ಮಗು ಬಂದ ಮನೆ..

ಕಾವ್ಯಾ ಕಡಮೆ ನಾಗರಕಟ್ಟೆ

ನೀನು ಬಂದ ಮನೆ
ಹಠಾತ್ ಅಂತರ್ಮುಖಿ
ಹೊರಗಿನ ಗಾಳಿಯೂ ಒಳಬರಲು ಬೆದರಿ
ತಟಸ್ಥ

ದಿನವಿಡೀ ಕೂದಲಿಗೆ ತಾಕದ ಬಾಚಣಿಕೆ
ಕಿವಿಯೇರದ ಕಿವಿಯೋಲೆ
ಆಗಾಗ ತೊಟ್ಟಿಲ ಬಳಿ ಬಂದು
ಮಲಗಿರುವ ದೇವರ ದರ್ಶನ ಪಡೆದೇ
ಎಚ್ಚರದಲೂ ನಿದಿರೆಯಲೂ
ನಿನ್ನದೇ ಕನಸು ಕಂಡು
ಸಮಯ ಸಿಕ್ಕಾಗಲಷ್ಟೇ ಉಂಡು ಎರಡೆರಡು ತುತ್ತು

ಅಮ್ಮನ ತುಟಿ ಅಪ್ಪನ ಕಣ್ಣು ಚಿಕ್ಕಮ್ಮನ ಮೂಗು
ಅತ್ತೆಯ ಕೆನ್ನೆ ಅಜ್ಜಿಯ ಗಲ್ಲ ಅಜ್ಜನ ಪಾದದ ಡೊಂಕು
ಎಲ್ಲವನ್ನೂ ಹೊತ್ತು ಬಂದ ಮಾಯಾ ಪ್ರಾಣವ
ಮುಟ್ಟಲೇ ಹೆದರುವ ಅಜ್ಜ
ತಟ್ಟಿ ಮಲಗಿಸುವ ಅಜ್ಜಿ
ನಸುಕಿನವರೆಗೂ ತೊಟ್ಟಿಲ ಪಕ್ಕವೇ
ಮಂತ್ರ ಮುಗ್ಧ ನಿನ್ನ ತಂದೆ ತಾಯಿ

ಹಗಲಂತೂ ಅಮ್ಮನೂಟ ಮುಗಿವ ತನಕವಾದರೂ
ಮಲಗಿರಲಿ ದೇವರು ಎಂಬುದರತ್ತಲೇ ಎಲ್ಲರ ಚಿತ್ತ
ಕೊನೆಯ ತುತ್ತು ಇನ್ನೇನು ಮುಗಿಸುವಾಗಲೇ
ಮಿಸುಕಾಟ ಕೇಳಿ

ಮಗು,
ಗಾಳಿಯಲ್ಲೇ ನಡೆವ ನಿನ್ನ ಈಜಿನ ಮುಂದೆ
ಸುಲಿದಿಟ್ಟ ಹಣ್ಣು ಕಪ್ಪಾದರೂ ಮಾಫಿ
ನೀನು ಬರುವ ಗಡಿಬಿಡಿಯಲ್ಲಿ ಅಚ್ಚೊತ್ತಿದ
ಅಮ್ಮನ ದೇಹದ ಗಾಯಗಳೂ ಮಾಫಿ
ನಿನ್ನದೇ ಧ್ಯಾನದಲಿ ಅಪ್ಪನ ದುಬಾರಿ ಲ್ಯಾಪುಟಾಪು
ಧಣಾರನೆ ನೆಲಕ್ಕೆ ಬಿದ್ದರೂ ಮಾಫಿ

ಅಜ್ಜಿಯ ದಾವಣಿಯಲ್ಲಿ ಜೊಲ್ಲಿನ ಘಮ
ಅಜ್ಜನ ಶರ್ಟಿನ ಮೇಲೆ ಪ್ರೋಕ್ಷಣೆಯ ಪರಿಮಳ
ಎಲ್ಲವೂ ಮಾಫಿ

ನೀನಲ್ಲಿ ಸ್ವಪ್ನದಲಿ ತುಟಿಯಾಡಿಸಿದರೂ
ಇಲ್ಲಿ ತುಳುಕುವ ನಿನ್ನ ಹಾಲ ಬಟ್ಟಲು
ನೀನೇ ಮರೆತರೂ ನಿದಿರೆಯಲಿ
ತೊಯ್ದು ನಿನ್ನ ಹಸಿವ ನೆನಪಿಸುವುದು

ನಿನ್ನ ಕಲರವದಿಂದಲೇ ಕಲಿತ ಹೊಸ ಪಾಠಗಳಿಗೆ
ಧನ್ಯರಾಗಿ ಸುತ್ತಲೇ ಸುತ್ತುವ
ಸೂರ್ಯಮಂಡಲದ ಗ್ರಹಗಳು ನಾವು
ನಮ್ಮದೆಲ್ಲವನ್ನೂ ಗುರುತ್ವದಲ್ಲೇ  ಹಿಡಿದಿಟ್ಟವನು
ಮನ್ನಿಸಬೇಕು ನೀನು ಸೂರ್ಯ ದೇವನು

ಮಗು ಬಂದ ಮನೆ
ಹಠಾತ್ ಅಂತರ್ಮುಖಿ
ಕಟ್ಟಿದ ಮುಷ್ಠಿಯಲ್ಲೇ ಈ ಗೃಹದ
ಬಿಗಿ ಹಿಡಿದ ಉಸಿರು.

4 comments

  1. ಮನ ತಾಟುವ ಕವಿತೆ. ಬಹಳ ಸೊಗಸಾಗಿ ಮೂಡಿ ಬಂಧಿದೇ. ಅಭಿನಂಧನೆಗಳು

  2. Congrats.. ಪ್ರತಿ ಪದವೂ ನನ್ನದೇ.. ಇವನು ನೋಡಲು ಥೇಟ್ ನನ್ನ ಕಂದನ ಹಾಗೆಯೆ… ಪುಟ್ಟ ಕಂದ

  3. ಆಹ್! ಎಷ್ಟು ಚೆಂದ ಬರೆದಿದ್ದೀರಿ… ಪುಟ್ಟ ಕಂದನಷ್ಟೇ ಮೃದು ಮಧುರ ಕವಿತೆ…

Leave a Reply