ್ವವೊಂದನ್ನು ಬದಲಾಯಿಸಿಬಿಡುತ್ತಿತ್ತು. ಹೀಗೆ ಎಳೆಯೊಂದನ್ನು ಕಳಚಿಕೊಂಡು ಮತ್ತೊಂದು ಸಾವಿಗೆ ಹತ್ತಿರವಾಗುತ್ತಿದ್ದಂತೆ ಕ್ಯಾಲೆಂಡರ್‍ಗೆ ದುಃಖವಾಗಿರಬಹುದು.

ಅದು ಹೆಸರಿಗಷ್ಟೇ ಸ್ಕೂಲು. ಕ್ಲಾಸ್‍ರೂಮಿನ ಯಾವ ತುದಿಯಲ್ಲೂ ಕಾಲಿಗಂಟುವ ಸವೆದ ಬಳಪದ ದೂಳಿರಲಿಲ್ಲ. ಮಕ್ಕಳ ಕಿರುಚಾಟದ ಪ್ರತಿಧ್ವನಿಗಳಿರಲಿಲ್ಲ. ಬೀದಿಯಿಂದ ನಡೆದುಬಂದಿದ್ದ ಕಾಲುಗಳನ್ನು ಶುಚಿಗೊಳಿಸುವುದಕ್ಕೆ ಹಸಗೆ ಬಟ್ಟೆಗಳು ಮಾತ್ರ ಕಾಲಿನ ಬುಡದಲ್ಲಿ ಬಿದ್ದುಕೊಂಡಿರುವಂತೆ ಮೌನವೊಂದು ಅವ್ಯಕ್ತವಾಗಿತ್ತು.

ಯಾರನ್ನೂ ಮಾತನಾಡಿಸಲು ಅಶಕ್ತವಾಗಿ ಉಳಿದುಹೋಗಿದ್ದ ಮನೆಯ ಖಾಯಿಲೆಯ ಮುದುಕಿಯೊಬ್ಬಳನ್ನು ಹೋಲುತ್ತಿದ್ದ ಕ್ಲಾಸ್‍ರೂಮ್‍ಗಳು, ಮೈ ತುಂಬಾ ಹೂ ಚಿಗುರಿಸಿಕೊಂಡು ಬಾಲ್ಯದ ದಿನಗಳನ್ನು ನೆನೆಯುವ ಹುಡುಗಿಯೊಬ್ಬಳಂತೆ ತೋರುತ್ತಿತ್ತು.

ಅದು ಕೇರಳದ ನಿಲಂಬೂರ್ ಜಿಲ್ಲೆಯ ಸಮೀಪದ ಒಂದು ಕಿರಿದಾದ ಹಳ್ಳಿಯ ಸ್ಕೂಲು.

ಸರ್ಕಾರದ ಅನುದಾನವನ್ನ ಅಕ್ಷರಶಃ ದಾನದಂತೆ ಬೇಡಿ ಪಡೆಯುತ್ತಿರುವ ಸರ್ಕಾರಿ ಸ್ಕೂಲು. ಇಂದಿಗೂ ಕಾಲುನಡಿಗೆಯನ್ನೇ ಅವಲಂಭಿಸಿರುವ ಮಳೆಯ ಊರು. ಕಣ್ಣು ಚಾಚಿದಷ್ಟು ಹಸಿರು, ಬರಿದಾಗದ ಅಕ್ಷಯ ಪ್ರೀತಿಯಂತೆ ಬತ್ತಿಹೋಗದೆ ಮೈದುಂಬಿ ಹರಿಯುವ ನದಿ, ಕೈ ಚಾಚಿ ಎಳೆದು ಮುದ್ದಿಸುವ ಸೇತುವೆಯ ಹೊರತಾಗಿ ಮತ್ತೇನೂ ಇರದ ಊರು.

ನೋಡಲೆಬೇಕು ಎನಿಸಿದರೆ ಕಣ್ಣಿನತುದಿಯ ನೋಟಕ್ಕೆ ಗೋಚರಿಸುವ ಎಳೆಯ ನಕ್ಷತ್ರದಷ್ಟೇ ಕಿರಿದಾಗಿ ದೂರದಲ್ಲಿ ಕಾಣುವ ಐದಾರು ಮನೆಗಳು, ರಬ್ಬರ್‍ತೋಟಗಳು, ನಾಯರ್ ಮನೆತನದ ಒಬ್ಬನೇ ಗಟ್ಟಿ ಅಜ್ಜ. ಅವನ ಮನೆಯ ಮಗ್ಗುಲಿನಲ್ಲಿ ಸೂಜಿಮೊನೆಯಷ್ಟೇ ಸಣ್ಣದಾದ ಹೊಗೆಯ ಎಳೆಯೊಂದು ಆಕಾಶದಲ್ಲಿ ಲೀನವಾಗಿಸುವ ಫ್ಯಾಕ್ಟರಿ ಎನ್ನುವುದಕ್ಕೆ ಲಾಯಕ್ಕಲ್ಲದಿದ್ದರೂ ಸಣ್ಣಘಟಕ ಎನ್ನುವುದಕ್ಕೆ ಅನ್ವರ್ಥವಾಗಬಹುದಾದ ಬಿಡಾರವೊಂದು ಕಾಣಿಸಿಕೊಳ್ಳುತ್ತದೆ.

ಅಲ್ಲಿ ಅವುಗಳಷ್ಟೇ ಊರು ಎನ್ನುವುದಕ್ಕೆ ಸಾಕ್ಷಿ. ಎಡವಿ ಬಿದ್ದವನ ಮೈಮೇಲಿನ ತರಚು ಗಾಯದಂತೆ ತುಂಬು ಹಸಿರಿನ ನಡುವಿನಲಿ ಎರಡು ಗೇಣಿನ ಕಾಲುನಡಿಗೆಯ ಹಾದಿಯೊಂದು ಸೀಳಿಕೊಂಡು ನಿಂತಿರುವುದು ಕಾಣುತ್ತದೆ. ಅದೇ ಕಾಲುಹಾದಿಯ ಬೆನ್ನನ್ನು ಹಿಡಿದು ಹೊರಟರೆ ಕಾಣಸಿಗುವ ಮಗ್ಗುಲಿನ ಸೇತುವೆಯ ಮತ್ತೊಂದು ತುದಿಗೆ ಮುನಿಸಿನಿಂದ ಮುಖ ತಿರಿಗಿಸಿಕೊಂಡಿರುವ ಅಪ್ಪನಂತೆ ಮತ್ತೊಂದು ಊರು.

ಐದಾರು ಹೆಂಚಿನ ಮನೆಗಳು. ರಬ್ಬರ್‍ತೋಟ. ಹಠದಿಂದ ಊರಿನಲ್ಲಿಯೇ ಉಳಿದುಹೋಗಿರುವ ಹತ್ತಾರು ಯುವಕರು, ಒಂದು ಪೋಸ್ಟ್ ಆಫೀಸಿನ ಮತ್ತು ಮನೋರಮಾ ಪತ್ರಿಕೆಯನ್ನು ಮಾರುವ ಕಿರಾಣಿಯ ಅಂಗಡಿಯ ಹೊರತಾಗಿ ಮತ್ತೇನೂ ಇರದ ಎಳೆಯ ಮಗುವಿನಂತಹ ಊರು. ಆ ಊರಿನಲ್ಲಿ ಸರ್ಕಾರಿ ಸ್ಕೂಲಿನ ಸೌಲಭ್ಯವಿಲ್ಲ. ಎರಡು ಊರಿನಿಂದ ಕೂಡಿದರೂ ಮಕ್ಕಳ ಸಂಖ್ಯೆ ಐವತ್ತು ದಾಟುವುದಿಲ್ಲ ಎನ್ನುವ ಕಾರಣಕ್ಕೆ ಆ ಎರಡೂ ಊರುಗಳಿಗೂ ಅರವತ್ತರ ದಶಕದಿಂದ ಇರುವುದು ಒಂದೇ ಸ್ಕೂಲು. ಬೆಸೆಯುವುದಕ್ಕೆ ಹೆಣಿಗೆಯಾಗಿ ಅಂದಿನಿಂದಲೂ ನಯವಾಗಿ ನಿಂತಿರುವುದು ಅದೊಂದೇ ಸೇತುವೆ. ಈಗ ಅಲ್ಲಿರುವುದು ಒಬ್ಬರೇ ಟೀಚರ್.

ಸೆಬಾಸ್ಟಿನ್ ಅವರ ಹೆಸರು.

 

ಮಲಯಾಳಂ, ಗಣಿತ, ವಿಜ್ಞಾನ ಕೆಲವೊಮ್ಮೆ ಅಗತ್ಯ ಎನಿಸಿದಾಗ ಆಟವನ್ನು ಆಡಿಸುವ ಸೆಬಾಸ್ಟಿನ್ ಮೇಷ್ಟರು ಅದಾಗಲೇ ಐವತ್ತರ ಗಡಿಯನ್ನು ದಾಟಿಯನ್ನು ಕ್ರಮಿಸಿದ್ದಾರೆ. ಸೇತುವೆ ಆ ತುದಿಯ ಊರಿನವಳಾದ ಕುಂಞ ಈ ಊರಿನ ಸ್ಕೂಲಿನಲ್ಲಿ ಸರ್ಕಾರಿ ಪ್ರಾಯೋಜಿತ ಆಯಾ. ಕೆಲಸದ ಸಮಯವನ್ನು ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಲೇ ಕಳೆಯುವ ಕುಂಞ ಸ್ಕೂಲಿಗೆ ಅಪರೂಪದ ಅಥಿತಿ.

 

ಹೊಸಪುಸ್ತಕದ ಮುಖಪುಟ ಸಾಫಾಗಿರುವಂತೆ ಕುಂಞಯ ಕಣ್ಣುಗಳು ಕನ್ನಡಕವಿಲ್ಲದೆ ಹೊಳೆಯುತ್ತಿದ್ದವು.  ಗಾಟಿಯಂತೆ ಕಾಣುವ ಕುಂಞ ಬೇಡಿಕೊಂಡರೂ ಏನನ್ನೂ ಮಾತನಾಡುತ್ತಿರಲಿಲ್ಲ. ಆದರೆ ಸೆಬಾಸ್ಟಿನ್ ಮಾಸ್ಟರ್ ಮಾತ್ರ ಹುಡುಗಾಟಿಯ ಹುಡುಗನಂತೆ ನಿರರ್ಗಳವಾಗಿ ಮಾತುಗಳನ್ನು ಹರಿಸುತ್ತಿದ್ದರು. ಎಲ್ಲವನ್ನು ಇಂಗ್ಲಿಷ್‍ನಲ್ಲಿ ಹೇಳಿಕೊಳ್ಳುವಾಗಲೂ ಅದರ ಅರ್ಥಗಳು ಅಸ್ಖಲಿತವಾಗಿ ಒಳಗಿಳಿಯುತ್ತಿದ್ದವು.

ಹೂ ಚಿಗುರಿಸಿಕೊಂಡಿದ್ದ ಗೋಡೆಗಳ ಸ್ಕೂಲಿನ ಹೆಬ್ಬಾಗಿಲಿನಲ್ಲಿ ಕೂರಿಸಿಕೊಂಡು ನನ್ನ ನೀಲಿಫ್ರೇಮಿನ ಕನ್ನಡಕದ ರೇಟು ಕೇಳುತ್ತಾ ಮಾತಿಗಿಳಿದ ಸೆಬಾಸ್ಟಿನ್ ಮೇಷ್ಟರು ಸಕಲಕಲಾವಲ್ಲಭರು. ಒಡಲಿನಲ್ಲಿ ಎಲ್ಲಿಯೂ ಪ್ರಕಟವಾಗದ ಕತೆಗಳನ್ನು ಹುದುಗಿಸಿಟ್ಟುಕೊಂಡೇ ಮೌನವಾಗಿ ತಿರುಗುವ ಅವರು ಬದುಕನ್ನು ನೋಡುವ ಕ್ರಮ ನಿಜಕ್ಕೂ ಅನಿಮಿತವಾದದ್ದು. ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಅವರು ಊರಿನ ಎಲ್ಲಾ ಮನೆಗಳಲ್ಲೂ ಒಬ್ಬರಾಗಿಹೋಗಿದ್ದಾರೆ.

ಅಪರೂಪ ಎನ್ನುವಂತೆ ಕಾಣುವು ಊರಿನ ಜನಗಳಿಗೆ ಸೆಬಾಸ್ಟಿನ್. . ಸೆಬಾಸ್. . .ಸರ್. . .ಸ್ಕೂಲ್‍ಸರ್ ಹೀಗೆ ಇರುವಷ್ಟು ಜನಗಳಿಗೂ ಒಂದೊಂದು ವಿಶೇಷಣದಲ್ಲಿ ಒಳಗಾಗಿದ್ದಾರೆ. “ಆ ಬಾಲಿವುಡ್ ಹೀರೋಯಿನ್ ತಾಪ್ಸಿಪನ್ನು ಇಷ್ಟವಾದಳು, ಅವಳು ಇದ್ದಳಲ್ಲ, ಅದಕ್ಕಾಗಿ ಆಕ್ಟೀವಾ ಫೈವ್ ಜಿ ಸ್ಕೂಟರ್ ತೆಗೆದುಕೊಂಡೆ ಸರ್” ಎನ್ನುತ್ತ ಸುತ್ತಲಿನ ಗುಡ್ಡವೂ ಕಂಗೆಡುವಂತೆ ನಗುವ ಸೆಬಾಸ್ಟಿನ್ ಮೇಷ್ಟರು ಐವತ್ತರ ಸಮೀಪದಲ್ಲಿಯೂ ಬ್ಯಾಚುಲರ್.

ಸರ್ ನೀವು ಏಕೆ ಇನ್ನೂ ಮದುವೆಯಾಗಿಲ್ಲ? ಎಂದು ಸಣ್ಣದಾಗಿ ಪ್ರಶ್ನಿಸಿದರು ಸೆಬಾಸ್ಟಿನ್ ಮೇಷ್ಟರು ಊರಿನ ಸೇತುವೆಯಷ್ಟೇ ಧೀರ್ಘ ಉತ್ತರವನ್ನು ನೀಡುತ್ತಾರೆ. ಸ್ಕೂಲಿನ ಗೋಡೆಗಳ ಮೈ ಮೇಲೆ ಅರಳಿ ಅದೇ ಗೋಡೆಗಳ ಮೇಲೆ ಬಾಡಿಹೋಗುವ ತಿಳಿನೀಲಿ ಬಣ್ಣದ ಹೂವಿನಂತೆ ಕಾಣುವ ಸೆಬಾಸ್ಟಿನ್ ಮೇಷ್ಟರು ನನಗೆ ನೀಡಿದ ಉತ್ತರವನ್ನು ಈಗಾಗಲೇ ಅದೆಷ್ಟು ಜನರಿಗೆ ನೀಡಿರಬಹುದು ಎನ್ನುವ ಪ್ರಶ್ನೆ ನನಗೆ ಈ ಕ್ಷಣದಲ್ಲೂ ಇದೆ.

ಒಂದು ಎಕರೆಯಷ್ಟು ರಬ್ಬರ್ ತೋಟದ ನಡುವಿನ ಸಣ್ಣಮನೆಯಲ್ಲಿ ಪುಸ್ತಕಗಳ ನಡುವೆ ಊತುಹೋಗಿರುವ ಅವರು, ಯಾವ ರೀತಿಯ ಬದುಕಿಗೆ ಹಂಬಲಿಸಿದ್ದರೋ ಅದನ್ನ ವಾಸ್ತವದಲ್ಲಿ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದಾರೆ. ಉಳ್ಳವರ ಮನೆಯ ಹುಡುಗನಾಗಿ ಬೆಳೆದುಬಂದ ಸೆಬಾಸ್ಟಿನ್ ಮೇಷ್ಟರು ಈ ಹಿಂದೆ ಹದಿನೈದು ವರ್ಷಗಳು ತಿರುವನಂತಪುರಂನ ಖಾಸಗಿ ಕಾಲೇಜಿನಲ್ಲಿ ಫಿಸಿಕ್ಸ್ ಲೆಕ್ಚರ್ ಆಗಿದ್ದವರು.

ಬಗೆ ಹರಿಯದ ಇಂಗ್ಲಿಷ್ ಸಮಸ್ಯೆಗಳು, ಗ್ರಾವಟೇಶನಲ್ ರಿಲೆಟಿವಿಟಿ, ಮೆಟಾ ಫಿಸಿಕ್ಸ್, ತಿರುವನಂತಪುರಂನ ಅಗಾಧ ಟ್ರಾಫಿಕ್ಕು, ಮೋಜಿಗೆಂದು ಕಾಲೇಜು ಸೇರಿದವರು ಕಣ್ಣಿಗೆ ಕಾಣದಂತೆ ಮರೆಯಾಗಿಬಿಡುವುದು, ಅನಗತ್ಯ ಮುನಿಸುಗಳನ್ನು ನೋಡಿ ಬೇಸರಗೊಳ್ಳುತ್ತಿರುವಾಗಲೇ ಇಂತಹ ಮೆಟ್ರೋ ಸಿಟಿಯಿಂದ ಹೊರಗಿರಬೇಕು ಎಂದು ನಿರ್ಧರಿಸಿಕೊಂಡಿದ್ದವರು. ಓದುವ ಗೀಳಿನಿಂದ ಪಿಎಚ್‍ಡಿ ಸೇರಿದಂತೆ ಹತ್ತಾರು ಕೋರ್ಸುಗಳನ್ನು ಬಯೋಡೆಟಾದಲ್ಲಿ ಸೇರಿಸಿಕೊಂಡಿರುವ ಸೆಬಾಸ್ಟಿನ್ ಮೇಷ್ಟರು ಸಾಹಿತ್ಯ ಮತ್ತು ತಾನ್‍ಸೇನ್ ಸಂಗೀತದ ಬಗ್ಗೆಯೂ ಅಷ್ಟೇ ಸೂಕ್ಷ್ಮವಾಗಿ ಮಾತನಾಡುತ್ತಾರೆ.

ಅಷ್ಟು ಕಾಲವೂ ಒಳಗಿಳಿದಿದ್ದ ಆಕಾಂಕ್ಷೆಗಳು ಭುಗಿಲೆದ್ದು ಅದೊಂದು ದಿನ ಇದ್ದಕ್ಕಿದ್ದಂತೆ ಫಿಸಿಕ್ಸ್ ಪಾಠವನ್ನು ಮುಗಿಸಿ ಬಂದ ಸೆಬಾಸ್ಟಿನ್ ಮೇಷ್ಟರು ಸೀದಾ ತಮ್ಮ ಹುಟ್ಟೂರು ಮಲಬಾರ್‍ಗೆ ಹೊರಟುಹೋಗಿದ್ದರು. ತಿರುವನಂತಪುರಂನ ಸಹವಾಸ ಸಾಕು ಎನ್ನುವಂತಹ ಕ್ರಿಯೆಯ ಪ್ರತೀಕದಂತೆ ನಡೆದುಕೊಂಡಿದ್ದರು. ಹುಟ್ಟೂರು ಮಲಬಾರ್‍ನಲ್ಲಿ ಮೊದಲ ಒಂದು ವರ್ಷ ಖಾಲಿ ಉಳಿದರು. ಹಿಂದೆಯೇ ಇನ್ನೊಂದರೆಡು ಕೋರ್ಸುಗಳನ್ನು ಸಮಯದಂತೆ ಸವೆಸಿ ಹೆಚ್ಚಿಸಿಕೊಂಡರು. ಬೇಸರ ಎನಿಸಿದಾಗ ಊರಿನ ಮಕ್ಕಳಿಗೆ ಉಚಿತವಾಗಿ ಪಾಠ ಹೇಳುತ್ತಾ ಕಳೆದಿದ್ದರು. ಆದರೆ ತಪ್ಪಿಯೂ ಮದುವೆಯ ಮಾತುಗಳನ್ನಾಡಿರಲಿಲ್ಲ.

ಅಲ್ಲೊಂದು ಇಲ್ಲೊಂದು ಬಿಳಿಕೂದಲು ಆಗಾಗ ಇಣುಕಿ ಚಕಿತಗೊಳಿಸುವಾಗಲೂ ಸೆಬಾಸ್ಟಿನ್ ಮೇಷ್ಟರು ಭೀತರಾಗಿರಲಿಲ್ಲ. ಮನೆಯವರಿಗೂ ರೇಜಿಗೆ ಎನಿಸಿ ಕೈಬಿಡಬೇಕು ಎನ್ನುವಷ್ಟರಲ್ಲಿ ನಿಲಂಬೂರ್ ಸಮೀಪದ ಈ ಹಸಿರು ಸೆರಗಿನ ಹಳ್ಳಿಯ ಸರ್ಕಾರಿ ಸ್ಕೂಲಿನಲ್ಲಿ ಉದ್ಯೋಗ ಪ್ರಾಪ್ತವಾಗಿತ್ತು. ಎರಡು ಊರಿನ ಮನೆಗಳನ್ನು ಒಟ್ಟು ಮಾಡಿದರೂ ಹದಿನೈದು ದಾಟುವುದಿಲ್ಲ ಎನ್ನುವುದನ್ನು ಕೇಳಿಯೆ ಬಹುವಾಗಿ ಮೆಚ್ಚಿಕೊಂಡಿದ್ದರು.

ಹಣಕ್ಕಾಗಿ ಕೊರಗುವ ಅಗತ್ಯವಿರದ ಕಾರಣಕ್ಕೆ ಅದೇ ಊರಿನಲ್ಲಿಯೇ ಸೆಬಾಸ್ಟಿನ್ ಮೇಷ್ಟರು ಒಂದು ಎಕರೆಯಷ್ಟು ರಬ್ಬರ್ ತೋಟವನ್ನ ಖರೀದಿಸುವ ಮೂಲಕ ಅಧಿಕೃತ ನಿವಾಸಿಯಾಗಿಹೋಗಿದ್ದಾರೆ. ಆದರೆ ಈಗ ಸೆಬಾಸ್ಟಿನ್ ಮೇಷ್ಟರು ಎಂದರೆ ಊರಿನ ಹುಡುಗರಿಗೂ ಚೆಲ್ಲಾಟವಾಗಿದೆ. ಅದೇ ಸೇತುವೆಯ ಮೇಲೆ ಒಂದು ಸಣ್ಣ ವಾಕ್ ಮುಗಿಸಿ ಹಳೆಯ ಪಂಚೆಯನ್ನುಟ್ಟು ಟೀ ಮಾಡುತ್ತಾ ಎಲ್ಲೆಲ್ಲೋ ನೋಡುವ ಸೆಬಾಸ್ಟಿನ್ ಮೇಷ್ಟರು ಎಂದರೆ ಜತೆಯ ಹುಡುಗ ಎನ್ನುವಂತೆ ನೋಡುತ್ತಾರೆ.

ಸೇತುವೆಯ ಆ ತುದಿಯಲ್ಲಿರುವ ಪೋಸ್ಟ್ ಆಫೀಸ್ ಸಮೀಪದ ಕಿರಾಣಿ ಅಂಗಡಿಯಲ್ಲ ಮನೋರಮಾ ಮ್ಯಾಗಜೈನ್ ದೊರೆಯುತ್ತಿರುವುದು ಸೆಬಾಸ್ಟಿನ್ ಮೇಷ್ಟರ ದೆಸೆಯಿಂದ. ಊರಿನ ಸಣ್ಣಘಟಕದಲ್ಲಿ ಬೆಂಕಿಪೆಟ್ಟಿಗೆ ಬಾಕ್ಸ್ ತಯಾರಿಸುವವರಿಗೆ ಇನ್ಸೂರೆನ್ಸ್‍ನ ಮಾಹಿತಿ ಕೊಟ್ಟವರು. ನಾಯರ್ ಅಜ್ಜನಿಗೆ ಬೆನ್ನಾಗಿ ನಿಂತಿರುವವರು ಇದೇ ಸೆಬಾಸ್ಟಿನ್ ಮೇಷ್ಟರು. ಭಾನುವಾರದ ಕನ್ನಡ ಪತ್ರಿಕೆಗಳಂತೆ ವಿಶೇಷ ಎನಿಸುವ ಸೆಬಾಸ್ಟಿನ್ ಮೇಷ್ಟರಿಗೆ ಯಾವುದರ ಬಗ್ಗೆಯೂ ಬೇಸರವಿಲ್ಲ. ಅವರ ಸಿಟ್ಟಿರುವುದು ಈ ನಗರ ಜೀವನದ ಮೇಲಷ್ಟೇ.

ನಾನು ಬೆಂಗಳೂರಿನ ಹುಡುಗ ಎನ್ನುವುದನ್ನು ಹೇಳುತ್ತಿದ್ದಂತೆ ಕೈಮುಗಿದು ವ್ಯಂಗ್ಯವಾಡಿದ ಅವರ ಆಳದಲ್ಲಿ ನಗರದ ಬಗೆಗಿನ ತಿರಸ್ಕಾರಕ್ಕೆ ಬಹುದೊಡ್ಡ ಕಾರಣಗಳು ಸಾಲುಗಟ್ಟಿ ನಿಂತಿದ್ದವು. ನಗರಗಳು ಸೋಲುವುದನ್ನು ಕಲಿಸುವುದಿಲ್ಲ, ಸದಾ ಪೈಪೋಟಿಯಲ್ಲಿಯೇ ಬದುಕಬೇಕಾಗಿರುವ ಅದೃಶ್ಯಸ್ಥಿತಿ ಎನ್ನುವಂತಹ ಹತ್ತಾರು ಅಂಶಗಳು ಸೆಬಾಸ್ಟಿನ್ ಮೇಷ್ಟರನ್ನ ಬೆಳಗಿನ ಧ್ಯಾನದಂತಹ ಹಳ್ಳಿಯ ಕಡೆಗೆ ಸೆಳೆದುಕೊಂಡಿದ್ದರೆ, ಕಾಲೇಜು ದಿನಗಳಲ್ಲಿ ಮುರಿದುಬಿದ್ದಿದ್ದ ಪ್ರೀತಿಯೊಂದು ಮದುವೆಯಿಂದ ದೂರದಲ್ಲಿ ಎಳೆದು ನಿಲ್ಲಿಸಿಕೊಂಡಿತ್ತು.

“ಸಾರ್ ನೀವು ಏಕೆ ಇನ್ನು ಮದುವೆಯಾಗುವುದಿಲ್ಲ” ಎಂದು ಭಯದಿಂದ ಕೇಳಿದರೆ ಏನನ್ನೂ ಹೇಳಲಿಲ್ಲ. ಹಾಗೆಂದ ಮಾತ್ರಕ್ಕೆ ಸೆಬಾಸ್ಟಿನ್ ಮೇಷ್ಟರ ನಿಗೂಢ ಎಂದೇನೂ ಅಲ್ಲ. ಅವರು ಎಲ್ಲವನ್ನೂ ಹೇಳಿಕೊಳ್ಳುವ ಜಾಯಮಾನದವರಲ್ಲ ಅಷ್ಟೇ. ನಗರದ ಬಗೆಗಿನ ತಿರಸ್ಕಾರ, ತುಂಡಾಗಿಹೋಗಿದ್ದ ಪ್ರೀತಿಯ ಎಳೆಗಳು ಅವರನ್ನು ಮತ್ತೊಂದು ಸ್ಥರಕ್ಕೆ ತಂದು ನಿಲ್ಲಿಸಿದ್ದು ಮಾತ್ರ ಸ್ಪಷ್ಟವಾಗಿತ್ತು.

ಆದರೆ ಸದ್ಯದ ಸೆಬಾಸ್ಟಿನ್ ಮೇಷ್ಟರ ಜೀವನ ನಿಜಕ್ಕೂ ಹೊಟ್ಟೆಕಿಚ್ಚಾಗುವಷ್ಟು ಚಂದವಾಗಿದೆ. ಆ ಊರಿನಲ್ಲಿ ಸ್ಕೂಲು ಎನ್ನುವ ಕಟ್ಟಡವಿದೆ ಎನ್ನುವುದು ಮಕ್ಕಳು ಮತ್ತು ಸೆಬಾಸ್ಟಿನ್ ಮೇಷ್ಟರಿಗೆ ಹೊರತಾಗಿ ಉಳಿದ ಯಾರಿಗೂ ತಿಳಿಯದಷ್ಟು ನಿಗೂಢವಾಗಿದೆ. ಸ್ಕೂಲಿಗೆ ಸಂಬಂಧಿಸಿದ ಕೆಲಸವಿದ್ದರೆ ತಾಪ್ಸಿಪನ್ನು ಪ್ರೀತಿಯ ಪ್ರೇರಿತ ಆಕ್ಟೀವಾ ಸ್ಕೂಟರ್‍ನಲ್ಲಿ ನಿಲಂಬೂರ್‍ಗೆ ಹೋಗಿ ಸೆಬಾಸ್ಟಿನ್ ಮೇಷ್ಟರು ಸುಧಾರಿಸಿಕೊಂಡು ಬರುತ್ತಾರೆ.

ಮಕ್ಕಳ ಅಗತ್ಯಕ್ಕೆ ತಕ್ಕಂತೆ ರಜಾವನ್ನು ನೀಡುತ್ತಾರೆ. ಮಳೆಗಾಲ,ಯಾರದೋ ಮನೆಯಲ್ಲಿ ಕಾರ್ಯ ಹೀಗೆ ಊರು ಕೇಳಿಕೊಂಡಾಗೆಲ್ಲ ಹೂ ಚಿಗುರಿಸಿಕೊಳ್ಳುವ ಆ ಸ್ಕೂಲಿನ ಬಾಗಿಲುಗಳಿಗೆ ಬೀಗ ಬೀಳುತ್ತದೆ. ಇದೇ ಕಾರಣವನ್ನ ನೆಪವಾಗಿಸಿಕೊಂಡು ಸರ್ಕಾರಿ ಪ್ರಾಯೋಜಿತ ಆಯಾ ಕುಂಞ ಶಾಲೆಗೆ ಬರುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ.

ಸ್ಕೂಲಿನ ಹುಡುಗರೇ ಅದೆಷ್ಟೋ ಸಾರಿ, ಸೆಬಾಸ್ಟಿನ್ ಸರ್ ಕುಂಞ ಸೇತುವೆ ಹತ್ತಿರ ಸಿಕ್ಕಿದ್ದಳು, ಪೋಸ್ಟ್ ಆಫೀಸಿನ ರಸ್ತೆಯಲ್ಲಿ ನಡೆದು ಬರುತ್ತಿದ್ದಳು, ರಬ್ಬರ್ ತೋಟದ ಕೂಲಿಗೆ ನಿಂತಿದ್ದಳು ಎನ್ನುವುದು ವರದಿಯಂತೆ ಒಪ್ಪಿಸಿದ ಉದಾಹರಣೆಗಳು ಇವೆ ಎಂದು ಸೆಬಾಸ್ಟಿನ್ ಮೇಷ್ಟರು ನಗುತ್ತಲೇ ಹೇಳಿಕೊಳ್ಳುತ್ತಾರೆ. ಆದರೆ ಆ ಯಾವುದಕ್ಕೂ ಅವರು ಕೇಳಿಸಿಕೊಳ್ಳುವುದಿಲ್ಲ. ಯಾವ ನಿಯಮಗಳನ್ನು ಪಾಲಿಸದ ಸ್ಕೂಲಿನ ಏಕೈಕ ಮೇಷ್ಟರಾಗಿರುವ ಸೆಬಾಸ್ಟಿನ್ ಮೇಷ್ಟರು ಕುಂಞಯನ್ನು ಆ ಬಗ್ಗೆ ಪ್ರಶ್ನಿಸುವುದೂ ಇಲ್ಲ.

ಕುಂಞ ಮೌನಿ. ಕೇಳಿದರೂ ಉತ್ತರಿಸುವುದಿಲ್ಲ.

ಇಬ್ಬನಿಯಂತೆ ತಣ್ಣಗೆ ಹೊಳೆಯುತ್ತಿದ್ದ ಸೆಬಾಸ್ಟಿನ್ ಮೇಷರ ಜೀವನ ಹತ್ತಿರ ಎನಿಸಿತು. “ನನಗೂ ಬೆಂಗಳೂರಿನಂತಹ ಊರು ಸಾಕು ಎನಿಸಿದರೆ ಸಾರ್”, ಎಂದೆ.

“ನಿನಗೆ ಬೆಂಗಳೂರು ಸಾಕು ಎನಿಸಿಲ್ಲ. ಇಂತಹ ಊರುಗಳ ಸೆಳೆತ ಹೆಚ್ಚಾಗಿದೆ” ಎಂದು ಸೆಬಾಸ್ಟಿನ್ ಮೇಷ್ಟರು ನಗೆಯಾಡಿದ್ದರು.

ಅವರ ಮಾತುಗಳು ಆ ಕ್ಷಣಕ್ಕೆ ಉತ್ತರದಂತೆ ಗೋಚರಿಸಿದಂತೆ ಕಂಡಿದ್ದು ನಿಜ. ಆದರೆ ಅದನ್ನೇ ಸತ್ವಪೂರ್ಣವಾಗಿ ಒಪ್ಪಿಕೊಳ್ಳುವುದು ಕಷ್ಟ. ಒಂಟಿ ಸೇತುವೆಯೂರಿನ ಸೆಬಾಸ್ಟಿನ್ ಮೇಷ್ಟರು ನನ್ನ ಆಳದಲ್ಲಿನ ಮೂಲಭೂತ ಆಕಾಂಕ್ಷೆಯನ್ನು ಗ್ರಹಿಸಲಿಲ್ಲ ಎನಿಸುತ್ತಿದೆ. ನೀಲಿಬ್ಯಾಗನ್ನು ಬೆನ್ನಿಗೇರಿಸಿಕೊಂಡು ಅಲೆಯುತ್ತಲೇ ಇರುವ ನನ್ನ ಹುಡುಕಾಟವೇ ಬೇರೆ. ಯಾಕೋ ಹಸಿರಿನ ಸಹವಾಸವಿರುವ ಊರು ಖಾಯಂ ಆಗಿಬೇಕು ಎಂದು ಬಲವಾಗಿ ಅನಿಸುತ್ತಿದೆ.

1 comment

Leave a Reply