I think its Wednesday

‘ಕುತೂಹಲಿ’ ಬ್ಲಾಗ್ ನ ಲಕ್ಷ್ಮಿ ಎಸ್ ಅವರನ್ನು ಈ ಹಿಂದೆ ಅವಧಿ ಪರಿಚಯಿಸಿತ್ತು. ಈಗ ‘ನಾವೇಕೆ ಹೀಗೆ’ ಲಕ್ಷ್ಮಿ ಎಸ್ ಅವರನ್ನು ಪರಿಚಯಿಸುತ್ತಿದ್ದೇವೆ-  
 

ಸಂಡೇ..ಮಂಡೇ….
ನಮ್ಮಮ್ಮ ಸಂಗೀತ ಪ್ರಾಧ್ಯಾಪಕಿ. ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ದಿನಾ ಬರುತ್ತಾರೆ ಪಾಠ ಹೇಳಿಸಿಕೊಳ್ಳೋಕೆ. ಭಜನೆ, ಶ್ಲೋಕ, ಇತ್ಯಾದಿಗಳ ಪಾಠಗಳೂ ನಡೆಯುತ್ತವೆ. ನಾನವಾಗ ಸುಮ್ಮನೇ ರೂಮಲ್ಲಿದ್ದು, ಅವೆಲ್ಲವನ್ನ ಕೇಳಿಸಿಕೊಳ್ಳುತ್ತಾ ಅವರ ಮುದ್ದು ಮುದ್ದು ಮಾತುಗಳ ಮಜಾ ತೆಗೆದುಕೊಳ್ಳುತ್ತಾ ಸಾಯಂಕಾಲದ ಕಾಫಿ ಸವಿಯುತ್ತಿರುತ್ತೇನೆ.
 
ಮೊನ್ನೆ ಒಂದು ಘಟನೆ ನಡೆಯಿತು. ಅದು ಮೇಲ್ನೋಟಕ್ಕೆ ಹಾಸ್ಯಾಸ್ಪದ ಅನ್ನಿಸಿದರೂ ಸ್ವಲ್ಪ ಗಮನ ಹರಿಸಿದರೆ ಅದು ನಮ್ಮ ಭಾಷೆಯ ಅವನತಿಯನ್ನು ಎತ್ತಿ ತೋರಿಸುತ್ತದೆ.
ನಮ್ಮಮ್ಮ ಪಾಠ ಮುಗಿಸಿದಮೇಲೆ, ಮಗುವೊಂದಕ್ಕೆ ” ನಿನ್ನ ಮುಂದಿನ ಪಾಠ ಗುರುವಾರ ಇದೆ ” ಅಂದರು. ಮಗು ಹೊರಗೆ ಹೋಗುತ್ತಾ ಅದರ ಸ್ನೇಹಿತೆಯನ್ನ ಕೇಳಿತು…”hey, which day is ಗುರುವಾರ ? ” ಅದಕ್ಕೆ ಆ ಇನ್ನೊಂದು ಮಗು ” well.I think its Wednesday. I am not sure, lets ask our moms ! ”
ನನ್ನ ಕಿವಿಗೆ ಇದು ಬಿತ್ತು. ಆಗ ನಗು ಬಂತು. ಆದರೆ ಮರುಕ್ಷಣವೇ ಅನ್ನಿಸಿತು….”ಅರೆ ! ವಾರಗಳನ್ನು ಆಂಗ್ಲದಲ್ಲೇ ಹೇಳಬೇಕಾಗಿರುವಷ್ಟು ಅನಿವಾರ್ಯವಾಗಿಹೋಯ್ತಾ ಆಂಗ್ಲ ? ” ಅಮ್ಮಂದಿರೂ ಅದನ್ನ ಆಂಗ್ಲದಲ್ಲೇ ಹೇಳಿಕೊಟ್ಟು ಕನ್ನಡವನ್ನು ಕಡೆಗಾಣಿಸಿದ್ದಾರೆಯೇ ? ದ್ವಿಭಾಷಾ ದಿನಸೂಚಿಗಳು ಮೂಲೆಗುಂಪಾಗಿ ಹೋಗಿವೆಯೇ ?
ಅಕ್ಕರೆಯ “ತಿಂಡಿ ತಿನ್ನು ಕಂದಾ ” ಈಗ ” have your breakfast ! quick !” ಆಗಿದೆ. ” ಭಾನುವಾರ ಹೊರಗಡೆ ಹೋಗೋಣ” ಎಂಬ ಭರವಸೆ ಈಗ ” lets see if we can go out this weekend” …ಅಬ್ಬಾ !!
ರೂಮು, ಹಾಲು, ಪೆನ್ನು, ಪೆನ್ಸಿಲ್ಲು, ಬಸ್ಸು, ರೈಲು, ಬಸ್ ಸ್ಟಾಪು, ಕುಕ್ಕರ್ರು, ಗೇಟು , ಇವೆಲ್ಲ ಕನ್ನಡದಲ್ಲಿ ಈಗ ಮಿಳಿತವಾಗಿ ಹೋಗಿದೆ ಬಿಡಿ. ಆದರೆ ಭಾನುವಾರ ಸೋಮವಾರಗಳು ಸಂಡೆ ಮಂಡೆಯಾಗಿ ಹೋಗಿದ್ದು ತೀರ ಹೊಸತು ನನಗೆ.
ಇದೊಂದು ಸಣ್ಣ ಉದಾಹರಣೆ ಅಷ್ಟೇ. ಕನ್ನಡ ಎಂಥಾ ಪರಿಸ್ಥಿತಿಯಲ್ಲಿದೆ ಈಗ ಅನ್ನೋದನ್ನ ನಾನು ಹೆಚ್ಚು ವಿವರಿಸುವ ಅವಶ್ಯಕತೆ
ಇಲ್ಲ. ದಿನಪತ್ರಿಕೆಗಳು ಆ ಕೆಲಸವನ್ನು ಮಾಡುತ್ತಲೇ ಬಂದಿವೆ.
ಶಾಲೆಗಳು ಮಕ್ಕಳಿಗೆ ಭಾನುವಾರ ಸೋಮವಾರ ವನ್ನೂ ಕಲಿಸದಷ್ಟು ಆಂಗ್ಲೀಕರಣ ಗೊಂಡಿದೆವೆಯೇ ? ಮೊದಲು ಏ ಬೀ ಸೀ ಡಿ ಯನ್ನೇ ಹೇಳಿಕೊಡಲಿ….ಏನಾದರೂ ಮಾಡಿಕೊಳ್ಳಲಿ. ಆದರೆ ಕನ್ನಡವನ್ನ ಹೇಳಿಕೊಡದಿದ್ದರೆ, ಅದು ತೀರ ತಪ್ಪು. ವಿಪರ್ಯಾಸ ಅಂದರೆ, ಐದನೇ ತರಗತಿಯ ಮಕ್ಕಳಿಗೂ ಅ ಆ ಇ ಈ ಬರೋದಿಲ್ಲ. ಸ ರಿ ಗ ಮ ಪ ದ ನಿ ಸ ಗಳನ್ನ ಆಂಗ್ಲದಲ್ಲಿ ಬರೆದುಕೊಂಡು ಹೋಗುತ್ತವೆ ಮಕ್ಕಳು ನಮ್ಮ ಮನೆಯಲ್ಲಿ ! ಏನನ್ನೋಣ ಇದಕ್ಕೆ ?
ನಾನು ಓದಿದ್ದೂ ಆಂಗ್ಲ ಮಾಧ್ಯಮದ ಕಾನ್ವೆಂಟ್ ಒಂದರಲ್ಲಿಯೇ. ಆದರೆ ನಮ್ಮ ಶಾಲೆಯಲ್ಲಿ ಕನ್ನಡವನ್ನು ಖಂಡಿತಾ ಕಡೆಗಾಣಿಸಿರಲಿಲ್ಲ. ಕನ್ನಡದಲ್ಲಿ ಅಂಕ ಕಡಿಮೆಯಾದರೆ ಗಣಿತದಲ್ಲಿ ಅಂಕ ಕಡಿಮೆಯಾಗಿದ್ದಕ್ಕಿಂತ ಹೆಚ್ಚು ಬೈಗುಳ ದೊರೆಯುತ್ತಿದ್ದವು ಹೆಡ್ ಮೇಡಮ್ ಇಂದ ! ಹೆಡ್ ಮೇಡಮ್ ಕನ್ನಡ ಪ್ರಾಧ್ಯಾಪಕಿ ಇರಬಹುದೆಂದು ನೀವು ಊಹಿಸಿದ್ದರೆ ಅದು ತಪ್ಪು ! 🙂
ಈಗ ಕನ್ನಡವನ್ನ ಶಿಕ್ಷಣದಲ್ಲಿ ಪ್ರಾಥಮಿಕ ಭಾಷೆಯನ್ನಾಗಿ ಮಾಡಬೇಕೋ ಬೇಡವೋ ಅನ್ನೋದೇ ಪಾಪ ನಮ್ಮ ರಾಜಕೀಯ ಧುರೀಣರಿಗೆ ತಲೆನೋವು ತರಿಸಿದೆ. ನಾನು ಹೇಳುವುದು ಇಷ್ಟೆ- ಕನ್ನಡವನ್ನ ಪ್ರಥಮ ಭಾಷೆ ಮಾಡಲಿ. ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಆಂಗ್ಲವನ್ನು ಕಲಿಸಲಿ. ಆಂಗ್ಲ ಬೇಡವೇ ಬೇಡವೆಂದು ಭಾಷೆಯೊಂದರ ಕಲಿಕೆ ರದ್ದು ಮಾಡುವುದು ಮೂರ್ಖತನ. ಆದರೆ ಕನ್ನಡವನ್ನು ದ್ವಿತೀಯ / ತೃತೀಯ ಭಾಷೆಯಾಗಿ ತೆಗ್ಗೆದುಕೊಳ್ಳಬಿಡಕೂಡದು.
ನನಗೆ ಬೇಜಾರು ತಂದ ಸಂಗತಿ ಅಂದರೆ ಇದೊಂದೆ. ನಮ್ಮ ಕರ್ನಾಟಕದ ಜನತೆಗೆ ಅವಶ್ಯಕತೆಯಾವುದು, ಅನಿವಾರ್ಯ ಯಾವುದು ಅನ್ನೋದನ್ನು ಗುರುತಿಸಲು ಬರುವುದಿಲ್ಲವೇ ? ಅವೆರಡರ ಮಧ್ಯ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಕಂಡುಕೊಳ್ಳಲಾಗುವುದೇ ಇಲ್ಲವೇ ? ಕನ್ನಡ ಅನಿವಾರ್ಯ. ಆಂಗ್ಲ ಅವಶ್ಯಕ ಅಷ್ಟೆ. ಅಲ್ಲವೇ ?
ಸದ್ಯಕ್ಕೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡಿ ಪ್ರಯೋಜನ ಇಲ್ಲ. ಅದು ದೊಡ್ದ ಪ್ರಮಾಣದಲ್ಲಿ ಆಗಬೇಕಾದ ಕ್ರಾಂತಿ. ಈಗ ನಾವು ಏನು ಮಾಡಬಹುದು ಅನ್ನೋದನ್ನ ಮೊದಲು ಯೋಚನೆ ಮಾಡೋಣ.
ಮಕ್ಕಳಿಗೆ ನಾವು ಕನ್ನಡ ನ ಪಾಠದ ತರಹ ಮಾಡಿದರೆ ಅವು ಅದನ್ನ “ಪಾಠ” ಅಂತ ನೇ ತೆಗೆದುಕೊಂಡು ಅದನ್ನು ಕಡೆಗಾಣಿಸುವ ಪ್ರಸಂಗಗಳೇ ಹೆಚ್ಚು. ಆದ್ದರಿಂದ ಅವರಿಗೆ ಅದನ್ನು ಆಟದ ತರಹ ಹೇಳಿಕೊಡಬೇಕಾಗತ್ತೆ. ನಮ್ಮಮ್ಮ ಮಾಡಿದ್ದೂ ಅದನ್ನೇ.
ಬಾಲವಾಡಿ ಗೀತೆಗಳ ಮೂಲಕ ಈಗ ಅಮ್ಮ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದಾರೆ. ಮನೆಯಲ್ಲಿ ಕನ್ನಡ ಮಿಶ್ರಿತ ಆಂಗ್ಲ ಮಾತಾಡುವ ಇಂಥವರಿಗೆ ಅಚ್ಚಕನ್ನಡವನ್ನು ಹೇಳಿಕೊಡಬೇಕಾಗಿದೆ. “ಮೊದಲನೆ ದಿನವೇ ಆದಿತ್ಯವಾರ, ಎಲ್ಲ ದೇವರಿಗೆ ನಮಸ್ಕಾರ” ಅಂತ ಒಂದು ಬಾಲವಾಡಿ ಗೀತೆಯಿದೆ. ಅದನ್ನ ದಿನಾಗಲೂ ಹೇಳಿಸಿ ಹೇಳಿಸಿ ಈಗ ಅಮ್ಮ ಸಂಡೇ ಮಂಡೆಯನ್ನ ಕಡಿಮೆ ಮಾಡುವುದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಐದನೇ ತರಗತಿಯ ಮಕ್ಕಳು ಈಗ ಅ ಆ ಇ ಈ ಕಲಿಯಲು ಆರಂಭಿಸಿದ್ದಾರೆ. ಅಮ್ಮ ಆಂಗ್ಲದಲ್ಲಿ ಪಿಳ್ಳಾರಿ ಗೀತೆಗಳನ್ನು ಬರೆದುಕೊಡುವುದಿಲ್ಲ ಎಂದು ಸಾರಸಗಟಾಗಿ ನಿರಾಕರಿಸಿದ್ದಾರೆಯಾದ್ದರಿಂದ. ಕನ್ನಡೇತರರು ತಮ್ಮ ತಮ್ಮ ಭಾಷೆಯಲ್ಲಿ ಬರೆದುಕೊಂಡು ಹೋಗುತ್ತಾರಾದರೂ, ಅವರೂ ಈಗ ಕನ್ನಡ ಕಲಿಯುವ ಇಚ್ಛೆ ತೋರಿಸುತ್ತಿದ್ದಾರೆ.
ಹೊರನಾಡ ಜನರಿಗೆ ಕನ್ನಡ ಕಲಿಸುವ ಮಾಹಾನ್ ಪುಣ್ಯಕಾರ್ಯ ಅನಂತರದಲ್ಲಿರಲಿ…ಮೊದಲು ಇಲ್ಲಿನ ಕನ್ನಡಿಗರೇ ಕನ್ನಡ ಕಲಿಯಬೇಕಿದೆ.
ಕನ್ನಡವನ್ನು ಕಲಿಯದೇ ಹಾಗೆಯೇ ಇರುವಷ್ಟರ ಮಟ್ಟಿಗೆ ನಾವು ಕನ್ನಡವನ್ನು ಕಡೆಗಾಣಿಸಿದ್ದೇವಲ್ಲಾ …ನಾವೇಕೆ ಹೀಗೆ ?

‍ಲೇಖಕರು avadhi

October 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. hanasoge

    ETV yalli bruv hosaruchi yalli inthaha Kannada(?) kelisikollabahudu. ex: ondu pinch of salt haki stir madta iri; nanu yavagalu fresh vegetables anne buy madodo etc.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: