No Parking

-ಕೆ ಪಿ ಈಶಾನ್ಯೆ
ನಾನು ಲೋಟಸ್ ಇಂದ ಹೊರಗೆ ಬಂದಾಗ ಎಂಟೂವರೆ ರಾತ್ರಿಯಾಗಿತ್ತು. ಬೇಗ ಮನೆಗೆ ಹೋಗಬೇಕೆಂಬ ಆತುರದಲ್ಲಿ ಸ್ಕೂಟರ್ ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಿದರೆ, ಜಾಗ ಖಾಲಿ ! ಆಯ್ಯೊ ರಾಮ, ಎಲ್ಲಿ ಹೋಗಲು ಸಾಧ್ಯ ? ಹಿಂದೆ ತಿರುಗಿ ನೋಡಿದರೆ, No Parking ಬೋರ್ಡು. ಹೀಗೋ ಗ್ರಹಚಾರ, ಸರಿ, ಅಲ್ಲೇ ನಿಂತಿದ್ದ ಇಸ್ತ್ರಿ ಗಾಡಿಯವನನ್ನು ಕೇಳಿದೆ, ಅವನು “ಗಾಡಿನಾ? ಆದು ಜೀವನ್ ಭೀಮಾ ನಗರ ಪೋಲಿಸ್ ಸ್ಟೇಷನ್ ‌ಗೆ ಹೋಗುತ್ತೆ.” ಅಂದ. ಸರಿ, ಜ್ಜಾನಿ ಆಫೀಸ್ ಪೋಲಿಸ್ ಸ್ಟೇಷನ್ ಹತ್ತಿರವೇ ಇರುವುದರಿಂದ ಅವನಿಗೆ ಅಲ್ಲಿಗೆ ಸ್ವಲ್ಪ ಹೋಗಿ ನನ್ನ ಸ್ಕೂಟರ್ ಏನಾದರೂ ಕಾಣುತ್ತಾ ನೋಡು ಅಂತ ಹೇಳಿದೆ. ಆವನು, ಅದು ಅಲ್ಲೇ ನಿಂತಿದೆಯೆಂದು, ನಾನು ಈಗಲಿಂದ ಈಗಲೇ ಬಂದು ಮುನ್ನೂರು ರೂಗಳನ್ನು ಪಾವತಿಸಿ ಬಿಡಿಸಿಕೊಳ್ಳಬೇಕೆಂದೂ, ಇಲ್ಲದಿದ್ದರೆ, ಇನ್ನರ್ಧ ಗಂಟೆಯಲ್ಲಿ ಪೋಲಿಸ್ ಸ್ಟೇಶನ್ ಬಾಗಿಲು ಹಾಕುತ್ತಾರೆಂದೂ ಹೇಳಿದ. ಇದ್ಯಾವ ಕಷ್ಟ ವಕ್ಕರಿಸಿತು, ಎಂಟೂವರೆ ರಾತ್ರಿಯಲ್ಲೂ ಪೋಲೀಸ್ ಇಷ್ಟೊಂದು ಕೆಲಸ ಮಾಡಿದರೆ ಹೇಗೆ ? ಒಂದು ಆಟೋಹಿಡಿದು ಹೋಗುವುದು ಅಂತ ಅಂದುಕೋಡರೆ ಯಾವ ಅಟೋನು ಬರಲಿಲ್ಲ. ಎಲ್ಲಾ ದೂರದಿಂದಲೇ, ಆಮೆ, ಚಿಪ್ಪಿಂದ ತಲೆ ಹೊರ ಹಾಕುವಂತೆ ಆಟೋಯಿಂದ ತಲೆ ಹೊರಹಾಕಿ ‘ಎಲ್ಲಿಗೆ’ ಎಂಬಂತೆ ನೋಡುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಆಟೋ ವಿರುದ್ಧ ದಿಕ್ಕಿನಲ್ಲೇ ಹೋಗುತ್ತಿತ್ತು. ಆದರೆ ನನ್ನ ಉತ್ತರದಿಂದ ಅದು ಈಗ ತಿರುಗಿ ಬಿಡುತ್ತದೆ ಎಂದು ತಿಳಿದು ಜೋರಾಗಿ “ಜೆ ಬಿ ನಗರ್ ಪೋಲಿಸ್ ಸ್ಟೇಷನ್” ಅಂತ ಕೂಗು ಹಾಕಿದರೆ, ಯಾವುದೋ ಮಾಯದಲ್ಲಿ, ಆಮೆ ತಲೆ ಚಿಪ್ಪಿನಲ್ಲಿ ಮಾಯವಾಗಿ, ಸುತ್ತಮುತ್ತಿನವರು ಇದ್ಯಾಕೆ ಈ ಹೆಂಗಸು ಈ ತರ ಮೇಲಿಂದ ಮೇಲೆ ಕಿರುಚಿಕೋತಾ ಇದೆ ಅಂತ ನೋಡುವಂತಾಗುತ್ತಿತ್ತು.

ಅಂತೂ ನಡೆದೇ ಹೋದೆ. ಅಲ್ಲೇ ಹೊರಗೆ ನನ್ನ ಸ್ಕೂಟರ್ ನಿಂತಿತ್ತು. ಆದರ ನಂಬರ್ ಸರಿಯಾಗಿ ನೋಡಿಕೊಂಡು ಒಳನಡೆದೆ. ಇಲ್ಲದಿದ್ದಲ್ಲಿ ಅದಕ್ಕೆ ಮತ್ತೆರಡು ಮಾತು ಕೇಳಬೇಕಾಗುತ್ತದೆಂದು. ಒಳಗೆ ಒಂದು ಕ್ಯೂ. ಆದರೆ ಕ್ಯೂನಲ್ಲಿ ಯಾವ ಲೇಡೀಸೂ ಇರಲ್ಲಿಲ್ಲ. ಹಾಗಾಗಿ ಎಲ್ಲರೂ ಗೌರವಯುತವಾಗಿ “ನೀವು ಮುಂದೆ ನಡೆಯಿರಿ ಮೇಡಮ್” ಅಂತ ಕಳುಹಿಸಿಕೊಟ್ಟರು. ಆಲ್ಲಿ ಒಬ್ಬ ಎರಡೆರಡು ದೊಡ್ಡ ಪುಸ್ತಕಗಳ ತುಂಬಾ ನನ್ನಂತಾ ಇನ್ನೊಂದು ಪ್ರಾಣಿಯ ಡೀಟೇಲ್ಸ್ ಬರೀತಾ ಇದ್ದ. ಆಗಲೇ ಕೊನೆಗೆ ಬಂದಿತ್ತು ಅಂತ ಕಾಣಿಸುತ್ತದೆ,
“ಆರ್ ಟಿ ಓ?”
“ರಾಜಸ್ಥಾನ್.”
“ರಾಜಸ್ಥಾನ್ ?”
“ರಾಜಸ್ಥಾನ್.”
“ಎಲ್ಲೆಲ್ಲಿಂದೋ ಬಂದು ಎಲ್ಲೆಲ್ಲೋ ಪಾರ್ಕ್ ಮಾಡ್ತಾರೆ !” ಅಂತ ಪೋಲೀಸ್ ಗೊಣಗಿದ. ಅಷ್ಟರಲ್ಲಿ, ಒಬ್ಬರು ದೊಡ್ಡ ಪೋಲೀಸಿನವರು, ಡ್ರೆಸ್ಸ್ ನಲ್ಲಿ ಇರುವವರು. ಹೊರಬಂದರು. “ಏನಪ್ಪ, ಇನ್ನೂ ಬರೀತಾನೆ ಇದ್ದೀಯ? ಗುಂಡಗೆ ಬರೀಬೇಕು ಅಂತಾ ಇದ್ದರೆ ದಿನಮುಗಿದರೂ ಆಗಲ್ಲ, ಬೇಗಬೇಗ್ ಬರಿ. ಲೇಡೀಸೆಲ್ಲಾ ಇದ್ದಾರೆ, ದೂರದೂರಕ್ಕೆಲ್ಲಾ ಹೋಗಬೇಕಿರುತ್ತೆ, ಲೇಟಾಗಿ ಮನೆಗೆ ಹೋಗಿ, ಪೋಲಿಸ್ ಸ್ಟೇಷನ್ ಗೆ ಹೋಗಿದ್ದೆ ಅಂತ ಹೇಳಕ್ಕಾಗುತ್ತಾ? ಬೇಗ ಬರಿ.” ಅಂತ ಹೇಳಿದ.
ತಕ್ಷಣ ನನ್ನ ಬಲಗಡೆಯಲ್ಲಿ ನಿಂತಿದ್ದ ಹುಡುಗ, ಮೊಬೈಲಲ್ಲಿ ಏನೋ ಮೆಸ್ಸೇಜ್ ನೋಡುತ್ತಾಯಿದ್ದವನು, ತಲೆ ಎತ್ತದೆ, “ನಾನು ಒಂದೂವರೆ ಗಂಟೆಯಿಂದ ಕಾಯ್ತಾ ಇದ್ದೀನಿ.” ಅಂತ ಗುಟುರು ಹಾಕಿದ. “ಒಂದೂವರೆ ಗಂಟೆಯಿಂದನಾ? ನಾವು ಗಾಡಿ ತಂದಿರುವುದೇ ಅರ್ಧ ಗಂಟೆ ಹಿಂದೆ? ಒಂದೂವರೆ ಗಂಟೆಯಿಂದ ಇಲ್ಲೇನು ಮಾಡ್ತಾ ಇದ್ದೀರ?” ಅಂದ ಬರೆಯುತ್ತ ಇದ್ದಾತ. “ಹುಂ, ಕೊಡಿ ಮೇಡಂ, ನಿಮ್ಮ ಡಿಎಲ್ಲು.” ಎಂದ. ನನ್ನ ಡಿಎಲ್ಲೋ, ಪೂರ್ತೀ ಜೀರ್ಣವಾಗಿ ಹೋದಂತಿತ್ತು. “ಏನು ಮೇಡಂ, ಇದು ನೀವಾ ? ನೀವೇ ಆಗಿದ್ದರೆ ಎಲ್ಲಿ ಇದನ್ನು ಓದಿಹೇಳಿ” ಅಂತ ನನಗೇ ವಾಪಸ್ಸು ಕೊಟ್ಟ. ನಾನು, ಅಯ್ಯೋ ಪರಮಾತ್ಮಾ, ಇದೊಂದು ಟೆಸ್ಟ್ ಪಾಸ್ ಮಾಡಿಸು, ನನ್ನ ಆರನೇ ಇಂದ್ರಿಯ ಇದನ್ನು ಓದಬೇಕಷ್ಟೇ ಅಂತ ಕಣ್ಣಗಲಿಸಿ, ಅಂತೂ ಡಿಎಲ್ ನಂಬರ್ ಓದಿದೆ. “ಹುಂ, ಹೆಸರು?”, “ಗಾಡಿ ನಂಬರ್?”, “ಆರ್ ಟಿ ಓ?”. ಆರ್ ಟಿ ಒ, ಕೇಳಿದ ತಕ್ಷಣ ಕೊನೆಬಂತು ಅಂತ ಭಾವಿಸಿದೆ.
ಇಷ್ಟರಲ್ಲಿ, ನನ್ನ ಎಡಗಡೆ ಇದ್ದ ಪುಣ್ಯಾತ್ಮ, ಆಗ ಈಗ “ಸಾರ್…ಸಾರ್, ಮಂತ್ ಎಂಡು ಸಾರ್, ಮುನ್ನೂರಿಲ್ಲ, ನೂರುಮಾಡಿಕೊಳ್ಳಿ.” ಅಂತ ಭಕ್ತಿಯಿಂದ ದುಂಬಾಲುಬೀಳುತ್ತಿದ್ದ. ಅದಕ್ಕೆ ಬರಿಯುತ್ತಿದ್ದವನು “ಮಂತ್ ಎಂಡ್ ಯಾಕ್ರೀ ಅಲ್ಲಿ ಪಾರ್ಕ್ ಮಾಡಕ್ಕೆ ಹೋದ್ರಿ ? ಲಾಸ್ಟ್ ಮಂತ್ ನೂರು ರೂಪಾಯಿ ಇತ್ತು, ಈಗ ರೇಟೆಲ್ಲಾ ಜಾಸ್ತಿಯಾಗಿದೆ. ಇದು ನಾನು ತೊಗೊತಾ ಇರೋ ದುಡ್ಡಲ್ಲ, ಸರ್ಕಾರ ಫಿಕ್ಸ್ ಮಾಡಿರೋದು. ಕೊಡಬೇಕಾಗುತ್ತೆ.” “ಹುಂ, ಮೇಡಂ, ಆರ್ ಟಿ ಒ ಯಾವುದು ಹೇಳಿ “ಅಂದ. “ಚಿಕ್ಕಮಗಳೂರು.” ಆವನು ಬರೆಯುವುದನ್ನು ನಿಲ್ಲಿಸಿ, “ಚಿಕ್ಕಮಗಳೂರ? ಅಲ್ಲೆಲ್ಲಿ?” ಅಂದ. “ಮೂಡಿಗೆರೆ” ಅಂದೆ. ಆಷ್ಟರಲ್ಲಿ ದೊಡ್ಡಸಾಹೆಬ್ರು “ಸಾಕು ಸಾಕು ಮಾತು, ಬೇಗ ಬರೆದು ಮನೆಗೆ ಕಳಿಸು” ಅಂತ ಕೂಗಿದರು. ಆಷ್ಟರಲ್ಲಿ ಇನ್ನೊಬ್ಬ ಯುನಿಫಾರಮ್ನಲ್ಲಿ ಇಲ್ಲದ ಸಹಚರ “ಅಯ್ಯೊ, ಇನ್ನೂ ಮುಗಿದಿಲ್ಲವ? ನಾನು ಬೇಗ ಬೇಗ ಬರೀತೀನಿ, ಇಬ್ಬರೂ ಬೇಗ ಮುಗಿಸೋಣ” ಅಂತ ಪುಸ್ತಕ ತೆಗೆದುಕೊಂಡ. ಎಡಗಡೆ ನಿಂತಿದ್ದ ಮೊಬೈಲ್ ಮಹಾಷಯ ಮುನ್ನೂರು ರೂಗಳನ್ನು ಅವನೆಡೆಗೆ ದೂಕಿದ. “ಎಲ್ಲಿ ಪಾರ್ಕ್ ಮಾಡಿದ್ದಿರಿ?” ಅಂದ. “ನೀವೇ ಗಾಡಿ ತಂದಿದ್ದು, ನಿಮಗೇ ಗೊತ್ತಿಲ್ಲವ?” ಅಂದ ಈತ. “ಎರಡು ಮೂರು ರಸ್ತೆಗಳಿಂದ ತಂದಿದ್ದೀವೆ. ಬೇಗ ಮುಗಿಯ ಬೇಕು ಅಂದ್ರೆ, ಬೇಗ ಹೇಳಿ” ಅಂದ. “ಸಿಎಮ್‌ಹೆಚ್ ರಸ್ತೆ, ಸಿಟಿ ಬ್ಯಾಂಕ್ ಎದುರಿಗೆ. ಅಲ್ಲಿ ಪಾರ್ಕಿಂಗ್ ಅಂತ ಬರೆದಿತ್ತು, ಆದ್ರೆ ಬ್ಯಾಂಕ್ ಒಳಗೇ ತೆಗೆದುಕೊಂಡು ಹೋಗಿ ಪಾರ್ಕ್ ಮಾಡಬೇಕು ಅಂತ ನಮಗೇನು ಗೊತ್ತಿತ್ತು !” ಅಂತ ಈತ ಪೋಲೀಸ್‌ಗೇ ಹೇಳಿದ. ಅದಕ್ಕೆ ಪೋಲೀಸ್, ಪೆನ್ನು ಕೆಳಗಿಟ್ಟು, ”ಸಿಎಮ್‌ಹೆಚ್ ರಸ್ತೆಲಿ, ಇದ್ದಿದ್ದ ಸಿಟಿ ಬ್ಯಾಂಕ್ ಒಡೆದು ಹಾಕಿದ್ದಾರಲ್ಲ? ಎಲ್ಲಿ ನಿಲ್ಲಿಸಿದ್ರಿ ? ಇನ್ಫರ್ಮೇಷನ್ ಕರೆಕ್ಟಾಗಿರ್ಬೇಕು” ಅಂದ. “ಅದ್ಯಾವುದೋ ಒಂದು ಸುಡುಗಾಡು ರೋಡು, ಯಾವುದಪ್ಪಾ ? ಉಂ…” ಅಂದ. “1೦೦ ಫೀಟ್ ರೋಡಲ್ಲೇನೊ ಒಂದು ಸಿಟಿ ಬ್ಯಾಂಕ್ ಇದೆ” ಅಂದೆ. ಅದಕ್ಕೆ ಪೋಲೀಸ್ “ಯಾಕ್ ಮೇಡಂ, ನೀವು ಅಲ್ಲಿ ಸಿಕ್ಕಿಹಾಕಿಕೊಂಡಂತಿದೆ?” ಅಂದ. ಆಗ ಮತ್ತೆ ದೊಡ್ಡಸಾಹೆಬ್ರು “ಆಯ್ತಾ ಮೇಡಮ್, ಆದ್ರೆ ಇಲ್ಲಿಂದ ಜಾಗ ಖಾಲಿ ಮಾಡಿ, ಕ್ಯೂನಾದ್ರು ಕಡಿಮೆ ಆಗ್ಲಿ” ಅಂದರು. ನಾನು ಅಲ್ಲಿಂದ ಹೊರಡುತ್ತಿದ್ದಂತೆ, “ಏನ್ರೀ, ನೀವು ನನ್ನನು ನೋಡಿಕೊಂಡು ಮಾತಾಡಿ, ಮೊಬೈಲಿಗೇ ಮಾತಾಡುವಹಾಗಿದ್ದರೆ, ಅದನ್ನೂ ಕಿತ್ತಿಟ್ಟುಕೊಂಡು ಆರುನೂರು ಹಾಕಿಬಿಡುತ್ತೇನೆ ಅಷ್ಟೆ. ಸರಿಯಾಗಿ ಎಲ್ಲಿ ನಿಲ್ಲಿಸಿದ್ದಿರಿ ಹೇಳಿ” ಎಂದೂ, ಸಾರ್, ಸಾರೆಂಬ ಕ್ಷೀಣ ಸ್ವರವೂ ಕೇಳುತ್ತಾ ಇತ್ತು.

‍ಲೇಖಕರು avadhi

October 3, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

  1. Guru Baliga

    ಒಟ್ಟಾರೆ ನಾನೂ ಅಲ್ಲೆಲ್ಲೋ ಕ್ಯೂ ನಲ್ಲಿ ನಿಂತಂತಿತ್ತು.
    >> ಸಾರ್ ಸಾರೆಂಬ ಕ್ಷೀಣ ಸ್ವರವೂ ಕೇಳುತ್ತಾ ಇತ್ತು. ಎನ್ನುವ ವಾಕ್ಯ ತುಂಬ ವಿಶುಅಲ್ ಆಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: