ಚಿಮಮಾಂಡಳ ‘ಮದುವೆ ದಲ್ಲಾಳಿ’

ಚಿಮಮಾಂಡ ಎನ್‌ಗೋಜಿ ಅಡಿಚಿ

ಕನ್ನಡಕ್ಕೆ:- ಸುಧಾ ಚಿದಾನಂದಗೌಡ

ನನ್ನ ನವವಿವಾಹಿತ ಗಂಡ ಸೂಟ್‌ಕೇಸನ್ನು ಟ್ಯಾಕ್ಸಿಯಿಂದ ಕೆಳಗಿಳಿಸಿ, ಬ್ರೌನ್ ಸ್ಟೋನ್ ಒಳಗಡೆ ನಡೆದ. ಮೇಲ್ಭಾಗಕ್ಕೆ ಮೆಟ್ಟಿಲುಗಳು, ಕೆಳಗಡೆ ಹೆಚ್ಚು ಗಾಳಿಯಾಡದ, ಕಾರ್ಪೆಟ್ ಹಾಸಿದ್ದ ಹಾಲ್.. ಹಾಲ್‌ನೊಳಕ್ಕೆ ನಡೆದು ಬಾಗಿಲೊಂದರ ಎದುರುಗಡೆ ನಿಂತ. ಅದರ ಮೇಲೆ ೨ಬಿ ಎಂದು ಹಳದಿ ಲೋಹದಲ್ಲಿ ಪ್ಲಾಸ್ಟರ್ ಮಾಡಲಾಗಿತ್ತು.

“ಇಗೋ, ಮನೆಗೆ ಬಂದ್ವಿ ನಾವು” ಆತ ಹೇಳಿದ. ಹೋಂ ಕುರಿತು ಮಾತನಾಡುವಾಗ ಹೌಸ್ ಎಂದಿದ್ದ ಆತ. ನಮ್ಮ “ಹೋಂ” ಬಗ್ಗೆ ನನಗೆ ಕಲ್ಪನೆಗಳಿದ್ದವು. ಸುಂದರವಾದ ಕಾಂಪೋಂಡ್ ಒಳಗಿನ ದಾರಿ, ಅಕ್ಕಪಕ್ಕ ಸೌತೆಕಾಯಿ ಬಣ್ಣದ ಹಚ್ಚಹಸಿರಿನ ಲಾನ್, ಹಾಲ್‌ನೊಳಕ್ಕೆ ಹೋಗುವ ಚೆಂದದ ಬಾಗಿಲು, ಗೋಡೆಗಳಲ್ಲಿ ಕಲಾಕೃತಿಗಳು …. ಅಮೆರಿಕನ್ ಸಿನಿಮಾಗಳಲ್ಲಿ ಕಂಡುಬರುವ ಎನ್‌ಟಿಎ ಟಿವಿ ಶನಿವಾರಗಳಂದು ತೋರಿಸುವ ಬಿಳಿದಿರಿಸಿನ ನವವಿವಾಹಿತರ ಮನೆಯ ಥರದ ಕಲ್ಪನೆ.

ಲಿವಿಂಗ್ ರೂಮಿನ ಲೈಟ್ ಹಾಕಿದ ಆತ. ಹಾಲ್ ಮಧ್ಯಭಾಗದಲ್ಲೊಂದು ಮಂಚ ಅಕಸ್ಮತ್ತಾಗಿ ಅಲ್ಲಿ ಬಂದು ಬಿದ್ದಿದೆಯೇನೋ ಎಂಬಂತೆ ಇತ್ತು. ಕೋಣೆಯಲ್ಲಿ ಸೆಕೆ, ಗಾಳಿಯಲ್ಲಿ ತುಂಬಿದ ಹಳೆಯ ಮುಗ್ಗುಲು ವಾಸನೆ..
“ಮನೆ ಎಲ್ಲ ತೋರಿಸ್ತೇನೆ ನಿಂಗೆ ಬಾ..” ಆತ ಹೇಳಿದ.
ಚಿಕ್ಕ ಬೆಡ್‌ರೂಮಿನ ಒಂದು ಮೂಲೆಯಲ್ಲಿ ಒಂದು ಬೆಡ್ ಇತ್ತು.
ದೊಡ್ಡ ಬೆಡ್‌ರೂಮಿನಲ್ಲಿ ಒಳ್ಳೆ ಬೆಡ್, ಡ್ರಾಗಳಿದ್ದ ಟೇಬಲ್, ಟೆಲಿಫೋನೂ ಇತ್ತು. ನೆಲಕ್ಕೆ ಕಾರ್ಪೆಟ್ ಹಾಸಿತ್ತು. ಆದ್ರೂ ಎರಡೂ ರೂಮುಗಳಲ್ಲಿ ಸ್ಥಳಾವಕಾಶದ ಕೊರತೆಯಿತ್ತು. ಗೋಡೆಗಳೇ ಒಂದಕ್ಕೊಂದು ಮುಜುಗರ ಅನುಭವಿಸುತ್ತಿವೆ ಎಂಬಂತಿದ್ದವು. ಅವುಗಳ ನಡುವಿನ ಅಂತರ ತುಂಬ ಸ್ವಲ್ಪ ಇತ್ತು.

“ನೀನು ಬಂದಿದೀಯಲ್ಲಾ… ಈಗ ಇನ್ನಷ್ಟು ಫರ್ನಿಚರ್ ತರೋಣ. ನಾನು ಒಬ್ಬನೇ ಇದ್ದಾಗ ಅವುಗಳ ಅವಶ್ಯಕತೆ ಇರಲಿಲ್ಲ.” ಆತ ಹೇಳಿದ.
“ಓಕೆ..” ಎಂದೆ ನಾನು. ತಲೆ ಹಗುರಾದ ಅನುಭವ. ಲಾಗೂಸ್‌ನಿಂದ ನ್ಯೂಯಾರ್ಕಗೆ ಫ್ಲೆöÊಟ್‌ನಲ್ಲಿ ಹತ್ತು ತಾಸುಗಳ ಪ್ರಯಾಣ.. ಮಧ್ಯದಲ್ಲಿ ಅಮೆರಿಕನ್ ಕಸ್ಟಮ್ಸ್ ಅಧಿಕಾರಿಗಳ ಚೆಕಿಂಗ್‌ಗಾಗಿ ಬಿಡುವು.. ಸೂಟ್‌ಕೇಸುಗಳು ಚೆಲ್ಲಾಪಿಲ್ಲಿಯಾಗುವಂತೆ ಅದೇನು ಹುಡುಕಿದರೋ.. ನಾನು ಜತನದಿಂದ ತಂದಿದ್ದ ಒಂದಿಷ್ಟು ಖಾದ್ಯಸಾಮಗ್ರಿಗಳನ್ನಂತೂ ಜೇಡರ ಹುಳಕ್ಕಾಗಿ ಹುಡುಕ್ತಿದರೆನೋ ಎಂಬಂತೆ ಜಾಲಾಡಿಬಿಟ್ಟಿದ್ದರು. ಕೈಗವಸು ಹಾಕಿಕೊಂಡಿದ್ದ ಒಬ್ಬಕೆಯಂತೂ ವಾಟರ್ ಪ್ರೂಫ್ ಚೀಲಗಳನ್ನು ತಿವಿದೂ, ತಿವಿದೂ ಅದರೊಳಗಿನ ಎಗುಸಿ ಧಾನ್ಯವನ್ನು, ಒಣಗಿಸಿತಂದಿದ್ದ ಒನುಬು ಎಲೆಗಳನ್ನು ಮತ್ತು ಉಜಿಜಾ ಬೀಜಗಳನ್ನು ಎಷ್ಟು ಹುಡುಕಿದಳೆಂದರೆ ಕೊನೆಗೂ ಉಜಿಜಾ ಬೀಜಗಳನ್ನು ಸೀಜ್ ಮಾಡೇಬಿಟ್ಟರು. ನಾನು ಆ ಬೀಜಗಳನ್ನು ಅಮೆರಿಕನ್ ನೆಲಕ್ಕೆ ಹಾಕಿ, ಗಿಡ ಬೆಳೆಸಿಬಿಡುತ್ತೇನೆಂದು ಅವರಿಗೆ ಹೆದರಿಕೆ ಅನಿಸಿತೋ ಏನೋ.. ಆ ಬೀಜಗಳನ್ನು ನಾವು ವಾರಗಟ್ಟಲೆ ಒಣಗಿಸಿರುತ್ತೇವಲ್ಲ.. ಅವು ಹೆಲ್ಮೆಟ್‌ನಷ್ಟು ಗಟ್ಟಿಯಾಗರ‍್ತವೆ, ಅಂತ ಹೇಗೆ ವಿವರಿಸೋದು..
“ಸ್ವಲ್ಪ ಸುಸ್ತು.. ..” ಎಂದೆ, ನನ್ನ ಹ್ಯಾಂಡ್ ಬ್ಯಾಗನ್ನು ಬೆಡ್‌ರೂಮಿನ ನೆಲದ ಮೇಲಿಡುತ್ತಾ.
“ನನಗೂ ಅಷ್ಟೆ, ಸುಸ್ತು. ಮಲಗಿಬಿಡೋಣ..”

ಬೆಡ್ ಮೇಲೆ ಹಾಸಿದ ಬೆಡ್‌ಶೀಟ್‌ಗಳು ಮೃದುವಾಗಿದ್ದವು. ಅದರ ಮೇಲೆ ಅಂಕಲ್ ಐಕೆಯ ಸಿಟ್ಟುಬಂದಾಗಿನ ಬಿಗಿದ ಮುಷ್ಟಿಯಂತೆ ಮುದುರಿ ಮಲಗಿಕೊಂಡೆ. ಇವೊತ್ತಿನಮಟ್ಟಿಗೆ ಪತ್ನಿಯ ಯಾವ ಕರ್ತವ್ಯಗಳನ್ನೂ ನನ್ನ ಗಂಡ ನಿರೀಕ್ಷಿಸದೇ ಇರಲಿ ಒಂದು ಆಶಿಸಿದೆ. ಕೆಲಕ್ಷಣಗಳಲ್ಲೇ ಆತನ ಜೋರಾದ ಗೊರಕೆ ಕೇಳಿಬಂದಾಗ ನಿರಾಳವಾದೆ. ಆ ಗೊರಕೆ- ಗಂಟಲೊಳಗಿನ ತೊಡಕಿನಂತೆ ಹೊರಹೊರಟು, ನಂತರ ಹೈಪಿಚ್‌ನಲ್ಲಿ ಮುಂದುವರಿದು ದೊಡ್ಡ ಶಿಳ್ಳೆಯಂತೆ ಕೊನೆಗೊಳ್ಳುತ್ತಿತ್ತು. ಮದುವೆಯನ್ನು ಏರ್ಪಡಿಸುವವರು ಈ ಯಾವುದರ ಕುರಿತೂ ಹೇಳಿರುವುದೇ ಇಲ್ಲ. ಈ ಗೊರಕೆ, ಫರ್ನಿಚರ್‌ಗೇ ಸವಾಲು ಹಾಕುವಂಥಾ ಮನೆಗಳು- ಯಾವುದರ ಬಗ್ಗೆಯೂ ಪ್ರಸ್ತಾಪವಿರುವುದಿಲ್ಲ.

ನನ್ನ ಗಂಡ ನನ್ನ ಮೇಲೆ ತನ್ನ ಭಾರವಾದ ದೇಹವನ್ನು ಹೇರುವುದರ ಮೂಲಕ ಎಚ್ಚರಗೊಳಿಸಿದ. ಆತನ ಎದೆ ನನ್ನ ಎದೆಗಳನ್ನು ಚಪ್ಪಟೆಗೊಳ್ಳುವಂತೆ ಹತ್ತಿಕ್ಕಿತ್ತು.
“ಗುಡ್ ಮಾರ್ನಿಂಗ್..” ಎಂದೆ, ನಿದ್ದೆಯಿಂದ ತೂಗುತ್ತಿದ್ದ ಕಣ್ಣುಗಳನ್ನು ತೆರೆಯಲು ಯತ್ನಿಸುತ್ತಾ.
ಆತ ಗುರುಗುಟ್ಟಿದ. ಬಹುಶಃ ನನ್ನ ವಿಶ್‌ಗೆ ಅದು ಉತ್ತರವಿರಬಹುದು ಅಥವಾ ಆತ ಈಗ ನಡೆಸುತ್ತಿರುವ ಪ್ರಕ್ರಿಯೆಯ ಭಾಗಮಾತ್ರವಾದ ಶಬ್ಧವೂ ಆಗಿರಬಹುದು. ನನ್ನ ನೈಟ್ ಡ್ರೆಸ್ಸನ್ನು ಸೊಂಟದ ಮೇಲಕ್ಕೆಳೆಯಲು ಆತ ಸ್ವಲ್ಪವೇ ಮೇಲೆದ್ದ.
“ಸ್ವಲ್ಪ ಇರಿ..” ಎಂದೆ,

ನೈಟ್ ಡ್ರೆಸ್ಸನ್ನು ಬಿಚ್ಚುವುದು ನನ್ನ ಉದ್ಧೇಶವಾಗಿತ್ತು. ಆಗ ಈ ಕ್ರಿಯೆ ಕೊಂಚ ಸಹನೀಯವಾಗಬಹುದಿತ್ತು. ಆದರೆ ಆತ ತನ್ನ ತುಟಿಗಳಿಂದ ನನ್ನ ಬಾಯಿಯನ್ನು ಒತ್ತಿಹಿಡಿದ. ಈ ಸಂಗತಿಗಳನ್ನು ಕೂಡ ಮದುವೆ ದಲ್ಲಾಳಿಗಳು ಹೇಳಲು ವಿಫಲರಾಗಿರುತ್ತಾರೆ- ನಿದ್ದೆಯ ಕಥೆ ಹೇಳುವ ಕಂಗಳು, ಹಳೆಯ ಚೂಯಿಂಗ್‌ಗಮ್‌ನಂಥಾ ಅನುಭವ, ಓಗ್ಬೆಟೆ ಮಾರ್ಕೆಟಿನ ಚರಂಡಿಯಂಥಾ ವಾಸನೆಯ ಬಾಯಿ.. .. ಆತನ ಚಲನೆ ಹೆಚ್ಚಿದಂತೆ ಉಸಿರಾಟ ರಭಸಗೊಂಡಿತ್ತು. ಉಛ್ವಾಸ- ನಿಶ್ವಾಸಗಳಿಗೆ ಆತನ ಮೂಗಿನ ಹೊಳ್ಳೆ ಕಿರಿದಾಯಿತೇನೋ ಎಂಬಷ್ಟು ಜೋರಾಗಿ.. ಅಂತಿಮವಾಗಿ ಆತ ಮುಗಿಸಿದ ಬಳಿಕ, ತನ್ನ ಪೂರಾ ದೇಹದ ಭಾರವನ್ನು ನನ್ನ ಮೇಲೆ ಹೇರಿ, ಕಾಲುಗಳ ಭಾರವನ್ನೂ ಸೇರಿಸಿ, ವಿಶ್ರಮಿಸಿದ.

ಆತ ನನ್ನ ದೇಹದ ಮೇಲಿಂದ ಎದ್ದು ಬಾತ್ ರೂಂ ಒಳಕ್ಕೆ ಹೋಗುವವರೆಗೂ ನಾನು ಮಿಸುಗಾಡಲಿಲ್ಲ. ನಂತರ ರಾತ್ರಿಯುಡುಗೆಯನ್ನು ಕೆಳಕ್ಕೆಳೆದುಕೊಂಡೆ. ಹಿಂಭಾಗದಲ್ಲೂ ಡ್ರೆಸ್ಸನ್ನು ಸರಿಪಡಿಸಿಕೊಂಡೆ.
“ಗುಡ್ ಮಾರ್ನಿಂಗ್ ಬೇಬಿ..”
ಹೇಳುತ್ತಾ ಆತ ಮತ್ತೆ ರೂಮೊಳಕ್ಕೆ ಬಂದ. ಫೋನನ್ನು ನನ್ನ ಕೈಗೆ ಕೊಡುತ್ತಾ,
“ ನಿನ್ನ ಅಂಕಲ್, ಆಂಟಿಗೆ ಕಾಲ್ ಮಾಡ್ಬೇಕು ನೋಡು. ಸೇಫಾಗಿ ತಲುಪಿದ್ದೇವೆ ಅಂತ ಹೇಳ್ಬಿಡೋಣ. ಒಂದೆರಡು ನಿಮಿಷ ಮಾತ್ರ.. ಇಲ್ಲಿಂದ ನೈಜೀರಿಯಾಗೆ ಒಂದು ನಿಮಿಷದ ಕಾಲ್‌ಗೆ ಒಂದು ಡಾಲರ್ ಆಗುತ್ತೆ. ಮೊದಲು ೦೧೧ ಡಯಲ್ ಮಾಡು. ನಂತರ ೨೩೪ ಒತ್ತು.”
“ಹೌದಾ..? ಅಷ್ಟೇನಾ?”
“ಹೌದು. ಇಂಟರ್ ನ್ಯಾಷನಲ್ ಡಯಲಿಂಗ್ ಕೋಡ್ ಮೊದಲು, ನಂತರ ನೈಜೀರಿಯಾದ ಕೋಡ್..”
“ಓಹ್.. ..” ಉದ್ಗರಿಸಿದೆ.

ನಂತರ ೧೪ ನಂಬರುಗಳನ್ನು ಒತ್ತತೊಡಗಿದೆ. ತೊಡೆಗಳ ನಡುವಿನ ಜಿಗುಟು.. ತುರಿಕೆ ಉಂಟು ಮಾಡತೊಡಗಿತ್ತು.
ಫೋನ್‌ಲೈನ್ ಅಂಕೆಗಳೊಂದಿಗೆ ಕಿರುಗುಟ್ಟುತ್ತಾ ಅಟ್ಲಾಂಟಿಕ್ ಸಾಗರ ದಾಟತೊಡಗಿತು. ಅಂಕಲ್ ಐಕೆ ಮತ್ತು ಆಡಾ ಆಂಟಿ ಖಂಡಿತ ಬೆಚ್ಚಗಿನ ಪ್ರೀತಿಯಿಂದ ಮಾತನಾಡಿಸ್ತಾರೆ. “ಏನು ತಿಂದೆ?” “ಅಮೆರಿಕಾದ ವಾತಾವರಣ ಹೇಗಿದೆ..?” ಎಂದೆಲ್ಲ ಖಂಡಿತ ಕೇಳ್ತಾರೆ. ಆದರೆ ನಾನೇನು ಉತ್ತರ ಹೇಳಿದೆ ಅನ್ನೋದನ್ನ ಅಷ್ಟಾಗಿ ಗಮನಿಸಲು ಹೋಗೋದಿಲ್ಲ. ಕೇಳಬೇಕಲ್ಲ ಅನ್ನೊÃದಿಕ್ಕಾಗಿ ಕೇಳ್ತಾರೆ. ಅಂಕಲ್ ಐಕೆ ಫೋನ್ ಹಿಡ್ಕೊಂಡೇ ಕಿರುನಗೆ ಬರ‍್ತಾರೆ. ಬಹುಷಃ “ನಿನಗಾಗಿ ಒಳ್ಳೆ ಗಂಡು ಹುಡುಕಿದೇನೆ” ಅಂತ ಹೇಳುವಾಗಲೂ ಇದೇ ಕಿರುನಗೆ ಅಂಕಲ್‌ನ ಮುಖವನ್ನು ಕೊಂಚ ಸಡಿಲಿಸಿತ್ತು. ಆ ಕಿರುನಗೆ ಕೆಲವು ತಿಂಗಳ ಹಿಂದೆ ಅಟ್ಲಾಂಟಾ ಒಲಂಪಸ್‌ನಲ್ಲಿ ಸೂಪರ್ ಈಗಲ್ಸ್ ತಂಡ ಸಾಕರ್ ಗೋಲ್ಡ್ ಮೆಡಲ್‌ನ್ನು ಗೆದ್ದುಕೊಂಡಾಗಲೂ ಆತನ ಮುಖದಲ್ಲಿತ್ತು.

“ಆತ ಅಮೆರಿಕಾದಲ್ಲಿ ಡಾಕ್ಟು..”
ಅಂಕಲೆ ಐಕೆ ಮುಖ ಅರಳಿಸಿಕೊಂಡು ಹೇಳಿದ್ದರು-
“ಇದಕ್ಕಿಂತ ಒಳ್ಳೇದು ಇನ್ನೇನಿದೆ? ಓಫೋಡೈಲ್‌ನ ತಾಯಿ ಅವನಿಗೆ ಕನ್ಯೆ ನೋಡ್ತಿದ್ಲು. ಅಮೆರಿಕನ್ ಹುಡುಗಿಯರನ್ನು ಮದುವೆಗಾಗಿ ಹುಡುಕುತ್ತಿದ್ದಳು. ಹನ್ನೊಂದು ವರ್ಷಗಳ ಕಾಲ ಊರಿಗೇ ಬಂದಿರಲಿಲ್ಲ ಅವನು. ಆಕೆಗೆ ನಿನ್ನ ಫೋಟೋ ಕೊಟ್ಟಿದ್ದೆ. ಬಹಳದಿನ ಆಕೆ ಫೋನ್ ಮಾಡೇ ಇರಲಿಲ್ಲ. ಬೇರೆ ಯಾರೋ ಹುಡುಗಿಯನ್ನು ನೋಡ್ಕೊಂಡರ‍್ತಾರೆ ಅನ್ಕೊಂಡಿದ್ದೆ.. ಆದ್ರೆ.. ..”
ಅಂಕಲ್ ಐಕೆ ಒಂದಷ್ಟು ಕೆಮ್ಮಿ ಗಂಟಲು ಸರಿಮಾಡಿಕೊಂಡರು.
“ಹೌದು ಅಂಕಲ್..”
“ಜೂನ್ ತಿಂಗಳ ಮೊದಲನೇ ವಾರದಲ್ಲಿರ‍್ತಾನಂತೆ..”
ಆಡಾ ಆಂಟಿ ಹೇಳಿದ್ದಳು-
“ಮದುವೆಗೂ ಮುಂಚೆ ಒಬ್ಬರನ್ನೊಬ್ಬರು ಪರಿಚಯ ಮಾಡ್ಕೊಂಡು, ಅರ್ಥ ಮಾಡ್ಕೊಳ್ಳೋದಿಕ್ಕೆ ಬೇಕಾದಷ್ಟು ಸಮಯವಿದೆ…”
“ಸರಿ ಆಂಟಿ”
ಸಿಕ್ಕಿದ ಬೇಕಾದಷ್ಟು ಸಮಯವೆಂದರೆ “ಎರಡು ವಾರ..”
“ನಿನಗೆ ಏನೆಲ್ಲಾ ಮಾಡಿಲ್ಲ ನಾವು… ? ನಮ್ಮ ಸ್ವಂತ ಮಗಳಂತೆ ಬೆಳೆಸಿದಿವಿ. ಮತ್ತೆ ಈಗ ನಿನಗೊಬ್ಬ ಅಮೆರಿಕನ್ ಡಾಕ್ಟರ್ ವರನನ್ನು ಹುಡುಕಿದೀವಿ. ನಿನಗೆ ಲಾಟರಿ ಹೊಡೆಸಿದೆವೆ ನಾವು…”
ಆಡಾ ಆಂಟಿ ಹೇಳಿದಳು. ಆಕೆಯ ಗದ್ದದ ಮೇಲೆ ಕೂದಲು ಬೆಳೆದಿದ್ದವು. ನನ್ನೊಡನೆ ಮಾತಾಡ್ತಾ ಮಾತಾಡ್ತಾ ಒಂದೆರಡು ಕೂದಲನ್ನು ಕಿತ್ತು ಹಾಕಿದಳು.
ಅವರಿಬ್ಬರಿಗೂ ನಾನು ಕೃತಜ್ಞತೆ ಹೇಳಲೇಬೇಕು..
ಗಂಡನೊಬ್ಬನನ್ನು ಹುಡುಕಿದ್ದಕ್ಕೆ, ಅದಕ್ಕೂ ಮುಂಚೆ,
ಅನಾಥೆಯಾದ ನನ್ನನ್ನು ಅವರ ಮನೆಗೆ ಕರೆತಂದಿದ್ದಕ್ಕೆ,
ಪ್ರತೀ ಎರಡು ವರ್ಷಕ್ಕೊಮ್ಮೆ ಒಂದು ಜೊತೆ ಹೊಸ ಶೂ ಕೊಡಿಸಿದ್ದಕ್ಕೆ…
ಥ್ಯಾಂಕ್ಸ್ ಹೇಳಲೇಬೇಕು..
ನಾನು ಕೃತಜ್ಞಹೀನಳು ಎಂದು ಕರೆಸಿಕೊಳ್ಳದೇ ಇರುವುದಕ್ಕೆ ಇದೊಂದೇ ದಾರಿ.
ನಾನು ಎಂಎ ಪರೀಕ್ಷೆಯನ್ನು ಬರೆಯಲು ಎಷ್ಟು ಇಷ್ಟಪಟ್ಟಿದ್ದೆನೆಂಬುದನ್ನಾಗಲೀ,
ಯೂನಿವರ್ಸಿಟಿಗೆ ಹೋಗಬೇಕು ಎಂದುಕೊಂಡಿದ್ದನ್ನಾಗಲೀ, ಹೈಸ್ಕೂಲು ಹುಡುಗಿಯಾಗಿದ್ದಾಗ ಆಡಾ ಆಂಟಿಯ ಬೇಕರಿಯ ಬ್ರೆಡ್ಡನ್ನು ಅತೀ ಹೆಚ್ಚು- ನಮ್ಮೂರು ಎನುಗುವಿನಲ್ಲೇ ಎಲ್ಲ ಬೇಕರಿಗಳಿಗಿಂತ ಹೆಚ್ಚು- ಮಾರಾಟ ಮಾಡಿದ್ದೆ ಎಂಬುದನ್ನಾಗಲೀ, ಮನೆಯ ಫರ್ನಿಚರ್ ಮತ್ತು ನೆಲ ಸದಾ ಫಳಫಳಗುಟ್ಟುತ್ತಿದ್ದುದು ನನ್ನಿಂದಾಗಿ ಎಂಬುದನ್ನಾಗಲೀ ಅವರಿಗೆಂದೂ ನಾನು ನೆನಪಿಸಲು ಹೋಗಲಿಲ್ಲ.

“ಲೈನ್ ಸಿಕ್ಕಿತಾ? ಮಾತಾಡಿದ್ಯಾ..?”
ನನ್ನ ಹೊಸಗಂಡ ಹೇಳಿದ.
“ಎಂಗೇಜ್ಡ್ ಬರ್ತಾ ಇದೆ..”
ನನ್ನ ಮುಖದಲ್ಲಿದ್ದ ರಿಲೀಫ್ ಆತನಿಗೆ ಕಾಣಬಾರದು ಎಂದು ನೋಟ ಬೇರೆಡೆಗೆ ತಿರುಗಿಸಿದೆ.
“ಬ್ಯುಸಿ.. ಅಮೆರಿಕನ್ನರು ಎಂಗೇಜ್ಡ್ ಎನ್ನುವುದಿಲ್ಲ.. ಬ್ಯುಸಿ ಅಂತಾರೆ..” ಆತ ಹೇಳಿದ “ಆಮೇಲೆ ಟ್ರೈ ಮಾಡೋಣವಂತೆ. ಬ್ರೇಕ್ ಫಾಸ್ಟ್ ತಗೊಳ್ಳೋಣ ಬಾ..”
ತಿಂಡಿಗಾಗಿ ಒಂದು ದೊಡ್ಡ ಹಳದಿಚೀಲದಿಂದ ಪ್ಯಾನ್ ಕೇಕ್ ತೆಗೆದು ಓವನ್ನಿನೊಳಗೆ ಬಿಸಿಗಿಟ್ಟ. ಯಾವ್ಯಾವ ಬಟನ್‌ಗಳನ್ನು ಆ ಬಿಳಿಯ ಮೈಕ್ರೋವೇವ್‌ನಲ್ಲಿ ಒತ್ತುತ್ತಾನೆ ಎಂಬುದನ್ನು ಏಕಾಗ್ರತೆಯಿಂದ ನೋಡಿಕೊಂಡೆ ಮತ್ತು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿದೆ.
“ಚಹಾಗೆ ನೀರು ಬಿಸಿಮಾಡು..” ಆತ ಹೇಳಿದ.
“ಹಾಲಿನ ಪುಡಿ ಇದೆಯಾ..?”
ಕೆಟಲನ್ನು ತೊಳೆಯಲು ಸಿಂಕ್ ಕಡೆಗೆ ಒಯ್ಯುತ್ತಾ ಕೇಳಿದೆ. ಇಳಿಬಿದ್ದ ಹಳದಿ ಪೇಂಟ್‌ನಂತೆ ಸಿಂಕ್‌ನ ಸುತ್ತಲೂ ಗಲೀಜು ಮೆತ್ತಿಕೊಂಡಿತ್ತು.
“ಅಮೆರಿಕನ್ನರು ಚಹಾಗೆ ಹಾಲು, ಸಕ್ಕರೆ ಹಾಕ್ಕೊಂಡು ಕುಡಿಯೋದಿಲ್ಲ..”
“ಹೌದಾ..? ನೀವೂ ಹಾಲು, ಸಕ್ಕರೆ ಹಾಕ್ಕೊಳ್ಳೋದಿಲ್ವಾ..?”
“ಇಲ್ಲ. ಬಹಳ ಹಿಂದೆನೇ ಇಲ್ಲಿಯ ರೀತಿನೀತಿಗೆ ನಾನು ಹೊಂದಿಕೊಂಡು ಬಿಟ್ಟಿದೀನಿ. ನಿನಗೂ ಅಭ್ಯಾಸ ಆಗುತ್ತೆ ಬೇಬಿ..”
ಪ್ಯಾನ್‌ಕೇಕ್ ಎದುರು ಕುಳಿತುಕೊಂಡೆ. ಮನೆಯಲ್ಲಿ ನಾನು ಮಾಡುತ್ತಿದ್ದವುಗಳಿಗಿಂತ ಇವು ಎಷ್ಟೊÃಪಟ್ಟು ಹೆಚ್ಚು ತೆಳ್ಳಗಿದ್ದವು..ಮತ್ತೆ, ಈ ಕಪ್ಪು ಟೀ- ಅದು ನನ್ನ ಗಂಟಲೊಳಗೆ ಇಳಿಯಲಿಕ್ಕಿಲ್ಲ ಎಂದು ನನಗೆ ಭಯವಾಯಿತು. ಅಷ್ಟರಲ್ಲಿ ಬಾಗಿಲ ಕರೆಗಂಟೆಯ ಸದ್ದಾಯಿತು. ಆತ ಎದ್ದುನಿಂತ. ನಡೆಯುವಾಗ ಆತನ ಭುಜಗಳು ಬೆನ್ನಹಿಂದೆ ಇಳಿಬಿದ್ದಂತೆ ಕಂಡವು. ಇದನ್ನು ಖಂಡಿತವಾಗಿ ನಾನು ಗಮನಿಸಿರಲಿಲ್ಲ. ಮದುವೆಗೆ ಮುನ್ನ ಅಷ್ಟು ಸಮಯ ಇರಲಿಲ್ಲ.
“ನೀವುಗಳು ನಿನ್ನೆ ಬಂದಿರಿ ಎಂದು ಕೇಳಪಟ್ಟೆ”

ಬಾಗಿಲ ಕಡೆಯಿಂದ ಬಂದ ದನಿ ಅಪ್ಪಟ ಅಮೆರಿಕನ್‌ದಾಗಿತ್ತು. ಪದಗಳು ವೇಗವಾಗಿ ಹರಿದಂತೆ, ಒಂದರೊಳಗೊಂದು ಸೇರಿಕೊಂಡಂತೆ ಕೇಳಿಸಿದವು. ಇಫಿ ಆಂಟಿ ಇಂಥ ಉಚ್ಛಾರವನ್ನು “ಸುಪ್ರಿ-ಸುಪ್ರಿ” (ಬೇಗ ಬೇಗ) ಎಂದು ಕರೆಯುತ್ತಿದ್ದಳು. “ನೀನು ಮುಂದೆ ನಮ್ಮನ್ನು ನೋಡಲು ಬಂದಾಗ ಅಮೆರಕನ್ನರ ಥರಾ ಸುಪ್ರಿ ಸುಪ್ರಿ ಮಾತಾಡ್ತೀಯಾ..” ಎಂದೂ ಇಫಿ ಆಂಟಿ ಹೇಳಿದ್ದಳು.
“ಹಾಯ್ ಷರ್ಲಿ, ನನ್ನ ಪತ್ರಗಳನ್ನೆಲ್ಲ ಜೋಪಾನವಾಗಿ ಇಟ್ಟುಕೊಂಡಿದ್ದಕ್ಕೆ ತುಂಬ ಥ್ಯಾಂಕ್ಸ್..” ನನ್ನ ಗಂಡ ಹೇಳಿದ.
“ಬಿಡು ಅದೇನು ಸಮಸ್ಯೆಯಲ್ಲ.. ನಮ್ಮ ಮದುವೆ ಇತ್ಯಾದಿಯೆಲ್ಲ ಹೇಗಾಯ್ತು.. ನಿನ್ನ ಹೆಂಡ್ತಿ ಇದಾಳ ಒಳಗೆ? ” “ಹೂಂ.. ಇದಾಳೆ. ಬನ್ನಿ, ಹಲೋ ಹೇಳಿ ಅವಳಿಗೆ”
ಒಂಥರಾ ಲೋಹದ ಬಣ್ಣದ ಕೂದಲಿನ ಹೆಣ್ಣುಮಗಳು ನಮ್ಮ ಲಿವಿಂಗ್ ರೂಮಿನ ಒಳಗೆ ಬಂದಳು. ಸೊಂಟದಲ್ಲಿ ಬಿಗಿಯಾಗಿದ್ದ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಆಕೆಯ ದೇಹ ಸುತ್ತಲ್ಪಟ್ಟಂತ ಉಡುಪು. ಮುಖದ ತುಂಬ ಹರಡಿದ್ದ ಗೆರೆಗಳನ್ನು ಎಣಿಸಿದ್ದರೆ ಆರುದಶಕಗಳಿಂದ ಎಂಟು ದಶಕಗಳವರೆಗೆ ಆಕೆಯ ವಯಸ್ಸು ಎಷ್ಟಾದರೂ ಆಗಬಹುದಿತ್ತು. ಮುಖ ನೋಡಿ ವಯಸ್ಸನ್ನು ಸರಿಯಾಗಿ ಲೆಕ್ಕ ಹಾಕುವಷ್ಟು ಬಿಳಿಯರನ್ನು ನಾನಿನ್ನೂ ನೋಡಿಲ್ಲವಲ್ಲ..
“ನಾನು ಷರ್ಲಿ. ೩ಎ ಮನೇಲಿದೀನಿ. ನೈಸ್ ಟು ಮೀಟ್ ಯು..”
ನನ್ನ ಕೈ ಕುಲುಕುತ್ತಾ ಹೇಳಿದಳು. ಚಳಿಯೊಂದಿಗೆ ಯುದ್ಧಮಾಡುತ್ತಿರುವವರಂತೆ ಮೂಗಿನಿಂದ ಮಾತನಾಡುತ್ತಿದ್ದಳು.
“ಯು ಆರ್ ವೆಲ್‌ಕಂ” ಎಂದೆ.

ಷರ್ಲಿ ಅದೇಕೋ ಆಶ್ಚರ್ಯಗೊಂಡವಳಂತೆ ಸ್ವಲ್ಪ ತಡೆದಳು.
“ಸರಿ, ನೀವೀಗ ಬ್ರೇಕ್‌ಫಾಸ್ಟ್ ಮಾಡಿ. ನಂತರ ಪುನಃ ತರ್ತೇನೆ. ನೀವು ಸ್ವಲ್ಪ ಸೆಟ್ಲ್ ಆಗಿ..”
ಷರ್ಲಿ ಹೊರಟುಹೋದಳು. ನನ್ನ ಹೊಸಗಂಡ ಬಾಗಿಲು ಹಾಕಿದ. ಡೈನಿಂಗ್ ಟೇಬಲ್ಲಿನ ಒಂದು ಕಾಲು ಉಳಿದವಕ್ಕಿಂತ ಚಿಕ್ಕದಾಗಿತ್ತು. ಅವನು ಟೇಬಲ್ಲಿನ ಮೇಲೆ ಬಾಗಿದಾಗ ಅದು ತೂಗಾಡುತ್ತಿತ್ತು. ಆದರೂ ಬಾಗಿಕೊಂಡೇ ಹೇಳಿದ-
“ಹಾಯ್ ಅಂತ ಹೇಳ್ಬೇಕು ಇಲ್ಲಿ. ವೆಲ್‌ಕಂ ಅಂತ ಅಲ್ಲ”
“ಆದರೆ, ಆಕೆ ನನ್ನ ವಾರಿಗೆಯವಳಲ್ಲ”
“ಅದೆಲ್ಲಾ ಇಲ್ಲಿ ನಡೆಯೊಲ್ಲ. ಎಲ್ರಿಗೂ ಹಾಯ್ ಅಂತ್ಲೆ ಹೇಳಬೇಕು..”
“ಹೂಂ, ಸರಿ”
“ಅಂದ್ಹಾಗೆ ಇಲ್ಲಿ ನನ್ನನ್ನ ಓಫೋಡೈಲ್ ಅಂತ ಯಾರೂ ಕರೆಯೋದಿಲ್ಲ. ಡೇವ್ ಅಂತ್ಲೆ ಕರೆಯೋದು..”
ಷರ್ಲಿ ತಂದುಕೊಟ್ಟಿದ್ದ ಅಂಚೆಲಕೋಟೆಗಳ ಕಡೆಗೆ ನೋಡುತ್ತಾ ಆತ ಹೇಳಿದ. ಲಕೋಟೆಗಳ ಮೇಲೆ ಅಡ್ರೆಸ್ಸನ್ನು ಮೊದಲೇ ಬರೆದು, ಅನಂತರ ಆ ವಿಳಾಸದ ಮೇಲೊಂದು ಸಾಲು ಬರೆಯಲ್ಪಟ್ಟಿತ್ತು. ಮರೆತ ಏನೋ ಒಂದನ್ನು ನೆನಪಿಸಿಕೊಂಡು ಬರೆದಿದ್ದಾರೆ ಎಂಬಂತೆ!
“ಡೇವ್..?”ಆತನಿಗೊಂದು ಇಂಗ್ಲಿಷ್ ಹೆಸರಿದ್ದುದು ನನಗೆ ತಿಳಿದಿರಲಲಿಲ್ಲ. ನಮ್ಮ ವೆಡ್ಡಿಂಗ್ ಕಾರ್ಡ ಮೇಲೆ ಬರೆದದ್ದು-“ಓಫೋಡೈಲ್ ಎಮೆಕಾ ವುಟೆನ್ವಾ” ಮತ್ತು“ಚಿನಾಜಾ ಅಗಾಥಾ ಓಕಾಫರ್” ಎಂದೇ.
“ಮತ್ತೆ ನನ್ನ ಅಡ್ಡಹೆಸರನ್ನೂ ಬದಲಾಯಿಸಿಕೊಂಡಿದೇನೆ. ವುಡೆನ್ವಾ ಎಂಬ ಹೆಸರು ಅಮೆರಿಕನ್ನರಿಗೆ ತುಂಬ ಕಷ್ಟ. ಸೋ.. ಹೆಸರನ್ನು ಬದಲಾಯಿಸಿದೆ.”
“ಏನದು..?” ಕೇಳಿದೆ.
“ವುಡೆನ್ವಾ ಎಂಬ ಪದದೊಂದಿಗೆ ನಾನೇ ಇನ್ನೂ ಹೊಂದಿಕೊಳ್ಳಲು ಯತ್ನಿಸುತ್ತಿದ್ದೇನೆ. ಅದನ್ನು ಕೇಳಿ ಒಂದೆರಡು ವಾರಗಳಾಗಿತ್ತಷ್ಟೆ.. ಬೆಲ್ ಅಂತ..”
“ಬೆಲ್..?
ವಾಟುಕಾಚಾ ಎಂಬುದನ್ನು ವಾಟರು ಎಂದು ಬದಲಾಯಿಸಿಕೊಂಡವರನ್ನು ನೋಡಿದ್ದೆ. ಚಿಕೆಲುಗೂ ಎಂಬಾತ ಅಮೆರಿಕನ್ ಶೈಲಿಯಲ್ಲಿ ಚಿಕೆಲ್ ಎಂದು ಹೆಸರಿಟ್ಟುಕೊಂಡಿದ್ದನ್ನೂ ನೋಡಿದ್ದೆ. ಆದರೆ ವುಡೆನ್ವಾದಿಂದ ಬೆಲ್..?
“ಅದು ವುಡೆನ್ವಾದ ಹತ್ತಿರಕ್ಕೂ ಬರೋದಿಲ್ವಲ್ಲಾ..?” ಕೇಳಿದೆ. ಆತ ಎದ್ದು ನಿಂತ-
“ಇಲ್ಲೇನು ನಡ್ಯುತ್ತೆಂತ ನಿನಗರ್ಥ ಆಗೋದಿಲ್ಲ. ಎಲ್ಲಿಗೆ ಹೋಗಬೇಕೆಂದರೂ ಮುಖ್ಯಪ್ರವಾಹದಲ್ಲಿ ಇರಬೇಕಾಗುತ್ತೆ ಇಲ್ಲಿ. ನೀನೂ ಕೂಡಾ ಇಂಗ್ಲಿಷ್ ಹೆಸರನ್ನೆ ಬಳಸಬೇಕಾಗುತ್ತೆ”
“ನನಗೆ ಇಂಗ್ಲಿಷ್ ಹೆಸರಿಲ್ಲ. ಜನ್ಮಪ್ರಮಾಣಪತ್ರದಲ್ಲಿ ಒಂದೇನೋ ಬರೆದಿದೆ.. ಆದರೆ ನಾನು ಜೀವಮಾನ ಪೂರ್ತಿ ಚಿನಾಜಾ ಒಕಾಫರ್ ಆಗೇ ಇದೀನಿ.”
“ಅಭ್ಯಾಸವಾಗುತ್ತೆ ಬಿಡು ಬೇಬಿ..” ನನ್ನ ಗಲ್ಲ ಹಿಡಿದು ಅಲುಗಾಡಿಸುತ್ತಾ ಹೇಳಿದ ಆತ “ನೋಡು ಬೇಕಾದ್ರೆ”
ಮಾರನೆಯ ದಿನ ನನ್ನ ಸಾಮಾಜಿಕ ಸುರಕ್ಷತಾ ಸಂಖ್ಯೆಯ ಅರ್ಜಿಯನ್ನು ಭರ್ತಿ ಮಾಡುವಾಗ ಆತ ಬರೆದ ಹೆಸರು-“ಅಗಾಥಾ ಬೆಲ್”

“ನಮ್ಮ ಅಪಾರ್ಟಮೆಂಟ್ ಪ್ಲಾಂಟ್ಬುಷ್ ಅಂತ..”
ನನ್ನ ಗಂಡ ವಿವರಿಸಿದ. ಜೊತೆಗೆ ಅವೊತ್ತು ಆತ ನನಗೆ ಬಸ್ನಲ್ಲಿ ಓಡಾಡುವುದನ್ನು ಮತ್ತು ಸಾಮಾನು ಕೊಡು-ಕೊಳ್ಳುವ ವ್ಯವಹಾರವನ್ನು ತೋರಿಸಲು ಹೊರಟಿದ್ದ. ವಿಪರೀತ ಗದ್ದಲದ ಓಣಿ, ಹಳೆಮೀನಿನ ವಾಸನೆ-ಅದೂ ಬಹುಷಃ ಶಿಥಿಲೀಕರಣ ಮಾಡುವುದಕ್ಕೂ ಮುನ್ನ ಬಹಳಹೊತ್ತು ಹೊರಗಿಟ್ಟರೆ ಹೇಗಿರುತ್ತೊ ಆ ಥರದ ವಾಸನೆ ಇಡೀ ಓಣಿಯಲ್ಲಿ ತುಂಬಿಕೊಂಡಿತ್ತು.
“ಸುತ್ತಲೂ ನೋಡ್ತಾ ಇರು.. ಆ ರೀತಿ ಕಣ್ಣುಗಳನ್ನು ಕೆಳಕ್ಕೆ ವಾಲಿಸಬೇಡ. ಸುತ್ತ ಗಮನಿಸು. ಆಗ ಎಲ್ಲ ಬೇಗ ಅಭ್ಯಾಸವಾಗುತ್ತೆ.”
ಆತ ಹೇಳಿದ್ದನ್ನ ಪಾಲಿಸ್ತಿದೇನೆ ಎಂದು ಆತ ನಂಬಲಿ ಎಂದೇ ಕತ್ತನ್ನು ಅತ್ತಿತ್ತ ಜೋರಾಗಿ ತಿರುಗಿಸುತ್ತಾ ನಡೆದೆ. ರೆಸ್ಟೋರೆಂಟುಗಳ ಕಿಟಕಿಗಳು “ಅತ್ಯುತ್ತಮ ಕೆರಿಬಿಯನ್ ಮತ್ತು ಅಮೆರಿಕನ್” ಆಹಾರವನ್ನು ನೀಡುವ ವಚನ ಕೊಡುತ್ತಾ ಫಳಫಳಿಸುವ ಪ್ರಿಂಟ್‌ನಲ್ಲಿ ತೂಗಾಡಿಕೊಂಡಿದ್ದವು. ಮೂರೂವರೆ ಡಾಲರುಗಳಿಗೆ ಒಂದು ಸಂಪೂರ್ಣ ವಾಶ್ ಕೊಡಮಾಡುವ ಜಾಹೀರಾತು ಕೊಡುತ್ತಿದ್ದ ಕಾರ್‌ವಾಶ್ ಕಂಪನಿಯೊಂದು ಕೋಕ್‌ಕ್ಯಾನುಗಳು ಮತ್ತು ಪೇಪರ್‌ಕಟಿಂಗ್‌ಗಳಿಂದ ಚಾಕ್ ಬೋರ್ಡ ಮಾಡಿಹಾಕಿತ್ತು. ಆ ಫುಟ್‌ಪಾತು ಅಂಚುಗಳಲ್ಲಿ ಮುರಿದುಕೊಂಡು ಇಲಿಗಳು ತಿಂದುಹೋಗಿರುವಂತೆ ಕಾಣುತ್ತಿತ್ತು. ಏರ್ ಕಂಡಿಷನ್ಡ್ ಬಸ್ಸಿನಲ್ಲಿ ನಾಣ್ಯವನ್ನು ಹಾಕುವುದು ಎಲ್ಲಿ ಮತ್ತು ಹೇಗೆ ಎಂಬುದನ್ನೆಲ್ಲ ತೋರಿಸಿದ ನನ್ನ ಪತಿ. ಹಾಗೇ ನಮ್ಮ ನಿಲ್ದಾಣ ಬಂದಾಗ ಹೇಗೆ ಟೇಪನ್ನು ಒತ್ತಿ ಬಸ್ಸಿಗೆ ನಿಲ್ಲಿಸಲು ಸೂಚನೆ ಕೊಡಬೇಕೆಂಬುದನ್ನೂ ಹೇಳಿಕೊಟ್ಟ.
“ನೈಜೀರಿಯಾದಲ್ಲಿ ಕಂಡಕ್ಟರ್ ನೋಡಿ ಕೂಗ್ತೀವಲ್ಲ, ಹಾಗಲ್ಲ ಇಲ್ಲಿ..”
ಎಂದು ಹೇಳಿದ ಆತನ ಶೈಲಿ ತಾನೇ ಈ ಶ್ರೇಷ್ಠ ಅಮೆರಿಕನ್ ವ್ಯವಸ್ಥೆಯನ್ನು ಕಂಡುಹಿಡಿದಿರುವ ರೀತಿಯಲ್ಲಿತ್ತು. “ಕೀ ಫುಡ್” ನ ಒಳಗೆ ಆತ ಆ ಕಡೆ ಈ ಕಡೆ ಓಡಾಡಿದ. ಒಂದು ಮಾಂಸದ ಪ್ಯಾಕೆಟನ್ನು ಆತ ಸುಮ್ಮನೆ ಎತ್ತಿ ಟ್ರಾಲಿಯೊಳಕ್ಕೆ ಹಾಕಿಕೊಂಡಾಗ ವಿಸ್ಮಿತಳಾದೆ. ಓಗ್ಬೆಟೆ ಮಾರ್ಕೆಟಿನಲ್ಲಿ ನಾನು ಸದಾ ಮಾಡುತ್ತಿದ್ದ ಹಾಗೆ ಆ ಮಾಂಸದ ತುಣುಕನ್ನು ಮುಟ್ಟಿನೋಡಿ, ಅದರ ಕೆಂಪು ಮತ್ತು ತಾಜಾತನವನ್ನು ಪರೀಕ್ಷೆ ಮಾಡಬೇಕೆಂಬ ಬಯಕೆ ಉಂಟಾಯ್ತು. ಅಲ್ಲಿ ಕಟುಕ ಮಾಂಸವನ್ನು-ಹಾರಾಡುವ ನೊಣಗಳ ಸಮೇತ- ಮೇಲೆತ್ತಿಹಿಡಿದು ತೋರಿಸುತ್ತಿದ್ದುದು ನೆನಪಾಯ್ತು.

“ ಆ ಬಿಸ್ಕೆಟ್ಸ್ ತಗೊಳ್ಳೊಣ್ವಾ..?” ಕೇಳಿದೆ. “ಬರ್ಟೂನ್ ರಿಚ್‌ಟೀ”ಯ ಆ ನೀಲಿ ಪ್ಯಾಕೆಟ್ ಪರಿಚಿತವೇ. ಬಿಸ್ಕೆಟ್ ತಿನ್ನಬೇಕು ಎಂದೇನಿರಲಿಲ್ಲ ನನಗೆ. ಆದರೆ ಪರಿಚಯದ ವಸ್ತುವೊಂದು ಟ್ರಾಲಿಯಲ್ಲಿರಲಿ ಎನಿಸಿತ್ತು.
“ಅವು ಕುಕೀಸ್.. ಅಮೆರಿಕನ್ನರು ಕುಕೀಸ್ ಅಂತಾರೆ..”
ಆತ ಹೇಳಿದ. ನಾನು ಆ ಬಿಸ್ಕೆಟಿಗೆ (ಕುಕೀಸ್‌ಗೆ) ಕೈಹಾಕಿದೆ.
“ಸ್ಟೋರ್ ಬ್ರಾಂಡ್ ತಗೋ. ಸೋವಿ ಇರುತ್ತೆ ಮತ್ತು ಎರಡೂ ಒಂದೇ ಥರ ಇರ್ತವೆ..”
ಒಂದು ಬಿಳಿಪ್ಯಾಕೇಟಿನ ಕಡೆ ತೋರಿಸುತ್ತ ಹೇಳಿದ.
“ಸರಿ” ಎಂದೆ. ಬಿಸ್ಕೆಟು ಬೇಕೆನಿಸಲೇ ಇಲ್ಲ. ಆದರೂ ಒಂದು ಸ್ಟೋರ್ ಬ್ರಾಂಡ್‌ನ ಪ್ಯಾಕೇಟನ್ನು ಎತ್ತಿ ಟ್ರಾಲಿಯೊಳಕ್ಕೆ ಹಾಕಿಕೊಂಡೆ. ಆ ಮಳಿಗೆಯಿಂದ ಹೊರಬರುವವರೆಗೂ ಕಪಾಟಿನೊಳಗಿನ ಪರಿಚಿತ ನೀಲಿಬಣ್ಣದ ಪ್ಯಾಕೇಟನ್ನು ಮತ್ತು ಆ ನೀಲಿಬಣ್ಣದ ಬರ್ತೂನ್ ಲೋಗೋವನ್ನು ದಿಟ್ಟಿಸುತ್ತಲೇ ಇದ್ದೆ.
“ ನಾನು ಅಟೆಂಡಿಂಗ್ ಡಾಕ್ಟರ್ ಆದನಂತರ ಈ ಸ್ಟೋರ್ ಬ್ರಾಂಡ್ ತಗೊಳ್ಳೋದು ಬಿಟ್ಬಿಡೋಣ. ಸಧ್ಯಕ್ಕೆ ತಗೋಬೇಕಾಗಿದೆ. ಸ್ವಲ್ಪ ಸ್ವಲ್ಪ ಹಣ ಅನಿಸಿದ್ರೂ ಎಲ್ಲ ಒಟ್ಟಾಗಿ ಸೇರಿದಾಗ ದೊಡ್ಡಮೊತ್ತವೇ ಆಗಿಬಿಡುತ್ತೆ.” ಹೇಳಿದ.
“ಅಂದ್ರೆ ನೀವು ಕನ್ಸಲ್ಟಿಂಗ್ ಆದಾಗ..?”
“ಹೂಂ.. ಇಲ್ಲಿ ಅದನ್ನು ಅಟೆಂಡಿಂಗ್ ಅಂಥಾರೆ. ಅಟೆಂಡಿಂಗ್ ಫಿಸಿಶಿಯನ್…”
ಮದುವೆ ದಲ್ಲಾಳಿಗಳು ಅಮೆರಿಕಾದಲ್ಲಿ ಡಾಕ್ಟರುಗಳು ತುಂಬ ದುಡ್ಡು ಮಾಡ್ತಾರೆ ಎಂದಷ್ಟೆ ಹೇಳಬಲ್ಲರು. ಡಾಕ್ಟರಾಗೋ ಮುಂಚೆ, ಸಂಪಾದನೆಗೂ ಮುಂಚೆ ಇಂಟರ್ನಷಿಪ್ ಮಾಡಬೇಕು ಎಂಬುದನ್ನಾಗಲೀ, ರೆಸಿಡೆನ್ಸಿ ಪ್ರೊಗ್ರಾಮ್ ಮಾಡಬೇಕು ಎಂದಾಗಲೀ ಅವರು ಹೇಳುವುದಿಲ್ಲ. ಈ ಯಾವುದನ್ನೂ ನನ್ನ ಗಂಡ ಪೂರ್ಣಗೊಳಿಸಿರಲಿಲ್ಲ. ಮತ್ತು ಈ ವಿಷಯವನ್ನು ನನ್ನ ಬಳಿ ಹೇಳಿದ್ದು ಲಾಗೂಸ್‌ನಲ್ಲಿ ವಿಮಾನವನ್ನೇರಿದಾಗ, ಅದೂ ಸ್ವಲ್ಪ ಸಮಯದ ಪ್ರಯಾಣದಲ್ಲಿ. ಅಷ್ಟು ಹೇಳಿ ಆತ ಎದ್ದು ಹೋಗಿಬಿಟ್ಟಿದ್ದ.
“ಇಂಟರ್ನಿಗಳಿಗೆ ಇಪ್ಪತ್ತೆಂಟು ಸಾವಿರ ಡಾಲರ್ ಸಂಬಳ ಕೊಡ್ತಾರೆ ಒಂದು ವರ್ಷಕ್ಕೆ. ಕೆಲಸ ಮಾತ್ರ ವಾರಕ್ಕೆ ೮೦ ಗಂಟೆ ಮಾಡಬೇಕು. ಒಂದು ತಾಸಿಗೆ ಮೂರು ಡಾಲರ್ ಆಗುತ್ತೆ. ನಂಬೋಕ್ಕಾಗುತ್ತಾ ನಿಂಗೆ..?

ಒಂದು ಗಂಟೆಗೆ ಮೂರು ಡಾಲರ್ ಎಂಬುದು ತುಂಬಾ ಒಳ್ಳೇದೋ, ತುಂಬಾ ಕೆಟ್ಟದ್ದೋ ಅರ್ಥವೇ ಆಗಲಿಲ್ಲ. ಬಹುಷಃ ಒಳ್ಳೆಯ ಸಂಬಳ ಇರಬೇಕು ಎಂದುಕೊಳ್ಳಲು ಮನಸಿನಲ್ಲೇ ಸಿದ್ಧಳಾಗಿದ್ದಾಗಲೇ ಆತ ಹೇಳಿದ್ದು- “ಪಾರ್ಟಟೈಂ ಕೆಲಸ ಮಾಡುವ ಹೈಸ್ಕೂಲು ವಿದ್ಯಾರ್ಥಿಗಳು ಇದಕ್ಕಿಂತ ಹೆಚ್ಚು ಸಂಪಾದಿಸ್ತಾರೆ” ಎಂದು..! “ಮತ್ತೆ ನಾನು ಅಟೆಂಡಿಂಗ್ ಆದಾಗ ಈ ಥರದ ಏರಿಯಾದಲ್ಲಿ ಇರುವುದು ಬೇಡ.” ಹೇಳುತ್ತಲೇ ಇದ್ದ.
ಎದುರಿಗೆ ಬಂದ ಒಬ್ಬ ಹೆಣ್ಣುಮಗಳಿಗೆ- ಅವಳ ಚಿಕ್ಕಮಗು ಟ್ರಾಲಿಯಲ್ಲಿ ಕುಳಿತುಕೊಂಡಿತ್ತು- ದಾರಿ ಮಾಡಿಕೊಡಲು ಪಕ್ಕಕ್ಕೆ ಸರಿದ. “ಅಲ್ನೋಡು, ಸುತ್ತಲೂ ಹೇಗೆ ಕಂಬಿಗಳನ್ನು ಹಾಕಿದಾರೆ..! ಟ್ರಾಲಿಗಳನ್ನ ಹೊರಗಡೆ ತಗೊಂಡು ಹೋಗ್ಬಾರದು ಅಂತ ಹಾಕಿರೋದು ಅದು. ಒಳ್ಳೆ ಏರಿಯಾದ ಶಾಪಿಂಗ್‌ಗಳಲ್ಲಿ ಈ ರೀತಿ ಹಾಕಿರೋದಿಲ್ಲ. ನಮ್ಮ ಟ್ರಾಲಿಗಳನ್ನು ನೇರವಾಗಿ ಕಾರಿನವರೆಗೂ ತಗೊಂಡ್ಹೊಗಬಹುದು…”
“ಓ …”ಎಂದೆ. ಟ್ರಾಲಿಗಳನ್ನು ಹೊರಗೆ ತಗೊಂಡು ಹೋದರೂ, ಹೋಗದೇ ಇದ್ದರೂ ಏನು ತಾನೇ ವ್ಯಾತ್ಯಾಸ? ಟ್ರಾಲಿಗಳಂತೂ ರ‍್ತಾವಲ್ಲ ಮತ್ತೇನು? ಎನಿಸಿತು.
“ನೋಡು, ಖರೀದಿ ಮಾಡ್ತಿರೋರನ್ನೆಲ್ಲಾ ಗಮನಿಸು. ಅವರೆಲ್ಲಾ ಅಮೆರಿಕಾಕ್ಕೆ ವಲಸೆ ಬಂದಿರೋರೇ. ಆದರೆ ಇನ್ನೂ ತಮ್ಮ ದೇಶದಲ್ಲೆ ಇರೋರ ಥರಾ ಆಡ್ತಾರೆ.”
ಹೇಳಹೇಳುತ್ತ ಸ್ಪ್ಯಾನಿಶ್ ಮಾತಾಡುತ್ತಿದ್ದ ಒಬ್ಬ ಮಹಿಳೆ ಮತ್ತು ಆಕೆಯ ಮಕ್ಕಳಿಬ್ಬರತ್ತ ಗುರಾಯಿಸಿದ.
“ಇವರೆಲ್ಲಾ ಅಮೆರಿಕಾವನ್ನು ಅಡಾಪ್ಟ್ ಮಾಡಿಕೊಳ್ಳದಿದ್ದರೆ ಖಂಡಿತಾ ಮುಂದುವರಿಯೋದಿಲ್ಲ. ಇದೇ ಸುಪರ್ ಮಾರ್ಕೆಟ್‌ನಲ್ಲೆÃ ಇನ್ನೂ ಮುಕುರಿಕೊಂಡಿರುತ್ತಾರೆ.”
ನಾನು ಕೇಳಿಸಿಕೊಳ್ಳುತ್ತಿದ್ದೇನೆ ಎಂಬುದಕ್ಕೆ ಸಾಕ್ಷಿಯಾಗಿ ಏನೋ ಗೊಣಗುಟ್ಟಿದೆ. ನನ್ನೂರು “ಎನುಗು”ವಿನ ಆ ಮುಕ್ತವಾದ ಮಾರುಕಟ್ಟೆ ನೆನಪಾಯಿತು. ಜಿಂಕ್‌ನಿಂದ ಮಾಡಿದ ಶೆಡ್‌ಗಳೆದುರಿಗೆ ನಿಂತು ಸವಿಯಾದ ಮಾತುಗಳಿಂದ ವ್ಯಾಪಾರಕ್ಕಿಳಿಯುವ ವರ್ತಕರು, ಒಂದು ಕೋಬೋಗಾಗಿ ದಿನವಿಡೀ ಚೌಕಾಶಿ ಮಾಡಬಲ್ಲವರು ನೆನಪಾದರು. ಒಂದು ಹೆಚ್ಚು ಕೋಬೋ ಅವರಿಗೆ ಕೊಟ್ಟುಬಿಟ್ಟರೆ ಸೊಗಸಾದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ನೀವು ಖರೀದಿಸಿದ್ದನ್ನು ನೀಟಾಗಿ ಸುತ್ತಿಕೊಡುತ್ತಾರೆ. ಇಲ್ಲದಿದ್ದರೆ ಹರಿದ ಪತ್ರಿಕೆಯಲ್ಲಿ ಸುತ್ತಿಕೊಡುತ್ತಾರೆ, ನಗುನಗುತ್ತಲೇ. ನಂತರ ಮಾಲ್‌ಗೆ ಕರೆದೊಯ್ದ..
ಸೋಮವಾರ ತನ್ನ ಕೆಲಸಕ್ಕೆ ಹೋಗುವ ಮೊದಲೇ ಎಷ್ಟು ಸಾಧ್ಯ ಅಷ್ಟನ್ನು ತೋರಿಸಬೇಕು ಎಂದುಕೊಂಡಿದ್ದ ಆತ. ಡ್ರೈವ್  ಮಾಡಿದಾಗೆಲ್ಲಾ ಅಲುಗಾಡುತ್ತಿದ್ದ ಕಾರಿನಲ್ಲಿ ಹೊರಟೆವು. ಅದರ ಬಹುತೇಕ ಭಾಗಗಳು ಸಡಿಲಗೊಂಡಂತಿದ್ದವು. ಒಂದು ಖಾಲಿಡಬ್ಬದಲ್ಲಿ ಮೊಳೆಗಳನ್ನು ತುಂಬಿಸಿ ಅಲುಗಾಡಿಸಿದರೆ ಹೇಗೋ ಹಾಗೆ ಶಬ್ದ ಬರುತ್ತಿತ್ತು. ಟ್ರಾಫಿಕ್ ಸಿಗ್ನಲುಗಳಲ್ಲಿ ಕಾರು ನಿಂತೇಬಿಡುತ್ತಿತ್ತು. ಪುನಃ ಸ್ಟಾರ್ಟ ಮಾಡಲು ಹಲವು ಬಾರಿ ಕೀ ತಿರುಗಿಸಬೇಕಾಗಿ ಬರುತ್ತಿತ್ತು.

“ನನ್ನ ರೆಸಿಡೆನ್ಸಿ ಡಾಕ್ಟರ್ ಅವಧಿ ಮುಗಿದ ತಕ್ಷಣ ಒಂದು ಹೊಸಕಾರು ತಗೋಬೇಕು” ಎಂದ.
ಮಾಲ್‌ನೊಳಗೆ ಅಂಗಡಿಗಳೆಲ್ಲ ಲೈಟುಗಳಿಂದ ಝಗಮಗಿಸುತ್ತಿದ್ದವು. ಐಸ್‌ಕ್ಯೂಬ್‌ನಷ್ಟು ನಯವಾದ ನೆಲ, ಸಣ್ಣಸೈಜಿನ ಬಣ್ಣದ ದೀಪಗಳು ಆಕಾಶದಷ್ಟು ಎತ್ತರದಲ್ಲಿ ಮಿನುಗುತ್ತಿದ್ದವು.. ಯಾವುದೋ ಬೇರೊಂದು ಗ್ರಹದ, ಬೇರೆಯದೇ ಆದ ಲೋಕದಲ್ಲಿ ಇದ್ದೇನೆ ಎನಿಸತೊಡಗಿತು. ಬಿಡುಬೀಸಾಗಿ ನಡೆಯುತ್ತಿರುವ ಜನರೆಲ್ಲ ನಮ್ಮಂತೆಯೇ ಕಪ್ಪುಜನ ಕೂಡ ಮುಖದಲ್ಲಿ ಒಂದು ರೀತಿಯ ವಿದೇಶಿತನ, ಅನ್ಯತನ ಹೊಂದಿರುವಂತೆ ಭಾಸವಾಯಿತು.
“ಮೊದ್ಲು ಪಿಜ್ಜಾ ತಗೊಳ್ಳೋಣ” ಎಂದ “ಅಮೆರಿಕಾದಲ್ಲಿ ನೀನದನ್ನು ಇಷ್ಟಪಡಲೇಬೇಕು.”
ನಾವು ಪಿಜ್ಜಾ ಸ್ಟಾಂಡ್ ಕಡೆಗೆ ಬಂದಾಗ ಅಲ್ಲಿದ್ದ ವ್ಯಕ್ತಿ ಕಿವಿಯಲ್ಲಿ ಮೂಗುತಿಯನ್ನು ಮತ್ತು ಒಂದು ಉದ್ದನೆಯ ಅಡುಗೆಯವರು ಹಾಕುವಂಥಾ ಹ್ಯಾಟನ್ನು ಹಾಕಿದ್ದ.
“ಎರಡು ಪೆಪ್ಪರ್ ಪಿಜ್ಜಾ ವಿತ್ ಸಾಸ್.. ನಿಮ್ಮ ಕಾಂಬೋ ಆಫರ್ ಹೇಗೆ?”
ನನ್ನ ಗಂಡ ಇದನ್ನು ಹೇಳುವಾಗ ಗಮನಿಸಿದೆ.. ಆತ ಅಮೆರಿಕನ್ನರ ಜೊತೆ ಮಾತಾಡುವ ಶೈಲಿಯೇ ಬೇರೆಯಿತ್ತು. “ಆರ್” ಉಚ್ಛಾರ ಒತ್ತಿ ಹೇಳಿದಂತೆ, “ಟಿ” ಉಚ್ಛಾರ ಲಘುವಾಗಿ ಹೇಳಿದಂತೆ ಕೇಳಿಸುತ್ತಿತ್ತು. ಆತನ ಮುಗುಳ್ನಗೆಯಂತೂ ಅಮೆರಿಕನ್ನರು ಮೆಚ್ಚಿದರೆ ತಾನು ಧನ್ಯ ಎಂಬಂತಿತ್ತು.
“ಫುಡ್ ಕೋರ್ಟ” ಎಂದು ಆತ ತೋರಿಸಿದ ಜಾಗದಲ್ಲಿದ್ದ ದುಂಡನೆಯ ಮೇಜಿನ ಬಳಿಯಿದ್ದ ಕುರ್ಚಿಯ ಮೇಲೆ ಕುಳಿತು ಪಿಜ್ಜಾ ತಿಂದೆವು. ಅಂಥ ಅನೇಕ ದುಂಡುಮೇಜುಗಳ ಸುತ್ತ ಜನಸಮುದ್ರವೇ ಕುಳಿತು ಪೇಪರ್ ಪ್ಲೇಟುಗಳಲ್ಲಿ ಚೀಜ್‌ಮಯ ಜಿಡ್ಡಿನ ಆಹಾರ ಮುಕ್ಕುವುದರಲ್ಲಿ ತಲ್ಲೀನವಾಗಿತ್ತು. ಅಂಕಲ್ ಐಕೆ ಇಲ್ಲಿ ಹೀಗೆ ತಿನ್ನುವುದರ ಕುರಿತು ಯೋಚನೆ ಮಾಡಿದರೂ ಬೆಚ್ಚಿಬೀಳುತ್ತಿದ್ದರೇನೋ…. ಅಂಕಲ್ ಐಕೆ ಪ್ರಶಸ್ತಿವಿಜೇತ ವ್ಯಕ್ತಿ. ಪ್ರತ್ಯೇಕವಾದ ಕೋಣೆಯಲ್ಲಿ, ಅಚ್ಚುಕಟ್ಟಾಗಿ ಊಟ ಬಡಿಸದಿದ್ದರೆ ಮದುವೆ ಸಮಾರಂಭದಲ್ಲೂ ಕೂಡ ಊಟ ಮಾಡುವವರಲ್ಲ. ಸಾರ್ವಜನಿಕವಾಗಿ ತಿನ್ನುವುದೇ ಅವಮಾನಕರ, ಪ್ರತಿಷ್ಟೆಗೆ ಕುಂದು. ಈ ಸ್ಥಳದಲ್ಲೊ…. ತೆರೆದ ಜಾಗ, ವಿಪರೀತ ಜನಸಂದಣಿ, ವಿಪರೀತ ಆಹಾರ…
“ಇಷ್ಟವಾಯ್ತಾ ಪಿಜ್ಜಾ.?” ಕೇಳಿದ ಆತನ ಪೇಪರ್ ಪ್ಲೇಟ್ ಆಗಲೇ ಖಾಲಿಯಾಗಿತ್ತು.
“ಟೊಮಾಟೋ ಸರಿಯಾಗಿ ಬೆಂದೇ ಇಲ್ಲ”
“ಮನೇಲಿ ನಾವು ಅತಿಯಾಗಿ ಬೇಯಿಸ್ತೇವೆ, ಅದರಲ್ಲಿನ ಪೌಷ್ಟಿಕಾಶಗಳೆಲ್ಲ ನಾಶವಾಗಿಹೋಗುತ್ತೆ. ಅಮೆರಿಕನ್ನರು ಸರಿಯಾಗಿ ಬೇಯಿಸ್ತಾರೆ. ನೋಡು, ಅವರೆಲ್ಲ ಎಷ್ಟು ಆರೋಗ್ಯವಂತರಾಗಿ, ದುಂಡುದುಂಡಾಗಿ ಕಾಣಿಸ್ತಾರೆ.”

ನಾನು ಸುತ್ತಲೂ ನೋಡುತ್ತ ತಲೆಯಲ್ಲಾಡಿಸಿದೆ. ನಮ್ಮ ಪಕ್ಕದ ಟೇಬಲಿನಲ್ಲೊಬ್ಬ ಕಪ್ಪುಹೆಂಗಸು ಕುಳಿತಿದ್ದಳು. ಅವಳ ದೇಹ ಮೃದುವಾಗಿ ಮತ್ತು ಅಗಲವಾಗಿ ತಲೆದಿಂಬಿನಂತೆ ಅಕ್ಕಪಕ್ಕ ಹರಡಿಕೊಂಡಿತ್ತು. ಅವಳು ನನ್ನೆಡೆಗೆ ಮುಗುಳ್ನಗು ಬೀರಿದಳು. ನಾನೂ ಮುಗುಳ್ನಗುತ್ತಾ ಪಿಜ್ಜಾದ ಮತ್ತೊಂದು ತುಣುಕನ್ನು ಕಚ್ಚಿದೆ. ಹೊಟ್ಟೆಯಲ್ಲಿದ್ದುದೆಲ್ಲ ಹೊರಬಂದೀತೆಂಬ ಭಯದಲ್ಲಿ ಹೊಟ್ಟೆ ಬಿಗಿಹಿಡಿದುಕೊಂಡೆ. ನಂತರ ನಾವು ಮ್ಯಸಿ ಬಟ್ಟೆಯಂಗಡಿಗೆ ಬಂದೆವು. ನನ್ನ ಪತಿ ನನ್ನನ್ನು ಚಲಿಸುತ್ತಿದ್ದ ಮೆಟ್ಟಿಲುಗಳ ಬಳಿ ಕರೆದೊಯ್ದ. ಅದರ ಚಲನೆ ರಬ್ಬರಿನಷ್ಟು ನಯವಾಗಿತ್ತು. ಅದರ ಮೇಲೆ ಕಾಲಿಡುತ್ತಿದ್ದಂತೆ ನಾನು ಕೆಳಗೆ ಬಿದ್ದುಬಿಡ್ತೇನೆ ಎನಿಸಿತು.
“ಬಿಕೋ, ಇದರ ಬದಲು ಲಿಫ್ಟ್ ಇಲ್ಲವಾ ಇಲ್ಲಿ?” ಕೇಳಿದೆ. ಹಿಂದೊಮ್ಮೆ ನಮ್ಮ ಸ್ಥಳೀಯ ಸರ್ಕಾರಿ ಕಚೇರಿಯಲ್ಲಿರುವ ಲಿಫ್ಟ್ ಬಳಸಿದ್ದೆ. ಅದರ ಬಾಗಿಲು ತೆರೆದುಕೊಳ್ಳುವ ಮುನ್ನ ಒಂದು ಇಡೀ ನಿಮಿಷ ಕಿರುಗುಟ್ಟುತ್ತಿತ್ತು.
“ಇಂಗ್ಲಿಷ್ ಮಾತಾಡು. ಹಿಂದೆ ಜನ ಇದ್ದಾರೆ.”
ಆತ ಪಿಸುಗುಟ್ಟಿದ. ಫಳಗುಟ್ಟುವ ಒಡವೆಗಳಿರುವ ಗಾಜಿನ ಕೌಂಟರೊಂದಕ್ಕೆ ಎಳೆದೊಯ್ದ.
“ಅದು ಎಲಿವೇಟರ್. ಲಿಫ್ಟ್ ಅಲ್ಲ. ಅಮೆರಿಕನ್ನರು ಎಲಿವೇಟರ್ ಅಂತಾರೆ.”
“ಸರಿ”
ಲಿಫ್ಟ್ (ಎಲಿವೇಟರ್) ಕಡೆಗೆ ಬಂದೆವು. ಮಾಲ್‌ನ ಮೇಲ್ಭಾಗಕ್ಕೆ- ಭಾರವಾದ ಕೋಟುಗಳು ಸಾಲುಸಾಲಾಗಿದ್ದ ವಿಭಾಗಕ್ಕೆ ಬಂದೆವು. ಆಕಾಶನೀಲಿ ಬಣ್ಣದ, ಒಳಭಾಗದಲಿ ಮೆತ್ತಗಿನ ತುಪ್ಪಳವನ್ನು ಹೊಂದಿದ್ದ ಒಂದು ಕೋಟನ್ನು ಖರೀದಿಸಿದ. ಅದೆಷ್ಟು ದೊಡ್ಡದಾಗಿತ್ತೆಂದರೆ ನನ್ನಂಥ ಇಬ್ಬರು ಅದರಲ್ಲಿ ತೂರಿಕೊಳ್ಳಬಹುದಿತ್ತು.
“ಚಳಿಗಾಲ ರ‍್ತಿದೆ” ಹೇಳಿದ “ಮನೆಯೊಳಗಡೆ ಇರೋದು ಅಂದ್ರೆ ಫ್ರೀಜರ್ ಒಳಗಡೆ ಇದ್ಹಾಗೆ. ನಿನಗೊಂದು ಕೋಟ್ ಬೇಕಾಗುತ್ತೆ”
“ಥ್ಯಾಂಕ್ಯೂ”
“ಸೇಲ್ ಇದ್ದಾಗ ಖರೀದಿ ಮಾಡಿಬಿಡೋದು ಯಾವಾಗ್ಲೂ ಬೆಸ್ಟ್. ಎಷ್ಟೊಂದು ವಸ್ತುಗಳು ಅರ್ಧಬೆಲೆಗೆ ಸಿಕ್ಕಿಬಿಡುತ್ತವೆ. ಅಮೆರಿಕಾದ ಅದ್ಭುತಗಳಲ್ಲಿ ಇದೂ ಒಂದು.”
“ಎಜಿ ಒಕ್ವು?” ಫಕ್ಕನೆ ಹೇಳಿ, ನಂತರ “ಹೌದಾ?” ಎಂದು ಸೇರಿಸಿದೆ.
“ಮಾಲ್ ಸುತ್ತಾ ಒಮ್ಮೆ ಅಡ್ಡಾಡಿ ಬರೋಣ. ಇನ್ನೂ ಕೆಲವು ಅಮೆರಿಕನ್ ಅದ್ಭುತಗಳಿವೆ”
ಮುಂದೆ ನಡೆದೆವು. ಬಟ್ಟೆಗಳು, ಆ-ಈ ಪರಿಕರಗಳು, ಪ್ಲೇಟುಗಳು, ಪುಸ್ತಕಗಳು ಫೋನ್‌ಗಳು ತುಂಬಿದ್ದ ಅಂಗಡಿಮಳಿಗೆಗಳನ್ನು ನನ್ನ ಪಾದ, ಹಿಮ್ಮಡಿಗಳು ನೋಯುವವರೆಗೂ ಸುತ್ತಿದೆವು. ಹಿಂದಿರುಗುವುದಕ್ಕೂ ಮುನ್ನ ಮ್ಯಾಕಡೊನಾಲ್ಡ್ಗೆ ಕರೆದೊಯ್ದ. ಮಾಲ್‌ನ ಹಿಂದೆ ರೆಸ್ಟೋರೆಂಟ್ ಇತ್ತು. ಹಳದಿ ಮತ್ತು ಕೆಂಪು ಬಣ್ಣದ ಒಂದು ದೊಡ್ಡ ಕಾರಿನಷ್ಟು ಸೈಜಿನ (ಒ ಅಕ್ಷರ) ಪ್ರವೇಶದ್ವಾರದಲ್ಲಿ ನಿಂತಿತ್ತು. ತಲೆಯ ಮೇಲ್ಭಾಗದಲ್ಲಿ ಕಾಣುವಂತೆ ತೂಗುಹಾಕಲಾಗಿತ್ತು. ಮೆನುಬೋರ್ಡ ಕಡೆಗೆ ನೋಡದೆಯೇ “ಎರಡು ಲಾರ್ಜ ಊಟ” ಆರ್ಡರ್ ಮಾಡಿದ.
“ಮನೆಗೆ ಹೋಗಬಹುದಿತ್ತಲ್ಲ, ನಾನು ಅಡುಗೆ ಮಾಡ್ತಿದ್ದೆ” ಎಂದೆ.
“ನಿನ್ನ ಗಂಡನ್ನ ಅತಿಯಾಗಿ ಹೊರಗಿನ ಊಟ ಮಾಡಲು ಬಿಡಬೇಡ” ಆಡಾ ಆಂಟಿ ಹೇಳಿದ್ದಳು.
“ಇಲ್ದಿದ್ರೆ ಚೆನ್ನಾಗಿ ಅಡುಗೆ ಮಾಡೋ ಹೆಂಗಸಿನ ತೋಳಿಗೆ ಹೋಗಿಬೀಳ್ತಾನೆ. ಗಿನಿಯಾ ಕೋಳಿ ತನ್ನ ಮೊಟ್ಟೆಗಳನ್ನು ಹೇಗೆ ಕಾಯುತ್ತೊ ಹಾಗೆ ನಿನ್ನ ಗಂಡನ್ನ ಕಾಯುತ್ತಿರ್ಬೇಕು.”
“ಆಗಾಗ ಇಲ್ಲಿ ಊಟಮಾಡೋದು ಇಷ್ಟ ನಂಗೆ.” ಎಂದ ಆತ. ಹ್ಯಂಬರ್ಗರ್ ಅನ್ನು ಎರಡೂ ಕೈಗಳಿಂದ ಹಿಡಿದು, ತುಂಬ ಏಕಾಗ್ರತೆಯಿಂದ ತಿನ್ನತೊಡಗಿದ. ಆಗ ಆತನ ಬಿಗಿದ ದವಡೆಗಳು, ಜೊತೆಗೂಡಿದ ಹುಬ್ಬುಗಳು ಇನ್ನಷ್ಟು ಅಪರಚಿತನಾಗಿ ಕಾಣುವಂತೆ ಮಾಡಿಹಾಕಿದವು.

ಹೊರಗಡೆ ತಿಂದಿದ್ದನ್ನೆಲ್ಲಾ ಸರಿಪಡಿಸುವಂತೆ ಸೋಮವಾರ ಕೊಬ್ಬರಿ ಅನ್ನ ಮಾಡಿದೆ. ಮೆಣಸಿನ ತಿಳಿಸಾರು ಕೂಡ ಮಾಡಬೇಕು ಎಂದುಕೊಂಡಿದ್ದೆ. ಅದು ಗಂಡಸಿನ ಮನಸನ್ನು ತಿಳಿಯಾಗಿಸುತ್ತದೆ ಎಂದು ಇಫಿ ಆಂಟಿ ಹೇಳಿದ್ದಳು. ಆದರೆ ಅದಕ್ಕೆ ಅಗತ್ಯವಾಗಿ ಬೇಕಾಗಿದ್ದ ಉಜಿಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಹಿಡಿದುಬಿಟ್ಟಿದ್ದರು. ಅದಿಲ್ಲದೆ ಮೆಣಸಿನಸಾರು ನಿಜಕ್ಕೂ ಮೆಣಸಿನಸಾರೇ ಅಲ್ಲ. ಕೆಳಗಿನ ಓಣಿಯಲ್ಲಿದ್ದ ಜಮೈಕಾ ಅಂಗಡಿಯಿಂದ ತೆಂಗಿನಕಾಯಿ ತಂದುಕೊಂಡೆ. ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಲು ಒಂದು ಗಂಟೆ ಕಷ್ಟಪಡಬೇಕಾಯ್ತು. ಏಕೆಂದರೆ ತುರಿಯುವ ಮಣೆ ಇರಲಿಲ್ಲ. ನಂತರ ಅದರ ರಸ ತೆಗೆಯಲು ಬಿಸಿನೀರಿನಲ್ಲಿ ನೆನೆಯಿಟ್ಟೆ. ನನ್ನ ಗಂಡ ಮನೆಗೆ ಬಂದಾಗ ಆಗಷ್ಟೆ ಅಡುಗೆ ಮುಗಿಸಿದ್ದೆ. ಸಮವಸ್ಟ್ರದಂತೆ ಕಾಣುವ ಉಡುಪನ್ನು ತೊಟ್ಟಿದ್ದ. ಹುಡುಗಿಯರ ಷರ್ಟನಂತಿದ್ದ ನೀಲಿ ಷರ್ಟನ್ನು ಸೊಂಟದಲ್ಲಿ ಬಿಗಿಯಾಗಿದ್ದ ನೀಲಿ ಪ್ಯಾಂಟಿನೊಳಕ್ಕೆ ಟಕ್ ಮಾಡಿಕೊಂಡಿದ್ದ.

“ಕೆಲಸ ಎಲ್ಲಾ ಚೆನ್ನಾಗಿ ಮಾಡಿದ್ಯಾ..?”
“ನೀನು ಮನೇಲೂ ಇಂಗ್ಲಿಶ್ ಮಾತಾಡಬೇಕು ಬೇಬಿ. ಆಗ ಬೇಗ ಅಭ್ಯಾಸ ಮಾಡ್ಕೊತೀಯ.”
ಆತ ತನ್ನ ತುಟಿಗಳನ್ನು ನನ್ನ ಕೆನ್ನೆಯ ಮೇಲೆ ತೀಡುತ್ತಿರುವಾಗಲೇ ಬಾಗಿಲ ಕರೆಗಂಟೆ ಸದ್ದಮಾಡಿತು. ಷರ್ಲಿ, ಅವಳ ದೇಹ ಮತ್ತದೇ ಗುಲಾಬಿ ಬಣ್ಣದ ಉಡುಪಿನಲ್ಲಿ ಹುದುಗಿಕೊಂಡಿತ್ತು. ಸೊಂಟದಲ್ಲಿ ಬಿಗಿಯಾದ ಬೆಲ್ಟ್ ಕಟ್ಟಿಕೊಂಡಿದ್ದಳು.
“ಈ ವಾಸನೆ.. ..?”
ಅವಳು ಮೂಗಿನಿಂದ ಹೊರಡುವ ದನಿಯಲ್ಲಿ ಹೇಳಿದಳು.
“ಎಲ್ಲ ಕಡೆ ಇದೆ, ಇಡೀ ಬಿಲ್ಡಿಂಗ್‌ನಲ್ಲಿ. ಏನು ಅಡುಗೆ ಮಾಡಿದೀಯಾ?
“ಕೊಬ್ಬರಿ ಅನ್ನ”
“ನಿಮ್ಮ ದೇಶದ ಅಡುಗೇನಾ?”
“ಹೌದು”
“ಒಳ್ಳೆ ಪರಿಮಳ. ಸಮಸ್ಯೆ ಏನೆಂದರೆ ಇಲ್ಲಿ ಸಂಸ್ಕೃತಿ ಅನ್ನೊದೆ ಇಲ್ಲ. ನಿಜವಾಗ್ಲೂ ಇಲ್ಲ.”
ಆಕೆ ನನ್ನ ಗಂಡನೆಡೆಗೆ ತಿರುಗಿ ನೋಡಿದಳು- ಆತ ತನ್ನ ಅಭಿಪ್ರಾಯವನ್ನು ಒಪ್ಪಿಕೊಳ್ಳಬೇಕು ಎಂಬಂತೆ. ಆದರೆ ಆತ ಸುಮ್ಮನೆ ನಕ್ಕನಷ್ಟೆÃ.
“ಡೇವ್, ಸ್ವಲ್ಪ ನನ್ನ ಏರ್ ಕಂಡಿಷನರ್ ನೋಡ್ತಿಯಾ..? ಅದು ಮತ್ತೆ ವರಸೆ ತೆಗೆದಿದೆ. ಮತ್ತೆ ಇವೊತ್ತು ತುಂಬ ಸೆಕೆ..” ಎಂದಳು.
“ಖಂಡಿತಾ” ನನ್ನ ಗಂಡ ಹೇಳಿದ. ಅವರಿಬ್ಬರೂ ಹೊರಡುವುದಕ್ಕೆ ಮುನ್ನ ಷರ್ಲಿ ಹಿಂದಿರುಗಿ ನೋಡಿ ಹೇಳಿದಳು.
“ತುಂಬ ಒಳ್ಳೆ ಪರಿಮಳ”

ಸ್ವಲ್ಪ ಅನ್ನ ಊಟ ಮಾಡಲು ಅವಳನ್ನು ಆಹ್ವಾನಿಸಬೇಕು ಎಮದುಕೊಂಡೆ. ಹೋರಹೋದ ನನ್ನ ಗಂಡ ಅರ್ಧಗಂಟೆಯ ಬಳಿಕ ಹಿಂದಿರುಗಿದ ಮತ್ತು ಆತನ ಎದುರಿಗಿಟ್ಟ ಗಮಗಮಿಸುವ ಅನ್ನವನ್ನು ಚಪ್ಪರಿಸುತ್ತ ಊಟ ಮಾಡಿದ. ಅಂಕಲ್ ಐಕೆ ಕೆಲವುಬಾರಿ ಹೀಗೇ.. .. ಆಡಾ ಆಂಟಿಯ ಅಡುಗೆಯನ್ನು ಎಷ್ಟು ಮೆಚ್ಚಿದ್ದೇನೆಂದು ತೋರಿಸಿಕೊಳ್ಳಲು ತುಟಿ ಚಪ್ಪರಿಸುತ್ತಿದ್ದ. ಆದರೆ ಮಾರನೆಯ ದಿನ ಕೆಲಸದಿಂದ ಹಿಂದಿರುಗಿದಾಗ ಅಡುಗೆ ಪುಸ್ತಕವನ್ನು ತಂದಿದ್ದ. ಅದು ಬೈಬಲ್‌ನಷ್ಟು ದಪ್ಪವಿತ್ತು.
“ಬಿಲ್ಡಿಂಗ್ ತುಂಬಾ ಅಡುಗೆ ವಾಸನೆ ತುಂಬೋ ಜನ ಅಂತ ಎಲ್ಲರೂ ಗುರುತಿಸೋದು ಬೇಡ ನಂಗೆ” ಎಂದ.
ಆ ಅಡುಗೆಪುಸ್ತಕವನ್ನು ಕೈಗೆ ತೆಗೆದುಕೊಂಡು ಮುಖಪುಟದ ಮೇಲೆ ಬೆರಳಾಡಿಸಿದೆ. ಅದರ ಮೇಲೆ ಹೂವಿನಂತೆ ಕಾಣುವ ಆದರೆ ಬಹುಶಃ ಯಾವುದೋ ತಿನಿಸು ಇರಬಹುದಾದ ಚಿತ್ರವಿತ್ತು.
“ನೀನು ತುಂಬಾ ಬೇಗ ಅಮೆರಿಕನ್ ಅಡುಗೆ ಮಾಡುವುದನ್ನು ಕಲಿತುಬಿಡುತ್ತೀ, ನಂಗೊತ್ತು”
ಹೇಳುತ್ತಾ ಆತ ನನ್ನನ್ನು ಹತ್ತಿರಕ್ಕೆಳೆದುಕೊಂಡ.

ಆ ರಾತ್ರಿ ನನ್ನ ಗಂಡ ನನ್ನ ಮೇಲೆ ಭಾರವಾಗಿ ಮಲಗಿ, ಏದುಸಿರು ಬಿಡುತ್ತಾ ಇರುವಾಗಲೂ ಅಡುಗೆಪುಸ್ತಕ ಕುರಿತೇ ಯೋಚಿಸುತ್ತಿದ್ದೆ. ಮಾಂಸವನ್ನು ಕಂದುಬಣ್ಣ ಬರುವವರೆಗೆ ಎಣ್ಣೆಹಾಕಿ ಹುರಿಯುವುದು ಹೇಗೆ ಎಂಬುದನ್ನಾಗಲೀ, ಚರ್ಮಸುಲಿದ ಕೋಳಿಯನ್ನು ಹಿಟ್ಟಿನಲ್ಲಿ ಅದ್ದಿ ಕರಿಯುವುದು ಹೇಗೆ ಎಂಬುದನ್ನಾಗಲೀ ಮದುವೆ ದಲ್ಲಾಳಿಗಳು ನಮಗೆ ಹೇಳಿ ಕೊಟ್ಟಿರುವುದೇ ಇಲ್ಲ. ನಾನ್ಯಾವಾಗಲೂ ಮಾಂಸವನ್ನು ತನ್ನಷ್ಟಕ್ಕೆ ತಾನೇ ನೀರು ಬಿಟ್ಕೊಳ್ಳೊ ತರ ಬೇಯಿಸ್ತಿದ್ದೆ, ಕೋಳಿಯನ್ನು ಚರ್ಮದಸಮೇತ ಮೃದುವಾಗುವವರೆಗೂ ಕುದಿಸ್ತಿದ್ದೆ. ಮಾರನೆಯ ದಿನದಿಂದ ನನ್ನ ಗಂಡ, ಪುಣ್ಯಕ್ಕೆ ಬೆಳಿಗ್ಗೆ ಆರಕ್ಕೆಲ್ಲಾ ಹೊರಟುಬಿಡ್ತಿದ್ದ ಮತ್ತು ಸಂಜೆ ಎಂಟರವರೆಗೂ ರ‍್ತಿರಲಿಲ್ಲ. ಅಮೆರಿಕನ್ ಅಡುಗೆ ಕಲಿಯುವ ಭರದಲ್ಲಿ ಅರ್ಧಮರ್ಧ ಹುರಿದ ಕೋಳಿಯನ್ನು ಅತ್ತ ಒಗೆದು, ಹೊಸದಾಗಿ ಬೇರೆ ಕೋಳಿಯೊಂದಿಗೆ ಅಡುಗೆ ಮಾಡಲು ಸಮಯ ಸಿಕ್ಕಿತು.

೨ಡಿ ಮನೆಯಲ್ಲಿ ವಾಸಕ್ಕಿದ್ದ ನಿಯಾಳನ್ನು ಮೊದಲ ಬಾರಿಗೆ ನೋಡಿದಾಗ ಅನಿಸಿದ್ದು- ಇವಳು ಆಡಾ ಆಂಟಿಗೆ ಸ್ವಲ್ಪವೂ ಇಷ್ಟವಾಗೋದಿಲ್ಲ ಎಂದು. ಆಡಾ ಆಂಟಿ ಗ್ಯಾರಂಟಿ ಇವಳನ್ನು “ನಾಚಿಕ್ಕೆಟ್ಟೊಳು” ಎಂದೇ ತರ‍್ತಿದ್ಳು. ಯಾಕೆಂದರೆ ಅವಳ ಟಾಪ್ ಎದೆಭಾಗದಲ್ಲಿ ತುಂಬ ಡೀಪ್ ಇತ್ತು. ಅದರೊಳಗಿಂದ ವಿರುದ್ಧಬಣ್ಣದ ಬ್ರಾ ಎದ್ದು ಕಾಣುತ್ತಿತ್ತು. ನಿಯಾಳ ಹೊಳೆಹೊಳೆಯುವ ಕಿತ್ತಳೆಬಣ್ಣದ ಲಿಪ್‌ಸ್ಟಿಕ್ ಮತ್ತು ಕಣ್ಣಿನ ಮೇಕಪ್ ನೋಡಿದರಂತೂ “ಸೂಳೆ” ಅಂದುಬಿಡ್ತಿದ್ದು…
ಪತ್ರಗಳನ್ನು ತರಲು ಕೆಳಗೆ ಹೋದಾಗ ಅವಳು ಸಿಕ್ಕಿದ್ದಳು.
“ಹಾಯ್, ನೀನು ಡೇವ್‌ನ ಹೆಂಡತಿ ತಾನೇ? ನಾನೇ ಬಂದು ನೋಡೋಣ ಅಂತಿದ್ದೆ. ನಾನು ನಿಯಾ..”
“ಥ್ಯಾಂಕ್ಸ್, ನಾನು ಚಿನಾಜಾ.. .. ಅಗಾಥಾ.. ..”ಎಂದೆ. ನಿಯಾ ಕುತೂಹಲದಿಂದ ನನ್ನನ್ನೆÃ ನೋಡುತ್ತಿದ್ದಳು.
“ಮೊದಲಿಗೆ ಏನೋ ಹೇಳಿದ್ಯಲ್ಲ.. ?
“ಅದು ನನ್ನ ನೈಜೀರಿಯನ್ ಹೆಸರು.. ..?”
“ಅದು ಇಗ್‌ಬೋ ಹೆಸರು, ಅಲ್ವಾ?”
“ಹೌದು”
“ಏನು ಹಾಗೆಂದರೆ.. ಏನರ್ಥ?”
“ದೇವರು ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆ..”
“ತುಂಬ ಚೆನ್ನಾಗಿದೆ ಹೆಸರು.. ನಿಯಾ ಅನ್ನೊದು ಸ್ವಹಿಲಿ ಹೆಸರು ಗೊತ್ತಾ.. ? ೧೮ ವರ್ಷದೋಳಿದ್ದಾಗ ಹೆಸರನ್ನು ಬದಲಾಯಿಸಿಕೊಂಡೆ. ತಾಂಜೇನಿಯಾದಲ್ಲಿ ಮೂರು ವರ್ಷ ಇದ್ದೆ. ಚೆನ್ನಾಗಿತ್ತು..”
“ಓ.. ..” ಉದ್ಗರಿಸಿದೆ ತಲೆಯಲ್ಲಾಡಿಸುತ್ತಾ. ಇವಳು ಅಮೆರಿಕಾದ ಕಪ್ಪುಹುಡುಗಿ- ಆಫ್ರಿಕನ್ ಹೆಸರನ್ನಿಟ್ಟುಕೊಂಡಿದಾಳೆ. ಅಂಥಾದ್ರಲ್ಲಿ ನನ್ನ ಗಂಡ ನನ್ನ ಹೆಸರನ್ನು ಇಂಗ್ಲಿಷ್ ಹೆಸರನ್ನಾಗಿ ಮಾಡಿ ಹಾಕಿದ್ದ.
“ಬಹುಷಃ ನಿನಗೆ ಅಪಾರ್ಟಮೆಂಟಿನಲ್ಲಿ ಸಾಯುವಷ್ಟು ಬೋರ್ ಹೊಡೀತಿರಬೇಕಲ್ಲ..? ಡೇವ್ ತುಂಬ ಲೇಟಾಗಿ ಬರ್ತಾನೇಂತ ಗೊತ್ತು ನಂಗೆ. ಬಾ ನನ್ನ ಜೊತೆ ಕೋಕ್ ಕುಡಿಯುವಂತೆ..”
ನನಗೆ ಸ್ವಲ್ಪ ಹಿಂಜರಿಕೆಯಾಯ್ತು. ಆದರೆ ನಿಯಾ ಆಗಲೇ ಮೆಟ್ಟಿಲ ಮೇಲಿದ್ದಳು. ವಿಧಿಯಿಲ್ಲದೆ ಹಿಂಬಾಲಿಸಿದೆ. ಅವಳ ಲಿವಿಂಗ್ ರೂಂ ಸಾಕಷ್ಟು ವಿಶಾಲವಾಗಿತ್ತು. ಕೆಂಪು ಸೋಫಾ, ಹೂಕುಂಡಗಳು, ಗೋಡೆಯಲ್ಲೊಂದು ದೊಡ್ಡ ಮುಖವಾಡ ಇಳಿಬಿದ್ದಿತ್ತು. ಕುಡಿಯಲು ಡಯಟ್ ಕೋಕ್ ಕೊಟ್ಟಳು. “ಹೇಗಿದೆ ಅಮೆರಿಕಾದ ಜೀವನ” ಎಂದೆಲ್ಲ ಕುಶಲ ವಿಚಾರಿಸಿದಳು. “ಬೂಕೈನ್ ಪೂರ್ತಿ ತೋರಿಸ್ತೇನೆ” ಎಂದು ಮಾತು ಕೊಟ್ಟಳು.
“ಆದರೆ ಸೋಮವಾರ ಮಾತ್ರ ಸುತ್ತಾಡಲು ಸಾಧ್ಯ ನೋಡು. ಆ ದಿನ ಕೆಲಸ ಮಾಡೋಲ್ಲ ನಾವು. ರಜಾ ಮಾಡಿಬಿಡ್ತೇನೆ.”
“ಓಹ್.. ಹೌದಾ..? ಏನ್ ಕೆಲಸ ಮಾಡ್ತೀರಿ?”
“ಒಂದು ಹೇರ್ ಸಲೂನ್ ಇಟ್ಕೊಂಡಿದೇನೆ..”
“ನಿನ್ನ ಹೇರ್ ಸ್ಟೈಲ್ ತುಂಬ ಚೆನ್ನಾಗಿದೆ..”

ಹೇಳಹೇಳುತ್ತಾ ಅವಳ ಗುಂಗುರುಗೂದಲನ್ನು ಸ್ಪರ್ಶಿಸಿದೆ. ಅವಳೇನೂ ಅದರ ಬಗ್ಗೆ ಹೆಚ್ಚು ಯೋಚಿಸಿದಂತೆ ಕಾಣಲಿಲ್ಲ. ಅವಳ ಕೂದಲಷ್ಟೆ ಅಲ್ಲ, ಅವಳು ಕೂದಲನ್ನು ಮೇಲೆತ್ತ ಕಟ್ಟಿ ಸಹಜವಾಗಿ ನೆತ್ತಿಯಿಂದ ಸ್ವಲ್ಪವೇ ಕೆಳಗೆ ತುರುಬು ಕಟ್ಟಿದ ರೀತಿಯೂ ಸುಂದರವಾಗಿತ್ತು. ಅವಳ ಕಂದುಬಣ್ಣದ ಚರ್ಮ ಕಾಂತಿಯುತವಾಗಿ ಮಿನುಗುತ್ತಿತ್ತು. ಕಣ್ಣುಗಳು, ದಟ್ಟಹುಬ್ಬುಗಳು ನಿಗೂಢ ಎನಿಸುತ್ತಿದ್ದವು. ಮಾಟವಾದ ನಿತಂಬಗಳನ್ನೂ ಗಮನಿಸಿದ್ದೆ.
ನಿಯಾ ಯಾವುದೋ ಹಾಡನ್ನು ಗಟ್ಟಿಯಾಗಿ ಹಾಕಿದ್ದಳು. ಹಾಗಾಗಿ ನಾನೂ ದನಿ ಎತ್ತರಿಸಿ ಮಾತಾಡಬೇಕಿತ್ತು.
“ನನ್ನ ಅಕ್ಕ ಒಬ್ಬಳು ಮೇಸಿಯಲ್ಲಿ ಮ್ಯಾನೇಜರ್ ಆಗಿದ್ದಾಳೆ. ಅಲ್ಲಿ ವುಮನ್ಸ್ ಡಿಪಾರ್ಟಮೆಂಟಿನಲ್ಲಿ ಸೇಲ್ಸ್ ಗರ್ಲ್ಸ ತಗೋತಿದಾರೆ. ನಿಂಗೆ ಆಸಕ್ತಿ ಇದ್ರೆ ಹೇಳು. ನಾನೊಂದು ಮಾತು ಅವಳಿಗೆ ಹೇಳಿರ್ತಿನಿ. ನಂಗೂ ತುಂಬ ಹೆಲ್ಪ್ ಮಾಡಿದಾಳೆ ಅವ್ಳು.”
ಆಹಾ.. .. ಆ ಮಾತು ಕೇಳುತ್ತಿದ್ದಂತೆ ನನ್ನ ಮನಸ್ಸು ಜಿಗಿಯಿತು. ಇದ್ದಕ್ಕಿದ್ದಂತೆ ಹೊಳೆದ ಈ ಸಂಪಾದಿಸುವ ಯೋಚನೆ.. ನನ್ನದೇ ಆದ ಸಂಪಾದನೆ, ಕೇವಲ ನನ್ನದೇ.. ..!
“ಆದರೆ ನನಗಿನ್ನೂ ವರ್ಕ ಪರ್ಮಿಟ್ ಸಿಕಿಲ್ಲವಲ್ಲ..?”
“ಯಾಕೆ, ಡೇವ್ ಇನ್ನೂ ನಿನ್ನ ಹೆಸರು ಫೈಲ್ ಮಾಡಿಲ್ವಾ..?
“ಮಾಡಿದಾರೆ..”
“ಬಿಡು ಮತ್ತೆ. ಬೇಗ ಸಿಗುತ್ತೆ. ಹೈಟಿಯಲ್ಲೊಬ್ಬಳು ನನ್ನ ಫ್ರೆಂಡ್, ಮೊನ್ನೆಯಷ್ಟೆ ತಗೊಂಡ್ಳು. ನಿನ್ನದೂ ಬೇಗ ಸಿಗುತ್ತೆ. ತಲೆ ಕೆಡಿಸ್ಕೊÃಬೇಡ. ಸಿಕ್ಕ ತಕ್ಷಣ ಹೇಳು ನಂಗೆ..”
“ಥ್ಯಾಂಕ್ಯೂ..” ನಿಯಾಳನ್ನು ತಬ್ಬಿಕೊಳ್ಳಬೇಕೆನಿಸಿತು ನನಗೆ.
ಆ ಸಂಜೆ ನನ್ನ ಗಂಡ ಬಂದೊಡನೆ ನಿಯಾಳ ಬಗ್ಗೆ ಹೇಳಿದೆ. ಕೆಲಸ ಮಾಡಿ ದಣಿದಿದ್ದ ಆತನ ಮುಖದಲ್ಲಿ ಕಣ್ಣುಗಳು ಗುಹೆಯೊಳಕ್ಕೆ ಸೇರಿಕೊಂಡಂತೆ ಇದ್ದವು.
“ನಿಯಾ.. ..?”
ಯಾರೋ ಏನೋ ಎಂಬಂತೆ ಕೇಳಿದ, ನಂತರ
“ಓ ಅವಳಾ..? ಪರವಾಯಿಲ್ಲ. ಆದರೂ ಹುಶಾರಾಗಿರು. ಅವಳು ಅಂಥಾ ಒಳ್ಳೆಯವಳಲ್ಲ..” ಎಂದ.
ತದನಂತರ ನಿಯಾ ತನ್ನ ಕೆಲಸ ಮುಗಿದ ಬಳಿಕ ಆಗಾಗ ಮಾತಿಗೆ ಸಿಗತೊಡಗಿದಳು. ಮನೆಗೇ ಬರ್ತಿದ್ದಳು. ಅಡುಗೆ ಮಾಡುವುದನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದಳು. ಅವಳು ಸಿಗರೇಟು ಸೇದಲು ಅನುಕೂಲವಾಗುವಂತೆ ಏರ್ ಕಂಡಿಷನರ್ ಆಫ್ ಮಾಡಿ ಕಿಟಕಿಗಳನ್ನೂ ತೆರೆಯುತ್ತಿದ್ದೆ ನಾನು. ಹೇರ್ ಸಲೂನಿನ ಹೆಂಗಸರ ಕುರಿತು, ತಾನು ಹೊರಹೋಗುವ ಗಂಡಸರನ್ನು ಕುರಿತು ಹೇಳುತ್ತಾ ಕುಳಿತಿರುತ್ತಿದ್ದಳು. ಸಂಭಾಷಣೆಯಲ್ಲಿ ಯಾವಾಗಲೂ “ಕಿಲಾಡಿಗಳು..” ಎಂಬ ನಾಮಪದ, “ಬ್ಲಡಿ ಫ… “ ಎಂಬ ಕ್ರಿಯಾಪದ ಯಾವಾಗಲೂ ಬಳಸುತ್ತಿದ್ದಳು. ಅವಳು ಹೇಳುವುದನ್ನು ಕೇಳಲು ತುಂಬ ಇಷ್ಟವೆನಿಸುತ್ತಿತ್ತು. ನಿಯಾ ಸದಾ ನಗುತ್ತಾ ಇರುತ್ತಿದ್ದಳು. ನಕ್ಕಾಗಲೆಲ್ಲ ಅವಳ ತ್ರಿಕೋನಾಕಾರದ, ಮುಂಭಾಗದಲ್ಲಿ ಮುರಿದುಹೋಗಿದ್ದ ಒಂದು ಹಲ್ಲು ಫಳಫಳಿಸುತ್ತಿತ್ತು. ನನ್ನ ಗಂಡ ಬರುವುದಕ್ಕೆ ಮುಂಚೆಯೇ ಅವಳು ಹೊರಟುಹೋಗುತ್ತಿದ್ದಳು.

ಚಳಿಗಾಲ ಅಮರಿಕೊಂಡಿತು.
ಆ ದಿನ ಅಪಾರ್ಟಮೆಂಟಿನಿಂದ ಹೊರಬಂದವಳೇ ಬೆಕ್ಕಸ ಬೆರಗಾಗಿ ನಿಂತುಬಿಟ್ಟೆ. ದೇವರು ಬಿಳಿಯ ಹತ್ತಿಯ ಸೊಗಸಾದ ಉಂಡಿಗಳನ್ನು ಭೂಮಿಗೆ ಎಸೆಯುತ್ತಿರುವಂತಿತ್ತು. ಅದು ಸ್ನೋ ಫಾಲ್.. .. ಹಿಮವರ್ಷ.. .. ನನ್ನ ಬದುಕಿನ ಮೊದಲ ಹಿಮವರ್ಷ.. .. ನೋಡುತ್ತಾ ನೋಡುತ್ತಾ ಬಹಳ ಹೊತ್ತು ಹಾಗೇ ನಿಂತುಬಿಟ್ಟಿದ್ದೆ. ಅನಂತರ ಮನೆಗೆ ಹಿಂತಿರುಗಿ ಅಡುಗೆ ಮನೆಯನ್ನು ಉಜ್ಜಿ ಉಜ್ಜಿ ಸ್ವಚ್ಚಗೊಳಿಸಿದೆ. ಮೇಲ್‌ನಲ್ಲಿ ಬಂದ ಕೀ ಫುಡ್ ಕೆಟಲಾಗ್‌ನಿಂದ ಕೂಪನ್ ಕತ್ತರಿಸಿಕೊಂಡೆ. ನಂತರ ಕಿಟಕಿಯ ಬಳಿ ಪಟ್ಟಾಗಿ ಕೂತುಬಿಟ್ಟೆ. ಹಿಮ ಸುರಿಯುತ್ತಿತ್ತು- ದೇವರ ವರವೇ ಅಲೆಅಲೆಯಾಗಿ ಸುರಿದಂತೆ…
ಚಳಿಗಾಲ ಬಂದಿದ್ದಾಯಿತು..
ನಾನಿನ್ನೂ ನಿರುದ್ಯೋಗಿಯಾಗಿಯೇ ಉಳಿದಿದ್ದೆ.
ಆ ದಿನ ಸಂಜೆ ನನ್ನ ಗಂಡ ಬಂದೊಡನೆ ಆತನೆದುರಿಗೆ ಫ್ರೆಂಚ್‌ ಫ್ರೈ ಹಾಗೂ ಫ್ರೆಂಚ್ ಚಿಕನ್‌ನ್ನು ಇಟ್ಟೆ.
“ನನ್ನ ವರ್ಕ ಪರ್ಮಿಟ್ ಇಷ್ಟೊತ್ತಿಗೆ ಬಂದಿರ್ಬೇಕಲ್ಲ.. ?”
ಆತ ತಕ್ಷಣ ಮಾತಾಡಲಿಲ್ಲ. ಒಂದಷ್ಟು ಫ್ರೆಂಚ್ ಪೊಟ್ಯಾಟೋ ಬಾಯಿಗೆ ಹಾಕಿಕೊಂಡ. ಈಗೀಗಂತೂ ನಾವಿಬ್ಬರೂ ಇಂಗ್ಲಿಷನ್ನೇ ಮಾತಾಡ್ತಿದ್ದೆವು. ನಾನೊಬ್ಬಳೇ ಅಡುಗೆ ಮಾಡುವಾಗ ಮಾತಾಡಿಕೊಳ್ಳೋದು ಅವನಿಗೇನು ಗೊತ್ತಾಗುತ್ತೆ? ನಿಯಾಳಿಗೂ “ನಂಗೆ ಹಸಿವಾಗಿದೆ” ಎಂಬುದನ್ನೂ, “ನಾಳೆ ಸಿಗೋಣ” ಎಂಬುದನ್ನೂ ಹೇಳಿಕೊಟ್ಟಿದ್ದೆ.
“ಇಲ್ಲ. ಸ್ವಲ್ಪ ತೊಂದರೆಯಿದೆ. ಗ್ರೀನ್ ಕಾರ್ಡ್ ತಗೊಳ್ಳೋಕೆ ಅಮೆರಿಕನ್ ಹೆಂಗಸನ್ನು ಮದುವೆಯಾಗಿದ್ದೆನಲ್ಲ, ಅವಳು ಸ್ವಲ್ಪ ಪ್ರಾಬ್ಲಂ ಮಾಡ್ತಿದಾಳೆ.. ”
ನಿಧಾನವಾಗಿ ಹೇಳುತ್ತಾ ಚಿಕನ್ ತುಂಡನ್ನು ಎತ್ತಿ ಬಾಯಿಗೆ ಹಾಕಿಕೊಂಡ. ಕಣ್ಣಿನ ಕೆಳಭಾಗ ಊದಿಕೊಂಡಿತ್ತು.
“ಅವಳೊಂದಿಗಿನ ಡೈವೋರ್ಸ ಬಹುತೇಕ ಫೈನಲ್ ಆಗಿತ್ತು. ಆದರೆ ಪೂರ್ತಿಯಾಗಿರಲಿಲ್ಲ. ನೈಜೀರಿಯಾದಲ್ಲಿ ನಾನು ನಿನ್ನನ್ನು ಮದುವೆಯಾಗುವಾಗ ಪ್ರೊಸೆಸ್ ನಡೀತಿತ್ತು. ಸಣ್ಣವಿಷ್ಯ. ಆದ್ರೆ ಅವಳಿಗೆ ಗೊತ್ತಾಗಿಬಿಟ್ಟಿದೆ. ಆಗ ಇಮಿಗ್ರೇಶನ್‌ನೋರಿಗೆ ಹೇಳ್ತೀನೀಂತ ಹೆದರಿಸ್ತಿದಾಳೆ. ಜಾಸ್ತಿ ದುಡ್ಡು ಕೇಳ್ತಿದಾಳೆ.”
“ಏನೂ.. ನಿಮಗೆ ಮೊದ್ಲೇ ಮದುವೆಯಾಗಿತ್ತಾ..?”
ನನ್ನ ಕೈಗಳು ನಡುಗತೊಡಗಿದವು. ಕೈಬೆರಳುಗಳನ್ನು ಗಟ್ಟಿಯಾಗಿ ಹೆಣೆದುಕೊಂಡೆ.
“ಅದನ್ನ ಈ ಕಡೆ ಕೊಡ್ತೀಯಾ?”
ಮಧ್ಯಾಹ್ನ ಮಾಡಿಟ್ಟಿದ್ದ ನಿಂಬೆ ಷರಬತ್ತಿನ ಕಡೆ ಕೈತೋರಿಸಿ ಕೇಳಿದ.
“ಜಗ್..?”
“ಪಿಚ್. ಅಮೆರಿಕನ್ನರು ಪಿಚರ್ ಅಂತಾರೆ. ಜಗ್ ಅಲ್ಲ.”

ಜಗ್ ಅನ್ನು (ಪಿಚರ್) ಆತನೆಡೆಗೆ ತಳ್ಳಿದೆ. ತಲೆಯಲ್ಲಿ ಸುತ್ತಿಗೆಯ ಹೊಡೆತದಂತೆ ಭಾಸವಾಯಿತು. ಕಣ್ಣುಗಳು ತುಂಬಿಕೊಂಡಿದ್ದವು.
“ನಿಮಗೆ ಮೊದಲೇ ಮದುವೆಯಾಗಿತ್ತಾ..?”
“ಅದೂ.. ಪೇಪರಿನಲ್ಲಿ ಅಷ್ಟೆಷ್ಟೇ . ನಂ ಕಡೆ ತುಂಬಾ ಜನ ಇಲ್ಲಿ ಅದನ್ನೇ ಮಾಡೊದು. ಆ ಹೆಣ್ಣುಮಕ್ಕಳಿಗೆ ಒಂದಿಷ್ಟು ದುಡ್ಡು ಕೊಡಬೇಕು. ಇಬ್ಬರೂ ಒಟ್ಟಾಗಿ ಪೇಪರ್ ವರ್ಕ ಮುಗಿಸಿಕೊಳ್ಳಬೇಕು. ಅಷ್ಟೇ. ಸಿಂಪಲ್. ಆದರೆ ಕೆಲವು ಸಲ ಎಲ್ಲ ಎಡವಟ್ಟಾಗಿಬಿಡುತ್ತೆ. ಅವಳು ಡೈವೋರ್ಸ ಕೊಡೋದಿಲ್ಲ ಅಂತಾಳೆ ಅಥವಾ ಬ್ಲಾಂಕ್ ಮೇಲ್ ಮಾಡೋಕೆ ಶುರುಮಾಡ್ತಾಳೆ. ಏನ್ಮಾಡೋದು.. ..?”
ಹರಿದಿಟ್ಟುಕೊಂಡಿದ್ದ ಕೂಪನ್‌ಗಳನ್ನು ಎರಡಾಗಿ ನಾಲ್ಕಾಗಿ ಹರಿದುಹಾಕತೊಡಗಿದೆ.
“ಓಫೋಡೈಲ್, ನೀನಿದನ್ನೆಲ್ಲಾ ಮೊದಲೇ ಹೇಳಬೇಕಾಗಿತ್ತು.”
“ಹೇಳಬೇಕು ಅಂತಾನೇ ಇದ್ದೆ”
“ತಿಳ್ಕೊಳ್ಳೋದಕ್ಕೆ ನಂಗೆ ಹಕ್ಕಿದೆ ಓಫೋಡೈಲ್. ಮದುವೆಗೆ ಮೊದಲೇ ತಿಳಿಸಬೇಕಿತ್ತು.”
ಎದುರಿಗಿನ ಕುರ್ಚಿಯಲ್ಲಿ ಕುಸಿದು ಕುಳಿತೆ.
“ಹೇಳದೇ ಇದ್ರೆ ತಾನೇ ಏನೀಗ? ಏನು ವ್ಯತ್ಯಾಸವಾಗುತ್ತೆ.? ನಿನ್ನ ಅಂಕಲ್ ಮತ್ತು ಆಂಟಿ ನಿರ್ಧಾರ ಮಾಡಿಯಾಗಿತ್ತು. ನಿನ್ನನ್ನು ಸಾಕಿ, ಬೆಳೆಸಿದವರ ವಿರುದ್ಧ ಮಾತಾಡ್ತಿದ್ದೆಯೇನು?”
ನಾನು ನಿರುತ್ತರಳಾಗಿ ಆತನನ್ನೇ ದಿಟ್ಟಿಸಿದೆ. ಕೈಯಲ್ಲಿದ್ದ ಕೂಪನ್‌ಗಳು ಚಿಂದಿಯಾಗಿದ್ದವು. ಡಿಟರ್ಜಂಟ್‌ಗಳು, ಮಾಂಸದ ಪ್ಯಾಕೆಟುಗಳು, ಪೇಪರ್ ಟವೆಲುಗಳು- ಎಲ್ಲ ಚಿತ್ರಗಳೂ ಛಿದ್ರಗೊಂಡಿದ್ದವು.
“ಮತ್ತೆ ಮನೆಯಲ್ಲಿ ನಿನಗೂ ಸಮಸ್ಯೆಗಳಿದ್ದವು ಅಲ್ವಾ..? ಏನು ಮಾಡೋ ಹಾಗಿದ್ದೆ ನೀನಾದರೂ? ಮಾಸ್ಟರ್ ಡಿಗ್ರಿ ಮಾಡಿದವರು ನೌಕರಿಯಿಲ್ಲದೆ ಅಲೀತಿದಾರೆ, ಗೊತ್ತಿಲ್ವಾ?”
ಆತನ ದನಿ ನಿಸ್ಸಾರವಾಗಿತ್ತು.
“ನನ್ನನ್ನು ಯಾಕೆ ಮದುವೆ ಮಾಡಿಕೊಂಡ್ರಿ?”
“ಯಾಕೇಂದ್ರೆ, ನಂಗೆ ನೈಜೀರಿಯನ್ ಹೆಂಡತಿ ಬೇಕಾಗಿತ್ತು. ನನ್ನ ಅಮ್ಮ ಹೇಳಿದ್ಲು- ನೀನು ಒಳ್ಳೇ ಹುಡುಗಿ, ಗಲಾಟೆಯವಳಲ್ಲ ಅಂತ. ಮತ್ತೆ ನೀನು ವರ್ಜಿನ್ ಇರಬಹುದು ಅಂತಾನೂ ಹೇಳಿದ್ಲು.”
ಹೇಳಹೇಳುತ್ತಾ ಆತ ಮುಗುಳ್ನಕ್ಕ. ಹಾಗೆ ನಗುವಾಗ ಆತ ಇನ್ನಷ್ಟು ಸುಸ್ತಾದವನಂತೆ ಕಂಡ.

“ಆಕೆ ನಿನ್ನ ಬಗ್ಗೆ ಎಷ್ಟು ತಪ್ಪು ತಿಳಿದುಕೊಂಡಿದ್ದಾಳೆ ಎಂಬುದನ್ನು ಹೇಳಬೇಕು ಅವಳಿಗೆ”
ಇನ್ನಷ್ಟು ಕೂಪನುಗಳನ್ನು ತೆಗೆದು ಕೆಳಕ್ಕೆ ಒಗೆದೆ. ಕೈಗಳ ಕಂಪನ ಗೊತ್ತಾಗದಿರಲಿ ಎಂದು ಕೈಗಳನ್ನು ಪರಸ್ಪರ ಹೆಣೆದುಕೊಂಡೆ. ಬೆರಳಿನ ಉಗುರುಗಳು ಚರ್ಮವನ್ನು ಸೀಳಲು ಪ್ರಯತ್ನಿಸುತ್ತಿದ್ದವು.
“ನಿನ್ನ ಫೋಟೋ ನೋಡಿದಾಗ ನಂಗೆ ತುಂಬ ಸಂತೋಷವಾಗಿತ್ತು. ನಿನ್ನ ಮೈಬಣ್ಣ ತಿಳಿಯಾಗಿದೆ. ನಾಳೆ ಹುಟ್ಟುವ ಮಕ್ಕಳು ಹೇಗಿರ್ಬೇಕು ಅನ್ನೋದರ ಬಗ್ಗೆ ಕೂಡಾನೂ ನಾನು ಯೋಚಿಸ್ಬೇಕಲ್ವಾ? ಅಮೆರಿಕಾದಲ್ಲಿ ತಿಳಿಬಣ್ಣದ ಕರಿಯರು ಪರವಾಗಿಲ್ಲ, ಒಳ್ಳೆ ಸ್ಥಿತೀಲಿದಾರೆ.”
ಆತ ತಿನ್ನುತ್ತಾ, ಹೇಳುತ್ತಾ ಹೋದ. ಚಿಕನ್ ತಿನ್ನುತ್ತಾ ಅದನ್ನು ಪೂರ್ತಿ ಅಗಿಯದೆ ನೀರು ಕುಡಿದು ನುಂಗುವುದನ್ನು ಗಮನಿಸಿದೆ. ಅದೇ ದಿನ ಸಂಜೆ ಆತ ಬಾತ್‌ರೂಂ ಒಳಗೆ ಹೋದೊಡನೆ ನಾನು ನೈಜೀರಿಯಾದಿಂದ ತಂದಿದ್ದ ಬಟ್ಟೆಗಳನ್ನಷ್ಟೇ ಮಡಿಚಿಕೊಂಡು, ನಾನೇ ತಂದಿದ್ದ ಪ್ಲಾಸ್ಟಿಕ್ ಸೂಟ್‌ಕೇಸಿನಲ್ಲಿ ತುರುಕಿಕೊಂಡೆ. ಕಸೂತಿಯ ಲಂಗ ಮತ್ತು ಕಫ್ತಾನುಗಳನ್ನು- ಅವೇನೂ ಆತ ಕೊಡಿಸಿದವಲ್ಲ- ಇಷ್ಟನ್ನು ತೆಗೆದುಕೊಂಡು ನೇರ ನಿಯಾಳ ಮನೆಗೆ ಬಂದೆ.
ನಿಯಾ ಹಾಲು, ಸಕ್ಕರೆ ಹಾಕಿ ಟೀ ಮಾಡಿಕೊಟ್ಟಳು. ದುಂಡಗಿನ ಡೈನಿಂಗ್ ಟೇಬಲ್ ಮೇಲೆ ನನ್ನನ್ನು ಕೂರಿಸಿ, ತಾನೂ ಕುಳಿತುಕೊಂಡಳು.
“ಮನೆಯವರ ಜೊತೆ ಮಾತಾಡಬೇಕು ಎನಿಸಿದರೆ ಇಲ್ಲಿಂದ ಕಾಲ್ ಮಾಡು. ಇಲ್ಲೇ ಇರಬೇಕೆನಿಸಿದರೆ ಎಷ್ಟುದಿನ ಬೇಕಾದರೂ ಇರು. ಬೆಲ್ ಅಟ್ಲಾಂಟಿಕ್‌ಗೆ ಹೇಳಿ ಪೇಮೆಂಟ್ ಪ್ಲಾನ್ ಮಾಡಿಸ್ತೀನಿ.”
“ಮಾತಾಡ್ಲಿಕ್ಕೆ ಮನೇಲಿ ಯಾರೂ ಇಲ್ಲ ನಿಯಾ”
ಮರದ ಮೇಜಿನ ಮೇಲೆ ಅವಳಿಟ್ಟಿದ್ದ ಉದ್ದನೆಯ ಮುಖವಾಡವನ್ನು ದಿಟ್ಟಿಸುತ್ತ ಹೇಳಿದೆ. ಅದರ ಖಾಲಿಯಾದ ಕಣ್ಣುಗಳು ನನ್ನನ್ನೆÃ ದಿಟ್ಟಿಸಿದವು.
“ನಿಮ್ಮ ಆಂಟಿಗೆ ಫೋನ್ ಮಾಡಿದರೆ ಹೇಗೆ?”
ನಿಯಾ ಆಂಟಿ ಕೇಳಿದಳು. ಬೇಡವೆಂದು ತಲೆಯಲ್ಲಾಡಿಸಿದೆ. ಆಡಾ ಆಂಟಿ ಏನು ಹೇಳ್ತಾಳೆ.. ?
“ಗಂಡನನ್ನು ಬಿಟ್ಟುಬಂದೆಯಾ” ಎಂದು ಅರಚುತ್ತಾಳೆ. “ಹುಚ್ಚು ಹಿಡೀತೇನು ನಂಗೆ?
“ಗಿನಿಯಾ ಮೊಟ್ಟೆಯನ್ನು ಯಾರಾದರೂ ನೆಲಕ್ಕೆ ಬಿಸಾಕ್ತಾರಾ? ಅಮೆರಿಕನ್ ಡಾಕ್ಟರ್ ಸಿಗ್ತಾನೆ ಅಂದ್ರೆ ಎಷ್ಟೋ ಜನ ಹೆಂಗಸರು ಎರಡೂ ಕಣ್ಣುಗಳನ್ನು ಕಿತ್ತಿಡೋಕೆ ತಯಾರರ‍್ತಾರೆ, ಗೊತ್ತಾ? ಯಾರೋ ಒಬ್ಬ ಗಂಡ ಸಿಕ್ರೆ ಸಾಕು ಅಂತ ಕಾಯ್ತರ‍್ತಾರೆ. ಅಂಥದ್ರಲ್ಲಿ ನೀನು…” ಅಂತೆಲ್ಲ ಕೂಗಾಡ್ತಾಳೆ. ಅಂಕಲ್ ಐಕೆ ನನ್ನ ಕೃತಜ್ಞಹೀನತೆಗೆ, ಮೂರ್ಖತನಕ್ಕೆ ಮುಷ್ಟಿಕಟ್ತಾನೆ, ಮುಖ ಊದಿಸಿಕೊಳ್ತಾನೆ. ಫೋನ್ ಕುಕ್ಕಿಬಿಡ್ತಾನೆ ಅಷ್ಟೇ.

“ನಿಜ, ಮದುವೆಗೆ ಮುಂಚೆಯೇ ಆತ ನಿನಗೆಲ್ಲಾ ಹೇಳಬೇಕಾಗಿತ್ತು. ಆದರೆ ಅದು ನಿಜವಾದ ಮದುವೆಯಲ್ಲ ಚಿನಾಜಾ. ನಾನೊಂದು ಪುಸ್ತಕದಲ್ಲಿ ಓದಿದ್ದೆ- ನಾವು ಪ್ರೇಮದಲ್ಲಿ ಬೀಳೋದಲ್ಲ. ಪ್ರೇಮದಲ್ಲಿ ಏರಬೇಕು ಅಂತ. ನೀನು ಸ್ವಲ್ಪ ಅವನಿಗೆ ಟೈಂ ಕೊಟ್ರೆ..”
“ಹಾಗಲ್ಲ, ಅದರ ಬಗ್ಗೆ ಅಲ್ಲ..”
“ಹೌದು ಹೌದು ನನಗರ್ಥ ಆಗುತ್ತೆ ಚಿನಾಜಾ. ನೀನು ಸಕಾರಾತ್ಮಕವಾಗಿ ಯೋಚಿಸೋದಿಕ್ಕೆ ಪ್ರಯತ್ನಿಸ್ತಿದೀಯಾ, ಅಲ್ವಾ..? ಯೋಚಿಸು, ಆತ ನಿಮ್ಮ ಮನೆಗೆ ಯಾವಾಗ್ಲಾದ್ರೂ ಬಂದಿದ್ನಾ? ಹಿಂದೆ.. ನೀನು ನೋಡಿದ್ದೆಯಾ?”
“ಒಂದ್ಸಲ ಬಂದಿದ್ದ. ನೋಡಿದ್ದೆ. ಆದ್ರೆ ಆವಾಗ ಅವನು ತುಂಬ ಚಿಕ್ಕವನು. ದುಡ್ಡೇನೂ ಇರಲಿಲ್ಲ ಅವನ ಬಳಿ. ಮದುವೆಗಿದುವೆ ಬಗ್ಗೆ ನಾನು ಯೋಚಿಸಿರಲೂ ಇಲ್ಲ.”
“ಇದು ನಿಜಕ್ಕೂ ಇಕ್ಕಟ್ಟು..”
ಅವಶ್ಯಕತೆ ಇಲ್ಲದಿದ್ದರೂ, ಟೀಯನ್ನು ಗಲಗಲ ತಿರುಗಿಸಿದೆ.
“ನಂಗೆ ಆಶ್ಚರ್ಯ ಆಗ್ತಿರೋದೇನೂಂದ್ರೆ, ನನ್ನ ಗಂಡಂಗೆ ನೈಜೀರಿಯನ್ ಹೆಂಡತಿ ಯಾಕೆ ಬೇಕಿತ್ತು ಅಂತ..”
“ಹೂಂ.. ಆದ್ರೆ ನೀನು ಗಂಡನ ಹೆಸರನ್ನೇ ಹೇಳೋದಿಲ್ವಲ್ಲಾ. ಯಾಕೆ? ಡೇವ್ ಅಂತ ಕರೆಯೋದಿಲ್ವಲ್ಲಾ? ಅದೇನು ಸಂಪ್ರದಾಯಾನಾ?”
“ಅಲ್ಲ, ಹಾಗೇನೂ ಅಲ್ಲ”
ವಾಟರ್‌ಪ್ರೂಫ್ ಬಟ್ಟೆಯಿಂದ ಮಾಡಿದ ಟೇಬಲ್‌ಮ್ಯಾಟ್‌ನ್ನೆ ದಿಟ್ಟಿಸಿದೆ. ಹೇಳಿಬಿಡಲೇ.. .. ನನಗೆ ಆತನ ಈ ಹೆಸರು ಗೊತ್ತಿರಲೇ ಇಲ್ಲ ಎಂದು? ಕೆಲವು ದಿನಗಳ ಹಿಂದಿನವರೆಗೂ ಈ ವ್ಯಕ್ತಿಯೇ ನನಗೆ ಗೊತ್ತಿರಲಿಲ್ಲ ಎಂದು?
“ಆತ ಮದುವೆಯಾಗಿರೋ ಹೆಂಗಸನ್ನು ನೀನು ನೋಡಿದೀಯಾ? ಅಥವಾ ಆತನ ಗರ್ಲ್ ಫ್ರೆಂಡ್ ಯಾರನ್ನಾದರೂ ನೋಡಿದೀಯಾ?”
ನಿಯಾ ದೃಷ್ಟಿ ತಪ್ಪಿಸಿದಳು. ಏನೋ ಹೇಳಬೇಕೆಂದುಕೊಂಡು, ಹೇಳಲಾರದೆ ಇರುವವಳಂತೆ ಕತ್ತು ತಿರುಗಿಸಿದಳು. ನಮ್ಮಿಬ್ಬರ ಮಧ್ಯೆ ಮೌನ ಬಿದ್ದುಕೊಂಡಿತು ಎಷ್ಟೋ ಹೊತ್ತು.. ..
“ನಿಯಾ.. ..”

ಕೊನೆಗೂ ಕರೆದೆ.
“ಎರಡು ವರ್ಷದ ಹಿಂದೆ ಆತ ಮೊದಮೊದಲಿಗೆ ಇಲ್ಲಿಗೆ ಬಂದಾಗ.. ನಿಜಕ್ಕೂ.. ನಾನೇ ಅವನ ಗರ್ಲ್ ಫ್ರೆಂಡ್ ಆಗಿದ್ದೆ.. ಒಂದು ವಾರದಲ್ಲಿ ಅದೆಲ್ಲ ಮುಗಿದುಹೋಗಿತ್ತು. ಮತ್ತೆ ನಾವೆಂದೂ ಡೇಟಿಂಗ್ ಮಾಡಲಿಲ್ಲ. ಅಥವಾ ಅವನು ಯಾರೊಂದಿಗೋ ಡೇಟ್ ಮಾಡಿದ್ದನ್ನು ನಾನೆಂದೂ ನೋಡಿಲ್ಲ…”
“ಓ.. ..”ಎಂದಷ್ಟೇ ಹೇಳಿ ಟೀ ಕುಡಿದೆ.
“ನೋಡು, ನಿನ್ನೊಂದಿಗೆ ನಾನು ಪ್ರಮಾಣಿಕವಾಗಿ ಇರಬೇಕು ಅಲ್ವಾ? ಮನಸಿನಲ್ಲಿ ಇದ್ದುದನ್ನು ಹೇಳಿಬಿಟ್ಟಿದೇನೆ.”
“ಖಂಡಿತಾ ಹೌದು..” ಎಂದೆ. ಎದ್ದುನಿಂತು ಕಿಟಕಿಯಿಂದ ಹೊರನೋಡಿದೆ. ಇಡೀ ಜಗತ್ತು ಸ್ಥಬ್ಧವಾದಂತೆ, ಬಿಳಿಹೊದಿಕೆ ಹೊದ್ದ ಶವದಂತೆ ಕಂಡಿತು. ಫುಟ್‌ಪಾತ್‌ಗಳು ಅಷ್ಟೆತ್ತರದ ಹಿಮ ಹೊದ್ದುಕೊಂಡು ಬೆಳ್ಳಗೆ ನಿಸ್ತೇಜವಾಗಿ ಹೊಳೆದವು.
“ನಿನ್ನ ಪೇಪರುಗಳನ್ನೆಲ್ಲ ಸೆಟ್ಲ್ ಮಾಡಿಕೊಂಡು ಹೊರಡುವುದೇ ಒಳ್ಳೆಯದು.. ..” ನಿಯಾ ಹೇಳಿದಳು.
“ನಿನಗೇನು ಬರಬೇಕೋ ಅದಕ್ಕೆಲ್ಲ ಮೊದಲು ಅಪ್ಲೈ ಮಾಡಿಕೋ.. ನಂತರ ಕೆಲಸ ಸಿಗುತ್ತೆ. ಇರೋದಿಕ್ಕೆ ಜಾಗ ಸಿಗುತ್ತೆ. ಒಂದು ಸಪೋರ್ಟ ಸಿಗುತ್ತೆ. ನಂತರ ಎಲ್ಲ ಹೊಸದಾಗಿ ಶುರುವಾಗುತ್ತೆ. ಅಮೆರಿಕಾ ಇದು.. ಹೀಗೇ..”
ನಿಯಾ ಎದ್ದುಬಂದು ಕಿಟಕಿ ಪಕ್ಕ ನನ್ನ ಬಳಿ ನಿಂತಳು. ಅವಳು ಹೇಳಿದ್ದು ನಿಜ. ಈಗಲೇ ನಾನು ಹೊರಟರೆ ಯಾವುದೂ ಸರಿಯಾಗೋದಿಲ್ಲ. ಆ ದಿನ ಅವಳೊಂದಿಗೆ ಉಳಿದುಕೊಂಡೆ. ಮಾರನೆಯ ದಿನ ಸಂಜೆ ನನ್ನ ಗಂಡನ ಮನೆಯ ಕಡೆ ಹೊರಟೆ. ಬಾಗಿಲ ಕರೆಗಂಟೆ ಸದ್ದುಮಾಡಿದೆ.
ಆತ ಬಾಗಿಲು ತೆಗೆದ.
ಪಕ್ಕಕ್ಕೆ ಸರಿದುನಿಂತು, ನಾನು ಒಳಹೋಗಲು ದಾರಿ ಮಾಡಿಕೊಟ್ಟ.

3 comments

  1. ಈ ಕತೆಯನ್ನು ಅಫ್ರಿಕನ್ ವಾಚಿಕೆಯಲ್ಲೇ ಓದಿದ್ದೆ. ಅನುವಾದ ಚೆನ್ನಾಗಿದೆ ಸುಧಾ.

Leave a Reply