ಹೇಳಲಿಕ್ಕಿನ್ನೂ ಸಾಕಷ್ಟು ಬಾಕಿ ಇದೆ…

ತುಟಿಯ ರಂಗು ಕಳೆದಿದೆ.
ಇಲಾಸ್ಟಿಕ್ ಸ್ಮೈಲೂ…
ಇನ್ನು ಮುಂದೆ ಮುಖವಾಡದ ಅಗತ್ಯವಿಲ್ಲ.
 
ಕಣ್ ಬಿಟ್ಟಾಗಿನಿಂದ ಕಂಡಿದ್ದು ಗುಬ್ಬಚ್ಚಿ ಗೂಡಂಥ ಬೆಚ್ಚನೆ ಸಂಸಾರ. ಅಲ್ಲಿ ಕುಂತು ಹೆಣೆದ ಕನಸುಗಳೂ ಬೆಚ್ಚಬೆಚ್ಚನೆಯವೇ.
ಇದ್ದಕ್ಕಿದ್ದ ಹಾಗೇ ಒಮ್ಮೆ, ಬೆಂಕಿ ಬಿತ್ತು ನಿದ್ದೆಗೆ! ಅದರ ಸುತ್ತ ಅವನ ಶಲ್ಯದ ತುದಿಗೆ ಸೆರಗು ಕಟ್ಟಿಕೊಂಡ ನಾನು, ತಲೆ ತಗ್ಗಿಸಿ ಪ್ರದಕ್ಷಿಣೆ ಬಂದೆ. ಕನಸುಗಳೆಲ್ಲ ಬೆಂಕಿಯೊಳಗೆ ಸುರಿದುಬಿದ್ದವು.
ಹಾಗಂತ ಗೊತ್ತಾಗುವ ಹೊತ್ತಿಗೆ ಸುತ್ತಮುತ್ತ ಹೊಗೆ ತುಂಬಿ ದಮ್ಮುಕಟ್ಟಿತ್ತು. ಒಂದೇ ಸಮ ಉರಿ.
ಕಣ್ಣಲ್ಲೂ, ಎದೆಯಲ್ಲೂ.
ಸತ್ತಿದ್ದು ಸಾಕು ಅನಿಸಿತು. ಬದುಕಲಿಕ್ಕೆ ಹೊಸ ಗಾಳಿ ಬೇಕಲ್ಲ? ಬಾಗಿಲು ತೆರೆದರೆ ಹೊಸ್ತಿಲು.
ದಾಟದೆ ಉಳಿಯುವುದು ಹೇಗೆ ಸಾಧ್ಯವಿತ್ತು?
 
ಕೆಲವು ಜನರಿದ್ದರು. “ಛೆ! ಹೊಸ್ತಿಲು ದಾಟುವುದೇ?” ಅಂದರು. “ಎಷ್ಟು ಜನ ಹಾಗೆ ಹೊಗೆಯಲ್ಲಿ ಕೆಮ್ಮುತ್ತ ಉಳಿದಿಲ್ಲ!?”
ಕೇಳಿಸುತ್ತದೆ ನನಗೂ. ಬದುಕಿನೊಲೆ ಹೊಗೆಯೆದ್ದು ದಮ್ಮುಗಟ್ಟಿ ಕೆಮ್ಮುತ್ತಿರುವ ಸಾವಿರ ಸಾವಿರ ದನಿಗಳು. ಒಂದೊಂದರದ್ದು ಒಂದೊಂದು ಬಗೆ. ಅವಕ್ಕೆಲ್ಲ ಮದ್ದು ಎಲ್ಲಿದೆ? ಬಲೆ ಕಟ್ಟಿಕೊಂಡ ಜೇಡಗಳ ಹಾಗೆ ಹೊಗೆ ಗೂಡಲ್ಲಿ ಬಾಳೋದು ಕೆಲವರಿಗೆ ಇಷ್ಟ. ಅಂಥ ಬದುಕಿಗೆ ಯಾವಾಗಲಾದರೂ ಸಟರ್ಿಫಿಕೇಟು ಸಿಕ್ಕರೂ ಸಿಗಬಹುದನ್ನೋ ದೂರದ ಆಸೆ ಬಹುಶಃ.
~
ಹಾಗೆ ನೋಡಿದರೆ ನನಗಾದ ನಷ್ಟ ಏನೂ ಇಲ್ಲ.  ನನ್ನ ನಂಬಿಕೆಯನ್ನ ಅಂವ ಕಳೆದುಹಾಕಿದ್ದ. ಶ್ರದ್ಧೆ, ಮಗು, ಮಮತೆ, ಎಲ್ಲವನ್ನೂ ಕಿತ್ತುಕೊಂಡ. ಪ್ರೀತಿ, ಇತ್ಯಾದಿಗಳೆಲ್ಲ ತಂತಾನೇ ಬಿದ್ದುಹೋದವು. ಹೀಗೆ ಕೈತಪ್ಪಿ ಹೋದ ಬದುಕನ್ನ ನೆನೆಯುತ್ತ ಮೂಲೆ ಹಿಡಿದ ಒಂದೊಂದೆ ಬಿಂಬಗಳು ಕಾಣತೊಡಗಿದವು, ಕಾಡತೊಡಗಿದವು. ಆ ಎಲ್ಲ ಬಿಂಬಗಳಡಿ `ಅವನ’ಂಥವನ ನೆರಳು!
“ಎಲಾ ಗಂಡಸೇ!” ಒಳಗು ಬಂಡೆದ್ದಿತು. ನೋಯುತ್ತಲೆ ನೊಂದಿತು. ಕಾಲ್ತುಳಿತಕ್ಕೆ ಸಿಕ್ಕ ಹಾವು ಹೆಡೆ ಬೀಸಿದಂತೆ ಬಂಡಾಯ. ಮತ್ತೆಲ್ಲ, ಬರವಣಿಗೆಯ ಮೆರವಣಿಗೆ.
 
ಮೊದಲೊಂದಷ್ಟು ಮಂದಿ ಹೆದರಿಸಿದರು.
ಆಮೇಲೆ ಹೆದರಿದರು.
ಮತ್ತಷ್ಟು ಮಂದಿ ಗೊಣಗುತ್ತ, ಹಿಂದೆ ಹಿಂದೆ ನೂರಾಒಂದು ಮಾತಾಡಿದರು.
`ಕಾವಲುಗಾರ ಪಡೆ’, ಎಲ್ಲ ಬಿಟ್ಟವಳು ಅಂದು ಮುಖ ತಿರುಗಿಸಿತು.
 
~
ಯಾಕೋ ಬರಿ ಮಾತು ಮಾತು ಬೇಸರ ತರಿಸಿತು. ನ್ಯಾಯವಿಲ್ಲದಿದ್ದರೂ ಪರಿಹಾರ ಸಿಗಬೇಡವೆ? ಹಾಗಂದುಕೊಂಡೆ. ರಾತ್ರಿ ಅಮ್ಮನ ಬಳಿ ಕಾನೂನು ಮಾತಾಡಿದೆ.
ಮಾರನೇ ದಿನ ಅವಳು ಫೋನು ಮಾಡಿದಳು. “ಬೆಳಗಿನ ಜಾವ ಕನಸಲ್ಲಿ ನಿನ್ನ ಹೆಣ ಬಿದ್ದಿತ್ತು ಕಣೇ” ಅಂದಳು…
 
~
 
ಇಲ್ಲ… ಇನ್ನೂ ಎಲ್ಲವೂ ಮುಗಿದುಹೋಗಿಲ್ಲ.
ಹೇಳಲಿಕ್ಕಿನ್ನೂ ಸಾಕಷ್ಟು ಬಾಕಿಯಿದೆ…..
 
 -ಚೇತನಾ ತೀರ್ಥಹಳ್ಳಿ

‍ಲೇಖಕರು avadhi

August 27, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This