ನಮ್ಮ ರೂಪಗಳ ಹುಡುಕುತ್ತಾ…  

ಡಾ. ಪಲ್ಲವಿ ಹೆಗಡೆ

ನನ್ನ ತಮದ ಕಪ್ಪಿನಲ್ಲಿ ನಿನ್ನ ರೋಷದ ಕೆಂಪು
ವರ್ಣರಂಜಿತವಾಗುವ ವೇಳೆಯಲ್ಲಿ
ರಾತ್ರಿ ಮೌನವಾಗಿ ಒಂದಾಗುವ ನಾವು
ಮಾತಿಲ್ಲದೆ ಸಂಧಿಸುವ ಬಂಧದಲ್ಲಿದ್ದೇವೆ.

ನಿನ್ನ ರಜಸ್ಸಿನ ಚಿತ್ರವಿಚಿತ್ರ ಚಿತ್ತಾರಗಳ
ಕಂಡೂ‌ ಕಾಣದಂತೆ ನಿರ್ಲಕ್ಷಿಸುವ ನಾನು
ಪ್ರೀತಿಯನ್ನು ಮರೆಯುತ್ತಾ ಮತ್ತ್ಯಾರಲ್ಲೋ
ಬೇರೆ ಬಣ್ಣಗಳ ಹುಡುಕುತ್ತಾ ದೂರವಾಗುತ್ತಿದ್ದೇವೆ.

ಬಂಧನದ ಉತ್ಕಟತೆ ಅಸಹನೀಯವಾದಾಗ
ಪುಟಿದೇಳುವ ತನುಮನುಗಳ ತಾಕಲಾಟಕ್ಕೆ
ಜಗಳವೆಂಬ ಹೆಸರಿಟ್ಟು ಇನ್ಯಾವುದರಲ್ಲೋ
ಸ್ವಚ್ಛ ಬಿಳಿಯ ಹುಡುಕುತ್ತಾ ಶಾಂತವಾಗುತ್ತಿದ್ದೇವೆ.

ಆ ಕಪ್ಪು ಇಲ್ಲಿನ ಬಿಳಿಯೊಳಗೆ ಇಳಿಯುವಾಗ
ಕೆಂಪು ರಾಚಿಸಿ ಮತ್ಯಾವುದೋ ವರ್ಣವಾಗುವ
ಹೊತ್ತಿಗೆ ಬೆಳಕಿನೊಂದು ಬಿಂದು ತೂರಿ ಬಂದು
ಮನದ ಮನೆಯೊಳಗೆ ಮಳೆಬಿಲ್ಲಾಗುವಾಗ
ನಮ್ಮ ಹುಡುಕಾಟ ನಿಂತಂತೆ ಮತ್ತೊಂದು
ಬೆಳಗಿನಲ್ಲಿ ರಾತ್ರಿಗಾಗಿ‌ ಕಾಯುತ್ತೇವೆ.

2 comments

Leave a Reply