she do spoon work..!

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

 

ಓದಿ ಓದಿ ಸಾಕಾಗಿದೆ. ಪರೀಕ್ಷಾ ಪಿಶಾಚಿ ಹದಿನೆಂಟನೇ ತಾರೀಕಿನವರೆಗೂ ಹರಡಿಕೊಂಡಿದೆ. ‘ನಂಗೆ ಚಿಟ್ಟು ಹಿಡೀತಿದೆ.’ ಎಂದು ಘೋಷಿಸಿ ಪುಸ್ತಕ ಮುಚ್ಚಿಟ್ಟು ಕೂತೆ.

‘ನಾವು ನಳಂದ ಪ್ರೈಮರಿ ಸ್ಕೂಲಿನಲ್ಲಿದ್ದಾಗ ಎಷ್ಟು ಚೆನ್ನಾಗಿತ್ತು ಎಕ್ಸಾಮು ಟೆಸ್ಟು ಅಂತ ತಲೆ ಕೆಡಿಸಿಕೊಳ್ಳುತ್ತಲೇ ಇರಲಿಲ್ಲ.’ ಮಾತಾದಳು ಲಾಲಿ. ಹಾಸ್ಟಲ್ಲಿನಲ್ಲಿ ಹುಡುಗಿಯರು ಮಾತಾಡುವ ವಿಷಯಗಳಿಗೆ ತಲೆ ಬುಡ ಇರುವುದಿಲ್ಲ ಆದರೆ ಹಾಗೆ ಮಾತಾಡುವಾಗ ಒಮ್ಮೊಮ್ಮೆ ಹೊರಬೀಳುವ ವಿಷಯಗಳು ಅತ್ಯಂತ ಕುತೂಹಲಕಾರಿಯಾಗಿರುತ್ತದೆ ಅನ್ನೋದೂ ಒಂದು ವಿಶೇಷ.

ಲಾಲಿ, ಮೂಡಿಗೆರೆಯ ಹುಡುಗಿ ಅವಳು ಮಾತಾಡುತ್ತಾ ಅವಳಿಗರಿವಿಲ್ಲದೆಯೇ ಒಂದು ಇಂಟ್ರೆಸ್ಟಿಂಗ್ ವಿಷಯ ಹೇಳಿದಳು. ಅವಳ ಮಾತುಗಳಲ್ಲೇ ಕೇಳಿ ‘ಏನ್ ಗೊತ್ತಾ ಸಿರಿ, ಒಂದ್ ಸತಿ ನಾವು ಸಿಕ್ಸ್ತ್ ಸ್ಟಾಂಡರ್ಡ್ನಲ್ಲಿದ್ದಾಗ ನಮ್ ನಲಂದ ಸ್ಕೂಲ್ನಲ್ಲಿ ಆರ್ಟ್ಸ್ ಮತ್ತೆ ಸೈನ್ಸ್ ಎಕ್ಸಿಬಿಷನ್ ಮಾಡಿದ್ರು. ಎಲ್ಲರೂ ಪಾರ್ಟಿಸಿಪೇಟ್ ಮಾಡ್ಲೇ ಬೇಕಿತ್ತು ಆಯ್ತಾ. ನನ್ ಫ್ರೆಂಡ್ ಪುನಿ ಕರ್ನಾಟಕ ರೈಟರ್ಸ್ ಬಗ್ಗೆ ಏನೋ ಎಕ್ಸಿಬಿಶನ್ಗೆ ಅಂತ ಮಾಡಿದ್ದ. ಒಂದ್ ಕಡೆ ರೈಟರ್ಸ್ ಹೆಸ್ರು, ಅವ್ರು ಬರ್ದಿರೋ ಬುಕ್ಸ್ ಹೆಸ್ರು, ಇನ್ನೊಂಡ್ ಕಡೆ ಅವ್ರ ಫೊಟೋಸು. ಎಲ್ಲಾ ಜಂಬಲ್ ಆಗಿರತ್ತೆ. ಎರಡು ಎಲೆಕ್ಟ್ರಿಕ್ ವೈರು ಆ ವೈರ್ ನ ಅವ್ರ ಹೆಸ್ರು ಮತ್ತೆ ಫೋಟೋಗೆ ಟಚ್ ಮಾಡಿದ್ರೆ ಮಾತ್ರ ಲೈಟ್ ಹತ್ಕೊಳುತ್ತೆ. ಯಾರದೋ ಫೊಟೊ ಯಾವ್ದೋ ರೈಟರ್ಸ್ ಗೆ ಟಚ್ ಮಾಡಿದ್ರೆ ಲೈಟ್ ಆನ್ ಆಗಲ್ಲ. ಆ ಥರ ಮಾಡಿದ್ದ.

ಜಡ್ಜ್ ಬಂದ್ರು, ಇವ್ನು ಫುಲ್ ಎಕ್ಸ್ಪ್ಲೈನ್ ಮಡಿದ… ‘ಇವ್ರು ಕುವೆಂಪು ಅಂತ ಕುಪ್ಪಳ್ಳಿಯೋರು, ಇವ್ರು ನೋಡಿ ಕುವೆಂಪು ಮಗ, ಇಲ್ಲೇ ಮೂಡ್ಗೆರೇಲೇ ಇರ್ತಾರೆ. ತುಂಬಾ ದೊಡ್ಡ ರೈಟರ್.’ ಅಂತೆಲ್ಲಾ ಎಕ್ಸ್ಪ್ಲೈನ್ ಮಾಡ್ತಿದಾನೆ, ಆ ಜಡ್ಜು ‘ನಾನೇ ಕಣಪ್ಪಾ ಪೂರ್ಣ ಚಂದ್ರ ತೇಜಸ್ವಿ’ ಅಂದ್ರು ನಮ್ಗೆಲ್ಲಾ ಶಾಕು.’ ಅಂದ್ಲು. ಚಿಕ್ಕಮಗಳೂರು ಮೂಡಿಗೆರೆಯ ದಾರಿಗಳಲ್ಲಿ ಓಡಾಡುತ್ತಾ ತೇಜಸ್ವಿಯವರ ಕಥೆಗಳಲ್ಲಿ ಬರುವ ‘ಭೂತನ ಕಾಡು’ ಮುಂತಾದ ಎಸ್ಟೇಟ್ಗಳನ್ನು ನೋಡಿ (ಬರೀ ಹೊರಗಡೆಯಿಂದ) ನಾನೇ ಧನ್ಯಳು ಎಂದು ಬೀಗುತ್ತಿದ್ದ ನನಗೆ ಈ ಹುಡುಗಿ ತೇಜಸ್ವಿಯವರನ್ನೇ ಅಷ್ಟು ಹತ್ತಿರದಿಂದ ನೋಡಿರುವುದನ್ನು ಕೇಳಿ ಹೊಟ್ಟೆ ಕಿಚ್ಚಾಯಿತು.

spoons

ಅರುಣ್ ಭಾರದ್ವಾಜ್ ತೇಜಸ್ವಿಯವರ ಬಗ್ಗೆ ಮತ್ತೊಂದು ಕಥೆ ಹೇಳಿದ್ದ ‘ಚಿತ್ರದುರ್ಗದಿಂದ ಯಾವುದೋ ಸ್ಕೂಲಿನ ಮಕ್ಕಳನ್ನು ಧರ್ಮಸ್ಥಳ ಮಂಗಳೂರು ಉಡುಪಿ ಇಲ್ಲೆಲ್ಲಾ ಟೂರ್ ಕರೆದುಕೊಂಡು ಹೋಗಿದ್ದರಂತೆ. ವಾಪಸ್ಸು ಬರುವಾಗ ಮೂಡಿಗೆರೆಯ ಬಳಿ, ಬಸ್ಸಿನಲ್ಲಿದ್ದ ಒಬ್ಬ ಟೀಚರ್ಗೆ ಹೇಗಿದ್ದರೂ ಇಲ್ಲಿವರೆಗೂ ಬಂದಿದ್ದೇವೆ ಮಕ್ಕಳಿಗೆ ತೇಜಸ್ವಿಯವರನ್ನು ತೋರಿಸಿಕೊಂಡು ಹೋದರೆ ಹೇಗೆ ಎನ್ನಿಸಿರಬೇಕು. ಅವರ ಮನೆ ದಾರಿ ಗೊತ್ತಿಲ್ಲವಲ್ಲ ಬಸ್ಸು ನಿಲ್ಲಿಸಿ ಅಲ್ಲಿ ನೆಡೆದು ಹೋಗುತ್ತಿದ್ದ ದಾರಿಹೋಕನೊಬ್ಬನನ್ನು ತಡೆದು. ತೇಜಸ್ವಿ ಮನೆ ಎಲ್ಲಿದೆ ಗೊತ್ತಾ? ನಾವು ಚಿತ್ರದುರ್ಗದಿಂದ ಬಂದಿದೀವಿ ಮಕ್ಕಳಿಗೆಲ್ಲಾ ಅವರನ್ನು ತೋರಿಸಿಕೊಂಡು ಹೋಗೋಣ ಅಂತ. ಅಂದರು ಆ ಮಾಸ್ಟ್ರು.

ಆಯ್ತು ಮಕ್ಕಳನ್ನೆಲ್ಲಾ ಕೆಳಗಿಳಿಸಿ ಅಂದ ದಾರಿ ಹೋಕ. ಸರಿ ಇವರು ಮಕ್ಕಳನ್ನೆಲ್ಲಾ ಸಾಲಾಗಿ ಇಳಿಸುವ ಹೊತ್ತಿಗೆ ದಾರಿ ತೋರಿಸುತ್ತೇನೆಂದವ ಹತ್ತಿರದಲ್ಲೇ ಇದ್ದ ದೊಡ್ಡ ಮರಳು ರಾಶಿಯ ಮೇಲೆ ಹತ್ತಿ ನಿಂತು ನೋಡಿ ‘ನಾನೇ ತೇಜಸ್ವಿ ಮನೆವರ್ಗೂ ಬರಕ್ ಹೋಗ್ಬೇಡಿ.’ ಅಂದ್ರಂತೆ. ಕೇಳಿ ಆಶ್ಚರ್ಯ ಆಯ್ತು ನಂಗೆ. ಹೀಗೆ ಇದ್ದೂ ಓದುಗರನ್ನು ಉಳಿಸಿಕೊಳ್ಳಲು ಅವರಿಗೆ ಮಾತ್ರ ಸಾಧ್ಯವಾಯಿತಾ ಅನ್ನಿಸುತ್ತೆ.

ಮತ್ತೆ ಮಾತು ನನ್ನ ಪ್ರೈಮರಿ ಸ್ಕೂಲಿನ ಬಗ್ಗೆ ತಿರುಗಿತು. ನಮಗೆಲ್ಲಾ ಇಂಗ್ಲೀಷ್ನಲ್ಲೇ ಮಾತಾಡಬೇಕೆಂದು ಸ್ಟ್ರಿಕ್ಟ್ ರೂಲ್ಸು. ಇಲ್ಲ ಅಂದ್ರೆ ಒಂದು ಕನ್ನಡ ಪದಕ್ಕೆ 25 ಪೈಸ ಫೈನು. ನಾವು ಮಾತಾಡ್ತಿದ್ದ ರೀತಿ ಹೇಗೆ see yaa what what all telling ya ಅಂದ್ರೆ ನೋಡೆ ಏನೇನೋ ಹೇಳ್ತಾಳೆ ಅಂತ. Miss tell. you wait  ಅಂದ್ರೆ ಮಿಸ್ಸಿಗೆ ಹೇಳ್ತಿನಿ ತಡಿ, she do spoon work ಅನ್ನೋದು ಅವಳು ಚಮಚಗಿರಿ ಮಾಡ್ತಾಳೆಯ ಇಂಗ್ಲೀಶಾನುವಾದ. ಈಗ ನೆನಸಿಕೊಂಡರೆ ನಗು ಬರುತ್ತೆ. ಹೈಸ್ಕೂಲು ಮುಗಿಸಿ ಕಾಲೇಜಿಗೆ ಸೇರುವ ಹೊತ್ತಿಗೆ ನಮ್ಮನ್ನು ಬಿಟ್ಟು ಈ ಲೋಕದಲ್ಲಿ ಯಾರಿಗೂ ಇಂಗ್ಲೀಷ್ ಬರುವುದಿಲ್ಲವೆಂಬ ಅಹಂಕಾರದಲ್ಲಿದ್ದೆವು.

ಪಿ.ಯು.ಸಿ ಯಲ್ಲಿ ಬಯಾಲಜಿ ಪಾಠ ಮಾಡಲು ಬರುತ್ತಿದ್ದ ಲೆಕ್ಚರರ್ಗೆ ಸರಿಯಾಗಿ ಇಂಗ್ಲೀಶ್ ಬರುತ್ತಿರಲಿಲ್ಲ. ಅವರ ಸಬ್ಜೆಕ್ಟ್ ನಾಲೆಡ್ಜ್ ತುಂಬಾ ಚೆನ್ನಾಗಿತ್ತು. ಪಾಸ್ಟ್ ಟೆನ್ಸ್ ಪ್ರೆಸೆಂಟ್ ಟೆನ್ಸ್ ಫ್ಯೂಚರ್ ಟೆನ್ಸುಗಳ ಪರಿವೆಯೇ ಇಲ್ಲದೆ ಮನ್ಸ್ಸಿಗೆ ಬಂದಂತೆ ಹೇಳುತ್ತಿದ್ದರು. ಅವರು ತಪ್ಪು ಹೇಳಿದ ವಾಕ್ಯಗಳನ್ನು ಬರೆದುಕೊಂಡು ಮುಸಿ ಮುಸಿ ನಗುವುದು ನಮಗೆ ಅಭ್ಯಾಸವಾಗಿ ಹೋಗಿತ್ತು. ಅವತ್ತೊಂದು ದಿವಸ what I am going to teach yesterday I am repeated  ಅನ್ನಬೇಕೆ? ಯಥಾ ಪ್ರಕಾರ ಕೊನೆಯ ಬೆಂಚಿನಲ್ಲಿ ಕೂತಿದ್ದ ನಾನೂ ರೀನ ಮುಸಿ ಮುಸಿ ನಗಲು ಶುರು. ಅವರಿಗೆ ಸಿಟ್ಟು ನೆತ್ತಿಗೇರಿತು. Both of you three get out of the class ಅಂದರು.

ನಾನು ಫಸ್ಟ್ ಅಥವಾ ಸೆಕೆಂಡ್ ಸ್ಟ್ಯಾಂಡರ್ಡ್ ಇದ್ದೆ ಅನ್ಸುತ್ತೆ. ಅಜ್ಜನ ಮನೆಗೆ ಹೋಗಿದ್ದೆವು. ಅಜ್ಜನ ಮನೆಯಿರುವುದು ತೆಂಗಿನ ತೋಟದ ಮಧ್ಯದಲ್ಲಿ. ರಜ ಬಂತೆಂದರೆ ತೋಟದಲ್ಲಿ ಅಲೆಯುವುದೇ ಕೆಲಸ. ಅವತ್ತು ಒಂದು ದಿನ ಬೆಳಗೆದ್ದು ಎಂದಿನಂತೆ ಹಲ್ಲುಜ್ಜಿ ತಾತನಿಗೆ ಮುತ್ತು ಕೊಟ್ಟು ಹೋಗೋಣ ಅಂತ ಬಂದೆ. ಅದು ಎದ್ದು ಹಲ್ಲುಜ್ಜಿದ ತಕ್ಷಣ ಮಕ್ಕಳೆಲ್ಲಾ ಮಾಡುತ್ತಿದ್ದ ರೋಟೀನು. ಯಾರು ಬೆಳ್ಗೆದ್ದು ತಾತಂಗೆ ಮೊದ್ಲು ಮುತ್ತು ಕೊಡ್ತಾರೆ ಅಂತ ನಾವು ಮೊಮ್ಮಕ್ಕಳಿಗೆಲ್ಲ ಕಾಂಪಿಟೀಷನ್ ಬೇರೆ.

ಅವತ್ತು ನಾನೇ ಫಸ್ಟ್ ಎದ್ದಿದ್ದೆ ಹೊರಗೆ ಈಸಿ ಚೇರ್ ಮೇಲೆ ಕೂತಿದ್ದ ತಾತನ ಬಳಿ ಹೋದೆ. ತಾತ ಎಂದಿನಂತೆ ತಮ್ಮ ರಾಜ ಠೀವಿಯಲ್ಲಿ ಎದುರು ನಿಂತಿದ್ದ ದೇವರಾಜ ನಮ್ಮ ಟ್ರಾಕ್ಟರ್ ಡ್ರೈವರಿಗೆ ಏನೋ ‘ಕಷ್ಟ ಪಡ್ದಿದ್ರೆ ಏನೂ ಆಗಲ್ಲ, ಕೈ ಕೆಸರಾದರೆ ಬಾಯಿ ಮೊಸರು.’ ಅಂತ ಹೇಳುತ್ತಿದ್ದರು. ಮೊಸರು ಇಷ್ಟು ಈಸಿಯಾಗಿ ಸಿಗುತ್ತೆ ಅಂತ ನಂಗೆ ಗೊತ್ತೇ ಇರ್ಲಿಲ್ಲ! ಹೋಗಿ ನನ್ನ ದೊಡ್ಡಮ್ಮನ ಮಗ ಕಿಶೋರ ನನ್ನೂ ಏಳಿಸಿದೆ ಅವನೂ ನಾನೂ ಒಂದೇ ಕ್ಲಾಸು ಮೊಸರೆಂದರೆ ರಾವು. ತಾತ ದೇವರಾಜನಿಗೆ ಹೇಳುತ್ತಿದ್ದನ್ನು ಹೇಳಿದೆ. ಅವನು ಹಲ್ಲುಜ್ಜದೆಯೇ ನನ್ನ ಜೊತೆ ಬಂದ ಅವನು ನಾನು ಕಷ್ಟಪಟ್ಟು ಬಕೀಟಲ್ಲಿ ನೀರು ತಂದು ಮಣ್ಣಿನ ಮೇಲೆ ಸುರಿದು ಮಣ್ಣು ಕಲಿಸೋಕ್ಕೆ ಶುರು… ಕೈ ಎಲ್ಲಾ ಕಡಿಯೋಕ್ಕೆ ಶುರುವಾಯಿತು. ಆದ್ರೂ ಮೊಸ್ರು ಸಿಗುತ್ತಲ್ಲಾ ಅಂತ ಕಲ್ಸಿದ್ದೇ ಕಲ್ಸಿದ್ದು.

ಅಷ್ಟೊತ್ತಿಗೆ ಕಾಣೆಯಾದ ನನ್ನನ್ನೂ ಕಿಶೋರ ನ್ನೂ ಹುಡುಕಿಕೊಂಡು ಅಮ್ಮ, ದೊಡಮ್ಮ ಬಂದರು. ನಾವಿಬ್ರು ನೋಡಿದರೆ ಮೈ ಕೈ ಎಲ್ಲಾ ಕೆಸ್ರು ಮಾಡ್ಕೊಂಡ್ ಕೂತಿದೀವಿ. ನಮ್ಮಿಬ್ರಿಗೂ ಸರ್ಯಾಗಿ ಬಾರ್ಸಕ್ ಶುರು ಮಾಡಿದ್ರು. ಕಿಶೋರ್ ಗೆ ಮಣ್ಣು ಮುಟ್ಟಿದ್ರೆ ಮೈ ಪೂರ ಅಲರ್ಜಿ. ದೊಡ್ಡಮ್ಮನ ಬೈಗುಳ ಏಟು ತಾಳಲಾರದೆ ಅವನು ಸಿರಿನೇ ಹೇಳಿದ್ದು ಅಂತ ತಪ್ಪನ್ನೆಲ್ಲಾ ನನ್ನ ಮೇಲೆ ಹಾಕಿದ. ತಾತಾನೇ ಹೇಳಿದ್ದು ಆ ಥರ ಅಂತ ಎಷ್ಟ್ ಹೇಳಿದ್ರೂ ಅಮ್ಮ ನಂಬ್ಲೇ ಇಲ್ಲ.. ಆಮೇಲೆ ಕಾರಣ ಗೊತ್ತಾಗಿ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ಇವತ್ತಿಗೂ ಕೈ ಕೆಸರಾದರೆ ಬಾಯಿ ಮೊಸರು ಅಂತ ಆಡ್ಕೊಂತಾಳೆ ಅಮ್ಮ…

ಇದನ್ನೆಲ್ಲಾ ಹೇಳುತ್ತಿದ್ದೆ ಎಲ್ಲಾರೂ ತಾವು ಸ್ಕೂಲಿನಲ್ಲಿದ್ದಾಗ ಮಾಡುತ್ತಿದ್ದ ಕಿತಾಪತಿಗಳ ಬಗ್ಗೆ ಹೇಳಿಕೊಂಡರು. ಮಲ್ಕೊಳಣ ಬನ್ನಿ ಮೂರು ಗಂಟೆ ಆಯ್ತು. ಇವತ್ತ ರಾತ್ರಿ ಅಂತೂ ಓದ್ಲಿಲ್ಲ ನಾಳೆ ಆದ್ರೂ ಓದ್ಕೊಳೊಣ ಇನ್ನು ಎರೆಡೇ ದಿನ ಉಳ್ದಿರೊದು ಅಂತ ಎಚ್ಚರಿಸಿದಳು ಮಧು..

ಮಲಗಿದವಳಿಗೆ ಪರೀಕ್ಷೆಗಳಿಗಿಂತ ತಯಾರಿಯೇ ಹೆಚ್ಚಾಯಿತು ಅನ್ನಿಸುತ್ತಿತ್ತು. ಜೀವನದಲ್ಲೂ ಹಾಗೇ ಅಲ್ಲವೆ?

‍ಲೇಖಕರು avadhi

November 14, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: